ರಾಜ್ಯದ ಸರ್ಕಾರಿ ನೇಮಕಾತಿ ಪರೀಕ್ಷೆ ಅಕ್ರಮ ತಡೆಗೆ ಮಸೂದೆ: ಸಂಪುಟ ಅಸ್ತು
ರಾಜ್ಯದ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ರಾಜ್ಯ ಸರ್ಕಾರವು ಪ್ರತ್ಯೇಕ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದ್ದು, ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023 ಅನ್ನು ಮುಂದಿನ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.

ಬೆಂಗಳೂರು (ನ.17): ರಾಜ್ಯದ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ರಾಜ್ಯ ಸರ್ಕಾರವು ಪ್ರತ್ಯೇಕ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದ್ದು, ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023 ಅನ್ನು ಮುಂದಿನ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಮಂಡಿಸಲು ಸಚಿವ ಸಂಪುಟ ಸಭೆ ನಿರ್ಧಾರ ಮಾಡಿದೆ.
ರಾಜ್ಯದಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆ, ಎಂಜಿನಿಯರ್‌ಗಳ ನೇಮಕಾತಿ, ನಿಗಮ-ಮಂಡಳಿಗಳ ಎಫ್‌ಡಿಎ ನೇಮಕಾತಿ ಅಕ್ರಮ ಸೇರಿದಂತೆ ಸಾಲು-ಸಾಲು ನೇಮಕಾತಿ ಪರೀಕ್ಷಾ ಅಕ್ರಮಗಳು ನಡೆದಿವೆ. ಇದರಿಂದ ಅರ್ಹರು ಅವಕಾಶ ವಂಚಿತರಾಗುತ್ತಿದ್ದು, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರು ಕಠಿಣ ಶಿಕ್ಷೆ ಇಲ್ಲದೆ ಪಾರಾಗುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನೂತನ ವಿಧೇಯಕದ ಪ್ರಸ್ತಾವನೆಯನ್ನು ಗುರುವಾರ ಒಳಾಡಳಿತ ಇಲಾಖೆಯು ಸಚಿವ ಸಂಪುಟ ಸಭೆಯಲ್ಲಿ ಮಂಡನೆ ಮಾಡಿದ್ದು, ಸಭೆ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಿ ನೇಮಕಾತಿಯಲ್ಲಿ ನಡೆಯುವ ಅನ್ಯಾಯ, ಭ್ರಷ್ಟತೆ, ಅಕ್ರಮಗಳನ್ನು ತಡೆಯುವುದು. ಜತೆಗೆ ನಿರ್ದಿಷ್ಟ ಅಪರಾಧಗಳಿಗೆ ಶಿಕ್ಷೆ ನಿಗದಿಪಡಿಸುವ, ಪರೀಕ್ಷಾ ಅಕ್ರಮಗಳ ಕುರಿತ ಅಪರಾಧ ಕಾನೂನು ನಿಯಮಗಳನ್ನು ರೂಪಿಸುವ ಸಲುವಾಗಿ ಕಾಯಿದೆ ಜಾರಿಗೆ ತರಲಾಗುತ್ತಿದೆ. ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದವರು ಶಿಕ್ಷೆಯಿಂದ ಪಾರಾಗದಂತೆ ತಡೆಯಲು ಕಾಯಿದೆಯಲ್ಲಿ ನಿಯಮಗಳನ್ನು ರೂಪಿಸುವ ಹೊಣೆಯನ್ನು ಒಳಾಡಳಿತ ಇಲಾಖೆಗೆ ನೀಡಲಾಗಿತ್ತು. ಇದಕ್ಕೆ ಗೃಹ ಸಚಿವರು ಒಪ್ಪಿಗೆ ಸೂಚಿಸಿದ್ದರು. ಇದರಂತೆ ಗುರುವಾರ ಸಂಜೆ ಒಳಾಡಳಿತ ಇಲಾಖೆಯಿಂದಲೇ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ ವಿಧೇಯಕ-2023 ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಿದ್ದು, ಅಂಗೀಕಾರ ದೊರೆತಿದೆ.
ಲೋಕಸಭಾ ಚುನಾವಣೆ ವೇಳೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಖಾಲಿ: ಪ್ರಿಯಾಂಕ್ ಖರ್ಗೆ
ಮಸೂದೆ ಏಕೆ?
- ಪಿಎಸ್‌ಐ, ಎಂಜಿನಿಯರ್, ನಿಗಮ-ಮಂಡಳಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ
- ಇದರಿಂದ ಅರ್ಹರು ರಾಜ್ಯ ಸರ್ಕಾರದ ಹುದ್ದೆಗಳನ್ನು ಪಡೆಯುವುದರಿಂದ ವಂಚಿತ
- ಅಕ್ರಮದಲ್ಲಿ ಭಾಗಿಯಾದವರು ಶಿಕ್ಷೆಯಿಂದ ಪಾರು. ಇದನ್ನು ತಡೆಯಲು ಮಸೂದೆ