ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾರಾದರೂ ಒಬ್ಬರು ಉತ್ತರಾಧಿಕಾರಿಯಾಗಬೇಕು. ಅದು ಸತೀಶ್ ಜಾರಕಿಹೊಳಿ ಆದರೆ ಬಹಳ ಸಂತೋಷ’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸುವರ್ಣ ವಿಧಾನಸೌಧ (ಡಿ.09): ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾರಾದರೂ ಒಬ್ಬರು ಉತ್ತರಾಧಿಕಾರಿಯಾಗಬೇಕು. ಅದು ಸತೀಶ್ ಜಾರಕಿಹೊಳಿ ಆದರೆ ಬಹಳ ಸಂತೋಷ’ ಎಂದು ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ಅವರಿಗೆ ಸತೀಶ್ ಉತ್ತರಾಧಿಕಾರಿಯಾಗುತ್ತಾರೆ ಎಂಬ ಚರ್ಚೆ ಇರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಹರಿಪ್ರಸಾದ್, ‘ಸತೀಶ್ ಅಹಿಂದ ಪರ ಧ್ವನಿ ಎತ್ತುವವರು. ಮೌಢ್ಯ, ಮೂಢನಂಬಿಕೆ ವಿರುದ್ಧ ಹೋರಾಟ ಮಾಡುವವರು. ದುರ್ಬಲ ವರ್ಗದವರ ಬಗ್ಗೆ ಕಾಳಜಿ ಇರುವವರು. ಇನ್ನು, ಸಿದ್ದರಾಮಯ್ಯ ಅವರಿಗೆ ಯಾರಾದರೂ ಉತ್ತರಾಧಿಕಾರಿ ಬೇಕಲ್ಲವೇ. ಅದು ಸತೀಶ್ ಆದರೆ ಬಹಳ ಸಂತೋಷ’ ಎಂದರು.
ಪ್ರಶ್ನೋತ್ತರ ಬೇಗ ಮುಗಿಸದ್ದಕ್ಕೆ ಸಭಾಪತಿ ಹೊರಟ್ಟಿ ಆಕ್ರೋಶ
ಪ್ರಶ್ನೋತ್ತರ ಕಲಾಪಕ್ಕೆ ಸದಸ್ಯರು ಹೆಚ್ಚಿನ ಸಮಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು. ನಿಯಮದ ಪ್ರಕಾರ 75 ನಿಮಿಷದೊಳಗೆ ಪ್ರಶ್ನೋತ್ತರ ಕಲಾಪ ಮುಗಿಸಬೇಕು. ಆದರೆ, ನೀವು ಸುಮಾರು 1.45 ಗಂಟೆ ತೆಗೆದುಕೊಂಡಿರುವಿರಿ. ಹೀಗಾದರೆ, ಅಜೆಂಡಾದಲ್ಲಿರುವ ವಿಷಯಗಳಿಗೆ ಸಮಯ ಹೊಂದಿಸುವುದು ಹೇಗೆ? ಸದನ ನಡೆಸುವುದು ಹೇಗೆ ಎಂದು ಸದಸ್ಯರನ್ನು ಪ್ರಶ್ನಿಸಿದರು.
ನಾಳೆಯಿಂದ 75 ನಿಮಿಷದೊಳಗೆ ಪ್ರಶ್ನೋತ್ತರ ಕಲಾಪ ಮುಗಿಸಬೇಕು ಎಂದು ಸೂಚಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯ ನಾಗರಾಜ್ ಯಾದವ್, ಪ್ರಶ್ನೋತ್ತರ ಕಲಾಪಕ್ಕೆ ಎರಡು ಗಂಟೆ ಸಮಯ ಕೊಡಿ ಎಂದು ಏರಿದ ದನಿಯಲ್ಲಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ, ನಿನಗೇನು ಗೊತ್ತಿದೆ ಕಾನೂನು. ಸುಮ್ಮನೆ ಕೂರು ಎಂದರು. ಇದರಿಂದ ಮತ್ತಷ್ಟು ರೊಚ್ಚಿಗೆದ್ದ ನಾಗರಾಜ್ ಯಾದವ್, ಕಾನೂನು ತಿಳಿದುಕೊಂಡೇ ನಾನು ಇಲ್ಲಿಗೆ ಬಂದಿರುವುದು ಎಂದು ಹೇಳಿದರು. ಯಾದವ್ ಮಾತಿಗೆ ಎದ್ದು ನಿಂತು ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ-ಜೆಡಿಎಸ್ ಸದಸ್ಯರು, ಇದು ಪೀಠಕ್ಕೆ ಮಾಡುವ ಅವಮಾನ.
ಸಭಾಪತಿಗಳ ಆದೇಶಕ್ಕೆ ಎಲ್ಲರೂ ಬದ್ಧರಾಗಿರಬೇಕು. ನಿಯಮ ಮೀರಿ ವರ್ತಿಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲು ತಮಗೆ ಅವಕಾಶವಿದೆ ಎಂದು ಸಭಾಪತಿಗೆ ಹೇಳಿದರು. ಈ ವೇಳೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಧ್ಯ ಪ್ರವೇಶಿಸಿ, ನಾಗರಾಜ್ ಯಾದವ್ ಬಳಿ ತೆರಳಿ ಸಮಾಧಾನಪಡಿಸಿದರು. ಬಳಿಕ ನಾಗರಾಜ್ ಯಾದವ್, ನಾನು ಸಭಾಪತಿ ಪೀಠಕ್ಕೆ ಅವಮಾನ ಮಾಡಿಲ್ಲ. ನನ್ನ ಮಾತಿನಲ್ಲಿ ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ ಎಂದರು. ಬಳಿಕ ಸಭಾಪತಿ ಹೊರಟ್ಟಿ ಅವರು ನಾಳೆಯಿಂದ ಪ್ರಶ್ನೋತ್ತರ ಕಲಾಪ 75 ನಿಮಿಷದೊಳಗೆ ಮುಗಿಸಬೇಕು ಎಂದು ಮತ್ತೆ ಸೂಚಿಸಿ, ಕಲಾಪ ಮುಂದುವರಿಸಿದರು.


