ಒಂದು ವೇಳೆ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ತೀರ್ಮಾನಿಸಿದರೆ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಒಬ್ಬರೇ ಇಲ್ಲಎಂದು ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ಹೊಸ ವರಸೆ ತೆಗೆದಿದ್ದಾರೆ.
ಸುವರ್ಣ ವಿಧಾನಸೌಧ (ಡಿ.09): ಒಂದು ವೇಳೆ ನಾಯಕತ್ವ ಬದಲಾವಣೆಗೆ ಹೈಕಮಾಂಡ್ ತೀರ್ಮಾನಿಸಿದರೆ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಒಬ್ಬರೇ ಇಲ್ಲ. ಹಿರಿಯ ಸಚಿವರಾದ ಎಚ್.ಕೆ.ಪಾಟೀಲ್, ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್ ಹೀಗೆ ಇನ್ನೂ ಹಲವು ಮಂದಿ ಇದ್ದಾರೆ ಎಂದು ಮಾಜಿ ಸಚಿವ, ಶಾಸಕ ಕೆ.ಎನ್.ರಾಜಣ್ಣ ಹೊಸ ವರಸೆ ತೆಗೆದಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತೀಂದ್ರ ಅವರು ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಒಪ್ಪಿಲ್ಲ ಎಂದು ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅದು ಅವರ ವೈಯಕ್ತಿಕ ಹೇಳಿಕೆ. ಶಾಸಕಾಂಗ ಪಕ್ಷದಲ್ಲಿ ಅಭಿಪ್ರಾಯ ಸಂಗ್ರಹಿಸಿ ಅದರ ಆಧಾರದಲ್ಲಿಯೇ ಸಿಎಂ ಸ್ಥಾನದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಿರುತ್ತದೆ. ಅದರಂತೆ ಸಿದ್ದರಾಮಯ್ಯ ಅವರನ್ನು 5 ವರ್ಷ ಅವಧಿಗೆ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. 5 ವರ್ಷದವರೆಗೂ ಅವರು ಸಿಎಂ ಆಗಿರುತ್ತಾರೆ ಎಂದು ಹೇಳಿದರು.
ಒಂದು ವೇಳೆ ಬದಲಾವಣೆ ಅನಿವಾರ್ಯವಾದರೆ, ಡಿ.ಕೆ.ಶಿವಕುಮಾರ್ ಒಬ್ಬರೇ ಅನಿವಾರ್ಯ ಅಲ್ಲ. 2013ರಲ್ಲಿ ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆದರೆ, ಅವತ್ತು ಅವರು ಸೋತಿದ್ದರು, ಈಗಲಾದರೂ ಅವರ ಶ್ರಮವನ್ನು ಪರಿಗಣಿಸಬೇಕಲ್ವಾ? ಅದೇ ರೀತಿ ಅನೇಕ ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿರುವ ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಸೇರಿದಂತೆ ಇನ್ನು ಅನೇಕ ಜನ ಸಿಎಂ ಸ್ಥಾನಕ್ಕೆ ಅರ್ಹರಾದವರಿದ್ದಾರೆ ಎಂದರು.
ಅಧಿವೇಶನದ ಬಳಿಕ ಸಿಎಂ, ಡಿಸಿಎಂಗೆ ಹೈಕಮಾಂಡ್‌ಗೆ ಬುಲಾವ್ ನೀಡಲಿದೆ ಎನ್ನಲಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಎಲ್ಲಾ ಪಕ್ಷದಲ್ಲೂ ಬದಲಾವಣೆ ನಿರಂತರವಾಗಿ ಆಗುತ್ತಿರುತ್ತದೆ. ಬಿಜೆಪಿಯಲ್ಲಿ ಏನು ಎಲ್ಲಾ ಸರಿಯಾಗಿದೆಯಾ? ಅಲ್ಲೂ ಬಿ.ಪಿ.ಹರೀಶ್, ರಮೇಶ್ ಜಾರಕಿಹೊಳಿ ಮತ್ತಿತರರು ದೆಹಲಿಗೆ ಹೋಗಿ ಅವರ ರಾಜ್ಯಾಧ್ಯಕ್ಷರ ಬದಲಾವಣೆಗೆ ಒತ್ತಾಯಿಸಿದ್ದಾರಲ್ಲ. ಹಾಗೆ ನಮ್ಮ ಪಕ್ಷದಲ್ಲೂ ಇರಬಹುದು. ಈ ನಾಯಕತ್ವ ಬದಲಾವಣೆ ಗೊಂದಲವನ್ನು ಹೈಕಮಾಂಡ್ ನಾಯಕರು ಆದಷ್ಟು ಬೇಗ ಪರಿಹರಿಸಬೇಕು. ಇಲ್ಲದೆ ಹೋದರೆ ಸರ್ಕಾರದ ಆಡಳಿತ, ದಕ್ಷತೆ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಒತ್ತಾಯಿಸಿದರು.
ಸಚಿವ ಆಗಲ್ಲ
ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆದರೆ ಅವರ ಸಂಪುಟದಲ್ಲಿ ತಾವು ಸಚಿವರಾಗುವುದಿಲ್ಲ ಎಂಬ ಮಾತಿನ ಬಗ್ಗೆ ಕೇಳಿದಾಗ, ಈಗಲೂ ನಾನು ಇದೇ ಮಾತನ್ನೇ ಹೇಳುತ್ತೇನೆ, ಒಂದು ವೇಳೆ ನಾಯಕತ್ವ ಬದಲಾವಣೆ ಆದರೆ ನಾನು ಡಿ.ಕೆ.ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಸಚಿನಾಗುವುದಿಲ್ಲ ಎಂದು ಪುನರುಚ್ಚರಿಸಿದರು.


