ಓಲೈಕೆಗಾಗಿ ಉಗ್ರನ ಪರ ಡಿಕೆಶಿ ವಕಾಲತ್ತು: ಸಚಿವ ಆರಗ ಜ್ಞಾನೇಂದ್ರ
ಕುಕ್ಕರ್ ಬಾಂಬ್ ಸ್ಫೋಟ ಭಯೋತ್ಪಾದಕ ಕೃತ್ಯ ಹಾಗೂ ಮೊಹಮ್ಮದ್ ಶಾರೀಕ್ ಈಗಲೂ ಭಯೋತ್ಪಾದಕ. ಆತ ಎಲ್ಲಾದರೂ ಬಾಂಬ್ ಇಟ್ಟು ಅನಾಹುತ ಆಗಿದ್ದರೆ ಎಷ್ಟು ಜನ ಸಾಯುತ್ತಿದ್ದರು ಎಂಬುದನ್ನೂ ಯೋಚಿಸಬೇಕು.
ಬೆಂಗಳೂರು (ಡಿ.16): ‘ಕುಕ್ಕರ್ ಬಾಂಬ್ ಸ್ಫೋಟ ಭಯೋತ್ಪಾದಕ ಕೃತ್ಯ ಹಾಗೂ ಮೊಹಮ್ಮದ್ ಶಾರೀಕ್ ಈಗಲೂ ಭಯೋತ್ಪಾದಕ. ಆತ ಎಲ್ಲಾದರೂ ಬಾಂಬ್ ಇಟ್ಟು ಅನಾಹುತ ಆಗಿದ್ದರೆ ಎಷ್ಟು ಜನ ಸಾಯುತ್ತಿದ್ದರು ಎಂಬುದನ್ನೂ ಯೋಚಿಸಬೇಕು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಓಲೈಕೆ ರಾಜಕಾರಣಕ್ಕಾಗಿ ಅಂತಹ ಭಯೋತ್ಪಾದಕನ ಪರ ವಕಾಲತ್ತು ವಹಿಸುವುದು ಸರಿಯಲ್ಲ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾರೀಕ್ ಬಗ್ಗೆ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ. ತನಿಖೆಗೂ ಮೊದಲೇ ಡಿಜಿ ಅವರು ಆತನನ್ನು ಭಯೋತ್ಪಾದಕ ಎಂದು ಹೇಗೆ ಹೇಳಿದರು ಎಂದು ಪ್ರಶ್ನಿಸುತ್ತಾರೆ. ಶಾರೀಕ್ ಆಗಲೂ ಉಗ್ರ, ಈಗಲೂ ಉಗ್ರ. ಆತ ಮೊದಲೇ ಜಾಮೀನಿನ ಮೇಲೆ ಹೊರ ಬಂದಿದ್ದ. ತುಂಗಾ ದಡದಲ್ಲಿ ಬಾಂಬ್ ಟ್ರಯಲ್ ಮಾಡುತ್ತಿದ್ದ. ಪೊಲೀಸ್ ಠಾಣೆಯಲ್ಲೂ ಈ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಡಿಜಿ ಅವರು ಆತನ ಬಗ್ಗೆ ಭಯೋತ್ಪಾದಕ ಎಂಬ ಹೇಳಿಕೆ ನೀಡಿದ್ದಾರೆ. ಅಂತಹ ಭಯೋತ್ಪಾದಕನ ಪರ ಡಿ.ಕೆ.ಶಿವಕುಮಾರ್ ಅವರು ವಕಾಲತ್ತು ವಹಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಳಕ್ಕೆ ಸರ್ಕಾರ ಚಿಂತನೆ: ಸಚಿವ ಆರಗ ಜ್ಞಾನೇಂದ್ರ
ಡಿ.ಕೆ.ಶಿವಕುಮಾರ್ ಹೇಳಿಕೆ ಖಂಡಿಸುತ್ತೇನೆ. ಅಲ್ಪಸಂಖ್ಯಾತರ ಮತ ಬ್ಯಾಂಕ್‌ಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿಯ ರಾಜಕೀಯವನ್ನು ಏನೆಂದು ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ. ಒಂದು ವೇಳೆ ಕುಕ್ಕರ್ ಬಾಂಬ್ ಸರಿಯಾಗಿ ಸ್ಫೋಟಗೊಂಡಿದ್ದರೆ, ಯಾವ ಮಟ್ಟದ ಅನಾಹುತ ಆಗುತ್ತಿತ್ತು? ಎಷ್ಟುಮಂದಿ ಸಾಯುತ್ತಿದ್ದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಇಂತಹ ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸುವುದು ಸರಿಯಲ್ಲ ಎಂದು ಹೇಳಿದರು. ‘ಕಾಂಗ್ರೆಸ್ ಆಡಳಿತದಲ್ಲಿ ದೀಪಾವಳಿ ಪಟಾಕಿ ಹೊಡೆದ ರೀತಿ ಬಾಂಬ್ ಸ್ಫೋಟಗಳು ಆಗುತ್ತಿದ್ದವು. ಪುಲ್ವಾಮಾ ದಾಳಿ ಎಲ್ಲವೂ ಕಾಂಗ್ರೆಸ್‌ನದ್ದೇ ಕೂಸು’ ಎಂದೂ ಅವರು ಆರೋಪಿಸಿದರು.
ವೋಟರ್ಗೇಟ್ ಮುಚ್ಚಲು ಕುಕ್ಕರ್ ಬಾಂಬ್: ‘ರಾಜ್ಯದಲ್ಲಿ ಮತದಾರರ ಪಟ್ಟಿಅಕ್ರಮ ಮರೆಮಾಚಲು ರಾಜ್ಯ ಸರ್ಕಾರ ಕುಕ್ಕರ್ ಬಾಂಬ್ ಪ್ರಕರಣವನ್ನು ದೊಡ್ಡದು ಮಾಡಿದೆ. ತನಿಖೆಗೆ ಮೊದಲೇ ಪೊಲೀಸ್ ಹಿರಿಯ ಅಧಿಕಾರಿಗಳು ಆ ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿದರು. ಚಿಲುಮೆ ಸಂಸ್ಥೆಯ ಮೂಲಕ ನಡೆಸಿದ ಮತದಾರರ ಮಾಹಿತಿ ಕಳವು ಪ್ರಕರಣ ಮುಚ್ಚಿಹಾಕಲು ಬಿಜೆಪಿ ರೂಪಿಸಿದ ಷಡ್ಯಂತ್ರವಿದು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಪ್ರೆಸ್‌ಕ್ಲಬ್ ಸಂವಾದದಲ್ಲಿ ಮಾತನಾಡಿದ ಅವರು, ‘ಮತದಾರರ ಮಾಹಿತಿ ಕಳವು ಅಕ್ರಮ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯಲು ಕುಕ್ಕರ್ ಬಾಂಬ್ ಸ್ಫೋಟ ವಿಚಾರ ತಂದರು. ಭಯೋತ್ಪಾದಕರು ಎಲ್ಲಿಂದ ಬಂದು ಬಾಂಬ್ ಸ್ಫೋಟ ಮಾಡಿದ್ದರು? ಇದು ಕೇವಲ ಮತದಾರರ ಮಾಹಿತಿ ಕಳವು ಹಗರಣ ವಿಚಾರವನ್ನು ಬೇರೆಡೆ ಸೆಳೆಯುವ ಪ್ರಯತ್ನವಲ್ಲವೇ?’ ಎಂದು ಪ್ರಶ್ನಿಸಿದರು. ಕುಕ್ಕರ್ ಬ್ಲಾಸ್ಟ್ ಪೂರ್ವ ನಿಯೋಜಿತ ಎಂದು ಹೇಗೆ ಹೇಳುತ್ತೀರಿ ಎಂಬ ಪ್ರಶ್ನೆಗೆ, ‘ಪ್ರಕರಣದ ತನಿಖೆಗೂ ಮೊದಲೇ ಅಧಿಕಾರಿಗಳು ಇದನ್ನು ಭಯೋತ್ಪಾದಕ ಕೃತ್ಯ ಎಂದು ಹೇಗೆ ಘೋಷಿಸಿದರು? ಇದರ ಹಿಂದೆ ಯಾವ ಉಗ್ರನಿದ್ದಾನೆ? ಯಾವ ಸಂಘಟನೆ ಇದೆ? ಯಾರ ವಿರುದ್ಧ ಇವರು ಕ್ರಮ ಕೈಗೊಂಡಿದ್ದಾರೆ? ಇತ್ಯಾದಿ ತನಿಖೆಯ ಮಾಹಿತಿ ನೀಡಬೇಕಲ್ಲವೇ?’ ಎಂದು ಪ್ರಶ್ನಿಸಿದರು.
ಟೆರರ್ ಲಿಂಕ್ ಬಗ್ಗೆ ಕೇಂದ್ರ ತಂಡದ ಜತೆ ತನಿಖೆ: ಸಚಿವ ಆರಗ ಜ್ಞಾನೇಂದ್ರ
ಮತದಾರರ ಮಾಹಿತಿ ಕಳವು ಇಡೀ ದೇಶದಲ್ಲೇ ಅತಿ ದೊಡ್ಡ ಅವ್ಯವಹಾರ. ಇದರಿಂದ ರಾಜ್ಯಕ್ಕೆ ಕಪ್ಪು ಚುಕ್ಕೆ ತಂದಿದ್ದಾರೆ. ಆ ಹಗರಣ ಬಯಲಾಗಿದ್ದರಿಂದ ಅದನ್ನು ಮರೆ ಮಾಚಲು ಕುಕ್ಕರ್ ಬಾಂಬ್ ವಿಚಾರವನ್ನು ಮುನ್ನೆಲೆಗೆ ತಂದು ದೊಡ್ಡದು ಮಾಡಿದರು ಎಂದು ದೂರಿದರು. ರಾಜ್ಯದಲ್ಲಿ ಕೇವಲ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ರಾಜ್ಯಕ್ಕೆ 10 ಲಕ್ಷ ಕೋಟಿ ರು. ಬಂಡವಾಳ ಬರುತ್ತಿದೆ ಎಂದು ಹೇಳುವ ಇವರು ಶಿವಮೊಗ್ಗ, ಉಡುಪಿ, ಕರಾವಳಿ ಜಿಲ್ಲೆಗಳಿಗೆ ಎಷ್ಟುಬಂಡವಾಳ ಹರಿದುಬಂದಿದೆ ಎಂಬುದರ ಮಾಹಿತಿ ಬಿಡುಗಡೆ ಮಾಡಲಿ. ಅಧಿಕಾರಕ್ಕಾಗಿ ಜನರಲ್ಲಿ ಭಯ ಹಾಗೂ ದ್ವೇಷದ ವಾತಾವರಣ ನಿರ್ಮಾಣ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದು ಉದಾಹರಣೆ ಎಂದು ಹೇಳಿದರು.