ಟೆರರ್ ಲಿಂಕ್ ಬಗ್ಗೆ ಕೇಂದ್ರ ತಂಡದ ಜತೆ ತನಿಖೆ: ಸಚಿವ ಆರಗ ಜ್ಞಾನೇಂದ್ರ
ಮಂಗಳೂರು ಆಟೋ ಸ್ಫೋಟ ಪ್ರಕರಣದ ಹಿಂದೆ ಭಯೋತ್ಪಾದಕ ಸಂಘಟನೆಗಳ ಲಿಂಕ್ ಇವರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶೀಘ್ರದಲ್ಲೇ ಸ್ಪೋಟದ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಶಿವಮೊಗ್ಗ (ನ.21): ಮಂಗಳೂರು ಆಟೋ ಸ್ಫೋಟ ಪ್ರಕರಣದ ಹಿಂದೆ ಭಯೋತ್ಪಾದಕ ಸಂಘಟನೆಗಳ ಲಿಂಕ್ ಇವರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಶೀಘ್ರದಲ್ಲೇ ಸ್ಪೋಟದ ಸಂಪೂರ್ಣ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಮಂಗಳೂರಿನ ಗರೋಡಿ ಬಳಿ ಶನಿವಾರ ಆಟೋ ರಿಕ್ಷಾದಲ್ಲಿ ಸಂಭವಿಸಿದ ಸ್ಫೋಟದ ಬಗ್ಗೆ ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಟೋ ಸ್ಫೋಟ ವೇಳೆ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರು ಮಾತಾಡುವ ಪರಿಸ್ಥಿತಿಯಲ್ಲಿ ಇಲ್ಲಾ ನಮ್ಮ ಮಂಗಳೂರು ಪೊಲೀಸರು ಹಿನ್ನೆಲೆ ಭೇದಿಸುತ್ತಿದ್ದಾರೆ ಎಂದರು.
ಅನೇಕ ಮಾಹಿತಿಗಳ ಪ್ರಕಾರ ಇದರ ಹಿನ್ನೆಲೆ ಬಹಳ ದೊಡ್ಡದಾಗಿದೆ. ಭಯೋತ್ಪಾದಕ ಸಂಘಟನೆಗಳ ಲಿಂಕ್ ಇವರ ಜೊತೆಗೆ ಇದೆ ಅನ್ನುವಂತಹ ಸೂಚನೆಗಳು ಕಂಡು ಬರುತ್ತಿದೆ. ಈ ಹಿನ್ನೆಲೆ ಕೇಂದ್ರದ ಭದ್ರತಾ ಪಡೆಗಳ ಜೊತೆಗೆ ಮಾತುಕತೆ ಆಗಿದೆ, ಅವರು ಸಹ ಬಂದಿದ್ದಾರೆ. ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದಾರೆ. ಎರಡು ದಿನಗಳಲ್ಲಿ ಸಂಪೂರ್ಣ ವಿಚಾರ ಹೊರ ಬರುತ್ತೆ ಎಂದು ತಿಳಿಸಿದರು. ಇಂತಹ ಘಟನೆಗಳ ಬಹಳ ವರ್ಷಗಳಿಂದ ಕರಾವಳಿ ಭಾಗದಲ್ಲಿ ನಡೆಯುತ್ತಿದೆ. ಈ ಬಾರಿ ಈ ಘಟನೆಯಾದಾಗ ಹಳೆಯ ಹಿನ್ನೆಲೆಯಲ್ಲಿಯೇ ತನಿಖೆ ಆರಂಭವಾಗಿದೆ. ಶೀಘ್ರದಲ್ಲೇ ಇದರ ಮಾಹಿತಿ ಸಾರ್ವಜನಿಕರಿಗೆ ತಿಳಿಯುತ್ತದೆ ಎಂದರು.
ಮಂಗಳೂರು ಸ್ಫೋಟ ಪ್ರಕರಣದ ಜಾಲ ಭೇದಿಸುತ್ತೇವೆ: ಸಿಎಂ ಬೊಮ್ಮಾಯಿ
ಆಟೋರಿಕ್ಷಾ ಸ್ಫೋಟ ಮಾಸ್ಟರ್ ಮೈಂಡ್ ತೀರ್ಥಹಳ್ಳಿಯ ಶಾರೀಕ್?: ಮಂಗಳೂರಿನಲ್ಲಿ ಶನಿವಾರ ನಡೆದಿರುವ ಆಟೋರಿಕ್ಷಾ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ತೀರ್ಥಹಳ್ಳಿಯ ಶಾರೀಕ್ ಎಂಬ ಶಂಕೆ ವ್ಯಕ್ತವಾಗಿದ್ದು, ಶಿವಮೊಗ್ಗದ ಪೊಲೀಸ್ ತಂಡ ಮಂಗಳೂರಿಗೆ ತೆರಳಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ಸಿಕ್ಕಿಹಾಕಿಕೊಂಡಿದ್ದ ಶಂಕಿತ ಉಗ್ರರ ಪೈಕಿ ಶಾರೀಕ್ ಪ್ರಮುಖ ಆರೋಪಿಯಾಗಿದ್ದ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆ ನಿವಾಸಿಯಾಗಿದ್ದಾನೆ. ಈತ ತೀರ್ಥಹಳ್ಳಿಯಲ್ಲಿ ಬಟ್ಟೆಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ.
ಮಂಗಳೂರು ಗೋಡೆ ಬರಹ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದ ಶಾರೀಕ್‌ನನ್ನು ಬಂಧಿಸಲಾಗಿತ್ತು. ಈತನಿಗೆ 8 ತಿಂಗಳು ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಶಿವಮೊಗ್ಗದಲ್ಲಿ ನಡೆದ ಪ್ರೇಮ್ ಸಿಂಗ್ ಚಾಕು ಇರಿತದ ಪ್ರಕರಣದ ಪ್ರಮುಖ ಆರೋಪಿ ಜಬಿವುಲ್ಲಾ ಜೊತೆ ಶಾರೀಕ್ ನಿಕಟ ಸಂಪರ್ಕ ಹೊಂದಿದ್ದ. ಶಂಕಿತ ಐಸಿಸ್ ಉಗ್ರರ ಪ್ರಕರಣದಲ್ಲೂ ಕೂಡ ಎ-1 ಆರೋಪಿಯಾಗಿದ್ದ.
ಆಟೋದಲ್ಲಿ ಕುಕ್ಕರ್ ಸ್ಫೋಟ: ಮಂಗಳೂರಿನಲ್ಲಿ ನಡೆದಿತ್ತಾ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು?
ಈತ ತನ್ನ ಸಹಚರರಾದ ಮಾಜ್ ಹಾಗೂ ಸೈಯದ್ ಯಾಸೀನ್‌ಗೆ ಬಾಂಬ್ ತಯಾರಿಕೆ ತರಬೇತಿಯನ್ನು ಕೊಡುತ್ತಿದ್ದ ಎನ್ನಲಾಗಿದೆ. ಅಲ್ಲದೇ, ಇದಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಲು ಹಣವನ್ನೂ ಕೊಡುತ್ತಿದ್ದ ಎಂಬ ವಿಚಾರ ಬಯಲಾಗಿದೆ. ಹೀಗಾಗಿ ಇವನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಮಂಗಳೂರಿನಲ್ಲಿ ಶನಿವಾರ ಸಂಭವಿಸಿರುವ ಆಟೋ ಸ್ಫೋಟದಲ್ಲಿ ಗಾಯಗೊಂಡಿರುವ ವ್ಯಕ್ತಿ ಶಾರೀಕ್ ಆಗಿದ್ದಾನೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಆದ್ದರಿಂದ ತೀರ್ಥಹಳ್ಳಿಯ ಡಿವೈಎಸ್‌ಪಿ ಶಾಂತವೀರ್ ನೇತೃತ್ವದ ತಂಡವು ಮಂಗಳೂರಿಗೆ ತೆರಳಿದೆ.