ಚುನಾವಣೆ ಹೊಸ್ತಿಲಲ್ಲಿ ಬಾಲ ಬಿಚ್ಚಿದ MES: 'ಚಲೋ ಮುಂಬೈ' ಮೂಲಕ ಮಹಾರಾಷ್ಟ್ರ ಸಿಎಂ ಭೇಟಿ
• ಫೆಬ್ರವರಿ 28ರಂದು ಚಲೋ ಮುಂಬೈಗೆ ಕರೆ ನೀಡಿದ ಎಂಇಎಸ್
• ಚುನಾವಣೆಯಲ್ಲಿ 'ಗಡಿವಿವಾದ' ಅಸ್ತ್ರವಾಗಿಸಿಕೊಳ್ಳಲು MES ಕಸರತ್ತು
• ಮುಂಬೈಗೆ ತೆರಳಿ ಸಿಎಂ ಏಕನಾಥ ಶಿಂಧೆ ಭೇಟಿಯಾದ MES ನಿಯೋಗ
ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಫೆ.15): ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಎಂಇಎಸ್ ವಿಧಾನಸಭೆ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಮರುಸ್ಥಾಪಿಸಲು ಹೆಣಗಾಡುತ್ತಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಬಾಲ ಚಿಚ್ಚಿರುವ ನಾಡದ್ರೋಹಿ ಎಂಇಎಸ್ ನಾಯಕರ ನಿಯೋಗ ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ ಭೇಟಿಯಾಗಿದೆ.
ಎಂಇಎಸ್ ಮಾಜಿ ಶಾಸಕ ಮನೋಹರ್ ಕಿಣೇಕರ್ ನೇತೃತ್ವದ ಎಂಇಎಸ್ ನಿಯೋಗ ಮುಂಬೈಗೆ ತೆರಳಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಗಡಿ ಸಮನ್ವಯ ಸಚಿವರಾದ ಶಂಭುರಾಜ ದೇಸಾಯಿ, ಚಂದ್ರಕಾಂತ ಪಾಟೀಲ್, ಮಹಾರಾಷ್ಟ್ರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಾಕೇಶ್ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳ ಭೇಟಿಯಾಗಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ವಿಚಾರಣೆ ಬಂದಾಗ ಸಮರ್ಥ ವಾದ ಮಾಡುವಂತೆ ಮನವಿ ಮಾಡಿದ್ದಾರೆ.
ಫೆ.28ರಂದು 'ಚಲೋ ಮುಂಬೈ'ಗೆ ಕರೆ ನೀಡಿದ ಎಂಇಎಸ್: ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ನಾಡದ್ರೋಹಿ ಎಂಇಎಸ್ ಗಡಿವಿವಾದವನ್ನೇ ಅಸ್ತ್ರವಾಗಿಸಿಕೊಳ್ಳಲು ಪ್ಲ್ಯಾನ್ ಮಾಡುತ್ತಿದೆ. ಫೆಬ್ರವರಿ 28ರಂದು ಗಡಿಭಾಗದ ಮರಾಠಿ ಭಾಷಿಕರನ್ನು ಸೇರಿಸಿ 'ಚಲೋ ಮುಂಬೈ' ಆಂದೋಲನಕ್ಕೆ ತಯಾರಿ ನಡೆಸಿದೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡುತ್ತಿದ್ದು ಫೆಬ್ರವರಿ 28ರಂದು ಮುಂಬೈನ ಆಜಾದ್ ಮೈದಾನಕ್ಕೆ ತೆರಳಿ ಪ್ರತಿಭಟನೆ ನಡೆಸಲು ಎಂಇಎಸ್ ನಿರ್ಧರಿಸಿದೆ. ಗಡಿವಿವಾದ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಲಿದೆ. ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಭೇಟಿ ವೇಳೆಯೂ ಈ ಬಗ್ಗೆ ಚರ್ಚಿಸಲಾಗಿದೆ.
ಬೆಳಗಾವಿ ಪಾಲಿಕೆಯಲ್ಲಿ MES ಯುಗಾಂತ್ಯ: ಮರಾಠಿಗರಿಗೆ ಮಣೆ ಹಾಕಿದ್ದಕ್ಕೆ ಬಿಜೆಪಿ ವಿರುದ್ಧ ಕರವೇ ಗರಂ
ಐದು ಕ್ಷೇತ್ರದಲ್ಲಿ ಮರಾಠಾ ಪ್ರಾಬಲ್ಯ, 3 ಕ್ಷೇತ್ರ ಟಾರ್ಗೆಟ್: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಗಡಿವಿವಾದವನ್ನೇ ಅಸ್ತ್ರವಾಗಿಸಿಕೊಳ್ಳಲು ಎಂಇಎಸ್ ಪ್ಲ್ಯಾನ್ ಮಾಡಿದ್ದು ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಐದು ಕ್ಷೇತ್ರದಲ್ಲಿ ಹೆಚ್ಚಾಗಿ ಇರುವ ಮರಾಠಿ ಭಾಷಿಕ ಮತದಾರರ ಗುರಿಯಾಗಿಸಿ ಪ್ಲ್ಯಾನ್ ರೂಪಿಸುತ್ತಿದೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ, ನಿಪ್ಪಾಣಿ ಕ್ಷೇತ್ರದಲ್ಲಿ ಮರಾಠಾ ಭಾಷಿಕ ಮತದಾರರ ಪ್ರಾಬಲ್ಯವಿದ್ದು ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಖಾನಾಪುರ ಈ ಮೂರು ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದೆ. ಫೆಬ್ರವರಿ 28ರಂದು ಮುಂಬೈನಲ್ಲಿ ಎಂಇಎಸ್ ಪ್ರತಿಭಟನೆ ನೆಪದಲ್ಲಿ ಮಹಾರಾಷ್ಟ್ರ ರಾಜಕೀಯ ನಾಯಕರ ಗಮನ ಸೆಳೆದು ಭೇಟಿಗೆ ಯತ್ನಿಸಲಾಗುತ್ತಿದೆ ಎಂಬ ಮಾತುಗಳು ಸದ್ಯ ಬೆಳಗಾವಿ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಟಿಕೆಟ್ ಫೈಟ್ ಗಮನದಲ್ಲಿಟ್ಟು MES 'ಟಾರ್ಗೆಟ್-3' ಸೂತ್ರ: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ ಬೆಳಗಾವಿ ದಕ್ಷಿಣ, ಬೆಳಗಾವಿ ಗ್ರಾಮೀಣ, ಖಾನಾಪುರ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿರುವ ಎಂಇಎಸ್, ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿರುವ ಆಂತರಿಕ ಭಿನ್ನಮತ, ಟಿಕೆಟ್ ಫೈಟ್ ಲಾಭವಾಗಿಸಿಕೊಳ್ಳಲು ತಂತ್ರಗಾರಿಕೆ ಹೂಡುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಹಾಲಿ ಶಾಸಕರಾಗಿರುವ ಅಭಯ್ ಪಾಟೀಲ್ ಜೈನ್ ಸಮುದಾಯದವರಾಗಿದ್ದು ಇಲ್ಲಿ ಮರಾಠಾ ಸಮುದಾಯದ ಜನಪ್ರತಿನಿಧಿ ಆಗಬೇಕು ನಮ್ಮ ಕ್ಷೇತ್ರಕ್ಕೆ ನಮ್ಮ ಮನುಷ್ಯ ಇರಲಿ ಎಂಬ ಘೋಷವಾಕ್ಯದಡಿ ತಂತ್ರ ಹೂಡುತ್ತಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಅಭಯ್ ಪಾಟೀಲ್ ಹಾಲಿ ಬಿಜೆಪಿ ಶಾಸಕರಾಗಿದ್ದರೂ ಬೆಳಗಾವಿ ದಕ್ಷಿಣ ಬಿಜೆಪಿ ಟಿಕೆಟ್‌ಗಾಗಿ ರಮೇಶ್ ಜಾರಕಿಹೊಳಿ ಆಪ್ತ ಕಿರಣ್ ಜಾಧವ್ ಲಾಭಿ ನಡೆಸುತ್ತಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ದರೂ ಪಕ್ಷೇತರರಾಗಿಯಾದರೂ ಕಣಕ್ಕಿಳಿಯಬೇಕೆಂಬ ಚಿಂತನೆಯಲ್ಲಿ ಕಿರಣ್ ಜಾಧವ್ ಇದ್ದಾರೆ.
ಅಂಜಲಿ ನಿಂಬಾಳ್ಕರ್ ವಿರುದ್ಧ ಎಂಇಎಸ್ ಪೈಪೋಟಿ: ಮತ್ತೊಂದೆಡೆ ಹಿಂದೂಪರ ಮುಖಂಡ ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆಯ ಸಂಸ್ಥಾಪಕ ರಮಾಕಾಂತ್ ಕೊಂಡೂಸ್ಕರ್ ಸಹ ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಒಲವು ತೋರುತ್ತಿದ್ದು ಎಂಇಎಸ್ ಬೆಂಬಲ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಖಾನಾಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಬರೋಬ್ಬರಿ ಹತ್ತು ಆಕಾಂಕ್ಷಿಗಳ ಮಧ್ಯೆ ಪೈಪೋಟಿ ಇದೆ. ಮಾಜಿ ಶಾಸಕ ಅರವಿಂದ ಪಾಟೀಲ್, ವಿಠ್ಠಲ್ ಹಲಗೇಕರ್, ಎ.ದಿಲೀಪ್‌ಕುಮಾರ್, ಡಾ.ಸೋನಾಲಿ ಸರ್ನೋಬತ್ ಸೇರಿ 10 ಜನರ ಮಧ್ಯೆ ಬಿಜೆಪಿ ಟಿಕೆಟ್‌ಗಾಗಿ ಪೈಪೋಟಿ ಇದ್ದು ಖಾನಾಪುರ ಹಾಲಿ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಪ್ರಬಲ ಅಭ್ಯರ್ಥಿಗಾಗಿ ಎಂಇಎಸ್ ಹುಡುಕಾಟ ನಡೆಸಿದೆ.
ಕ್ರಿಕೆಟ್ ಆಡಿದ್ದು ಸಾರ್ಥಕವಾಯಿತು, ಸಚಿನ್ ಟ್ವೀಟ್‌ಗೆ ಕಿರಣ್ ತಾರಲೇಕರ್ ಪ್ರತಿಕ್ರಿಯೆ!
ಚುನಾವಣೆಯಲ್ಲಿ ಪ್ರಚಾರಕ್ಕೆ ಮಹಾ ಸಿಎಂ ಆಗಮನ ಸಾಧ್ಯತೆ: ಇತ್ತ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೂ ಬಿಜೆಪಿ ಟಿಕೆಟ್‌ಗಾಗಿ ಐವರ ಮಧ್ಯೆ ಪೈಪೋಟಿ ಇದೆ. ಮಾಜಿ ಶಾಸಕ ಸಂಜಯ್ ಪಾಟೀಲ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ ನಾಗೇಶ್ ಮನ್ನೋಳಕರ್, ಬೆಳಗಾವಿ ಗ್ರಾಮೀಣ ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ ಜಾಧವ್, ವಿನಯ್ ಕದಂ, ದೀಪಾ ಕುಡಚಿ ಮಧ್ಯೆ ಬಿಜೆಪಿ ಟಿಕೆಟ್‌ಗಾಗಿ ಫೈಟ್ ನಡೆಯುತ್ತಿದೆ. ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಸ್ಥಳೀಯ ನಾಯಕರ ಭಿನ್ನಮತ ಲಾಭವಾಗಿಸಿಕೊಳ್ಳಲು ಎಂಇಎಸ್ ಕಸರತ್ತು ನಡೆಸಿದೆ. ಒಟ್ಟಾರೆ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪರ ನಿಲ್ಲುವಂತೆ ಎಂಇಎಸ್ ನಾಯಕರು ಮಹಾರಾಷ್ಟ್ರ ರಾಜಕೀಯ ನಾಯಕರ ಕದ ತಟ್ಟುತ್ತಿರುವುದಂತೂ ಸುಳ್ಳಲ್ಲ. ಎಂಇಎಸ್ ತಂತ್ರಕ್ಕೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಯಾವ ರೀತಿ ಪ್ರತಿತಂತ್ರ ಹೂಡಲಿದೆ ಎಂಬುದನ್ನು ಕಾದು ನೋಡಬೇಕು.