Asianet Suvarna News Asianet Suvarna News

ಬೆಳಗಾವಿ ಪಾಲಿಕೆಯಲ್ಲಿ MES ಯುಗಾಂತ್ಯ: ಮರಾಠಿಗರಿಗೆ ಮಣೆ ಹಾಕಿದ್ದಕ್ಕೆ ಬಿಜೆಪಿ ವಿರುದ್ಧ ಕರವೇ ಗರಂ

 ಮರಾಠಿ ಭಾಷಿಕ ಬಿಜೆಪಿ ಸದಸ್ಯರಿಗೆ ಒಲಿದ ಬೆಳಗಾವಿ ಮೇಯರ್, ಡೆಪ್ಯುಟಿ ಮೇಯರ್ ಸ್ಥಾನ. ಲಿಂಗಾಯತ ಸಮುದಾಯದ ಕನ್ನಡ ಭಾಷಿಕ ಸದಸ್ಯನಿಗೆ ಸಭಾನಾಯಕ ಸ್ಥಾನ. ಕನ್ನಡಿಗರಿಗೆ ಬಿಜೆಪಿ ಮೋಸ ಮಾಡಿದೆ ಎಂದು ಕರವೇ ಆಕ್ರೋಶ

karnataka rakshana vedike slams BJP for supported Marathas in Belagavi  mayor election gow
Author
First Published Feb 6, 2023, 9:27 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್

ಬೆಳಗಾವಿ (ಫೆ.6): ಮಹಾನಗರ ಪಾಲಿಕೆ ಚುನಾವಣೆ ನಡೆದು 17 ತಿಂಗಳ ಬಳಿಕ ಮಹಾಪೌರ, ಉಪ ಮಹಾಪೌರ ಆಯ್ಕೆಯಾಗಿದ್ದಾರೆ. ಈ ಮುಂಚೆ ಭಾಷಾ ಆಧಾರಿತವಾಗಿ ನಡೆಯುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಇದೇ ಮೊದಲ ಬಾರಿ ಪಕ್ಷದ ಚಿಹ್ನೆ ಮೇಲೆ ನಡೆದಿತ್ತು. 2021ರ ಸೆಪ್ಟೆಂಬರ್ 3ರಂದು ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ನಡೆದಿದ್ದ ಚುನಾವಣೆ ಫಲಿತಾಂಶ ಸೆಪ್ಟೆಂಬರ್ 6ರಂದು ಬಂದಿತ್ತು. 58 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ 35 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿಗೆ ಸ್ಪಷ್ಟ ಬಹುಮತ ಬಂದಿತ್ತು. ಕಾಂಗ್ರೆಸ್ 10, ಪಕ್ಷೇತರರು 9, ಎಂಇಎಸ್ 3, ಎಐಎಂಐಎಂ ಒಂದು ಸ್ಥಾನದಲ್ಲಿ ಗೆದ್ದಿತ್ತು. ಆದ್ರೆ ಮೀಸಲಾತಿ ಗೊಂದಲದಿಂದ ಮೇಯರ್ ಡೆಪ್ಯುಟಿ ಮೇಯರ್ ಚುನಾವಣೆ ವಿಳಂಬವಾಗಿತ್ತು.‌ ಮಹಾನಗರ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು ಇದ್ರೆ, ಉಪಮೇಯರ್ ಸ್ಥಾನ ಹಿಂದುಳಿದ ವರ್ಗ 'ಬ' ಮಹಿಳೆಗೆ ಮೀಸಲಾಗಿತ್ತು.‌ ಲಿಂಗಾಯತ ಮರಾಠಾ ಬ್ರಾಹ್ಮಣ ನೇಕಾರ ಸಮುದಾಯ ಮಧ್ಯೆ ಮೇಯರ್ ಸ್ಥಾನಕ್ಕೆ ಪೈಪೋಟಿ ಇತ್ತು‌. ಕನ್ನಡ ಭಾಷಿಕ ಸದಸ್ಯರ ಮೇಯರ್ ಮಾಡುವಂತೆ ಕರವೇ ಆಗ್ರಹಿಸಿತ್ತು. ಇಂದು ನಡೆದ ಚುನಾವಣೆಯಲ್ಲಿ ಮರಾಠಾ ಭಾಷಿಕ ಮರಾಠಾ ಸಮುದಾಯದ ಬಿಜೆಪಿ ಸದಸ್ಯರಿಗೆ ಮೇಯರ್ ಉಪಮೇಯರ್ ಸ್ಥಾನ ಒಲಿದಿದ್ದು, ಲಿಂಗಾಯತ ಪಂಚಮಸಾಲಿ ಸಮುದಾಯದ ಕನ್ನಡ ಭಾಷಿಕ ಬಿಜೆಪಿ ಸದಸ್ಯನನ್ನು ಆಡಳಿತ ಪಕ್ಷದ ನಾಯಕನಾಗಿ ಆಯ್ಕೆ ‌ಮಾಡಲಾಗಿದೆ.

ನಿನ್ನೆ ರಾತ್ರಿ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಬೆಳಗಾವಿ ವಿಭಾಗ ಬಿಜೆಪಿ ಉಸ್ತುವಾರಿ ನಿರ್ಮಲಕುಮಾರ್ ಸುರಾನಾ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯಲ್ಲಿ ಮೇಯರ್ ಆಕಾಂಕ್ಷಿಗಳ ಸಂದರ್ಶನ ನಡೆದಿತ್ತು. ಇಂದು ಬೆಳಗ್ಗೆ ಮತ್ತೆ ಸಭೆ ಸೇರಿದ ಬಿಜೆಪಿ ನಾಯಕರು ಬೆಳಗಾವಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕನಾಗಿ ವಾರ್ಡ್ ನಂಬರ್ 36ರ ಬಿಜೆಪಿ ಸದಸ್ಯ, ಲಿಂಗಾಯತ ಪಂಚಮಸಾಲಿ ಸಮುದಾಯದ ಹಾಗೂ ಕನ್ನಡ ಭಾಷಿಕ ರಾಜಶೇಖರ್ ಡೋಣಿ ಆಯ್ಕೆ ಮಾಡಲಾಯಿತು. ಮೇಯರ್, ಉಪಮೇಯರ್ ಮರಾಠಾ ಸಮುದಾಯಕ್ಕೆ ನೀಡಿದ್ದು ಬೆಳಗಾವಿ ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 57ರ ಸದಸ್ಯೆ ಶೋಭಾ ಸೋಮನಾಚೆ ಅವಿರೋಧವಾಗಿ ಆಯ್ಕೆ ಆದರು.

ಉಪಮೇಯರ್ ಸ್ಥಾನಕ್ಕೆ ಎಂಇಎಸ್‌ ಸದಸ್ಯೆ ವೈಶಾಲಿ ಭಾತ್ಕಾಂಡೆ ನಾಮಪತ್ರ ಸಲ್ಲಿಸಿದ್ದರು. ಇವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂಬರ್ 33ರ ಸದಸ್ಯೆ ಮರಾಠಾ ಸಮುದಾಯದ ರೇಷ್ಮಾ ಪಾಟೀಲ್ ಕಣಕ್ಕಿಳಿದಿದ್ದರು.‌ 42 ಮತಗಳನ್ನು ಪಡೆಯುವ ಮೂಲಕ ರೇಷ್ಮಾ ಪಾಟೀಲ್ ಉಪಮೇಯರ್ ಆಯ್ಕೆ ಯಾಗಿದ್ದಾರೆ. ಇನ್ನು ಇದೇ ವೇಳೆ ಮರಾಠಾ ಭಾಷಿಕ ಸದಸ್ಯರಿಗೆ ಮೇಯರ್, ಉಪಮೇಯರ್ ಸ್ಥಾನ ನೀಡಿದ್ದಕ್ಕೆ ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕರವೇ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ವಾಜೀದ್ ಹಿರೇಕೂಡಿ ಪಾಲಿಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದರು. 

ಅಧಿಕಾರ ಸ್ವೀಕರಿಸಿ ಕನ್ನಡದಲ್ಲಿ ಮಾತನಾಡಿದ ಮೇಯರ್ ಶೋಭಾ ಸೋಮನಾಚೆ:
ಇನ್ನು ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿ ಅಧಿಕಾರ ಸ್ವೀಕರಿಸಿದ ಮೇಯರ್ ಶೋಭಾ ಸೋಮನಾಚೆ ಕನ್ನಡದಲ್ಲಿಯೇ ಮಾತನಾಡಿ ಎಲ್ಲರ ಮನಗೆದ್ದರು. ಈ ವೇಳೆ ಎಲ್ಲಾ ಬಿಜೆಪಿ ಕಾರ್ಪೊರೇಟರ್ ಗಳು, ಶಾಸಕರು, ಸಂಸದರು ಮೇಜು ತಟ್ಟಿ ಸ್ವಾಗತಿಸಿದರು. ಪೇಪರ್‌ನಲ್ಲಿ ಮರಾಠಿ ಭಾಷೆಯಲ್ಲಿ ಬರೆದುಕೊಟ್ಟಿದ್ದ ಸ್ಕ್ರಿಪ್ಟೆಡ್ ಲೆಟರ್ ಓದಿದ ನೂತನ ಮೇಯರ್ ಶೋಭಾ ಸೋಮನಾಚೆ, 'ಬೆಳಗಾವಿ ಮಹಾಪೌರ ಆಗಿ ಆಯ್ಕೆ ಮಾಡಿದ್ದಕ್ಕೆ ತಮಗೆ ಹಾಗೂ ಬೆಳಗಾವಿಯ ಸಮಸ್ತ ಜನತೆಗೆ ಧನ್ಯವಾದಗಳು. ಬೆಳಗಾವಿ ಅಭಿವೃದ್ಧಿ ಸಾಮರಸ್ಯ ಸಲುವಾಗಿ ನಾನು ಶಕ್ತಿ ಮೀರಿ ಕಾರ್ಯ ಮಾಡುತ್ತೇನೆ.‌ಸ್ವಚ್ಚ ಹಾಗೂ ಸುಂದರ ನಗರ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ' ಎಂದರು.

ಮೇಯರ್, ಉಪಮೇಯರ್ ಚುನಾವಣೆಗೆ ಕಾಂಗ್ರೆಸ್ ಬಹಿಷ್ಕಾರ: ಅಭಯ್ ಪಾಟೀಲ್ ಆಕ್ರೋಶ 
ಬೆಳಗಾವಿ ಮೇಯರ್, ಉಪಮೇಯರ್ ಚುನಾವಣೆ ಪ್ರಕ್ರಿಯೆಗೆ ಕಾಂಗ್ರೆಸ್ ಕಾರ್ಪೊರೇಟರ್ ಗಳು ಬಹಿಷ್ಕಾರ ಹಾಕಿದ್ರು. ಇದಕ್ಕೆ ಬೆಳಗಾವಿ ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು‌. ಸಭೆ ಉದ್ದೇಶಿಸಿ ಮಾತನಾಡಿದ ಶಾಸಕ ಅಭಯ್ ಪಾಟೀಲ್, 'ಮೇಯರ್, ಉಪಮೇಯರ್‌ಗೆ ಅಭಿನಂದನೆ ಸಲ್ಲಿಸುವಷ್ಟು ಸೌಜನ್ಯವಿಲ್ಲ. ಬೆಳಗಾವಿ ಅಭಿವೃದ್ಧಿಗೆ ತಮ್ಮ ವಿರೋಧ ಇದೆ ಅಂತಾ ಮೊದಲ ದಿನವೇ ಅವರು ತೋರಿಸಿದ್ದಾರೆ. ಇದೇ ಮೊದಲ ಬಾರಿ ಮೇಯರ್ ಚುನಾವಣೆಗೆ ಎಲ್ಲರೂ ತಮ್ಮ ಮನೆಯಿಂದ ಬಂದಿದ್ದಾರೆ. ಈ ಮೊದಲು ರೆಸಾರ್ಟ್‌ಗಳಿಂದ ಮೇಯರ್ ಚುನಾವಣೆಗೆ ಬರ್ತಿದ್ರು. ರೆಸಾರ್ಟ್ ರಾಜಕಾರಣ ಬೇಡ ಎಂದು ಒಂದೇ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದಕ್ಕೆ ಜನರಿಗೆ ಧನ್ಯವಾದ.‌ ಮೇಯರ್ ಉಪಮೇಯರ್ ಎಲ್ಲರ ಜೊತೆಗೂಡಿ ಬೆಳಗಾವಿ ನಗರ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕು. ಇಲ್ಲಿ ಇದ್ದವರಿಗೂ ಹೊರಗೆ ಹೋದವರಿಗೂ ಅಭಿನಂದನೆ ಸಲ್ಲಿಸುವೆ' ಎಂದರು.

ಇನ್ನು ನೂತನ ಮೇಯರ್ ಉಪಮೇಯರ್ ಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಬೆಳಗಾವಿ ವಿಭಾಗ ಬಿಜೆಪಿ ಉಸ್ತುವಾರಿ ನಿರ್ಮಲಕುಮಾರ್ ಸುರಾನಾ ಪುಷ್ಟಗುಚ್ಛ ನೀಡಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ನಿರ್ಮಲಕುಮಾರ್ ಸುರಾನಾ,  'ಬೆಳಗಾವಿ ಇತಿಹಾಸದಲ್ಲಿ ಮೊದಲ ಬಾರಿಗೆ ಬೆಳಗಾವಿ ಮೇಯರ್, ಉಪಮೇಯರ್ ಬಿಜೆಪಿಯವರು ಆಗಿದ್ದಾರೆ. ಶೋಭಾ ಸೋಮನಾಚೆ ಅವಿರೋಧವಾಗಿ ಮೇಯರ್ ಆಗಿ ಆಯ್ಕೆ ಆಗಿದ್ದಾರೆ. ರೇಷ್ಮಾ ಪಾಟೀಲ್ ಉಪಮೇಯರ್ ಆಗಿ ಆಯ್ಕೆ ಆಗಿದ್ದು ಅವರಿಗೆ ಅಭಿನಂದನೆ. ನಮ್ಮಲ್ಲಿ ಇದ್ದ 39 ಮತ ಹಾಗೂ ಪಕ್ಷೇತರ ಸದಸ್ಯರು ಸೇರಿ 42 ಮತ ಉಪಮೇಯರ್ ಗೆ ಬಂದಿವೆ. ಮುಂದಿನ ದಿನಗಳಲ್ಲಿ ಬೆಳಗಾವಿ ಅಭಿವೃದ್ಧಿಗೆ ಇದೊಂದು ಒಳ್ಳೆಯ ಅವಕಾಶ. ಮಾನ್ಯ ಸಿಎಂ ನೆರವಾಗಿ ಚುನಾವಣೆ ಗಮನಿಸುತ್ತಿದ್ದರು. ಬಿಜೆಪಿ ರಾಜ್ಯಾಧ್ಯಕ್ಷರು ಯಾವುದೇ ಕಾರಣಕ್ಕೂ ಬಿಜೆಪಿ ಗೆಲ್ಲಬೇಕು ಅಂತಾ ಕೆಲಸ ಮಾಡಿದ್ದು ಬೆಂಗಳೂರಿನ ಶಾಸಕ ಸತೀಶ್ ಸೈಲ್ ಸೇರಿ ನಮ್ಮ ಬೆಳಗಾವಿಯ ಶಾಸಕರು ಸಂಸದರು ಸೇರಿ ಕೆಲಸ ಮಾಡಿ ಪಾಲಿಕೆ ಚುನಾವಣೆಯಲ್ಲಿ 35 ಸೀಟ್ ಗೆದ್ದಾಗ ನಮಗೆ ಖುಷಿಯಾಯ್ತು.ಜನರು ನಮ್ಮ ಜೊತೆಯಲ್ಲಿರೋದು ಮುಂದಿನ ದಿನಗಳಲ್ಲಿ ಜನರ ಆಪೇಕ್ಷೆಯಂತೆ ಕೆಲಸ ಮಾಡ್ತೀವಿ' ಎಂದರು.

Belagavi: ವಿಷಾಹಾರ ಸೇವಿಸಿದ ರೇಣುಕಾ ಯಲ್ಲಮ್ಮ ದೇವಿ ಭಕ್ತರು: 35ಕ್ಕೂ ಅಧಿಕ ಮಂದಿ ಅಸ್ವಸ್ಥ

ರಾಜ್ಯದ ಕನ್ನಡಿಗರಿಗೆ ಬಿಜೆಪಿ ಮೋಸ ಎಂದು ಕರವೇ ಆಕ್ರೋಶ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಪಕ್ಷ ಆಧಾರಿತ ಚುನಾವಣೆ ನಡೆಸಿ ಅಧಿಕಾರದ ಗದ್ದುಗೆ ಏರಿದ ಬಿಜೆಪಿ ಮಹಾಪೌರ, ಉಪ ಮಹಾಪೌರ ಎರಡೂ ಸ್ಥಾನಗಳನ್ನು ಮರಾಠಿ ಭಾಷಿಕರಿಗೆ ನೀಡುವ ಮೂಲಕ ಈ ರಾಜ್ಯದ ಕನ್ನಡಿಗರಿಗೆ ಮೋಸ ಮಾಡಿದೆ ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಆರೋಪಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, 'ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಮರಾಠಿ ಭಾಷಿಕರಿಗೆ ನೀಡಿರುವ ಬೆಳಗಾವಿ ನಗರದ ಬಿಜೆಪಿ ನಾಯಕರು ಈಗ ಬೆಳಗಾವಿ ಪಾಲಿಕೆ ಮಹಾಪೌರ ಉಪ ಮಹಾಪೌರ ಎರಡೂ ಸ್ಥಾನಗಳನ್ನು ಮರಾಠಿ ಭಾಷಿಕರಿಗೆ ನೀಡಿದ್ದಾರೆ. ಬಿಜೆಪಿಯಲ್ಲಿ ಕನ್ನಡಿಗರಿಗೆ ಯಾವುದೇ ಮಾನ್ಯತೆ ಇಲ್ಲ, ಬಿಜೆಪಿಗೆ ಮರಾಠಿ ಭಾಷಿಕರೇ ಮುಖ್ಯ  ಎನ್ನುವದನ್ನು ಬಿಜೆಪಿ ನಾಯಕರು ಸಾಬೀತು ಮಾಡಿ ರಾಜ್ಯದ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ. ಬಿಜೆಪಿಯ ಅಸಲಿ ಮುಖ ಈಗ ಬಯಲಾಗಿದೆ. ಬೆಳಗಾವಿಯ ಬಿಜೆಪಿ ನಾಯಕರಿಗೆ ಕನ್ನಡ ಭಾಷಿಕರ ಬಗ್ಗೆ ಕಳಕಳಿಯೂ ಇಲ್ಲ,ಕನ್ನಡಿಗರ ಬಗ್ಗೆ ಗೌರವವೂ ಇವರಿಗಿಲ್ಲ. ಬಿಜೆಪಿಗೆ ಮರಾಠಿ ಭಾಷಿಕರು ಮುಖ್ಯವಾಗಿದ್ದು, ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಿಸಲು ಮತ ಚಲಾಯಿಸಿದ ಕನ್ನಡಿಗರಿಗೆ ಅವಮಾನಿಸುವ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ರಾಜ್ಯದ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದು ದೀಪಕ ಗುಡಗನಟ್ಟಿ ಎಚ್ಚರಿಕೆ ನೀಡಿದ್ದಾರೆ. 

ನಾಡದ್ರೋಹಿ ಘೋಷಣೆ ಕೂಗಿದ ಎಂಇಎಸ್ ಸದಸ್ಯರ ಬಂಧನಕ್ಕೆ ಒತ್ತಾಯ
ಇನ್ನು ಬೆಳಗಾವಿ ಮಹಾನಗರ ಪಾಲಿಕೆ ಆವರಣದಲ್ಲಿ ಇಂದು ನಾಡದ್ರೋಹಿ ಘೋಷಣೆ ಕೂಗಿದ ಮೂವರು ಎಂಇಎಸ್ ನಗರ ಸೇವಕರ ಸದಸ್ಯತ್ವವನ್ನು ಸರ್ಕಾರ ಕೂಡಲೇ ರದ್ದು  ಮಾಡಬೇಕು ಜೊತೆಗೆ ಈ ನಾಡದ್ರೋಹಿಗಳನ್ನು ಬಂಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಒತ್ತಾಯಿಸಿದೆ.

ಬಿಜೆಪಿ ತೆಕ್ಕೆಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ: ಐತಿಹಾಸಿಕ ದಾಖಲೆ

ಚುನಾವಣಾ ಪ್ರಕ್ರಿಯೆ ಎಲ್ಲವೂ ಮುಗಿದ ಬಳಿಕ ಮಹಾನಗರ ಪಾಲಿಕೆ ಕಚೇರಿ ಎದುರು ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಮೇಯರ್ ಉಪಮೇಯರ್ ಸ್ಥಾನಕ್ಕೆ ಲಿಂಗಾಯತ ಮರಾಠಾ ಸಮುದಾಯ ಮಧ್ಯೆ ಫೈಟ್ ಒಂದೆಡೆ ಆದ್ರೆ ಕನ್ನಡ ಭಾಷಿಕರಿಗೆ ಮೇಯರ್ ಸ್ಥಾನ ನೀಡುವ ಒತ್ತಾಯ ಇತ್ತು. ಈ ಮಧ್ಯೆ ಲಿಂಗಾಯತ ಸಮುದಾಯ ಹಾಗೂ ಕನ್ನಡ ಭಾಷಿಕ ಸದಸ್ಯನಿಗೆ ಸಭಾನಾಯಕ ಸ್ಥಾನ ನೀಡಿ, ಮರಾಠಾ ಭಾಷಿಕ ಹಾಗೂ ಮರಾಠಾ ಸಮುದಾಯಕ್ಕೆ ಮೇಯರ್ ಉಪಮೇಯರ್ ಸ್ಥಾನ ನೀಡಿ ಅವರ ಬಳಿ ಕನ್ನಡ ಹೇಳಿಕೆ ನೀಡಿಸುವ ಮೂಲಕ ಬಿಜೆಪಿ ಮಾಸ್ಟರ್‌ಸ್ಟ್ರೋಕ್ ಹೊಡೆದಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಆದ್ರೆ ಬಿಜೆಪಿಯ ನಡೆ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು ಮುಂದೆ ಇದು ಯಾವ ರೂಪ ಪಡೆಯುತ್ತೆ ಕಾದು ನೋಡಬೇಕು.

Follow Us:
Download App:
  • android
  • ios