ಸಿಎಂ, ಡಿಸಿಎಂ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಸಿಎಂ, ಡಿಸಿಎಂ ಅವರ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಬಾಗಲಕೋಟೆ (ಏ.03): ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಿಜೆಪಿ ಕೊಡುಗೆ ಏನು? ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ್ದ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರ ಸವಾಲಿಗೆ ಮಾಜಿ ಜಲಸಂಪನ್ಮೂಲ ಸಚಿವರೂ ಆದ ಸಂಸದ ಗೋವಿಂದ ಕಾರಜೋಳ ಅವರು ಪ್ರತಿ ಸವಾಲು ಹಾಕಿದ್ದು, 8ನೇ ತಾರೀಕಿಗೆ ಬನ್ನಿ ಚರ್ಚೆಗೆ ಸರ್ಕಾರಿ ಫೈಲ್ ತೆಗೆದುಕೊಂಡು ಬನ್ನಿ ಎಂದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸಚಿವ ಎಂ.ಬಿ.ಪಾಟೀಲ್ ಅವರಿಗೆ ಸವಾಲು ಹಾಕುತ್ತೇನೆ.

Add Asianetnews Kannada as a Preferred SourcegooglePreferred

ಬಾಗಲಕೋಟೆಯಲ್ಲಿ ವೇದಿಕೆ ಸಿದ್ಧಪಡಿಸಿ, ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆ ಚರ್ಚೆಗೆ ಬನ್ನಿ, ಯಾರು ಎಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ ನೋಡೋಣ ಎಂದು ಹೇಳಿದರು. 1956ರಿಂದಲೂ ಚರ್ಚೆ ಮಾಡೋಣ. ಫೈಲ್ ತೆಗೆದುಕೊಂಡು ಬನ್ನಿ, ಗಾಳಿಯಲ್ಲಿ ಗುಂಡು ಹೊಡೆಯೋದು ಬೇಡ. ಏ.8ರಂದು 12 ಗಂಟೆಗೆ ಬಾಗಲಕೋಟೆ ಬಸವೇಶ್ವರ ವೃತ್ತದಲ್ಲಿ ಚರ್ಚೆಗೆ ಬನ್ನಿ ನಾನು ಸಿದ್ಧನಿದ್ದೇನೆ. ಯಾರ್ಯಾರು ಚರ್ಚೆಗೆ ಬರುತ್ತಾರೆ ಬರಲಿ. ಎಲ್ಲರಿಗೂ ಮುಕ್ತ ಆಹ್ವಾನವಿದೆ ಎಂದ ಅವರು, ಸೋಲಿನ ಭೀತಿಯಿಂದ ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.

ಸಿಎಂ, ಡಿಸಿಎಂ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ. ಬಾಗಲಕೋಟೆ ಉಪಚುನಾವಣೆಯಲ್ಲಿ ಸಿಎಂ, ಡಿಸಿಎಂ ಅವರ ಮಾತು ಕೇಳಿದರೆ ದೇಶಕ್ಕೆ ಗಂಡಾಂತರ ಬಂದಂತಾಗಿದೆ. ಡಿ.ಕೆ.ಶಿವಕುಮಾರ್‌, ಸುರ್ಜೆವಾಲಾ ಹೇಳುತ್ತಾರೆ. ವಿದ್ಯಾರ್ಥಿಗಳು ವೋಟ್ ಹಾಕಿದರೆ ಬಂಧಿಸುತ್ತೇವೆ ಎಂದು ಹೇಳುತ್ತೀರಲ್ಲ ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಬಾಗಲಕೋಟೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಇದ್ದಾರೆ. ಐದಾರು ವರ್ಷ ಇಲ್ಲೇ ಇದ್ದು ವ್ಯಾಸಂಗ ಮಾಡುತ್ತಿದ್ದಾರೆ. ನಾನು ಡಿ.ಕೆ.ಶಿವಕುಮಾರ್ ಹಾಗೂ ಸುರ್ಜೆವಾಲಾ ಅವರಿಗೆ ಹೇಳ್ತಿನಿ ನಿಮಗೆ ತಾಕತ್ತಿದ್ದರೆ ಅರೆಸ್ಟ್ ಮಾಡಿಸಿ. ಸೋಲಿನ ಭಯದಿಂದ ಈ ರೀತಿ ಹೇಳುತ್ತಿದ್ದೀರಿ. ಕಾಂಗ್ರೆಸ್‌ಗೆ ವೋಟ್ ಹಾಕದಿದ್ದರೆ ಗ್ಯಾರಂಟಿ ಬಂದ್ ಆಗುತ್ತವೆ ಎಂದು ಭಯ ಹುಟ್ಟಿಸುತ್ತಿದ್ದಿರಿ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರಿಗೆ ನಂಬಿಕೆ ಇಲ್ಲವೇ?

ಅಂಗನವಾಡಿ ಕಾರ್ಯಕರ್ತೆಯರ ಮೂಲಕ, ಆಶಾ ಕಾರ್ಯಕರ್ತೆಯರ ಮೂಲಕ ಭಯ ಹುಟ್ಟಿಸುತ್ತಿದ್ದೀರಿ. ಐದು ದಿನ ಇಲ್ಲಿ ಬಂದು ಕೂತು ಪ್ರಚಾರ ಮಾಡುತ್ತಿದ್ದಿರಿ. ಚುನಾವಣೆ ಆಯೋಗಕ್ಕೂ ದೂರು ನೀಡಿ ಮತದಾರರ ಪಟ್ಟಿ ದೃಢೀಕರಿಸಿದ್ದೇವೆ. ಇದರ ಮೇಲಾದರೂ ಸಿದ್ದರಾಮಯ್ಯ ಅವರಿಗೆ ನಂಬಿಕೆ ಇಲ್ಲವೇ ಎಂದು ಪ್ರಶ್ನಿಸಿದರು.ವೀರಣ್ಣ ಚರಂತಿಮಠ ಶಾಸಕರಾಗಿದ್ದಾಗ ಮಾಡಿದ ಕೆಲಸದ ವರದಿ ಇಟ್ಟಿದ್ದಾರೆ. ಗೆದ್ದು ಬಂದ ಮೇಲೆ ಏನು ಮಾಡುತ್ತಾರೆ ಅದನ್ನು ತಿಳಿಸಿದ್ದಾರೆ. ನೀವು ಬಾಗಲಕೋಟೆ ಕ್ಷೇತ್ರಕ್ಕೆ ಏನು ಮಾಡಿದ್ದೀರಿ ಎಂದು ಹೇಳಬೇಕು. ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುವಂತೆ ರಾಹುಲ್ ಗಾಂಧಿ ಸೇರಿದಂತೆ ಇತರೆ ಕಾಂಗ್ರೆಸ್ ನಾಯಕರು ಮಾತಾಡುತ್ತಾರೆ ಟೀಕಿಸಿದರು.