ಲೋಕ ಚುನಾವಣೆಯಲ್ಲಿ ಮರಾಠ ಮತ ವಿಭಜನೆ ತಡೆದ ಮುಳೆಗೆ ಪರಿಷತ್ ಟಿಕೆಟ್
ಯಡಿಯೂರಪ್ಪ ಸರ್ಕಾರದಲ್ಲಿಯೂ ಬಿಜೆಪಿಗೆ ಮರಾಠಾ ಬೆಂಬಲ ಕಲ್ಪಿಸಿದ್ದ ಮೂಳೆ. ಬಸವಕಲ್ಯಾಣದ ಮಾಜಿ ಶಾಸಕ ಎಂಜಿ ಮೂಳೆಗೆ ಒಲಿದು ಬಂದ ಪರಿಷತ್ ಅದೃಷ್ಟ. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗೆ ಬಿಜೆಪಿ ಮಾಸ್ಟರ್ ಪ್ಲಾನ್
ಅಪ್ಪಾರಾವ್ ಸೌದಿ
ಬೀದರ್ (ಜೂ.3): ಲೋಕ ಚುನಾವಣೆಯಲ್ಲಿ ಮರಾಠಾ ಮತ ವಿಭಜನೆ ಆಗದಂತೆ ತಡೆದಿದ್ದ, ಬಿಜೆಪಿಯಲ್ಲಿದ್ದ ಮರಾಠಾ ಮುಖಂಡರುಗಳು ಬಹಿರಂಗವಾಗಿ ಪಕ್ಷದ ಅಭ್ಯರ್ಥಿ ವಿರೋಧವಾಗಿ ಪ್ರಚಾರಕ್ಕಿಳಿದಾಗ ಬೆನ್ನಿಗೆ ನಿಂತಿದ್ದ ಬಸವಕಲ್ಯಾಣದ ಮಾಜಿ ಶಾಸಕ, ಮರಾಠಾ ಮುಖಂಡ ಎಂಜಿ ಮೂಳೆ ಅವರಿಗೆ ಕಮಲ ಪಾಳಯ ವಿಧಾನ ಪರಿಷತ್ ಚುನಾವಣೆ ಟಿಕೆಟ್ ನೀಡುವ ಮೂಲಕ ಋಣ ತೀರಿಸುವ ಪ್ರಯತ್ನ ಮಾಡಿದೆ.
ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಜೂ.13ರಂದು ನಡೆಯುವ ಚುನಾವಣೆಗೆ ಬಿಜೆಪಿಯು ತನ್ನ ಮೂವರು ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದರ ಪಟಟಿಯಲ್ಲಿ ಎನ್.ರವಿಕುಮಾರ, ಸಿ.ಟಿ ರವಿ ಮತ್ತು ಮಾಜಿ ಶಾಸಕ ಎಂ.ಜಿ ಮೂಳೆ ಹೆಸರನ್ನು ಅಖೈರುಗೊಳಿಸಿದೆ.
ಯತೀಂದ್ರ ಸಿದ್ದರಾಮಯ್ಯ ಸೇರಿ 7 ಮಂದಿಗೆ ಕಾಂಗ್ರೆಸ್ ಪರಿಷತ್ ಟಿಕೆಟ್ ಘೋಷಣೆ, ಇಲ್ಲಿದೆ ಪಟ್ಟಿ
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ಮರಾಠಾ ಸಮುದಾಯದ ಜನಸಂಖ್ಯೆ ಗಮನಾರ್ಹವಾಗಿದೆ. ಗಡಿ, ಗ್ರಾಮೀಣ ಪ್ರದೇಶಗಳಲ್ಲಿ ಮರಾಠಾ ಸಮುದಾಯ ಹಾಗೂ ಮರಾಠಾ ಭಾಷಿಕರ ಸಂಖ್ಯೆ ಹೇರಳ. ಹೀಗಾಗಿ ವಿವಿಧ ಚುನಾವಣೆಗಳಲ್ಲಿ ಮರಾಠಾ ಮತದಾರರ ಪಾತ್ರ ನಿರ್ಣಾಯಕವಾಗಿರುತ್ತದೆ ಎಂಬುವದರಲ್ಲಿ ಎರಡು ಮಾತಿಲ್ಲ. ಅಷ್ಟಕ್ಕೂ ಬಿಜೆಪಿ ಪರಂಪರಾಗತ ಮರಾಠಾ ಮತಗಳನ್ನು ಹಿಡಿದಿಟ್ಟುಕೊಳ್ಳುವಲ್ಲಿ ಸಹಕರಿಸಿದ್ದು ಎಂಜಿ ಮೂಳೆ ಎಂಬುವದನ್ನು ನಂಬಿರುವ ಬಿಜೆಪಿ ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬಂದಂತಿದೆ.
ಮಂಡ್ಯ ಸಂಸದೆ ತ್ಯಾಗಕ್ಕೆ ಸಿಗ್ಲಿಲ್ಲ ಪ್ರತಿಫಲ, ಸುಮಲತಾ ಬಿಟ್ಟು 3 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಘೋಷಣೆ!
ಎಂಜಿ ಮೂಳೆ ಪರಿಚಯ: ಹುಮನಾಬಾದ್ ತಾಲೂಕಿನ ಘಾಟಬೋರಾಳ ಗ್ರಾಮದಲ್ಲಿ 1949ರ ನವೆಂಬರ್ 21ರಂದು ಜನಿಸಿರುವ ಮಾರುತಿರಾವ್ ಮೂಳೆ (ಎಂಜಿ ಮೂಳೆ) ಎಂಎ ಎಲ್‌ಎಲ್‌ಬಿ ಪದವೀಧರರಾಗಿದ್ದಾರೆ. ಕೆಲ ಕಾಲ ಶಿಕ್ಷಕರಾಗಿ, ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ. ಅಂದು ಶಾಸಕರಾಗಿದ್ದ ಬಾಪುರಾವ್ ಹುಲಸೂರಕರ ಅವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರು 1985ರಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದಾರೆ. ನಂತರ ಸತತ 2 ಅವಧಿಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಇವರು ಅಲ್ಪ ಮತಗಳ ಅಂತರದಿಂದ ಸೋಲುಂಡಿದ್ದರು.
1999ರಲ್ಲಿ ಕಾಂಗ್ರೆಸ್ ಟಿಕೆಟ್ ಲಭ್ಯವಾಗದ ಕಾರಣ 4ನೇ ಸಲ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಸವಕಲ್ಯಾಣ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಂತರ ಎಸ್‌ಎಂ ಕೃಷ್ಣ ನೇತೃತ್ವದ ಸರ್ಕಾರ ಇದ್ದಾಗ ಇವರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ನಂತರ 5ನೇ ಸಲವು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನ್ನು ಅನುಭವಿಸಿದರು. 6ನೇ ಸಲ ಬಿಆರ್‌ಎಸ್ ಪಕ್ಷದಿಂದ ಸ್ಪರ್ಧಿಸಿ ಸೋತರು ಒಂದು ಸಲ ಶಾಸಕರಾಗಿದ್ದನ್ನು ಬಿಟ್ಟರೆ ಸತತ ಸೋಲನ್ನುಂಡರೂ ರಾಜಕೀಯವನ್ನು ಬಿಡದೆ ರಾಜಕೀಯ ಪಕ್ಷಗಳ ಜೊತೆ ಒಡನಾಟ ಸಾಧಿಸಿಕೊಂಡು ಬಿಜೆಪಿ ಸೇರ್ಪಡೆಯಾಗಿದ್ದರು.
ಮತ್ತೇ ಮರಾಠಾ ಮುಖಂಡ ಪಿಜಿಆರ್ ಸಿಂಧ್ಯಾ ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿಯಾದಾಗ ಪುನಃ ಜೆಡಿಎಸ್ ಸೇರಿ ಪಿಜಿಆರ್ ಸಿಂಧ್ಯಾ ಅವರನ್ನು ಬೆಂಬಲಿಸಿದರು. ಶಾಸಕ ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದಾಗಿ ಬಸವಕಲ್ಯಾಣದಲ್ಲಿ ಉಪ ಚುನಾವಣೆ ಏರ್ಪಟ್ಟಾಗ ಪುನಃ ಬಿಜೆಪಿ ಸೇರ್ಪಡೆಗೊಂಡು ಟಿಕೆಟ್ ಸಿಗದೆ ಇದ್ದಾಗ ಪಕ್ಷದಲ್ಲಿ ಉಳಿದು ಶರಣು ಸಲಗರ ಆಯ್ಕೆಗೆ ಶ್ರಮಿಸಿದರು. ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ಇವರಿಗೆ ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ಬಸವರಾಜ ಬೊಮ್ಮಾಯಿ ಸರ್ಕಾರ ನೇಮಕ ಮಾಡಿತ್ತು.
2023ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡಿದ ಇವರಿಗೆ ಮರಾಠಾ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ ಎಂಬ ಕೊರಗಿತ್ತು. ಇದೀಗ ಬಿಜೆಪಿ ಪರಿಷತ್ ಟಿಕೆಟ್ ನೀಡುವ ಮೂಲಕ ಅದನ್ನು ಪೂರೈಸಿದೆ ಎಂದೆನ್ನಬಹುದು.