ಮೇ ಮೊದಲ ವಾರ ಜೆಡಿಎಸ್ ಪರ ದೀದಿ, ಕೆಸಿಆರ್ ಪ್ರಚಾರ: ಕೇರಳ ಸಿಎಂ ಕರೆಸುವ ಬಗ್ಗೆಯೂ ಚಿಂತನೆ
ಮಮತಾ ಬ್ಯಾನರ್ಜಿ ಅವರು ಬೆಂಗಳೂರು, ಮೈಸೂರು ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವ ನಿರೀಕ್ಷೆ ಇದೆ. ಅಂತೆಯೇ ಕೆ. ಚಂದ್ರಶೇಖರ್ ರಾವ್ ಅವರು ಚಿಕ್ಕಬಳ್ಳಾಪುರ, ಕೋಲಾರ ಸುತ್ತಮುತ್ತ ಜಿಲ್ಲೆಗಳ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಪ್ರಭುಸ್ವಾಮಿ ನಟೇಕರ್
ಬೆಂಗಳೂರು (ಏಪ್ರಿಲ್ 26, 2023): ಜಿದ್ದಾಜಿದ್ದಿನ ಅಖಾಡವಾಗಿರುವ ರಾಜ್ಯ ವಿಧಾನಸಭಾ ಚುನಾವಣೆ ಪ್ರಚಾರವು ರಂಗೇರಿದ್ದು, ಜೆಡಿಎಸ್ ಪರ ಪ್ರಚಾರ ಕೈಗೊಳ್ಳಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಮತದಾನಕ್ಕೆ ಸಮೀಪ ಇರುವ ದಿನದಲ್ಲಿ ಇಬ್ಬರು ಮುಖಂಡರು ರಾಜ್ಯಕ್ಕೆ ಬಂದು ಜೆಡಿಎಸ್ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ಮೇ ಮೊದಲ ವಾರದಲ್ಲಿ ರಾಜ್ಯಕ್ಕೆ ಬರುವ ಸಾಧ್ಯತೆ ಇದೆ. ಮಮತಾ ಬ್ಯಾನರ್ಜಿ ಅವರು ಬೆಂಗಳೂರು, ಮೈಸೂರು ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳುವ ನಿರೀಕ್ಷೆ ಇದೆ. ಅಂತೆಯೇ ಕೆ. ಚಂದ್ರಶೇಖರ್ ರಾವ್ ಅವರು ಚಿಕ್ಕಬಳ್ಳಾಪುರ, ಕೋಲಾರ ಸುತ್ತಮುತ್ತ ಜಿಲ್ಲೆಗಳ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಇದನ್ನು ಓದಿ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಮೂರು ಪಕ್ಷಗಳ ಅಭ್ಯರ್ಥಿಗಳ ಪಟ್ಟಿ: ನಿಮ್ಮ ಕ್ಷೇತ್ರದ ಅಭ್ಯರ್ಥಿ ಯಾರು?
ಚಂದ್ರಶೇಖರ್‌ರಾವ್ ಅವರನ್ನು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಜತೆಗೆ ರಾಯಚೂರು, ಯಾದಗಿರಿ ಭಾಗದ ಗಡಿ ಕ್ಷೇತ್ರಗಳಲ್ಲಿಯೂ ಪ್ರಚಾರಕ್ಕೆ ಕರೆದೊಯ್ಯುವ ಬಗ್ಗೆ ಪಕ್ಷದಲ್ಲಿ ಚರ್ಚೆ ನಡೆಸಲಾಗುತ್ತಿದೆ. ಜೆಡಿಎಸ್ ಪಕ್ಷವು ಚುನಾವಣಾ ಪ್ರಚಾರ ನಿರ್ವಹಣೆಗೆ ರಾಜ್ಯ ಚುನಾವಣಾ ಪ್ರಚಾರ ಸಮಿತಿಯನ್ನು ರಚನೆ ಮಾಡಿದೆ. ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಬಂದಿರುವ ಸಿ.ಎಂ.ಧನಂಜಯ ಅಧ್ಯಕ್ಷತೆಯಲ್ಲಿ 21 ಸದಸ್ಯರ ಸಮಿತಿ ರಚನೆ ಮಾಡಲಾಗಿದೆ. ಈ ಸಮಿತಿಯು ಚುನಾವಣಾ ಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸುವ ಸಂಬಂಧ ಕಾರ್ಯ ನಿರ್ವಹಿಸಲಿದೆ. ಮಮತಾ ಬ್ಯಾನರ್ಜಿ ಮತ್ತು ಚಂದ್ರಶೇಖರ್ ರಾವ್ ಅವರನ್ನು ಪ್ರಚಾರದಲ್ಲಿ ಯಾವ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುದರ ಕುರಿತು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ವೇಳೆಗೆ ತೃತೀಯ ರಂಗ ರಚನೆ ಕಾರ್ಯ ಈಗಾಗಲೇ ತೆರೆಮರೆಯಲ್ಲಿ ನಡೆಯುತ್ತಿದೆ. ಚಂದ್ರಶೇಖರ್‌ರಾವ್ ಅವರು ಬೆಂಗಳೂರಿಗೆ ಆಗಮಿಸಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಪಶ್ಚಿಮ ಬಂಗಾಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತೆರಳಿ ಮಮತಾ ಬ್ಯಾನರ್ಜಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಆ ಸಮಯದಲ್ಲಿಯೇ ರಾಜ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುವ ಅಶ್ವಾಸನೆ ನೀಡಿದ್ದರು. ಹೀಗಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಮೇ 8 ರಂದು ಬಹಿರಂಗ ಪ್ರಚಾರಕ್ಕೆ ತೆರೆಬೀಳುವ ಹಿನ್ನೆಲೆಯಲ್ಲಿ ಮೇ ಮೊದಲ ವಾರದಲ್ಲಿಯೇ ಇಬ್ಬರು ನಾಯಕರು ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ: ದೇವೇಗೌಡರಿಗೆ ನನ್ನ ದೇಹದ ಮೇಲಾದ ಪರಿಣಾಮದ ಬಗ್ಗೆ ಆತಂಕ ಇದೆ: ಹೆಚ್‌ಡಿಕೆ
ಈ ನಡುವೆ ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಸಿಪಿಎಂಗೆ ಜೆಡಿಎಸ್ ಬೆಂಬಲ ನೀಡಿದೆ. ಹೀಗಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಸಹ ಕರೆಸುವ ಚಿಂತನೆಯೂ ನಡೆಯುತ್ತಿದೆ ಎನ್ನಲಾಗಿದೆ.
- ಮಮತಾ ಬ್ಯಾನರ್ಜಿ - ಬೆಂಗಳೂರು, ಮೈಸೂರು
- ಚಂದ್ರಶೇಖರ ರಾವ್ - ಚಿಕ್ಕಬಳ್ಳಾಪುರ, ಕೋಲಾರ, ರಾಯಚೂರು, ಯಾದಗಿರಿ
ಇದನ್ನೂ ಓದಿ: ನಾನು ವಿಶ್ರಾಂತಿ ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿಲ್ಲ: ಹೆಚ್‌ಡಿಕೆ