Asianet Suvarna News Asianet Suvarna News

ಫಡ್ನವೀಸ್ ಸರ್ಕಾರಕ್ಕೆ 1 ದಿನದ ಜೀವದಾನ, ತಕ್ಷಣ ಬಹುಮತ ಸಾಬೀತು ಇಲ್ಲ: ಸುಪ್ರೀಂ

'ತಕ್ಷಣಕ್ಕೆ ಬಹುಮತ ಸಾಬೀತು ಇಲ್ಲ'| ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ| ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ಒಂದು ದಿನದ ಜೀವದಾನ| ನಾಳೆ ಬೆಳಗ್ಗೆ 10:30ಕ್ಕೆ ಮತ್ತೆ ವಿಚಾರಣೆ, ಬಳಿಕ ಅಂತಿಮ ತೀರ್ಪು

Maharashtra Politics Supreme Court says appropriate orders to be passed on Monday
Author
Bangalore, First Published Nov 24, 2019, 12:35 PM IST

ಮುಂಬೈ[ನ.24]: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಎನ್‌ಸಿಪಿ ಬಂಡಾಯ ಶಾಸಕರಿಗೆ ಸರ್ಕಾರ ರಚನೆಗೆ ಅವಕಾಶವಿತ್ತ ರಾಜ್ಯಪಾಲರ ಕ್ರಮ ಪ್ರಶ್ನಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಭಾನುವಾರ ನಡೆಸಿದ ಸುಪ್ರೀಂಕೋರ್ಟ್‌, ಫಡ್ನವೀಸ್‌ ಅವರು ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದ ಪತ್ರ ಹಾಗೂ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರು ಫಡ್ನವೀಸ್‌ ಅವರಿಗೆ ಸರ್ಕಾರ ರಚಿಸಲು ನೀಡಿದ ಆಹ್ವಾನ ಪತ್ರವನ್ನು ಸೋಮವಾರ ಬೆಳಗ್ಗೆ 10.30ಕ್ಕೆ ತನ್ನ ಮುಂದೆ ಹಾಜರುಪಡಿಸಬೇಕು ಎಂದು ಕೇಂದ್ರ ಸರ್ಕಾರದ ವಕೀಲರಿಗೆ ಸೂಚಿಸಿದೆ. ಆದರೆ ‘ಮಹಾರಾಷ್ಟ್ರ ವಿಧಾನಸಭೆಯಲ್ಲಿ 24 ತಾಸಿನೊಳಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಬಹುಮತ ಸಾಬೀತುಪಡಿಸಬೇಕು’ ಎಂದು ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮಾಡಿಕೊಂಡ ಮನವಿಯನ್ನು ತಕ್ಷಣವೇ ಪುರಸ್ಕರಿಸಲು ನಿರಾಕರಿಸಿದೆ.

ಹೀಗಾಗಿ ‘ಫಡ್ನವೀಸ್‌ ಅವರು ಬಹುಮತ ಯಾವಾಗ ಸಾಬೀತುಪಡಿಸಬೇಕು’ ಎಂಬ ಆದೇಶವನ್ನು ಸೋಮವಾರ ಕೋರ್ಟ್‌ ಪ್ರಕಟಿಸುವ ನಿರೀಕ್ಷೆಯಿದೆ.

ಸುಪ್ರೀಂ ಕೋರ್ಟ್‌ ಭಾನುವಾರ ನೀಡಿದ ಸೂಚನೆಯನ್ನು ಬಿಜೆಪಿ ಸ್ವಾಗತಿಸಿದ್ದು, ‘ತಕ್ಷಣ ವಿಶ್ವಾಸಮತ ಸಾಬೀತು ಮಾಡಬೇಕು ಎಂಬ ವಿಪಕ್ಷಗಳ ಮನವಿಯನ್ನು ಕೋರ್ಟ್‌ ಮನ್ನಿಸಿಲ್ಲ. ಫಡ್ನವೀಸ್‌ ಅವರು ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಲಿದ್ದಾರೆ’ ಎಂದು ಹೇಳಿದೆ. ಆದರೆ ಕಾಂಗ್ರೆಸ್‌-ಎನ್‌ಸಿಪಿ ಹಾಗೂ ಶಿವಸೇನೆಗಳು, ‘ಫಡ್ನವೀಸ್‌ ಅವರಿಗೆ ಬಹುಮತವಿಲ್ಲ. ಹೀಗಾಗಿಯೇ ಅವರು ಕೋರ್ಟ್‌ ಮುಂದೆ ನಾನಾ ಸಬೂಬುಗಳನ್ನು ಹೇಳಿ ವಿಚಾರಣೆ ವಿಳಂಬ ಮಾಡಿಸುತ್ತಿದ್ದಾರೆ. ಮೈತ್ರಿಕೂಟಕ್ಕೇ ಜಯವಾಗಲಿದೆ’ ಎಂದಿವೆ.

ಅಪರೂಪದ ವಿಚಾರಣೆ:

ಅತ್ಯಂತ ಅಪರೂಪಕ್ಕೆಂಬಂತೆ ರಜಾದಿನವಾದ ಭಾನುವಾರ ಮೂರೂ ಪಕ್ಷಗಳು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ನ್ಯಾ| ಎನ್‌.ವಿ. ರಮಣ ಅವರ ನೇತೃತ್ವದ ನ್ಯಾಯಪೀಠ ಕೈಗೆತ್ತಿಕೊಂಡಿತು.

‘ಅರ್ಜಿದಾರರ ಮನವಿಯಂತೆ 24 ತಾಸಿನಲ್ಲಿ ಬಹುಮತ ಸಾಬೀತುಪಡಿಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಸೂಚಿಸಲಾಗದು. ಏಕೆಂದರೆ ಫಡ್ನವೀಸ್‌ ಅವರು ರಾಜ್ಯಪಾಲರಿಗೆ ನೀಡಿದ ಸರ್ಕಾರ ರಚನೆ ಹಕ್ಕು ಮಂಡನೆ ಪತ್ರ ಹಾಗೂ ರಾಜ್ಯಪಾಲರು ಫಡ್ನವೀಸ್‌ ಅವರಿಗೆ ನೀಡಿದ ಆಹ್ವಾನ ಪತ್ರವನ್ನು ನಮ್ಮ ಬಳಿ ಇಲ್ಲ. ಅವುಗಳನ್ನು ಪರಿಶೀಲಿಸಿದ ನಂತರವೇ ನಾವು ಮುಂದಿನ ನಿರ್ಧಾರ ಪ್ರಕಟಿಸಬೇಕಾಗುತ್ತದೆ’ ಎಂದು ಹೇಳಿತು.

ಈ ಮೂರು ದಾಖಲೆಗಳ ಮೇಲೆ ನಿಂತಿದೆ ಫಡ್ನವೀಸ್ ಸರ್ಕಾರದ ಭವಿಷ್ಯ!

ಇದಲ್ಲದೆ, ‘ಬಹುಮತ ಇಲ್ಲದ ಫಡ್ನವೀಸ್‌ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿ ರಾಜ್ಯಪಾಲರು ತಪ್ಪು ಮಾಡಿದ್ದಾರೆ. ಉದ್ಧವ್‌ ಠಾಕ್ರೆ ನೇತೃತ್ವದ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಅಹ್ವಾನಿಸುವಂತೆ ರಾಜ್ಯಪಾಲರಿಗೆ ಸೂಚಿಸಬೇಕು’ ಎಂಬ ಮನವಿಯನ್ನು ಈಗ ಪರಿಗಣಿಸಲಾಗದು ಎಂದು ನ್ಯಾ| ರಮಣ, ನ್ಯಾ| ಅಶೋಕ್‌ ಭೂಷಣ್‌ ಹಾಗೂ ನ್ಯಾ| ಸಂಜೀವ್‌ ಖನ್ನಾ ಅವರಿದ್ದ ಪೀಠ ಹೇಳಿತು.

ಬಳಿಕ ಕೇಂದ್ರ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಹಾಗೂ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರಿಗೆ ನೋಟಿಸ್‌ ನೀಡಿದ ಪೀಠ, ‘ಸೋಮವಾರ ಬೆಳಗ್ಗೆ 10.30ಕ್ಕೆ ಫಡ್ನವೀಸ್‌ ಹಾಗೂ ರಾಜ್ಯಪಾಲರ ಪತ್ರಗಳನ್ನು ನಮ್ಮ ಮುಂದೆ ಹಾಜರುಪಡಿಸಿ. ಆಗ ಸೂಕ್ತ ಆದೇಶ ಪ್ರಕಟಿಸಲು ಅನುಕೂಲವಾಗುತ್ತದೆ’ ಎಂದು ಕೇಂದ್ರ ಸರ್ಕಾರದ ವಕೀಲರಾದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರಿಗೆ ಸೂಚಿಸಿತು.

ಈ ವೇಳೆ ತುಷಾರ್‌ ಮೆಹ್ತಾ ಅವರು ರಾಜ್ಯಪಾಲರ ಪತ್ರವನ್ನು ನೀಡಲು 2 ದಿನದ ಸಮಯಾವಕಾಶ ಕೋರಿದರು. ಆದರೆ ನ್ಯಾಯಾಲಯ ಇದನ್ನು ತಿರಸ್ಕರಿಸಿ, ‘ಸೋಮವಾರ 10.30ಕ್ಕೆ ಪತ್ರಗಳು ನಮ್ಮ ಮುಂದಿರಬೇಕು’ ಎಂದು ಖಡಕ್ಕಾಗಿ ನಿರ್ದೇಶಿಸಿತು.

2022ರಲ್ಲಿ ರಾಷ್ಟ್ರಪತಿ ಸ್ಥಾನಕ್ಕೆ ಶರದ್ ಪವಾರ್ NDA ಅಭ್ಯರ್ಥಿ: RSS ಚಿಂತಕನ ಭವಿಷ್ಯ!

ಮತ್ತೆ ಯಡಿಯೂರಪ್ಪ ವಿಷಯ ಪ್ರಸ್ತಾಪ:

ಎನ್‌ಸಿಪಿ-ಶಿವಸೇನೆ ಹಾಗೂ ಕಾಂಗ್ರೆಸ್‌ ಪರ ವಾದ ಮಂಡಿಸಿದ ವಕೀಲರಾದ ಅಭಿಷೇಕ್‌ ಸಿಂಘ್ವಿ ಹಾಗೂ ಕಪಿಲ್‌ ಸಿಬಲ್‌, ‘ರಾಜ್ಯಪಾಲರು ಪಕ್ಷಪಾತಿಯಾಗಿ ನಡೆದುಕೊಂಡಿದ್ದಾರೆ. ಫಡ್ನವೀಸ್‌ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿ, ಬಹುಮತ ಸಾಬೀತಿಗೆ ದಿನಾಂಕವನ್ನೂ ನಿಗದಿಪಡಿಸಿಲ್ಲ. ಕರ್ನಾಟಕದಲ್ಲಿ 2018ರಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯಪಾಲರು ಬಹುಮತ ಸಾಬೀತಿಗೆ 15 ದಿನ ಅವಕಾಶ ನೀಡಿದ್ದರು. ಆದರೆ ಸುಪ್ರೀಂ ಕೋರ್ಟು ಕೊನೆಗೆ 24 ತಾಸಿನಲ್ಲಿ ಬಹುಮತ ಸಾಬೀತು ಮಾಡಿ ಎಂದು ಸೂಚಿಸಿತು. ಇದೇ ಆದೇಶ ಇಲ್ಲೂ ಅನ್ವಯವಾಗಬೇಕು’ ಎಂದರು.

‘ಎಸ್‌.ಆರ್‌. ಬೊಮ್ಮಾಯಿ ಪ್ರಕರಣದಲ್ಲಿ ಬಹುಮತವು ಸದನದಲ್ಲೇ ಸಾಬೀತಾಗಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಹಾಗಾಗಿ ಕುದುರೆ ವ್ಯಾಪಾರಕ್ಕೆ ಅವಕಾಶ ಸಿಗದಂತಾಗಲು ತಕ್ಷಣವೇ ಫಡ್ನವೀಸ್‌ ಅವರಿಗೆ ಬಹುಮತ ಸಾಬೀತಿಗೆ ಸೂಚಿಸಬೇಕು’ ಎಂದೂ ಕೋರಿದರು.

ಆದರೆ, ಬಿಜೆಪಿ ಪರ ವಕೀಲರಾದ ಮುಕುಲ್‌ ರೋಹಟಗಿ ಇದನ್ನು ವಿರೋಧಿಸಿ, ‘ಫಡ್ನವೀಸ್‌ ಅವರಿಗೆ ರಾಜ್ಯಪಾಲರು ಆಹ್ವಾನ ನೀಡಿದ್ದರಲ್ಲಿ ತಪ್ಪಿಲ್ಲ. ರಾಜ್ಯಪಾಲರ ನಿರ್ಧಾರವನ್ನು ಸಂವಿಧಾನದ 361ನೇ ನಿಮಯದ ಪ್ರಕಾರ ಪ್ರಶ್ನಿಸುವಂತಿಲ್ಲ’ ಎಂದರು.

‘ಕೊನೆಗೆ ರಾಜ್ಯಪಾಲರ ಪತ್ರ ಹಾಗೂ ಫಡ್ನವೀಸ್‌ ಅವರ ಪತ್ರವನ್ನು ನೋಡದ ಹೊರತು ಆದೇಶ ಪ್ರಕಟಿಸಲಾಗದು’ ಎಂದ ನ್ಯಾಯಪೀಠ ಈ ಪತ್ರಗಳನ್ನು ಸೋಮವಾರ ಬೆಳಗ್ಗೆ 10.30ಕಕ್ಕೆ ಹಾಜರುಪಡಿಸಲು ಸಾಲಿಸಿಟರ್‌ ಜನರಲ್‌ ಅವರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

Follow Us:
Download App:
  • android
  • ios