Asianet Suvarna News Asianet Suvarna News

ಬಾಳಾಠಾಕ್ರೆ ಕಟ್ಟಿದ ಹಿಂದುತ್ವದ ಸೌಧವನ್ನು ಬಲಿ ಕೊಟ್ಟರೇ ಮಗ, ಮೊಮ್ಮಗ?

ಈಗ ಅಧಿಕಾರ ಹಿಡಿಯಲು ಬಿಜೆಪಿ ಏಕನಾಥ್‌ ಶಿಂಧೆ ಮೂಲಕ ಶಿವಸೇನೆಯನ್ನು ಒಡೆದರೂ ಕೂಡ ಮುಂದೆ ಬಲಾಢ್ಯ ಬಿಜೆಪಿ ಎದುರು ಠಾಕ್ರೆ ಇಲ್ಲದ ಶಿವಸೇನೆಯ ಅಸ್ತಿತ್ವ ಉಳಿಸಿಕೊಳ್ಳುವುದು ಶಿಂಧೆಗೂ ಸುಲಭವಿಲ್ಲ.

Maharashtra Politics As Rebels Grow A Circuit Breaker Eludes Uddhav Thackeray hls
Author
Bengaluru, First Published Jun 24, 2022, 11:13 AM IST

ಕ್ಷಣಿಕ ಸುಖದ ಆಸೆಗೆ ಬಿದ್ದು ಶಾಶ್ವತ ನೆಮ್ಮದಿ ಕಳೆದುಕೊಳ್ಳಬೇಡ ಎಂದು ನಮ್ಮ ಋುಷಿ ಮುನಿಗಳು ಹೇಳಿದ್ದು ಬರೀ ಜೀವನಕ್ಕೆ ಅಲ್ಲ ರಾಜಕಾರಣಕ್ಕೂ ಅನ್ವಯಿಸುತ್ತದೆ. ಪ್ರಾಯಶಃ ಬಾಳಾಠಾಕ್ರೆ ಪುತ್ರ ಉದ್ಧವ್‌ ಇದನ್ನು ಅರ್ಥ ಮಾಡಿಕೊಂಡಿದ್ದರೆ ಇವತ್ತು ಠಾಕ್ರೆ ಕುಟುಂಬಕ್ಕೂ ಮತ್ತು ಶಿವಸೇನೆಗೂ ಈ ಸ್ಥಿತಿ ಬರುತ್ತಿರಲಿಲ್ಲ. ಮರಾಠಿ ಪತ್ರಕರ್ತರು ಅನೇಕ ಬಾರಿ ಬಾಳಾಠಾಕ್ರೆ ಬಳಿ ನೀವೇಕೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕೇಳಿದಾಗ ‘ರಿಮೋಟ್‌ ಕಂಟ್ರೋಲ್‌ನಲ್ಲಿ ಇರುವ ಮಜಾ ಆ ಕುರ್ಚಿಯಲ್ಲಿ ಇಲ್ಲ’ ಎಂದು ಹೇಳುತ್ತಿದ್ದರು.

ಅಷ್ಟೇ ಅಲ್ಲ, ‘ಅಧಿಕಾರ ಇಲ್ಲದಿದ್ದರೂ ಚಿಂತೆಯಿಲ್ಲ, ಆದರೆ ಹಿಂದುತ್ವದ ಜೊತೆ ರಾಜಿ ಇಲ್ಲ’ ಎಂದು ಹೇಳುತ್ತಿದ್ದರು. ಆದರೆ ತಂದೆಯ ಸೈದ್ಧಾಂತಿಕ ಬದ್ಧತೆ ಗೊತ್ತಿದ್ದರೂ ಕೂಡ ದಾರಿ ತಪ್ಪಿದ ಮಗ ಉದ್ಧವ ಕಾಂಗ್ರೆಸ್‌ ಜೊತೆ ಕೈಜೋಡಿಸಿದ ‘ತಪ್ಪಿಗೆ’ ಕುರ್ಚಿ ಮತ್ತು ಸೇನೆ ಎರಡನ್ನೂ ಕಳೆದುಕೊಳ್ಳುವ ಅಪಾಯದಲ್ಲಿ ಏಕಾಂಗಿಯಾಗಿದ್ದಾರೆ. ಒಂದು ಸಿದ್ಧಾಂತದ ಆಧಾರದ ಮೇಲೆ ಕಟ್ಟಿದ ಪಕ್ಷ ಪೂರ್ತಿ ವಿರುದ್ಧ ದಿಕ್ಕಿಗೆ ಹೋದರೆ ಕೊನೆಗೆ ತಳ ಮಟ್ಟದ ಕೇಡರ್‌ ಸೆಟೆದು ನಿಲ್ಲುತ್ತದೆ. ಆಗ ಎಷ್ಟೇ ಪ್ರಬಲ ಕುಟುಂಬದ ನಾಯಕ ಇದ್ದರೂ ಆತ ಏಕಾಂಗಿ ಆಗುತ್ತಾನೆ ಎನ್ನುವುದು ಮಹಾರಾಷ್ಟ್ರದ ಘಟಾನಾವಳಿಗಳಿಂದ ಕಲಿಯಬೇಕಾದ ಮುಖ್ಯ ಪಾಠ. ಉದ್ಧವ್‌ ಸ್ಥಿತಿ ‘ಮಾಡಿದ್ದು ಉಣ್ಣೋ ಮಹಾರಾಯಾ.’

ಪತನದತ್ತ 'ಮಹಾ' ಸರ್ಕಾರ; ಏಕನಾಥ್ ಶಿಂಧೆ ಬಂಡಾಯಕ್ಕೆ ಕಾರಣಗಳೇನು.?

ನಾಟ್‌ ರೀಚೆಬಲ್‌ ಸಿಎಂ ಉದ್ಧವ್‌

ಠಾಕ್ರೆ ಕುಟುಂಬದ ಜೊತೆ ಮೋದಿ ಉಚ್ಛ್ರಾಯದ ನಂತರದ ಹೊಸ ಬಿಜೆಪಿ ನಾಯಕರು ಸರಿಯಾಗಿ ನಡೆದುಕೊಳ್ಳಲಿಲ್ಲ ಎಂಬ ವಾದವನ್ನು ಒಪ್ಪಿಕೊಂಡರೂ ಕೂಡ ಅದಕ್ಕಾಗಿ ಶಿವಸೇನೆ ಕಾಂಗ್ರೆಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದು ತಳಮಟ್ಟದ ಶಿವಸೈನಿಕರಿಗೆ ಒಪ್ಪಿಗೆ ಇರಲಿಲ್ಲ. ಶಿವಸೇನೆ 2019ರಲ್ಲಿ ಗೆದ್ದ 56 ಕ್ಷೇತ್ರಗಳಲ್ಲಿ ಕಿತ್ತಾಟ ಇದ್ದಿದ್ದೇ ಕಾಂಗ್ರೆಸ್‌ ಮತ್ತು ಶರದ್‌ ಪವಾರ್‌ ಜೊತೆಗೆ. ಹೀಗಿರುವಾಗ ಆ ಪಕ್ಷಗಳ ಮೈತ್ರಿಯಿಂದ ಶಿವಸೇನೆ ಶಾಸಕರಲ್ಲಿ ಖುಷಿ ಇರಲಿಲ್ಲ. ಉದ್ಧವ್‌ ಮುಖ್ಯಮಂತ್ರಿಯಾದ ಮೇಲೆ ಮೊದಲು ಕೊರೋನಾ, ಆಮೇಲೆ ಬೆನ್ನು ನೋವಿನ ಕಾರಣದಿಂದ ಯಾರಿಗೂ ಹೆಚ್ಚಾಗಿ ಭೇಟಿ ಆಗುತ್ತಿರಲಿಲ್ಲ.

ಏಕನಾಥ್‌ ಶಿಂಧೆ, ರಾಮದಾಸ್‌ ಕದಂರಂಥ ಹಿರಿಯರು ಕೂಡ ಏನಾದರೂ ಕೆಲಸಗಳಿದ್ದರೆ ಆದಿತ್ಯ ಠಾಕ್ರೆ ಬಳಿ ಹೋಗಿ ನಿಲ್ಲಬೇಕಿತ್ತು. ಮಂತ್ರಿಗಳೇ ಮುಖ್ಯಮಂತ್ರಿ ಬಳಿ ಫೈಲು ತೆಗೆದುಕೊಂಡು ಹೋಗಲು ಸಮಯ ಕೇಳಿದರೆ ಒಂದು ತಿಂಗಳು ಟೈಮ್‌ ಕೊಡುತ್ತಿರಲಿಲ್ಲ. ಯಾವುದೇ ಇಲಾಖೆಯ ಫೈಲ್‌ ಇದ್ದರೂ ಮೊದಲು ಆದಿತ್ಯ ಠಾಕ್ರೆ ಅವರ ಟೀಮ್‌ ಅದನ್ನು ನೋಡಿದ ಮೇಲೆ ಮುಖ್ಯಮಂತ್ರಿ ಬಳಿ ಹೋಗುತ್ತಿತ್ತಂತೆ. ಏಕನಾಥ್‌ ಶಿಂಧೆ ಮರಾಠಿ ಪತ್ರಕರ್ತರೊಬ್ಬರ ಬಳಿ ಹೇಳಿರುವ ಪ್ರಕಾರ ಠಾಕ್ರೆ ಭೇಟಿ ಶಾಸಕರು ಹೋದಾಗೊಮ್ಮೆ ಅಲ್ಲಿ ಕುಳಿತಿರುತ್ತಿದ್ದ ಸಂಜಯ್‌ ರಾವತ್‌, ‘ಏನು ನೀವು ಆ ದೇವೇಂದ್ರ ಫಡ್ನವೀಸ್‌ ಜೊತೆ ನಗ ನಗುತ್ತಾ ಮಾತನಾಡುತ್ತಿದ್ರಿ’ ಎಂದು ಕೇಳಿ ಹಿಯಾಳಿಸುತ್ತಿದ್ದರಂತೆ. ಅವರ ಮಾತಿನಿಂದ ಬೇಸತ್ತು ಕೊನೆಗೆ ನಾವು ಬಿಜೆಪಿ ಜೊತೆಗೆ ಹೋಗುವುದೇ ವಾಸಿ ಎಂದು ತೀರ್ಮಾನಕ್ಕೆ ಬಂದೆವು ಎಂದು ಅನೇಕ ಶಾಸಕರು ಹೇಳಿಕೊಂಡಿದ್ದಾರೆ.

ಕಳೆದ 6 ವರ್ಷದಲ್ಲಿ ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಆಪರೇಷನ್ ಕಮಲ, 4 ಬಾರಿ ಸಕ್ಸಸ್!

ಪವಾರ್‌ ಗಾಳಕ್ಕೆ ಸಿಕ್ಕ ಮೀನು

ಶರದ್‌ ಪವಾರ ಹೆಚ್ಚುಕಡಿಮೆ ನಮ್ಮ ದೇವೇಗೌಡರ ತರಹ. ಅಧಿಕಾರದ ಆಮ್ಲಜನಕ ಇಲ್ಲದೇ ಅವರಿಗೆ ರಾಜಕೀಯದಲ್ಲಿ ಬದುಕು ಕಷ್ಟ. ಬಾಳಾಠಾಕ್ರೆಗೂ ಶರದ್‌ ಪವಾರ್‌ಗೂ ಭಾರೀ ದೋಸ್ತಿ ಇತ್ತು. ಇಬ್ಬರು ತಿಂಗಳಿಗೊಮ್ಮೆ ಕುಳಿತು ರಾತ್ರಿ ಗೋಷ್ಠಿ ನಡೆಸುತ್ತಿದ್ದರು. ಆದರೆ ಸೀನಿಯರ್‌ ಠಾಕ್ರೆ ಎಂದಿಗೂ ಪವಾರ್‌ ಜೊತೆ ಕೈಜೋಡಿಸಲಿಲ್ಲ. ಆದರೆ 2019ರಲ್ಲಿ ಯಾವಾಗ ಯಾರಿಗೂ ಬಹುಮತ ಬರಲಿಲ್ಲವೋ ಸಂಜಯ್‌ ರಾವುತ್‌ರನ್ನು ಮನೆಗೆ ಕರೆಸಿಕೊಂಡ ಪವಾರ್‌, ನನ್ನ ಜೊತೆ ಬಂದರೆ ಉದ್ಧವ್‌ ಠಾಕ್ರೆಯನ್ನೇ ಮುಖ್ಯಮಂತ್ರಿ ಮಾಡುತ್ತೇನೆ ಎಂದು ಹೇಳಿದರು.

ಆಗ ಬಿಜೆಪಿ-ಶಿವಸೇನೆಯ ಮೈತ್ರಿಯೇ ಮುರಿದು ಬಿತ್ತು. ಶರದ್‌ ಪವಾರ್‌ ಮಾತು ಕೇಳಿ ಪಟ್ಟದ ಆಸೆಗೆ ಬಿದ್ದ ಉದ್ಧವ್‌ ಠಾಕ್ರೆ ಯಾವತ್ತು ಕಾಂಗ್ರೆಸ್‌ ಪಕ್ಕದಲ್ಲಿ ಹೋಗಿ ಕುಳಿತುಕೊಂಡರೋ ಆವತ್ತೇ ಬಾಳಾಠಾಕ್ರೆಯ ಶಿವಸೇನೆ ತನ್ನ ಪ್ರಸ್ತುತತೆ ಕಳೆದುಕೊಂಡಿತ್ತು. ಈಗ ಉದ್ಧವ್‌ ಠಾಕ್ರೆ ಅದೇ ಶಿವಸೇನೆಯಲ್ಲಿ ತನ್ನ ಸ್ವೀಕಾರಾರ್ಹತೆ ಮತ್ತು ಠಾಕ್ರೆ ಕುಟುಂಬದ ವರ್ಚಸ್ಸನ್ನು ಮಣ್ಣುಪಾಲು ಮಾಡಿಕೊಂಡಿದ್ದಾರೆ. ಸ್ವತಃ ಅಧಿಕಾರದಿಂದ ದೂರ ಉಳಿದುಕೊಂಡಿದ್ದರೆ ಉದ್ಧವ್‌ ಠಾಕ್ರೆಗೆ ಈ ‘ಗತಿ’ ಬರುತ್ತಿರಲಿಲ್ಲ.

ಉದ್ಧವ್‌ ಮಾಡಿದ ತಪ್ಪೇನು?

ದೇವೇಗೌಡ, ಜಗನ್‌ ರೆಡ್ಡಿ, ಶರದ್‌ ಪವಾರ್‌ರಂಥ ಜಾತಿ ವೋಟ್‌ ಬ್ಯಾಂಕ್‌ ಇರುವ ಪ್ರಾದೇಶಿಕ ಪಕ್ಷಗಳು ಯಾರ ಜೊತೆ ಯಾವಾಗ ಕೈಜೋಡಿಸಿದರೂ ಸಮಸ್ಯೆ ಇರೋದಿಲ್ಲ. ಏಕೆಂದರೆ ಜಾತಿಗಳ ಹಿತ ಕಾಯ್ದರೆ ಅವು ಜೊತೆಗಿರುತ್ತವೆ. ಆದರೆ ಒಂದು ನಿರ್ದಿಷ್ಟಸಿದ್ಧಾಂತದ ಆಧಾರದ ಮೇಲೆ ಕೇಡರ್‌ಗಳನ್ನು ಬೆಳೆಸಿದ ವೋಟ್‌ ಬ್ಯಾಂಕ್‌ ಇರುವ ಪಕ್ಷಗಳು ಹೇಳಿದ ಸಿದ್ಧಾಂತಕ್ಕೆ ಪೂರ್ತಿ ವಿರುದ್ಧವಾಗಿ ಹೋದರೆ ಮತದಾರರು ಮತ್ತು ಕಾರ್ಯಕರ್ತರು ಇಬ್ಬರೂ ಒಪ್ಪುವುದಿಲ್ಲ. ಬಾಳಾಠಾಕ್ರೆಯ ತಂದೆ ಪ್ರಬೋಧನಕಾರ ಠಾಕ್ರೆ ಆಚಾರ್ಯ ಅತ್ರೆ ಜೊತೆಗೆ ಮಹಾರಾಷ್ಟ್ರ ಏಕೀಕರಣ ಚಳವಳಿಯಲ್ಲಿ ಇದ್ದವರು. ಠಾಕ್ರೆ ಕುಟುಂಬವೇನೂ ಮರಾಠಾ ಸಮುದಾಯಕ್ಕೆ ಸೇರಿದ್ದಲ್ಲ. ಠಾಕ್ರೆಗಳು ಅಲ್ಲಿ ಬೆರಳಣಿಕೆಯಷ್ಟಿರುವ ಕಾಯಸ್ಥರು. ಆದರೆ ಯಾವಾಗ ಮುಂಬೈನಲ್ಲಿ ಮರಾಠಿ ಮಾನುಸ್‌ನ ಹಿತಕ್ಕೆ ಧಕ್ಕೆ ಆಯಿತೋ ಆಗ ಬೀದಿಗಿಳಿದ ಬಾಳಾಠಾಕ್ರೆ ನೋಡನೋಡುತ್ತಲೇ ಮರಾಠಿ ಹಿತ ಕಾಪಾಡುವ ಶಿವಸೇನೆ ಹುಟ್ಟುಹಾಕಿದರು.

ಶಿವಸೇನೆ ಸುತ್ತ ಸದ್ದಿಲ್ಲದೆ ಬಲೆ ಹೆಣೆದ ಫಡ್ನವೀಸ್, ಉದ್ಧವ್‌ಗೆ ಸುಳಿವೂ ಸಿಕ್ಕಿರಲಿಲ್ಲ!

ಬರೀ ಪ್ರಾದೇಶಿಕತೆ ಸಾಕಾಗೋದಿಲ್ಲ ಎನಿಸಿದಾಗ ಅದಕ್ಕೆ ಹಿಂದುತ್ವ ಜೋಡಿಸಿದ ಬಾಳಾಠಾಕ್ರೆಯನ್ನು ಜನ ಮೆಚ್ಚಿಕೊಂಡಿದ್ದೇ ಯಾವತ್ತೂ ಮರಾಠಿ ಮತ್ತು ಹಿಂದುತ್ವ ದ ವಿಷಯ ಬಂದರೆ ರಾಜಿ ಆಗೋದಿಲ್ಲ ಅನ್ನುವ ಕಾರಣಕ್ಕಾಗಿ. ಬಿಜೆಪಿಯನ್ನು ಕಟ್ಟಿಬೆಳೆಸಿ ಅಯೋಧ್ಯೆ ಆಂದೋಲನ ಹುಟ್ಟು ಹಾಕಿ ಅಷ್ಟುದೊಡ್ಡ ನಾಯಕರಾಗಿದ್ದ ಲಾಲ್‌ಕೃಷ್ಣ ಅಡ್ವಾಣಿ ಅವರೇ ಜಿನ್ನಾ ಸಮಾಧಿಗೆ ಹೋಗಿ ಬಂದರು ಅನ್ನುವ ಏಕೈಕ ಕಾರಣಕ್ಕಾಗಿ ಸಂಘ ಮತ್ತು ಬಿಜೆಪಿ ಕಾರ್ಯಕರ್ತರಲ್ಲಿ ಸ್ವೀಕಾರಾರ್ಹತೆ ಕಳೆದುಕೊಂಡರು. ಉದ್ಧವ್‌ ಠಾಕ್ರೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಾಂಗ್ರೆಸ್ಸನ್ನೇ ಅಪ್ಪಿಕೊಂಡರು. ಈಗ ಕಿರೀಟವೂ ಇಲ್ಲ, ಸಿಂಹಾಸನವೂ ಇಲ್ಲ, ಜೊತೆಗೆ ಸೇನೆಯೂ ಇಲ್ಲ ಎಂಬ ಸ್ಥಿತಿಗೆ ತಲುಪುತ್ತಿದ್ದಾರೆ.

ಶಿವಸೇನೆಯ ಬಂಡಾಯಗಳು

ಶಿವಸೇನೆಗೆ ಬಂಡಾಯಗಳೇನೂ ಹೊಸದಲ್ಲ. 1991ರಲ್ಲಿ ಬಾಳಾಠಾಕ್ರೆ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಅವರ ನೀಲಿ ಕಣ್ಣಿನ ಹುಡುಗ ಹಿಂದುಳಿದ ವರ್ಗದ ಛಗನ್‌ ಭುಜಬಲ್‌ ಬ್ರಾಹ್ಮಣ ಸಮುದಾಯದ ಮನೋಹರ ಜೋಶಿ ಅವರನ್ನು ವಿರೋಧ ಪಕ್ಷದ ನಾಯಕ ಮಾಡಿದ್ದಕ್ಕೆ ಬೇಸತ್ತು 32ರಲ್ಲಿ 17 ಶಾಸಕರನ್ನು ಕರೆದುಕೊಂಡು ಕಾಂಗ್ರೆಸ್‌ಗೆ ಹೋಗಿದ್ದರು. ಆದರೆ ಠಾಕ್ರೆಗಳಿಗೆ ಯಾವುದೇ ಫರಕ್‌ ಬೀಳಲಿಲ್ಲ. 2005ರಲ್ಲಿ ಉದ್ಧವ್‌ರನ್ನು ಕಾರ್ಯಾಧ್ಯಕ್ಷ ಮಾಡಿದಾಗ ಬೇಸತ್ತು ಠಾಕ್ರೆ ಅವರ ಎದುರು ಮಾತನಾಡಲು ಹೆದರುತ್ತಿದ್ದ ನಾರಾಯಣ ರಾಣೆ ಬಂಡು ಎದ್ದು ಕಾಂಗ್ರೆಸ್‌ಗೆ ಹೋದರು. ತಲೆಯೇ ಕೆಡಿಸಿಕೊಳ್ಳದ ಬಾಳಾಠಾಕ್ರೆ ‘ಸಿಂಧುದುರ್ಗದ ಹುಡುಗ ನಾರಾಯಣನನ್ನು ಕರೆದುಕೊಂಡು ಬಂದು ಮುಖ್ಯಮಂತ್ರಿ ಮಾಡಿದೆ, ಹೋದ’ ಎಂದು ಹೇಳಿ ಸುಮ್ಮನಾದರು. ಆದರೆ ಬಾಳಾಠಾಕ್ರೆ ತನ್ನ ಉತ್ತರಾಧಿಕಾರಿ ಎಂಬಂತೆ ನೋಡುತ್ತಿದ್ದ ಸಹೋದರನ ಮಗ ರಾಜ್‌ ಠಾಕ್ರೆ 2006ರಲ್ಲಿ ಉದ್ಧವ್‌ ಜೊತೆ ಜಗಳ ಆಡಿ ಹೊರಗೆ ಹೋದಾಗ ಬಾಳಾಠಾಕ್ರೆ ಘಾಸಿಗೊಂಡಿದ್ದರು. ಆದರೆ ಮತದಾರರು ಮತ್ತು ಶಿವಸೈನಿಕರು ಬಾಳಾಠಾಕ್ರೆಯನ್ನು ಬಿಟ್ಟುಕೊಟ್ಟಿರಲಿಲ್ಲ. ಅದಕ್ಕೆ ಕಾರಣ ಸ್ವತಃ ಅಧಿಕಾರದಿಂದ ದೂರ ಇದ್ದ ಠಾಕ್ರೆ ಅವರ ಸಿದ್ಧಾಂತದ ಜೊತೆ ರಾಜಿ ಆಗದ ಸ್ವಭಾವ. ಆದರೆ ಈಗ ಉದ್ಧವ್‌ ವಿರುದ್ಧ ಏಕನಾಥ್‌ ಶಿಂಧೆ ನೇತೃತ್ವದಲ್ಲಿ 56 ರಲ್ಲಿ 42 ಶಾಸಕರು ಬಂಡು ಎದ್ದಿರುವುದು ಸಿದ್ಧಾಂತದ ಜೊತೆ ರಾಜಿ ಆಗಿ ತಾನೇ ಸ್ವತಃ ಕುರ್ಚಿ ಹಿಡಿದ ಕಾರಣ ನೀಡಿ. ಈಗ ಬಿದ್ದಿರುವ ಹೊಡೆತದಿಂದ ಚೇತರಿಸಿಕೊಳ್ಳುವುದು ಠಾಕ್ರೆ ಕುಟುಂಬಕ್ಕೆ ಸುಲಭ ಅಲ್ಲ.

ರಾಷ್ಟ್ರಪತಿ ಚುನಾವಣೆ: ದಕ್ಷಿಣ ಭಾರತದ ವ್ಯಕ್ತಿಗೆ ಅದೃಷ್ಟ? ಆದಿವಾಸಿ ಮಹಿಳೆಗೆ ಪಟ್ಟ?

ರಿಕ್ಷಾ ಹೊಡೆಯುತ್ತಿದ್ದ ಏಕನಾಥ್‌ ಶಿಂಧೆ

ನಾರಾಯಣ ರಾಣೆ ಹೇಗೆ ಸಿಂಧುದುರ್ಗದಿಂದ ಬಂದು ಮುಂಬೈನಲ್ಲಿ ಕಾರ್ಮಿಕನಾಗಿ ಬಾಳಾಠಾಕ್ರೆಯ ಕಣ್ಣಿಗೆ ಬಿದ್ದು ಮುಖ್ಯಮಂತ್ರಿ ಆದರೋ ಏಕನಾಥ್‌ ಶಿಂಧೆ ಕೂಡ ಮುಂಬೈ ಪಕ್ಕದ ಥಾಣೆಯಲ್ಲಿ ರಿಕ್ಷಾ ಹೊಡೆಯುತ್ತಾ ಶಿವಸೇನೆಯ ಶಾಖಾ ಪ್ರಮುಖ ಆಗಿ ಕೆಲಸ ಮಾಡುತ್ತಾ ಬೆಳೆದವರು. ಥಾಣೆಯಲ್ಲಿ ಆನಂದ  ಎನ್ನುವ ಬಾಳಾಠಾಕ್ರೆ ಬಲಗೈ ಬಂಟನ ಶಿಷ್ಯರಲ್ಲಿ ಏಕನಾಥ್‌ ಕೂಡ ಒಬ್ಬರು. ಥಾಣೆ, ಕಲ್ಯಾಣ್‌ ಸುತ್ತಮುತ್ತಲಿನ 30 ಕ್ಷೇತ್ರಗಳಲ್ಲಿ ಏಕನಾಥ್‌ ಶಿಂಧೆಗೆ ಸಂಘಟನೆ ಮೇಲೆ ಬಿಗಿ ಹಿಡಿತವಿತ್ತು. ಆದರೆ ಯಾವಾಗ ಉದ್ಧವ್‌ ಮುಖ್ಯಮಂತ್ರಿ ಆದರೋ ಪುತ್ರ ಆದಿತ್ಯ ಠಾಕ್ರೆಗೂ ಏಕನಾಥ್‌ ಶಿಂಧೆಗೂ ಜಟಾಪಟಿ ಶುರು ಆದವು.

ಅದು ಎಷ್ಟೆಂದರೆ ಉದ್ಧವ್‌ ಠಾಕ್ರೆ ಏಕನಾಥ್‌ ಶಿಂಧೆ ಅವರ ಲೋಕೋಪಯೋಗಿ ಇಲಾಖೆಯ ಕಡತ ಸಹಿ ಮಾಡಲು ಒಮ್ಮೆ ಆದಿತ್ಯ ಜೊತೆ ಮಾತಾಡಿ ಎನ್ನುವಷ್ಟು. ಸಮಯಕ್ಕಾಗಿ ಕಾಯುತ್ತಿದ್ದ ಏಕನಾಥ್‌ ಠಾಕ್ರೆ ಕುಟುಂಬದ ಅಸ್ತಿತ್ವವನ್ನೇ ಅಲುಗಾಡಿಸಿದ್ದಾರೆ. ಈಗ ಅಧಿಕಾರ ಹಿಡಿಯಲು ಬಿಜೆಪಿ ಏಕನಾಥ್‌ ಶಿಂಧೆ ಮೂಲಕ ಶಿವಸೇನೆಯನ್ನು ಒಡೆದರೂ ಕೂಡ ಮುಂದೆ ಬಲಾಢ್ಯ ಬಿಜೆಪಿ ಎದುರು ಠಾಕ್ರೆ ಇಲ್ಲದ ಶಿವಸೇನೆಯ ಅಸ್ತಿತ್ವ ಉಳಿಸಿಕೊಳ್ಳುವುದು ಏಕನಾಥ್‌ ಶಿಂಧೆಗೂ ಸುಲಭವಿಲ್ಲ. ಬಿಜೆಪಿಗೂ ಕೂಡ 2024ರ ಚುನಾವಣೆವರೆಗೆ ಏಕನಾಥರ ಸಖ್ಯ ಬೇಕು ಅಷ್ಟೆ. ಅನಂತರ ತಮಿಳುನಾಡಿನಲ್ಲಿ ಪಳನಿಸಾಮಿ ಮತ್ತು ಪನ್ನೀರ್‌ಸೆಲ್ವಂಗೆ ಬಂದ ಗತಿ ಏಕನಾಥ್‌ ಶಿಂಧೆಗೂ ಬರಬಹುದು.

ಪಾಲಿಕೆ ಚುನಾವಣೆಯಲ್ಲಿ ಕೀಲಿಕೈ

2019ರಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರು ತನ್ನ ಜೊತೆ ಬರದ ಪವಾರ್‌ ಜೊತೆ ಕೈಜೋಡಿಸಿದ ಶಿವಸೇನೆಯನ್ನೇ ಅಡ್ಡಡ್ಡ ಉದ್ದುದ್ದ ಸೀಳಿರುವ ದೇವೇಂದ್ರ ಫಡ್ನವೀಸ್‌ ಏಕನಾಥ್‌ ಶಿಂಧೆಯ ಬೆಂಬಲ ಪಡೆದು ಮುಖ್ಯಮಂತ್ರಿ ಆಗುವುದು ಈಗ ಕೇವಲ ಔಪಚಾರಿಕತೆ ಅಷ್ಟೇ. ವರ್ಷದ ಅಂತ್ಯದಲ್ಲಿ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಇದೆ. ಸಹಜವಾಗಿ ಸರ್ಕಾರ ಇದ್ದರೆ ಬಿಜೆಪಿಗೆ ಲಾಭ ಜಾಸ್ತಿ. ಮುಂಬೈ ಪಾಲಿಕೆಯಲ್ಲಿ ಅಧಿಕಾರ ಹೋದರೆ ಠಾಕ್ರೆ ಕುಟುಂಬದ ರಾಜಕೀಯ ಆಸ್ತಿತ್ವವೇ ಮುಗಿದುಹೋಗುತ್ತದೆ.

ಆಗ ಮರಾಠಿ ಮತ್ತು ಹಿಂದುತ್ವವನ್ನು ಒಪ್ಪಿಕೊಳ್ಳುವ ಮತದಾರರು ಬಿಜೆಪಿಯತ್ತ ವಾಲುತ್ತಾರೆ ಅನ್ನುವುದು ಸರ್ಕಾರ ಬೀಳಿಸಿ ಶಿವಸೇನೆ ಒಡೆಯುವ ಬಿಜೆಪಿ ರಣತಂತ್ರಕ್ಕೆ ಮುಖ್ಯ ಕಾರಣ. ಸದ್ಯಕ್ಕಂತೂ ಶರದ್‌ ಪವಾರ್‌ ಯಾವುದೇ ಅಚ್ಚರಿಯ ಆಟ ಆಡದೇ ಹೋದರೆ ಮಹಾರಾಷ್ಟ್ರದಲ್ಲಿ ಈ ಚದುರಂಗದಾಟದ ಲಾಭಾರ್ಥಿ ದೇವೇಂದ್ರ ಫಡ್ನವೀಸ್‌ ಮಾತ್ರ. ಅಂತೂ ಇಂತೂ ದಿಲ್ಲಿ ಗೆದ್ದರೂ ಹಣಕಾಸಿನ ರಾಜಧಾನಿ ಮುಂಬೈ ಕೈಯಲ್ಲಿರಬೇಕು ಎಂಬ ಬಿಜೆಪಿಯ ಕನಸು ಶಿವಸೇನೆಯ ಬಂಡಾಯದಿಂದ ಕೈಗೂಡುತ್ತಿರುವಂತೆ ಕಾಣುತ್ತಿದೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios