ರಾಷ್ಟ್ರಪತಿ ಚುನಾವಣೆ: ದಕ್ಷಿಣ ಭಾರತದ ವ್ಯಕ್ತಿಗೆ ಅದೃಷ್ಟ? ಆದಿವಾಸಿ ಮಹಿಳೆಗೆ ಪಟ್ಟ?
ನವೀನ್ ಪಟ್ನಾಯಕ್ ಮತ್ತು ಜಗನ್ ರೆಡ್ಡಿಯನ್ನು ಒಲಿಸಿಕೊಂಡರೆ ಮೋದಿಗೆ ರಾಷ್ಟ್ರಪತಿ ಆಯ್ಕೆ ಸುಲಭ. ವಿಪಕ್ಷಗಳ ಅಭ್ಯರ್ಥಿ ರಾಷ್ಟ್ರಪತಿ ಆಗಬೇಕು ಅಂದರೂ ಇವರ ಮತಗಳೇ ಬೇಕು. ವಿಪಕ್ಷಗಳು ಎಷ್ಟೇ ಸಭೆ ಮಾಡಿದರೂ ಮೋದಿ ಲೆಕ್ಕಾಚಾರದ ಮೇಲೆ ಅವರ ಲೆಕ್ಕಾಚಾರವೂ ಬದಲಾಗುತ್ತದೆ.
India Gate Column by Prashant Natu
ಮೋದಿ ಕಾಲದ ಸತ್ಯ ಏನಪ್ಪ ಎಂದರೆ ಕೊನೆ ಕ್ಷಣದವರೆಗೆ ಗುಟ್ಟು ಕಾಯ್ದುಕೊಳ್ಳುವುದು ಹಾಗೂ ಯಾರೂ ಯೋಚಿಸಿರದ ಹೆಸರನ್ನು ಆಯ್ಕೆ ಮಾಡುವುದು. ಹೀಗಾಗಿ ಸಹಜವಾಗಿ ಎಷ್ಟುಪತ್ರಕರ್ತರೋ ಅಷ್ಟುಥಿಯರಿಗಳು, ಕಥೆಗಳು, ಹೆಸರುಗಳು ಓಡುತ್ತಿರುತ್ತವೆ. ಅಂತಿಮವಾಗಿ ಹೆಸರು ಅದೇ ಆದರೆ ಅದು ಕಾಕತಾಳೀಯವೇ ಹೊರತು ಮೂಲಗಳ ಆಧಾರದ ಮೇಲೆ ಅಲ್ಲ. ಏಕೆಂದರೆ ಮೋದಿ ಮತ್ತು ಶಾ ಇಲ್ಲಿಯವರೆಗೆ ಸಂಘದ ಜೊತೆ ಮಾತ್ರ ಯಾರಾದರೆ ಒಳ್ಳೆಯದು ಎಂದು ಒಂದು ಸುತ್ತು ಅಭಿಪ್ರಾಯ ಕೇಳಿದ್ದಾರೆಯೇ ಹೊರತು ಬೇರೆ ಯಾರೊಂದಿಗೂ ತಮ್ಮ ಮಸ್ತಿಷ್ಕದಲ್ಲಿರುವ ಹೆಸರುಗಳ ಬಗ್ಗೆ ಚರ್ಚೆ ನಡೆಸಿಲ್ಲ.
ಈಗ ದಿಲ್ಲಿಯಲ್ಲಿ ಓಡುತ್ತಿರುವ ಥಿಯರಿಗಳ ಪ್ರಕಾರ ದಕ್ಷಿಣದವರು ಅಥವಾ ಆದಿವಾಸಿ ಮಹಿಳೆಯೊಬ್ಬರು ರಾಷ್ಟ್ರಪತಿ ಆಗಬಹುದು. ಮೂಲಗಳ ಪ್ರಕಾರ ಈಗಾಗಲೇ ವೆಂಕಯ್ಯ ನಾಯ್ಡು ಮೋದಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥರನ್ನು ಭೇಟಿಯಾಗಿ ನನ್ನನ್ನು ಮಾಡಿ ಎಂದು ಕೇಳಿಕೊಂಡಿದ್ದಾರೆ. ಆದರೆ ವೆಂಕಯ್ಯ ಹೆಸರಿನ ಬಗ್ಗೆ ಸಂಘದಲ್ಲಿ ಬಹಳ ಉತ್ಸಾಹ ಇಲ್ಲ. ರಾಜ್ಯಪಾಲರಾಗಿರುವ ತಮಿಳುನಾಡು ಮೂಲದ ಸೌಂದರ್‌ರಾಜನ್ ತಮಿಳರಸಿ ಕೂಡ ಪ್ರತಿಭಾ ಪಾಟೀಲ್‌ರಂತೆ ಆಶ್ಚರ್ಯಕರ ಹೆಸರಾಗಿ ಹೊರಹೊಮ್ಮಬಹುದು.
ಜಗತ್ತಿನೆಲ್ಲಾ ನಾಯಕರು ಜನಪ್ರಿಯತೆ ಕಳೆದುಕೊಳ್ಳುತ್ತಿರುವಾಗ ಮೋದಿ ಜನಪ್ರಿಯತೆ ಏರುತ್ತಿರುವುದೇಕೆ..?
ದಕ್ಷಿಣದ ಹೆಸರು ಅಂದರೆ ಆಂಧ್ರದವರು ಅಭ್ಯರ್ಥಿ ಆದರೆ ಜಗನ್ ರೆಡ್ಡಿ, ಚಂದ್ರಬಾಬು ನಾಯ್ಡು, ಚಂದ್ರಶೇಖರ ರಾವ್, ತಮಿಳುನಾಡಿನ ಅಭ್ಯರ್ಥಿ ಆದರೆ ಎಲ್ಲ ದ್ರಾವಿಡ ಪಕ್ಷಗಳು ಬೆಂಬಲ ನೀಡುತ್ತವೆ ಎಂಬುದು ಕೂಡ ಗಮನಾರ್ಹ ಅಂಶ. ಇನ್ನು ಈ ವರ್ಷ ಗುಜರಾತ್ ಚುನಾವಣೆ ಕೂಡ ಇರುವುದರಿಂದ ಆದಿವಾಸಿ ಒಬ್ಬರನ್ನು ಆಯ್ಕೆ ಮಾಡಬಹುದು ಎಂಬ ಥಿಯರಿ ಇದೆ. ಹೀಗಾಗಿ ದ್ರೌಪದಿ ಮುರ್ಮು, ಗಿರೀಶ್ ಮುರ್ಮು ಹೆಸರು ಸುದ್ದಿಯಲ್ಲಿವೆ.
ಯಾರೇ ರಾಷ್ಟ್ರಪತಿ ಆದರೂ ಒಂದು ದೊಡ್ಡ ಪೊಲಿಟಿಕಲ್ ಮೆಸೇಜ್ ಕೊಡುವ ಪ್ರಯತ್ನ ಮೋದಿ ಮಾಡುತ್ತಾರೆ. ಹೀಗಾಗಿಯೇ ಮುಸ್ಲಿಂ ಸಮುದಾಯದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ದಲಿತ ಸಮುದಾಯದ ಥಾವರ್‌ಚಂದ್ ಗೆಹಲೋತ್ ಹೆಸರು ಕೂಡ ಚರ್ಚೆಯಲ್ಲಿವೆ. ಒಟ್ಟಿನಲ್ಲಿ ಯಾರೇ ಆದರೂ ಮಾತು ಕೇಳುವ, ತಿಕ್ಕಾಟ ನಡೆಸದ, ಸೌಮ್ಯ ಸ್ವಭಾವದ ರಾಷ್ಟ್ರಪತಿಯೇ ಆಗುತ್ತಾರೆ.
ಬಿಜೆಪಿ ಬಳಿ ಎಷ್ಟು ಮತಗಳಿವೆ?
ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಮತಗಳ ಮೌಲ್ಯ ತಲಾ 700 ಆದರೆ ಶಾಸಕರ ಮತಗಳ ಮೌಲ್ಯ ಆಯಾ ರಾಜ್ಯದ ಜನಸಂಖ್ಯೆ ಮೇಲೆ ನಿರ್ಧಾರವಾಗುತ್ತದೆ. ಈಗಿನ ಪ್ರಕಾರ ದೇಶದ ಒಟ್ಟು ಮತಗಳ ಮೌಲ್ಯ 10 ಲಕ್ಷದ 86 ಸಾವಿರದ 431. ಅದರಲ್ಲಿ ಗೆಲ್ಲಲು ಅರ್ಧದಷ್ಟುಅಂದರೆ 5 ಲಕ್ಷದ 43 ಸಾವಿರದ 216 ಮೌಲ್ಯದ ಮತಗಳು ಬೇಕು. ಬಿಜೆಪಿ ಮತ್ತು ಮಿತ್ರ ಪಕ್ಷಗಳ ಬಳಿ ಈಗಾಗಲೇ 5 ಲಕ್ಷದ 25 ಸಾವಿರದ 706 ಮೌಲ್ಯದ ಮತಗಳು ಇವೆ. ಹೆಚ್ಚುಕಡಿಮೆ ಇನ್ನು 19 ಸಾವಿರ ಮೌಲ್ಯದ ಮತಗಳು ಬೇಕು.
ಹೀಗಾಗಿ 31 ಸಾವಿರದ 686 ಮೌಲ್ಯದ ಮತಗಳು ಇರುವ ನವೀನ್ ಪಟ್ನಾಯಕ್, 43 ಸಾವಿರದ 450 ಮೌಲ್ಯದ ಮತಗಳು ಇರುವ ಜಗನ್ ರೆಡ್ಡಿ ಜೊತೆಗೆ ಬಂದರೆ ಮೋದಿ ನಿಲ್ಲಿಸಿದ ಅಭ್ಯರ್ಥಿ ಸುಲಭವಾಗಿ ಗೆಲ್ಲುತ್ತಾರೆ. ವಿಪಕ್ಷಗಳ ಅಭ್ಯರ್ಥಿ ಗೆಲ್ಲಬೇಕಾದರೆ ಬಿಜು ಜನತಾದಳ, ಜಗನ್ ರೆಡ್ಡಿ ಮತ್ತು ಎಐಎಡಿಎಂಕೆ ಕೂಡ ಮೋದಿ ಅಭ್ಯರ್ಥಿಗೆ ವಿರುದ್ಧವಾಗಿ ಮತ ಚಲಾಯಿಸಬೇಕು. ಇಲ್ಲವೇ ಬಿಜೆಪಿ ಜೊತೆಗಿರುವ ನಿತೀಶ್ ಕುಮಾರ್‌ರಂಥವರು ಬಿಹಾರದ ಸರ್ಕಾರ ಬಲಿ ಕೊಟ್ಟು ಹೊರಗೆ ಬಂದು ಅಭ್ಯರ್ಥಿ ಆಗಬೇಕು. ಆದರೆ ಆ ಸಾಧ್ಯತೆ ಕಡಿಮೆ. ಹೀಗಾಗಿ ವಿಪಕ್ಷಗಳು ಎಷ್ಟೇ ಸಭೆ ಮಾಡಿದರೂ ಮೋದಿ ಯಾರನ್ನು ಅಭ್ಯರ್ಥಿ ಮಾಡುತ್ತಾರೆ? ಯಾವ ರಾಜ್ಯದಿಂದ ಮಾಡುತ್ತಾರೆ ಎಂಬುದರ ಮೇಲೆ ಗಣಿತ ಬದಲಾಗುತ್ತದೆ.
India Gate:ಹಾರ್ದಿಕ್ ಕಾಂಗ್ರೆಸ್ ತೊರೆದಿದ್ದು ಯಾಕೆ.?
ಪ್ರಣಬ್ ರಾಷ್ಟ್ರಪತಿ ಆಗಿದ್ದು ಹೇಗೆ?
2007ರಲ್ಲೇ ಎಡಪಕ್ಷಗಳು ಪ್ರಣಬ್ ಹೆಸರನ್ನು ಪ್ರಸ್ತಾಪ ಮಾಡಿದಾಗ ಸೋನಿಯಾ ಒಪ್ಪಿರಲಿಲ್ಲ. ಆಗ 80 ಮಂತ್ರಿಗಳ ಕಮಿಟಿಗೆ ಅಧ್ಯಕ್ಷರಾಗಿದ್ದ ಪ್ರಣಬ್ ಇಲ್ಲದೇ ಸರ್ಕಾರ ನಡೆಸಲು ಆಗಲ್ಲ ಎಂದು ಸೋನಿಯಾ ಕಾರಟ್‌ಗೆ ಹೇಳಿ ಕಳುಹಿಸಿದ್ದರು. 2012ರಲ್ಲಿ ಕೂಡ ಮುಲಾಯಂ ಮನೆಗೆ ಹೋದ ಮಮತಾ, ಪ್ರಣಬ್ ಬೇಡ, ಕಲಾಂ ಆಗಲಿ ಎಂದು ಹೇಳಿದರು. ಆದರೆ ಅವಿರೋಧವಾಗಿ ಆಯ್ಕೆ ಆದರೆ ಸರಿ, ಚುನಾವಣೆಗೆ ನಾನು ನಿಲ್ಲುವುದಿಲ್ಲ ಎಂದು ಕಲಾಂ ಸಾಹೇಬರು ಹೇಳಿದರು. ಆದರೆ ಆವತ್ತು ರಾತ್ರಿಯೇ ಮುಲಾಯಂ ಮನೆಗೆ ಹೋದ ಅನಿಲ್ ಅಂಬಾನಿ ಪ್ರಣಬ್‌ರನ್ನು ಅಭ್ಯರ್ಥಿ ಮಾಡಿದರೆ ನಮ್ಮ ಬೆಂಬಲ ಎಂದು ಬಹಿರಂಗವಾಗಿ ಕಾಂಗ್ರೆಸ್‌ಗೆ ಹೇಳಿಸಿದರು.
ಮುಲಾಯಂ ಹಾಗೆ ಹೇಳಿದಾಗ ಸೋನಿಯಾರಿಗೂ ಪ್ರಣಬ್‌ರನ್ನು ರಾಷ್ಟ್ರಪತಿ ಮಾಡುವುದು ಅನಿವಾರ್ಯ ಆಯಿತು. ಸಕ್ರಿಯ ರಾಜಕಾರಣದಲ್ಲಿದ್ದ ಪ್ರಣಬ್‌ಗೆ ರೈಸೀನಾ ಬೆಟ್ಟದ ಮೇಲಿನ ಅರಮನೆಯಲ್ಲಿ ಮೊದಮೊದಲು ಎಷ್ಟುಬೋರಾಗುತ್ತಿತ್ತು ಅಂದರೆ ಯಾರೇ ಬಂದರೂ ಬಂಗಾಳಿ ಸೊಂದೇಶ್ ತಿನ್ನಿಸಿ ಒಂದು ಗಂಟೆ ಹರಟೆ ಹೊಡೆದು ಸಂವಿಧಾನದ ಪುಸ್ತಕ ಕೊಟ್ಟು ಕಳುಹಿಸುತ್ತಿದ್ದರು. ಒಮ್ಮೆ ಮೋದಿ ಸರ್ಕಾರ ಸಂಸತ್ ಅಧಿವೇಶನ ಮುಗಿದ ಮರುದಿನ ಯಾವುದೋ ಸುಗ್ರೀವಾಜ್ಞೆಯನ್ನು ಸಹಿಗೆ ಕಳುಹಿಸಿತ್ತು. ಕೂಡಲೇ ಅರುಣ್ ಜೇಟ್ಲಿಯನ್ನು ಕರೆದ ಪ್ರಣಬ್, ಇದು ಸರಿ ಅಲ್ಲ. ಅಧಿವೇಶನ ಮುಗಿದ ಮರುದಿನ ಸುಗ್ರೀವಾಜ್ಞೆ ಹೊರಡಿಸಿದರೆ ಸರ್ಕಾರ ಸಂಸತ್ತನ್ನು ಎದುರಿಸಲು ಸಮರ್ಥ ಇರಲಿಲ್ಲ ಎಂಬ ಸಂದೇಶ ಹೋಗುತ್ತದೆ, ಒಂದು ತಿಂಗಳು ಕಾಯಿರಿ ಎಂದು ಹೇಳಿ ಕಳುಹಿಸಿದರಂತೆ.
ಅಚಾನಕ್ ರಾಷ್ಟ್ರಪತಿ ಪ್ರತಿಭಾ ಪಾಟೀಲ್
ಒಮ್ಮೊಮ್ಮೆ ಅದೃಷ್ಟಇದ್ದರೆ ಇತಿಹಾಸದ ಪುಟದಲ್ಲಿ ಹೆಸರು ಸೇರಿಬಿಡುತ್ತದೆ ನೋಡಿ. 2007ರಲ್ಲಿ ಅರ್ಜುನ್ ಸಿಂಗ್, ಮೋತಿಲಾಲ್ ವೊರಾ ಹಾಗೂ ಪ್ರಣಬ್ ಹೆಸರಿಗೆ ಕಾಂಗ್ರೆಸ್ ಬೇಡ ಅಂದಾಗ ಸೋನಿಯಾ, ಮನಮೋಹನ್, ಕಾರಟ್, ಬರ್ಧನ್, ಡಿ.ರಾಜಾ ಅಲ್ಲೇ ಕುಳಿತಿದ್ದರಂತೆ. ಕಾಮ್ರೇಡ್ ರಾಜಾ ಇಷ್ಟುವರ್ಷ ಬರೀ ಪುರುಷರೇ ಆಗಿದ್ದಾರೆ, ಮಹಿಳೆಯೊಬ್ಬರನ್ನು ಮಾಡಿ ಅಂದಾಗ ಸೋನಿಯಾ, ಮನಮೋಹನ್ ಒಪ್ಪಿಕೊಂಡರಂತೆ. ಆದರೆ ಯಾರು ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. ಆಗ ವಿದÜರ್ಭ ಮೂಲದ ಕಾಮ್ರೇಡ್ ಬರ್ಧನ್, ಅಮರಾವತಿ ಮೇಯರ್ ಆಗಿದ್ದ ದೇವಿಸಿಂಗ್‌ರ ಪತ್ನಿ ಪ್ರತಿಭಾ ಪಾಟೀಲ್ ರಾಜ್ಯಪಾಲರಿದ್ದಾರಲ್ಲ ಎಂದಾಗ ಸೋನಿಯಾ ಕೂಡಲೇ, ‘ಸರಿ. ಹಾಗಾದಲ್ಲಿ ಶಿವಸೇನೆ ಬೆಂಬಲ ಕೂಡ ಸಿಗುತ್ತದೆ’ ಎಂದು ಒಪ್ಪಿಕೊಂಡರಂತೆ. ಆಗಷ್ಟೇ ಶುರುವಾಗಿದ್ದ ಗೂಗಲ್‌ನಲ್ಲಿ ಹುಡುಕಾಡಿ ಪತ್ರಕರ್ತರು ಪ್ರತಿಭಾ ತಾಯಿ ಬಗ್ಗೆ ಮಾಹಿತಿ ಹುಡುಕುವ ಪರಿಸ್ಥಿತಿ ಇತ್ತು.
ರಾಜ್ಯಸಭಾ ಚುನಾವಣೆ: ಸಿದ್ದು ಲೆಕ್ಕಾಚಾರದಲ್ಲಡಗಿದೆ 2023 ರ ತಂತ್ರ!
ಗ್ಯಾನಿ ಜೈಲ್‌ಸಿಂಗ್ ವರ್ಸಸ್ ರಾಜೀವ್
ಇಂದಿರಾ ಗಾಂಧಿ ಗ್ಯಾನಿ ಜೈಲ್ ಸಿಂಗ್‌ರನ್ನು ರಾಷ್ಟ್ರಪತಿ ಮಾಡಿದ ನಂತರ ಸ್ವಲ್ಪ ದಿನಗಳಲ್ಲೇ ಇಂದಿರಾ ಮತ್ತು ಗ್ಯಾನಿ ಸಂಬಂಧ ಹಳಸಿಹೋಗಿತ್ತು. ಪ್ರಧಾನಿ ಆದೇಶದ ಮೇಲೆಯೇ ಬೇಹುಗಾರಿಕಾ ದಳ ರಾಷ್ಟ್ರಪತಿಗಳ ಮನೆ, ಕಚೇರಿಯಲ್ಲಿ ಮೈಕ್ ಹಾಕಿ ಏನಾಗುತ್ತಿದೆ ಎಂದು ಕೇಳಿಸಿಕೊಳ್ಳುತ್ತಿತ್ತು. ಇಂದಿರಾಗಿದ್ದ ಸಿಟ್ಟು ಗ್ಯಾನಿ ರಾಷ್ಟ್ರಪತಿ ಭವನದಲ್ಲಿ ಕುಳಿತುಕೊಂಡು ಅತಿರೇಕಿ ಬಿಂದ್ರನ್ ವಾಲೆಯನ್ನು ಪುಸಲಾಯಿಸುತ್ತಾರೆ ಎಂದು. ಆದರೆ ಇಂದಿರಾ ತನಗೆ ಹೇಳದೆ ಕೇಳದೆ ಸ್ವರ್ಣ ಮಂದಿರಕ್ಕೆ ಮಿಲಿಟರಿ ಕಳುಹಿಸಿದ್ದು ಗ್ಯಾನಿಗೆ ಬೇಸರ ತರಿಸಿತ್ತು.
ಆದರೆ ಇಂದಿರಾ ಹತ್ಯೆಯಾಗಿ ರಾಜೀವ್ ಪ್ರಧಾನಿ ಆದ ನಂತರವಂತೂ ಗ್ಯಾನಿಗೆ ವಾಗ್ದಂಡನೆ ವಿಧಿಸಬೇಕೆಂದು ರಾಜೀವ್ ಗಾಂಧಿ ಹಿರಿಯ ಸಚಿವರ ಮುಂದೆ ಹೇಳಿಕೊಂಡಿದ್ದರು. ಇಂದಿರಾ ಹತ್ಯೆ ಆದಾಗ ಗ್ಯಾನಿ ಪ್ರಣಬ್ ಮುಖರ್ಜಿಯನ್ನು ಹಂಗಾಮಿ ಪ್ರಧಾನಿ ಮಾಡಬೇಕು ಎಂದು ಹೇಳಿದ್ದು ಕೂಡ ರಾಜೀವ್‌ಗೆ ಸಿಟ್ಟು ತರಿಸಿತ್ತು. ಗ್ಯಾನಿ ಕೂಡ ಸುಮ್ಮನೆ ಕೂರದೇ ರಾಜೀವ್ ವಿರುದ್ಧ ಬಂಡಾಯ ಏಳುವಂತೆ ತನ್ನ ಭೇಟಿಗೆ ಬಂದ ಕಾಂಗ್ರೆಸ್ ಸಂಸದರಿಗೆ ನೇರವಾಗಿಯೇ ಹೇಳಿ ಕಳುಹಿಸುತ್ತಿದ್ದರು. ಇಬ್ಬರ ನಡುವಿನ ತಿಕ್ಕಾಟ ಎಷ್ಟಿತ್ತು ಅಂದರೆ ಗ್ಯಾನಿ ಜೈಲ್ ಸಿಂಗ್ ಇಂಡಿಯನ್ ಎಕ್ಸ್‌ಪ್ರೆಸ್‌ನ ರಾಮನಾಥ ಗೋಯಂಕಾ ಬಳಿ ಹೋಗಿ ರಾಜೀವ್ ವಿರುದ್ಧ ಬರೆಯಿರಿ ಎಂದು ಬಹಿರಂಗವಾಗಿ ಮಾಹಿತಿ ಕೊಡುತ್ತಿದ್ದರಂತೆ.
ಫಕ್ರುದ್ದೀನ್ ಅಲಿ ಅಹ್ಮದ್ ಕಾಲದಲ್ಲಿ
ವಿ.ವಿ.ಗಿರಿ ನಂತರ ಇಂದಿರಾ ಗಾಂಧಿ ತನ್ನ ತಂದೆಯ ಜೊತೆಗೆ ಲಂಡನ್‌ನಲ್ಲಿದ್ದ ಫಕ್ರುದ್ದೀನ್ ಅಲಿ ಅಹ್ಮದ್‌ರನ್ನು ರಾಷ್ಟ್ರಪತಿ ಮಾಡಿದರು. 1975ರಲ್ಲಿ ಜೆ.ಪಿ.ಬೋಟ್ ಕ್ಲಬ್‌ನಲ್ಲಿ ಸೇನಾ ಜವಾನರು ಇಂದಿರಾ ವಿರುದ್ಧ ಬಂಡಾಯ ಏಳಬೇಕು ಎಂದು ಕರೆ ಕೊಟ್ಟಾಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸಿದ್ದಾರ್ಥ ಶಂಕರ್ ರೇ ಮಾತು ಕೇಳಿಕೊಂಡು ಇಂದಿರಾ ರಾತ್ರೋರಾತ್ರಿ ಆಂತರಿಕ ತುರ್ತು ಪರಿಸ್ಥಿತಿ ಹೇರುವ ಟಿಪ್ಪಣಿ ಒಂದನ್ನು ರಾಷ್ಟ್ರಪತಿ ಭವನಕ್ಕೆ ಕಳುಹಿಸಿಕೊಟ್ಟರು. ರಾತ್ರಿ ಪೈಜಾಮಾದಲ್ಲಿದ್ದ ಫಕ್ರುದ್ದೀನ್ ತಮ್ಮ ಕಾರ್ಯದರ್ಶಿ ಬಾಲಚಂದ್ರನ್‌ಗೆ ಇಂದಿರಾ ಕಳುಹಿಸಿದ್ದ ಕಾಗದ ಕೊಟ್ಟು ಸಲಹೆ ಕೇಳಿದರಂತೆ.
ಸಂಪುಟ ಸಭೆ ನಿರ್ಣಯ ಇಲ್ಲದೇ ಈ ರೀತಿಯ ನಿರ್ಣಯವನ್ನು ಒಪ್ಪುವುದು ಸಂವಿಧಾನ ಬದ್ಧ ಅಲ್ಲ ಎಂದು ಬಾಲಚಂದ್ರನ್ ಫಕ್ರುದ್ದೀನ್‌ಗೆ ಹೇಳಿದರಂತೆ. ಆಯಿತು, ಸಂವಿಧಾನ ಪುಸ್ತಕ ತೆಗೆದುಕೊಂಡು ಟಿಪ್ಪಣಿ ಮಾಡಿಕೊಂಡು ಬನ್ನಿ ಎಂದು ರಾಷ್ಟ್ರಪತಿ ಬಾಲಚಂದ್ರನ್‌ರನ್ನು ಕಳುಹಿಸಿದರಂತೆ. ಒಂದು ಗಂಟೆ ಬಿಟ್ಟು ಬಾಲಚಂದ್ರನ್ ಒಳಗೆ ಬಂದಾಗ ಇಂದಿರಾ ಕಾರ್ಯದರ್ಶಿ ಆರ್.ಕೆ.ಧವನ್ ಬಂದು ತುರ್ತು ಪರಿಸ್ಥಿತಿ ಹೇರಲು ಸಹಿ ಹಾಕಿಸಿಕೊಂಡು ಹೋದರು ಎಂದು ಫಕ್ರುದ್ದೀನ್ ತಮ್ಮ ಕಾರ್ಯದರ್ಶಿಗೆ ಹೇಳಿದರಂತೆ. ಕೊನೆಗೆ ಸಂಪುಟ ಸಭೆ ನಡೆದದ್ದು ರಾಷ್ಟ್ರಪತಿಗಳು ಸಹಿ ಹಾಕಿದ 15 ಗಂಟೆಗಳ ನಂತರ. ಆಗ ಆಂಗ್ಲ ಪತ್ರಿಕೆಯೊಂದು ಬಾತ್ ಟಬ್‌ನಲ್ಲಿ ಕುಳಿತು ತುರ್ತು ಪರಿಸ್ಥಿತಿಗೆ ಫಕ್ರುದ್ದೀನ್ ಸಹಿ ಹಾಕಿದರು ಎಂದು ಛಾಪಿಸಿದ ವ್ಯಂಗ್ಯಚಿತ್ರ ಭಾರೀ ಸುದ್ದಿ ಆಗಿತ್ತು.
ಮೇಲ್ಮನೆ ಟಿಕೆಟ್ ಫೈಟ್: ವಿಜಯೇಂದ್ರ ಟಿಕೆಟ್ ಕೈ ಬಿಟ್ಟಿದ್ದು ಸ್ವತಃ ಮೋದಿ..!
ನೆಹರು ವರ್ಸಸ್ ರಾಜೇಂದ್ರ ಪ್ರಸಾದ್
ಇವತ್ತು ನಾವು ಹಿಂದುತ್ವವಾದಿಗಳು ಮತ್ತು ಸೆಕ್ಯುಲರ್‌ವಾದಿಗಳ ನಡುವಿನ ತಿಕ್ಕಾಟ ನೋಡುತ್ತಿದ್ದೇವೆ. ಅದು 1952ರಲ್ಲಿ ಕಾಂಗ್ರೆಸ್‌ನ ಒಳಗಡೆಯೇ ಇತ್ತು. ಪಂಡಿತ್ ನೆಹರುಗೆ ಬಾಬು ರಾಜೇಂದ್ರ ಪ್ರಸಾದ್‌ರನ್ನು ರಾಷ್ಟ್ರಪತಿ ಮಾಡುವ ಮನಸ್ಸಿರಲಿಲ್ಲ. ಸಿ.ರಾಜಗೋಪಾಲಾಚಾರಿ ಅವರನ್ನು ರಾಷ್ಟ್ರಪತಿ ಮಾಡಬೇಕೆಂದುಕೊಂಡಿದ್ದರು. ಅದಕ್ಕೆ ಕಾರಣ ಬಾಬು ರಾಜೇಂದ್ರ ಪ್ರಸಾದ್ ಸ್ವಲ್ಪ ಹೆಚ್ಚು ಹಿಂದುತ್ವವಾದಿ ಆಗಿದ್ದರೆ, ರಾಜಗೋಪಾಲಾಚಾರಿ ವಿದೇಶದಲ್ಲಿ ಓದಿ ನೆಹರುರಂತೆ ಸೆಕ್ಯುಲರ್‌ವಾದಿ ಆಗಿದ್ದರು.
ಆದರೆ ಸಂಘಟನೆ ಮೇಲೆ ನೆಹರುಗಿಂತ ಜಾಸ್ತಿ ಹಿಡಿತ ಹೊಂದಿದ್ದ ಸರ್ದಾರ್ ಪಟೇಲರ ನೆರವಿನಿಂದ ಬಾಬು ರಾಜೇಂದ್ರ ಪ್ರಸಾದ್ 1952ರಲ್ಲಿ ಮೊದಲ ರಾಷ್ಟ್ರಪತಿ ಆದರು. ಆಗ ಶುರುವಾಗಿದ್ದೇ ಹಿಂದೂ ಕೋಡ್ ಬಿಲ್ ಮೇಲೆ ಪ್ರಧಾನಿ ಮತ್ತು ರಾಷ್ಟ್ರಪತಿಗಳ ತಿಕ್ಕಾಟ. ಸಂಪುಟ ಕಳುಹಿಸಿದ್ದ ಹಿಂದೂ ಬಿಲ್ ಒಪ್ಪಲೇಬೇಕೆ ಎಂದು ಬಾಬು ರಾಜೇಂದ್ರ ಪ್ರಸಾದ್ ಅಟಾರ್ನಿ ಜನರಲ್‌ರಿಂದ ಕಾನೂನು ಅಭಿಪ್ರಾಯ ಕೇಳಿದ್ದರು. ರಾಷ್ಟ್ರಪತಿಗಳು ಸಂಪುಟದ ಸಲಹೆ ಒಪ್ಪಬೇಕು ಎಂದು ಕಾನೂನು ಸಲಹೆ ಬಂದಿದ್ದರಿಂದ ಬಾಬು ಸುಮ್ಮನಾದರು.
ಸೋಮನಾಥ ಮಂದಿರದ ಉದ್ಘಾಟನೆಗೆ ಬಾಬು ಹೋಗುವುದಕ್ಕೆ ಪಂಡಿತ್ ನೆಹರು ಬಹಿರಂಗ ಅಸಮಾಧಾನ ಹೊರಹಾಕಿದ್ದರು. ಮುಂದೆ ಇಂದಿರಾ ಗಾಂಧಿ ಕ್ಯಾಬಿನೆಟ್ ಕೊಟ್ಟಸಲಹೆಯನ್ನು ರಾಷ್ಟ್ರಪತಿ ಒಪ್ಪಲೇಬೇಕು ಎಂದು ಸಂವಿಧಾನಕ್ಕೆ ತಿದ್ದುಪಡಿ ತಂದರು. ಆದರೆ, ಮೊರಾರ್ಜಿ ದೇಸಾಯಿ ಇನ್ನೊಂದು ತಿದ್ದುಪಡಿ ತಂದು ಒಮ್ಮೆ ವಾಪಸ್ ಕಳುಹಿಸಿ ಇನ್ನೊಮ್ಮೆ ಕೂಡ ಕ್ಯಾಬಿನೆಟ್ ಕಳುಹಿಸಿಕೊಟ್ಟರೆ ರಾಷ್ಟ್ರಪತಿಗಳು ಒಪ್ಪುವುದು ಅನಿವಾರ್ಯ ಎಂದು ಕಾನೂನು ಮಾಡಿದರು.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
- ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ