ಜೆಡಿಎಸ್‌ಗೆ ಕಡಿಮೆ ಸ್ಥಾನ, ನಾನೇನು ತಪ್ಪು ಮಾಡಿದ್ದೇನೆ?: ಎಚ್‌.ಡಿ.ಕುಮಾರಸ್ವಾಮಿ

ನನ್ನನ್ನು ಮುಂದಿನ ಸಿಎಂ ಎನ್ನುತ್ತೀರಿ, ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಮನೆಯ ಮಗನಂತೆ ನನಗೆ ಪ್ರೀತಿ ತೋರಿಸುತ್ತೀರಿ. ಆದರೆ ಚುನಾವಣೆಯಲ್ಲಿ ಮಾತ್ರ ಜೆಡಿಎಸ್‌ಗೆ ಕೇವಲ 23 ರಿಂದ 24 ಸ್ಥಾನ ಕೊಡ್ತೀರಿ. ನಾನೇನು ತಪ್ಪು ಮಾಡಿದ್ದೇನೆ.

Low Position for JDS What did I do Wrong Says HD Kumaraswamy gvd

ಕುಷ್ಟಗಿ (ಜ.31): ನನ್ನನ್ನು ಮುಂದಿನ ಸಿಎಂ ಎನ್ನುತ್ತೀರಿ, ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದು ಮನೆಯ ಮಗನಂತೆ ನನಗೆ ಪ್ರೀತಿ ತೋರಿಸುತ್ತೀರಿ. ಆದರೆ ಚುನಾವಣೆಯಲ್ಲಿ ಮಾತ್ರ ಜೆಡಿಎಸ್‌ಗೆ ಕೇವಲ 23 ರಿಂದ 24 ಸ್ಥಾನ ಕೊಡ್ತೀರಿ. ನಾನೇನು ತಪ್ಪು ಮಾಡಿದ್ದೇನೆ? ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನತೆಯನ್ನು ನೋವಿನಿಂದ ಕೇಳಿದ ಪರಿ ಇದು. ಸೋಮವಾರ ಇಲ್ಲಿ ಜೆಡಿಎಸ್‌ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ ಹಾಗೂ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಾನು ಎರಡು ಬಾರಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದೇನೆ. ಆದರೂ ನಿಮ್ಮ ಕಲ್ಯಾಣಕ್ಕಾಗಿ ರಾಜ್ಯಾದ್ಯಂತ ಸುತ್ತಾಡುತ್ತೇನೆ. ಆದ್ದರಿಂದ ಒಮ್ಮೆ ಅಧಿಕಾರ ಕೊಡಿ ಎಂದು ಮನವಿ ಮಾಡಿದರು.

ಸಾಲ ಮನ್ನಾ ಮಾಡ್ತೀನಿ: ಸಮ್ಮಿಶ್ರ ಸರ್ಕಾರ ಇದ್ದಾಗ ರೈತರ ಸಾಲಮನ್ನಾ ಮಾಡುವುದಕ್ಕೆ ವಿರೋಧಿಸಿದ್ದರು. ಆದರೂ ಮನವೊಲಿಸಿ 25 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೇನೆ. ಅದರಲ್ಲಿ ಕುಷ್ಟಗಿಯ ಹದಿನಾರು ಸಾವಿರ ಜನರ ಸಾಲ ಮನ್ನಾ ಆಗಿದೆ. ಈ ಸರ್ಕಾರ ಇನ್ನೂ ಎರಡು ಲಕ್ಷ ರೈತರ ಸಾಲಮನ್ನಾಕ್ಕೆ ಹಣ ನೀಡಿಲ್ಲ. ಆದರೆ ನಾನು ಮರಳಿ ಅಧಿಕಾರಕ್ಕೆ ಬಂದರೆ ಅವರ ಸಾಲ ಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದರು. ಕುಷ್ಟಗಿ ಭಾಗದ ರೈತರಿಗೆ ನೀರು ನೀಡುವ ಉದ್ದೇಶ ಹೊಂದಿದ್ದೇನೆ. ಹಳ್ಳಿಯ ಶಾಲೆಗಳ ಗುಣಮಟ್ಟದ ಶಿಕ್ಷಣ ನೀಡಬೇಕಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಮಾದರಿ ಶಾಲೆ ತೆರೆಯಲಾಗುವುದು ಎಂದರು. ರೈತರ ಹಿತ ದೃಷ್ಟಿಯಿಂದ ಕೋಲ್ಡ್‌ ಸ್ಟೋರೇಜ್‌ ಮತ್ತು ಗೋದಾಮುಗಳನ್ನು ಪ್ರತಿ ಗ್ರಾಮ ಪಂಚಾಯಿತಿ ಹಂತದಲ್ಲಿ ನಿರ್ಮಾಣ ಮಾಡಲಾಗುವುದು. ಭೂಮಿ ಇಲ್ಲದ ರೈತರಿಗೆ ಅರ್ಥಿಕ ನೆರವು ನೀಡಿ ಸ್ವ ಉದ್ಯೋಗ ನೀಡಲಾಗುವುದು ಎಂದರು.

ರಾಷ್ಟ್ರೀಯ ಪಕ್ಷಗಳ ಭರವಸೆಗಳಿಗೆ ಮರುಳಾಗಬೇಡಿ: ಎಚ್‌.ಡಿ.ಕುಮಾರಸ್ವಾಮಿ

ಬಯಲು ಬಹಿರ್ದೆಸೆ ಮುಕ್ತ: ಸ್ವಾತಂತ್ರ್ಯ ಬಂದು 75 ವರ್ಷವಾದರೂ ಉತ್ತರ ಕರ್ನಾಟಕವು ಯಾವುದೇ ತರಹದ ಅಭಿವೃದ್ಧಿಯಾಗಿಲ್ಲ. ಈ ಭಾಗವನ್ನು ಕಾಂಗ್ರೆಸ್‌, ಬಿಜೆಪಿ ನಿರ್ಲಕ್ಷಿಸಿವೆ. ಉತ್ತರ ಕರ್ನಾಟಕ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದೇನೆ. ಕುಡಿಯುವ ನೀರು, ಶೌಚಾಲಯಗಳ ಸಮಸ್ಯೆ ಬಗೆಹರಿದಿಲ್ಲ. ರೈತರ ಹೊಲಗಳಿಗೆ ನದಿ ನೀರನ್ನು ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು. ಬಿಜೆಪಿ ಸರ್ಕಾರವು ಇಡೀ ಕರ್ನಾಟಕವನ್ನು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಣೆ ಮಾಡಿತು. ಆದರೆ ಈಗಲೂ ಈ ಭಾಗದಲ್ಲಿ ಬೆಳಗಾಗುವ ಮುನ್ನ ಇಲ್ಲವೇ ಕತ್ತಲಾದ ಮೇಲೆ ಬಯಲು ಬಹಿರ್ದೆಸೆಗೆ ಹೋಗುತ್ತಾರೆ. ಹೈದ್ರಾಬಾದ್‌- ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕವೆಂದು ಹೆಸರಿಟ್ಟಿದ್ದಾರೆ. ನಾನು ಸಿಎಂ ಆಗಿದ್ದಾಗ ಈ ಬೇಡಿಕೆ ಬಂದಿತ್ತು. ಆಗ ನಾನು ಅದನ್ನು ಒಪ್ಪಲಿಲ್ಲ. ಅಲ್ಲಿಯ ಜನರ ಕಲ್ಯಾಣವಾದ ಮೇಲೆ ಅದರ ಹೆಸರು ಬದಲಾಯಿಸೋಣ ಎಂದಿದ್ದೆ. ಬಿಜೆಪಿಯವರು ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದ್ದಾರೆ. ಆದರೆ ಜನರ ಕಲ್ಯಾಣ ಮಾಡಿದರಾ? ಎಂದು ಪ್ರಶ್ನಿಸಿದರು.

ರಾಯಚೂರಿನಲ್ಲಿ ನಡೆದ ಜೆಡಿಎಸ್‌ ಪಂಚರತ್ನ ಯಾತ್ರೆಗೆ ಸಿಂಧನೂರಿನಲ್ಲಿ ಅದ್ಧೂರಿ ತೆರೆ!

ಅಭ್ಯರ್ಥಿಗಳ ಬಗ್ಗೆ ಅಸಮಾಧಾನ: ಕನಕಗಿರಿ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅಶೋಕ ಉಮಲೂಟಿ ಕುರಿತು ಮಾಜಿ ಸಿಎಂ ಕುಮಾರಸ್ವಾಮಿಯವರು ವೇದಿಕೆಯಲ್ಲಿಯೇ ಬೇಸರ ವ್ಯಕ್ತಪಡಿಸಿದರು. ಕುಷ್ಟಗಿ ನಿಯೋಜಿತ ಅಭ್ಯರ್ಥಿ ತುಕಾರಾಂ ಸುರ್ವೆ ಅವರ ಸಂಘಟನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದಾಗ ಕನಕಗಿರಿ ಅಭ್ಯರ್ಥಿ ಕುರಿತು ಅಸಮಾಧಾನ ವ್ಯಕ್ತಪಡಿಸಿದರು. ನಿಯೋಜಿಸಿರುವ ಅಭ್ಯರ್ಥಿಗಳು ಜನರ ಬಳಿ ಹೋಗಿ ಸಮಸ್ಯೆಗಳಿಗೆ ಕಿವಿಗೊಡಬೇಕು. ಅಂದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ. ನೀವು ಕೆಲಸವನ್ನು ವೇಗವಾಗಿ ಮಾಡಬೇಕು. ಇಲ್ಲವಾದಲ್ಲಿ ಅಭ್ಯರ್ಥಿಯನ್ನು ಬದಲಾವಣೆ ಮಾಡಲಾಗುವುದು ಎಂದು ಯಲಬುರ್ಗಾ ಕ್ಷೇತ್ರದ ಅಭ್ಯರ್ಥಿ ಮಲ್ಲನಗೌಡ ಸೇರಿದಂತೆ ವಿವಿಧ ಅಭ್ಯರ್ಥಿಗಳಿಗೆ ವೇದಿಕೆಯಲ್ಲಿಯೇ ಮಾಜಿ ಸಿಎಂ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios