ಬಿಜೆಪಿ ಹಾಗೂ ಕಾಂಗ್ರೆಸ್‌ ತಮ್ಮ ಯಾತ್ರೆಗಳಲ್ಲಿ ಸುಳ್ಳಿನ ಭರವಸೆಗಳನ್ನು ನೀಡುತ್ತಿವೆ. ಅವುಗಳಿಗೆ ರೈತಪರ, ಜನಪರ ಕಾಳಜಿ ಇಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ರಾಷ್ಟ್ರೀಯ ಪಕ್ಷಗಳ ಸುಳ್ಳಿನ ಭರವಸೆಗಳಿಗೆ ಮರುಳಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

ಸಿಂಧನೂರು (ಜ.30): ಬಿಜೆಪಿ ಹಾಗೂ ಕಾಂಗ್ರೆಸ್‌ ತಮ್ಮ ಯಾತ್ರೆಗಳಲ್ಲಿ ಸುಳ್ಳಿನ ಭರವಸೆಗಳನ್ನು ನೀಡುತ್ತಿವೆ. ಅವುಗಳಿಗೆ ರೈತಪರ, ಜನಪರ ಕಾಳಜಿ ಇಲ್ಲ. ಪ್ರಾದೇಶಿಕ ಪಕ್ಷ ಜೆಡಿಎಸ್‌ನಿಂದ ಮಾತ್ರ ಅಭಿವೃದ್ಧಿ ಸಾಧ್ಯ. ರಾಷ್ಟ್ರೀಯ ಪಕ್ಷಗಳ ಸುಳ್ಳಿನ ಭರವಸೆಗಳಿಗೆ ಮರುಳಾಗಬೇಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಭಾನುವಾರ ನಗರದ ಸಕ್ರ್ಯೂಟ್‌ ಹೌಸ್‌ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು. ಕಳೆದ 57 ದಿನಗಳಿಂದ ಜೆಡಿಎಸ್‌ ರಾಜ್ಯದ ಐದು ಜಿಲ್ಲೆಗಳಲ್ಲಿ ಪಂಚರತ್ನ ಯಾತ್ರೆ ಪ್ರವಾಸ ನಡೆಸಿದೆ. ಎಲ್ಲೆಡೆ ಜನಸಮೂಹ ನಿರೀಕ್ಷೆಗೂ ಮೀರಿ ಬರುತ್ತಿದೆ. 

ರಾಜ್ಯದ ಜನತೆಗೆ ಕೇಂದ್ರ ಹಾಗೂ ರಾಜ್ಯದ ಡಬಲ್‌ ಎಂಜಿನ್‌ ಸರ್ಕಾರಗಳ ದುರಾಡಳಿತ, ಭ್ರಷ್ಟಾಚಾರ ಬೇಸರವಾಗಿದೆ. ಇನ್ನೂ ಕಾಂಗ್ರೆಸ್‌ ಪ್ರಜಾಧ್ವನಿ ಹೆಸರಿನಲ್ಲಿ ದಿನಕ್ಕೊಂದು ಸುಳ್ಳು ಹೇಳುತ್ತಾ ಮರುಳು ಮಾಡುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ, ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಗಳು ರೈತರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿಲ್ಲ. ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಬರೀ ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಕೇಂದ್ರ ಸರ್ಕಾರದ ಎಂಟು ವರ್ಷದ ಆಡಳಿತ, ರಾಜ್ಯದ ಮೂರುವರೆ ವರ್ಷದ ಬಿಜೆಪಿ ಆಡಳಿತದಲ್ಲಿ ಜನರಿಗೆ ನೀಡಿರುವ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಕಾವಲುಗಾರನಾಗಿ ಸೇವೆ: ಎಚ್‌.ಡಿ.ಕುಮಾರಸ್ವಾಮಿ

ಅಮಿತ್‌ ಶಾ ಅವರು ಜೆಡಿಎಸ್‌ಗೆ ಮತ ಹಾಕಿದರೆ ಕಾಂಗ್ರೆಸ್‌ಗೆ ಹೋಗುತ್ತದೆ ಎನ್ನುತ್ತಾರೆ. ಸಿದ್ದರಾಮಯ್ಯ ಅವರು ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹೋಗುತ್ತದೆ ಎನ್ನುತ್ತಾರೆ. ಎರಡು ರಾಷ್ಟ್ರೀಯ ಪಕ್ಷಗಳು ಈ ಒಗಟ್ಟಿನ ಮಾತನ್ನು ಬಿಡಿಸಿ ಹೇಳಬೇಕು. ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದು, ನಾವು ಯಾರ ಪರವಾಗಿಯೂ ಇಲ್ಲ. ನಮ್ಮದೇ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲು ಪಂಚರತ್ನ ಯಾತ್ರೆ ನಡೆಸಲಾಗುತ್ತಿದೆ ಎಂಬುದನ್ನು ರಾಷ್ಟ್ರೀಯ ಪಕ್ಷಗಳು ಮರೆಯಬಾರದು ಎಂದು ಚಾಟಿಯೇಟು ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಜೆಡಿಎಸ್‌ ಪಕ್ಷವನ್ನು ಕುಮಾರಸ್ವಾಮಿ ವಿಸರ್ಜಿಸುತ್ತಾರೆ. ಆದ್ದರಿಂದ ಕಾಂಗ್ರೆಸ್‌ಗೆ ಸೇರಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಅವರಿಗೆ ನಾನು ಹೇಳಿರುವ ಅರ್ಥ ಸರಿಯಾಗಿ ತಿಳಿದಿಲ್ಲ. 

ಇನ್ನೂ ಸಿದ್ದರಾಮಯ್ಯ ಜೆಡಿಎಸ್‌ಗೆ ರಾಜ್ಯದಲ್ಲಿ 20 ರಿಂದ 22 ಸೀಟ್‌ ಬರುತ್ತದೆಂದು ಹೇಳುತ್ತಾರೆ. ಅಷ್ಟುಬಂದರೆ ಪಕ್ಷ ವಿಸರ್ಜಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಹತ್ತಿ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಿಲ್ಲ. ತೊಗರಿ ಬೆಳೆಗಾರರು ಸರಿಯಾದ ಬೆಲೆ ಇಲ್ಲದೆ ಕೈಚೆಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ಬದಲಾಗಿ ಮಹಾದಾಯಿ ಯೋಜನೆಯನ್ನು ತಾವೇ ಜಾರಿಗೊಳಿಸಿರುವುದಾಗಿ ತಮ್ಮ ಭುಜವನ್ನು ಚಪ್ಪರಿಸಿಕೊಳ್ಳುತ್ತಿದ್ದಾರೆ. ಪ್ರತಿದಿನ ಅಮಿತ್‌ಶಾ, ಬೊಮ್ಮಾಯಿ ಸ್ವೀಟ್‌ ಹಂಚುತ್ತಿದ್ದಾರೆ. ಆದರೆ, ಅರಣ್ಯ ಇಲಾಖೆಯವರು ಈಗಾಗಲೇ ಆ ಯೋಜನೆ ಕುರಿತಂತೆ ನೋಟಿಸ್‌ ನೀಡಿದ್ದಾರೆ. ತಮ್ಮ ಅವಧಿಯಲ್ಲಿ ಈ ಯೋಜನೆಗೆ ನೂರು ಕೋಟಿ ಕೊಟ್ಟಿರುವುದನ್ನು ಅವರು ಎಲ್ಲಿಯೂ ಅಪ್ಪಿ ತಪ್ಪಿ ಹೇಳುತ್ತಿಲ್ಲ ಎಂದು ಕುಮಾರಸ್ವಾಮಿ ಟೀಕಿಸಿದರು.

ಸಿದ್ದರಾಮಯ್ಯ ಹಾಸ್ಯಾಸ್ಪದ: ಕೊಟ್ಟ ಕುದುರೆಯನ್ನು ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಸಿದ್ದರಾಮಯ್ಯ ಹೇಳಿರುವುದು ಹಾಸ್ಯಾಸ್ಪದವಾಗಿದೆ. ಅವರು ನಾಲ್ಕು ಕಾಲುಗಳನ್ನು ಮುರಿದ ಕುದುರೆ ಕೊಟ್ಟಿದ್ದರೂ ನಾವೇನು ಅಧಿಕಾರ ಬೇಕೆಂದು ಕಾಂಗ್ರೆಸ್‌ನವರ ಮನೆಗೆ ಹೋಗಿರಲಿಲ್ಲ. ಅವರೇ ಅಧಿಕಾರ ನೀಡಿ ಈಗ ಏನೇನೋ ಅಸಂಬದ್ಧವಾಗಿ, ಲಘುವಾಗಿ ಮಾತನಾಡುತ್ತಿರುವುದು ಸರಿಯಲ್ಲ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಕಾಂಗ್ರೆಸ್‌ನ ಉಡಾಫೆ ಭರವಸೆಗಳು ಜನರಲ್ಲಿ ನಂಬಿಕೆ ಹುಟ್ಟಿಸುತ್ತಿಲ್ಲ. ತಮ್ಮ ಮೈತ್ರಿ ಸರ್ಕಾರದಲ್ಲಿ ಸಾಲಮನ್ನಾ ಯೋಜನೆಯನ್ನು ಈಗಲೂ ಜನತೆ ನೆನಪಿಟ್ಟುಕೊಂಡಿದೆ. 

ರಾಜ್ಯದಲ್ಲಿ ಮತ್ತೆ ಬಿಜೆಪಿಗೆ ಬಹುಮತ ಖಚಿತ: ಕೆ.ಎಸ್‌.ಈಶ್ವರಪ್ಪ

ಅದಕ್ಕಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟಬಹುಮತ ನೀಡಿ 120ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲಿಸಿ ಕೊಡಬೇಕೆಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಶಾಸಕರಾದ ವೆಂಕಟರಾವ್‌ ನಾಡಗೌಡ, ಸಾ.ರಾ.ಮಹೇಶ, ಭೋಜೇಗೌಡ, ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್‌ ಅತ್ತನೂರು, ಜೆಡಿಎಸ್‌ ಅಧ್ಯಕ್ಷ ಬಸವರಾಜ ನಾಡಗೌಡ, ಮುಖಂಡರಾದ ಚಂದ್ರಭೂಪಾಲ ನಾಡಗೌಡ, ವೆಂಕೋಬಣ್ಣ ಕಲ್ಲೂರು, ಧರ್ಮನಗೌಡ ಮಲ್ಕಾಪುರ ಇದ್ದರು.