ಅಣ್ಣಾಮಲೈಯಿಂದ ಪಕ್ಷಕ್ಕೆ ಅವಮಾನ, ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮೈತ್ರಿ ಮುರಿದ ಎಐಎಡಿಎಂಕೆ!
ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ ಜವಾಬ್ದಾರಿ ವಹಿಸಿಕೊಂಡ ಬಳಿಕ ಹೊಸ ಅಲೆ ಸೃಷ್ಟಿಯಾಗಿದೆ. ಇದರ ಜೊತೆಗೆ ಮೈತ್ರಿ ಪಕ್ಷಗಳು ಮುನಿಸಿಕೊಳ್ಳುತ್ತಿದೆ. ಇದೀಗ ಅಣ್ಣಾಮಲೈ ಕಾರ್ಯವೈಖರಿಯಿಂದ ಬೇಸತ್ತ ಬಿಜೆಪಿ ಮಿತ್ರ ಪಕ್ಷ ಎಐಎಡಿಂಕೆ ಮೈತ್ರಿ ಮುರಿದುಕೊಂಡಿದೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲೇ ಈ ಬೆಳವಣಿಗೆ ನಡೆದಿದೆ.
ಚೆನ್ನೈ(ಸೆ.18) ಲೋಕಸಭೆ ಚುನಾವಣೆಗೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ವಿರೋಧ ಪಕ್ಷಗಳು ಈಗಾಗಲೇ ಇಂಡಿಯಾ ಮೈತ್ರಿಕೂಟ ರಚಿಸಿ ಸತತ ಸಭೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಮೈತ್ರಿ ಬಲಪಡಿಸಲು ಕೆಲ ಕಸರತ್ತು ನಡೆಸುತ್ತಿದೆ. ಇದರ ಬೆನ್ನಲ್ಲೇ ತಮಿಳುನಾಡಿನಲ್ಲಿ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮಿತ್ರ ಪಕ್ಷ ಎಐಎಡಿಎಂಕೆ ಇದೀಗ ಬಿಜೆಪಿ ಮೈತ್ರಿ ಮುರಿದುಕೊಂಡಿದೆ. ಇಂದು ಎಐಎಡಿಎಂಕೆ ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಘೋಷಿಸಿದ್ದಾರೆ.
ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ನಮ್ಮ ಪಕ್ಷದ ಸಂಸ್ಥಾಪಕ ಅಣ್ಣಾದೊರೈ, ಮಾಜಿ ಸಿಎಂ ಜಯಲಲಿತಾ, ಸಾಹಿತಿ ಪೆರಿಯಾರ್ ಸೇರಿದಂತೆ ಹಲವರ ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅಣ್ಣಾಮಲೈ ಬಿಜೆಪಿ ಅಧ್ಯಕ್ಷರಾಗಲು ನಾಲಾಯಕ್ ಎಂದಿದ್ದಾರೆ. ಈ ಬೆಳವಣಿಗೆಯಿಂದ ಬಿಜೆಪಿ ಜೊತೆಗಿನ ಮೈತ್ರಿ ಕುರಿತು ಮುಂಬರುವ ಲೋಕಲಭಾ ಚುನಾವಣೆ ವೇಳೆ ಚರ್ಚಿಸುತ್ತೇವೆ. ಸದ್ಯಕ್ಕೆ ಯಾವುದೇ ಮೈತ್ರಿ ಇಲ್ಲ ಎಂದು ಜಯಕುಮಾರ್ ಹೇಳಿದ್ದಾರೆ.
ಶಾರುಖ್ ಖಾನ್ ಕೂಡ ತಿರುಪತಿಗೆ ಹೋಗ್ಬಹುದು ಇದು ನಮ್ಮ ಸನಾತನ ಎಂದ ಅಣ್ಣಾಮಲೈ!
ಕೇಂದ್ರ ಬಿಜೆಪಿಗೆ ಎಐಎಡಿಎಂಕೆ ಜೊತೆ ಮೈತ್ರಿಗೆ ಯಾವುದೇ ವಿರೋಧವಿಲ್ಲ. ಕೇಂದ್ರ ನಾಯಕರು ಎಐಎಡಿಎಂಕೆ ಜೊತೆ ಮೈತ್ರಿಯನ್ನು ಮುಂದುವರಿಸಿದ್ದಾರೆ. ಆದರೆ ಅಣ್ಣಾಮಲೈಗೆ ಮೈತ್ರಿ ಬೇಕಿಲ್ಲ. ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎಂದು ಡಿ ಜಯಕುಮಾರ್ ಹೇಳಿದ್ದಾರೆ. ಜಯಲಲಿತಾ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ ನಾವು ನಿರ್ಣಯ ಪಾಸ್ ಮಾಡಿದ್ದೇವೆ. ಇದಾದ ಬಳಿಕ ಅಣ್ಣಾದೊರೆ, ಪೆರಿಯಾರ್ ಸೇರಿದಂತೆ ಹಲವರ ವಿರುದ್ಧ ಹೇಳಿಕೆ ನೀಡುತ್ತಲೇ ಇದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಎಐಎಡಿಎಂಕೆ ಈ ನಿರ್ಧಾರ ಕೇಂದ್ರ ಬಿಜೆಪಿ ನಾಯಕರ ನಿದ್ದೆಗೆಡಿಸಿದೆ. ಲೋಕಸಭೆ ಚುನಾವಣೆಗೆ ಈಗಾಗಲೇ ಇಂಡಿಯಾ ಮೈತ್ರಿ ಒಕ್ಕೂಟದ ಹೋರಾಟ ಬಿಜೆಪಿಗೆ ಕೆಲ ರಾಜ್ಯಗಳಲ್ಲಿ ಹಿನ್ನಡೆ ತರಲಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆ. ಇಲ್ಲಿ ಪ್ರಾದೇಶಿಕ ಪಕ್ಷಗಳೇ ಅಧಿಪತ್ಯ ಹೊಂದಿದೆ. ಹೀಗಾಗಿ ಲೋಕಸಭೆ ಚುನಾವಣೆ ವೇಳೆ ಪ್ರಾದೇಶಿಕ ಪಕ್ಷಗಳ ಬೆಂಬಲ ಅಗತ್ಯ ಅನ್ನೋದು ಕೇಂದ್ರ ನಾಯಕರ ಅಭಿಪ್ರಾಯ. ಆದರೆ ಅಣ್ಣಾಮಲೈ ಈ ಬೆಳವಣಿಗೆಯಿಂದ ವಿಚಲಿತರಾದಂತೆ ಕಾಣುತ್ತಿಲ್ಲ. ತಮಿಳುನಾಡಿನಲ್ಲಿ ಬಿಜೆಪಿಯನ್ನು ಏಕಾಂಗಿಯಾಗಿ ಅಧಿಕಾರಕ್ಕೆ ತರುವ ಪಣತೊಟ್ಟಿದ್ದಾರೆ.
ತಮಿಳುನಾಡು ಬಿಜೆಪಿ ಕಚೇರಿಯಲ್ಲಿದ್ದ ಭಾರತ ಮಾತೆ ಪ್ರತಿಮೆ ಎತ್ತಂಗಡಿ: ಪೊಲೀಸರ ಕ್ರಮಕ್ಕೆ ಬಿಜೆಪಿ ಖಂಡನೆ