ಶಾರುಖ್ ಖಾನ್ ಕೂಡ ತಿರುಪತಿಗೆ ಹೋಗ್ಬಹುದು ಇದು ನಮ್ಮ ಸನಾತನ ಎಂದ ಅಣ್ಣಾಮಲೈ!
ಸನಾತನ ಧರ್ಮ ಅಂದ್ರೆ ಏನು ಅಂತಾ ಎಲ್ಲರೂ ಕೇಳ್ತಿದ್ದೀರಲ್ಲ, ಶಾರುಖ್ ಖಾನ್ ಕೂಡ ತನ್ನ ಸಿನಿಮಾ ಪ್ರಚಾರಕ್ಕಾಗಿ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಬಹುದು. ಎಲ್ಲರನ್ನೂ ನಮ್ಮವರು ಎನ್ನುವ ಧರ್ಮ ಸನಾತನ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
ಚೆನ್ನೈ (ಸೆ.8): ಸನಾತನ ಧರ್ಮದ ಬಗ್ಗೆ ಪ್ರಶ್ನೆ ಮಾಡಿದ್ದ ತಮಿಳುನಾಡಿನ ಡಿಎಂಕೆ ನಾಯಕರಾದ ಸಿಎಂ ಎಂಕೆ ಸ್ಟ್ಯಾಲಿನ್ ಪುತ್ರ ಉದಯನಿಧಿ ಸ್ಟ್ಯಾಲಿನ್ ಹಾಗೂ ಸಂಸದ ಎ.ರಾಜಾಗೆ ಉತ್ತರ ನೀಡಿರುವ ತಮಿಉನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಇವರೆಲ್ಲರೂ ಸನಾತನ ಧರ್ಮ ಅಂದ್ರೆ ಏನು ಅಂತಾ ಪ್ರಶ್ನೆ ಮಾಡುತ್ತಿದ್ದಾರೆ. ಆದಿ, ಅಂತ್ಯ ಏನೂ ಇಲ್ಲದ ಶಾಶ್ವತವಾಗಿರುವ ಧರ್ಮ ಎನ್ನುವುದು ಸನಾತನದ ಅರ್ಥ. ಸನಾತನ ಧರ್ಮ ಹಾಗೂ ಹಿಂದೂ ಧರ್ಮ ಬೇರೆಬೇರೆಯಲ್ಲ ಎರಡೂ ಒಂದೆ ಎಂದು ಅಣ್ಣಾಮಲೈ ಹೇಳಿದ್ದಾರೆ. ನಾನು ಇತ್ತೀಚೆಗೆ ಒಂದು ವಿಡಿಯೋ ನೋಡುತ್ತಿದ್ದೆ. ಶಾರುಖ್ ಖಾನ್ ತನ್ನ ಪುತ್ರಿಯೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ನೀವೆಲ್ಲರೂ ಕೂಡ ಅದನ್ನು ನೋಡಿದ್ದೀರಿ. ಸನಾತನ ಧರ್ಮದಲ್ಲಿ ಮಾತ್ರವೇ ಇದು ಸಾಧ್ಯ, ಎಲ್ಲಾ ಧರ್ಮದವರನ್ನು ತನ್ನವರೇ ಎಂದು ಕೊಂಡು ಇದು ಹೋಗುತ್ತದೆ ಇದು ನಮ್ಮ ಮಹತ್ವ. ಆದರೆ, ನೀವು ಎಂದಾದರೂ ಮಸೀದಿಗೆ ಹಿಂದುಗಳು ಹೋಗೋದು ಸಾಧ್ಯವೇ ಅನ್ನೋದನ್ನು ನೀವು ಒಮ್ಮೆ ಯೋಚಿಸಿ ನೋಡಿ. ಮಸೀದಿಗೆ ಸರಳವಾಗಿ ಹೋಗೋಕೆ ಆಗುತ್ತಾ? ನೀವು ಹೋಗಿದ್ದೀರಾ? ಇದು ಸಾಧ್ಯವಿಲ್ಲ. ಸನಾತನ ಧರ್ಮದ ಮಹತ್ವ ಏನೆಂದರೆ, ಎಲ್ಲಾ ಧರ್ಮದವರು ಬಂದರೂ ಅವರನ್ನು ತನ್ನೊಳಗೆ ಸೇರಿಸಿಕೊಳ್ಳುವ ಶಕ್ತಿ ಸನಾತನ ಧರ್ಮಕ್ಕೆ ಇದೆ ಎಂದು ಹೇಳಿದ್ದಾರೆ.
ಸನಾತನ ಧರ್ಮ ಎಂದ ಕೂಡಲೇ ಅದಕ್ಕೆ ಅರ್ಥ ಹುಡುಕಲು ಹೋಗಬೇಡಿ. ಹಿಂದೂ ಧರ್ಮವೇ ಸನಾತನ ಧರ್ಮ. ಈಗ ತಾನೆ ನಾನು ದೇವಸ್ಥಾನಕ್ಕೆ ಭೇಟಿ ನೀಡಿ ಬಂದೆ. ಇಲ್ಲಿ ತಲೆತಲೆಮಾರುಗಳಿಂದ ದೇವರನ್ನು ಪೂಜೆ ಮಾಡುತ್ತಿದ್ದವರು ಇದ್ದಾರೆ. ನಾನು ಹೋಗಿ, ಎಲ್ಲರೂ ಸಮಾನ ಇವತ್ತಿನಿಂದ ನಾನು ಪೂಜೆ ಮಾಡ್ತೇನೆ ಎಂದರೆ ಅದು ಸಾಧ್ಯವಾಗೋದಿಲ್ಲ. ಅದು ಅವರ ಕೆಲಸ. ಅದೇ ರೀತಿಯಲ್ಲಿ ಇಲ್ಲಿ ಪೂಜೆ ಮಾಡುತ್ತಿರುವ ವ್ಯಕ್ತಿಗಳು ಬಂದು ನನ್ನ ಹಾಗೆ ವ್ಯವಸಾಯ ಮಾಡಲು ಸಾಧ್ಯವಿಲ್ಲ. ಅದು ಅವರ ಕೆಲಸವಲ್ಲ. ಎಲ್ಲರೂ ಸಮಾನ. ಆದರೆ, ಅವರ ಕೆಲಸ ಅವರವರೇ ಮಾಡಬೇಕು. ಯಾರೋ ಮುಟ್ಟಾಳ ಏನೋ ಹೇಳ್ತಾನೆ ಎಂದರೆ, ಸನಾತನ ಧರ್ಮ ನಿರ್ಮೂಲನೆ ಆಗೋದಿಲ್ಲ. ತಾನೊಬ್ಬ ಹೆಮ್ಮೆಯ ಕ್ರಿಶ್ಚಿಯನ್ ಎಂದು ಹೇಳಿಕೊಳ್ಳುವ ಉದಯನಿಧಿ ಸ್ಟ್ಯಾಲಿನ್‌ಗೆ ಇದು ಅರ್ಥವೂ ಆಗೋದಿಲ್ಲ ಎಂದು ಅಣ್ಣಾಮಲೈ ಹೇಳಿದ್ದಾರೆ.
ನಾನು ಇಲ್ಲಿಂದಲೇ ಡಿಎಂಕೆಗೆ ಒಂದು ಓಪನ್ ಚಾಲೆಂಜ್ ಹಾಕುತ್ತೇನೆ. ಮುಂದಿನ ಚುನಾವಣೆಯಲ್ಲಿ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಸನಾತನ ಧರ್ಮ ನಿಮೂರ್ಲನೆ ಮಾಡುತ್ತೇವೆ ಎನ್ನುವ ಅಂಶ ಸೇರಿಸಲಿ, ಅದೇ ರೀತಿ ಬಿಜೆಪಿ ಸನಾತನ ಧರ್ಮ ರಕ್ಷಣೆ ಮಾಡುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಹಾಕುತ್ತದೆ. ನಮ್ಮ ಜನ ಯಾರಿಗೆ ವೋಟ್ ಹಾಕ್ತಾರೆ ಅನ್ನೋದನ್ನು ನೋಡೋಣವೇ? ಉದಯನಿಧಿ ಸ್ಟ್ಯಾಲಿನ್‌ಗೆ ಇದು ನನ್ನ ಓಪನ್ ಚಾಲೆಂಜ್ ಎಂದು ಹೇಳಿದ್ದಾರೆ.
ತಮಿಳುನಾಡಿನಲ್ಲಿ ಮುಂದುವರಿದ ಸನಾತನ ಸಂಘರ್ಷ, ಮಗನಿಗೆ ಕ್ಲಿನ್‌ಚಿಟ್ ನೀಡಿದ ಸ್ಟ್ಯಾಲಿನ್
ಚುನಾವಣಾ ಸಮಯದಲ್ಲಿ ಡಿಎಂಕೆ ಹಿಂದೂ ಧರ್ಮದ ಬೆಂಬಲಿಗರೆಂದು ಬಿಂಬಿಸಿಕೊಳ್ಳುತ್ತದೆ ಮತ್ತು ಚುನಾವಣೆಗಳು ಮುಗಿದ ನಂತರ ಅದನ್ನು ವಿರೋಧಿಸಲು ಹಿಂತಿರುಗುತ್ತದೆ ಎಂದು ಆರೋಪಿಸಿದ ಅವರು, ತಮಿಳು ಜನರು ಈ ನಾಟಕವನ್ನು ಹಲವು ವರ್ಷಗಳಿಂದ ನೋಡಿದ್ದಾರೆ ಎಂದು ಹೇಳಿದರು. ಸನಾತನ ಧರ್ಮದ ದುಷ್ಪರಿಣಾಮಗಳನ್ನು ತೊಡೆದುಹಾಕಲು ಮತ್ತು ಸಮಾನತೆಯನ್ನು ಉತ್ತೇಜಿಸಲು ಇಲ್ಲಿಗೆ ಬಂದಿದ್ದೇವೆ ಎಂಬ ಡಿಎಂಕೆಯ ಹೇಳಿಕೆಯು "ಸೈತಾನ ವೇದಗಳನ್ನು ಓದುವುದಕ್ಕೆ" ಹೋಲುತ್ತದೆ ಎಂದು ಅವರು ಆರೋಪಿಸಿದರು. ಖ್ಯಾತ ದಲಿತ ನಾಯಕರಾದ ಎಂ.ಸಿ. ರಾಜಾ ಹಾಗೂ ಸತ್ಯಮಣಿ ಮುತ್ತುಈ ಪಕ್ಷಗಳಲ್ಲಿ ದಲಿತ ನಾಯಕರಿಗೆ ಸ್ಥಾನ ಸಿಗದ ಕಾರಣ ಜಸ್ಟೀಸ್ ಪಾರ್ಟಿ ಮತ್ತು ಡಿಎಂಕೆ ತೊರೆದರು. ಜಾತಿ-ಸಂಬಂಧಿತ ಹಿಂಸಾಚಾರದ ಅತ್ಯಧಿಕ ಘಟನೆಗಳಿಗೆ ರಾಜ್ಯ ಸಾಕ್ಷಿಯಾಗಿದೆ ಎಂದು ಅವರು ಆರೋಪಿಸಿದರು.
ಸ್ಟ್ಯಾಲಿನ್, ರಾಜಾ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ, ಚೆನ್ನೈ ಪೊಲೀಸರಿಗೂ ಬಂತು ಕುತ್ತು!