ಎಲ್ಲದಕ್ಕೂ ಸಜ್ಜಾಗೇ ರಾಜಕೀಯ ಪ್ರವೇಶ: ಮುಖಾಮುಖಿ ಸಂದರ್ಶನದಲ್ಲಿ ಯದುವೀರ್ ಒಡೆಯರ್ ಹೇಳಿದಿಷ್ಟು...
ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು. ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟು ಯದುವೀರ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದೇ ತಡ ಕಾಂಗ್ರೆಸ್ ಪಾಳೆಯದಲ್ಲೂ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಮಹೇಂದ್ರ ದೇವನೂರು
ಮೈಸೂರು (ಏ.04): ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಸಾಕಷ್ಟು ಕುತೂಹಲ ಮೂಡಿಸಿರುವುದರಲ್ಲಿ ಮೈಸೂರು ಕ್ಷೇತ್ರ ಪ್ರಮುಖವಾದದ್ದು. ಇದಕ್ಕೆ ಎರಡು ಕಾರಣಗಳು. ಒಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ. ಮತ್ತೊಂದು ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು. ಹಾಲಿ ಸಂಸದ ಪ್ರತಾಪ್ ಸಿಂಹ ಅವರನ್ನು ಕೈಬಿಟ್ಟು ಯದುವೀರ ಅವರನ್ನು ಅಭ್ಯರ್ಥಿಯನ್ನಾಗಿಸಿದ್ದೇ ತಡ ಕಾಂಗ್ರೆಸ್ ಪಾಳೆಯದಲ್ಲೂ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಅಲ್ಲಿನ ಚುನಾವಣಾ ಲೆಕ್ಕಾಚಾರವೇ ಬದಲಾಗಿದೆ. ಈ ಹಿನ್ನೆಲೆಯಲ್ಲಿ ಯದುವೀರ್ ಒಡೆಯರ್ ಅವರು ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾದದ್ದು ಹೀಗೆ..
*ರಾಜವಂಶಸ್ಥರಾಗಿ ರಾಜಕೀಯದಿಂದ ದೂರ ಇದ್ದ ನೀವು ದಿಢೀರ್ ರಾಜಕೀಯ ಪ್ರವೇಶ ಮಾಡಿದ್ದೀರಿ. ಹೇಗೆ ಅನಿಸುತ್ತಿದೆ?
ಒಳ್ಳೆಯ ಅನುಭವ ಆಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಏನು ಕೆಲಸ ಮಾಡಬೇಕು ಎಂಬುದು ಈಗ ಗೊತ್ತಾಗುತ್ತಿದೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಉತ್ಸಾಹದಿಂದ ಜನ ಪಾಲ್ಗೊಳ್ಳುತ್ತಿದ್ದಾರೆ. ಮೈಸೂರು ನಗರ ಮತ್ತು ಗ್ರಾಮೀಣ, ಕೊಡಗು ಜಿಲ್ಲೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಘರ್ ಘರ್ ಗ್ಯಾರಂಟಿ: ಐದು ನ್ಯಾಯ, 25 ಭರವಸೆಗಳು: ಕಾಂಗ್ರೆಸ್ ಅಭಿಯಾನ ಆರಂಭ
*ಈ ಹಿಂದೆ ನೀವು ರಾಜಕೀಯಕ್ಕೆ ಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಿರಲ್ಲ?
ಆ ಸಮಯಕ್ಕೆ ತಕ್ಕಂತೆ ಆಗ ಏನು ಆಸಕ್ತಿ ಇತ್ತೋ ಅದರಂತೆ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದು ನಿಜ. ಈ ಹಿಂದೆ ಸಮಾಜದ ಅನೇಕ ಸೇವಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಸರ್ಕಾರೇತರ ಸಂಸ್ಥೆಗಳ ಜತೆಗೆ ಕೆಲಸ ಮಾಡುತ್ತಿದ್ದೆ. ಈಗ ನನಗೆ ದೊಡ್ಡ ಮಟ್ಟದಲ್ಲಿ ನಿಜವಾದ ನೀತಿ, ನಿಯಮದ ಮೂಲಕ ಬದಲಾವಣೆ ತರಬೇಕಾದರೆ ಮತ್ತು ಸಮಾಜದ ನಿಜವಾದ ಸೇವೆ ಮಾಡಬೇಕಾದರೆ ಅಧಿಕಾರ ಬೇಕು ಅಂತ ಅನ್ನಿಸಿದೆ. ಅಂದರೆ ಸಂಸ್ಥೆಯ ಮೂಲಕ ಸೇವೆಯಲ್ಲ. ಅಧಿಕಾರದ ಮೂಲಕ ಸೇವೆ ಸಲ್ಲಿಸಬೇಕಾದರೆ ರಾಜಕೀಯ ಅನಿವಾರ್ಯ. ಅಧಿಕಾರ ಇದ್ದಾಗ ನೀತಿ-ನಿಯಮಗಳ ರೂಪಿಸಿ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.
*ಅಂದರೆ, ರಾಜಕೀಯ ಪ್ರವೇಶಿಸಲು ಮೊದಲೇ ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡಿದ್ದಿರಿ ಅಂತ ಆಯಿತಲ್ಲವೇ?
ರಾಜಕೀಯ ಪ್ರವೇಶಿಸಬೇಕಾದರೆ ನಮ್ಮದೇ ಆದ ತಳಹದಿ ಇರಬೇಕು. ಈಗ ನಾನು ಈ ವಿಷಯದಲ್ಲಿ ಸಿದ್ಧನಾಗಿದ್ದೇನೆ. ಒಂದು ವರ್ಷದಿಂದ ಸಿದ್ಧತೆ ಮಾಡಿಕೊಂಡಿದ್ದೆ. ಈಗ ಒಂದು ಒಳ್ಳೆ ವಾತಾವರಣ ನಿರ್ಮಾಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿ 2047ಕ್ಕೆ ವಿಕಸಿತ ಭಾರತದ ನಿರ್ಮಾಣ. ಈ ಯೋಜನೆ ಶ್ಲಾಘನೀಯ. ಅದಕ್ಕೆ ನಾನು ಕೂಡ ಕೈ ಜೋಡಿಸುತ್ತೇನೆ.
*ರಾಜ್ಯ ರಾಜಕಾರಣ ಬಿಟ್ಟು ನೇರವಾಗಿ ರಾಷ್ಟ್ರ ರಾಜಕಾರಣವನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ಹಾಗೇನೂ ಇಲ್ಲ. ರಾಜ್ಯ ರಾಜಕಾರಣದಲ್ಲಿಯೂ ಕೆಲಸ ಮಾಡಬಹುದು. ನಮ್ಮ ತಂದೆ (ಶ್ರೀಕಂಠದತ್ತ ನರಸಿಂಹರಾಜ ಒಡೆಯರ್) ಇದೇ ಮಾರ್ಗದಲ್ಲಿ ಮುಂದುವರೆದರು. ಅದು ನಮಗೆ ಒಂದು ರೀತಿಯ ಸ್ಫೂರ್ತಿ. ಈಗ ಲೋಕಸಭಾ ಚುನಾವಣೆಗೆ ಬಿಜೆಪಿಯಿಂದಲೇ ಒತ್ತಾಯ ಮಾಡಿದ್ದರಿಂದ ನಾನು ಒಪ್ಪಿದೆ ಅಷ್ಟೇ.
*ನಿಮ್ಮ ರಾಜಕೀಯ ಪ್ರವೇಶಕ್ಕೆ ಬಿಜೆಪಿಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ? ಬೇರೆ ಪಕ್ಷಗಳೂ ಇದ್ದವಲ್ಲ?
ಎಲ್ಲಾ ಪಕ್ಷಗಳ ಜತೆಗೆ ಬೇರೆ ವಿಷಯಗಳಿಗೆ ಸಂಪರ್ಕ ಇದೆ. ಅರಮನೆ ವತಿಯಿಂದ ಅದು ಸದಾಕಾಲ ಮುಂದುವರೆಯಲಿದೆ. ವ್ಯಕ್ತಿ ಮತ್ತು ಪಕ್ಷದಲ್ಲಿನ ನಂಬಿಕೆ, ಸಿದ್ಧಾಂತ, ದೃಷ್ಟಿಕೋನ, ದೇಶದ ಬಗ್ಗೆ ಅವರ ದೃಷ್ಟಿಕೋನ, ಅಭಿವೃದ್ಧಿ ಹೇಗೆ ಮಾಡುತ್ತಾರೆ? ಯಾವ ಯೋಜನೆ ಹೊಂದಿದ್ದಾರೆ ಎಂಬುದೆಲ್ಲ ಮುಖ್ಯವಾಗುತ್ತದೆ. ನನ್ನ ಸಿದ್ಧಾಂತ, ನನ್ನ ನಂಬಿಕೆ, ನನ್ನ ಅಭಿವೃದ್ಧಿಯ ಕಲ್ಪನೆಗೆ ಬಿಜೆಪಿ ಹೊಂದಾಣಿಕೆ ಆಯಿತು. ಹೀಗಾಗಿ ನಾನು ಬಿಜೆಪಿ ಪಕ್ಷವನ್ನು ಆಯ್ಕೆ ಮಾಡಿದೆ.
*ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ನೀವು ಬಿಜೆಪಿಯಿಂದ ಸ್ಪರ್ಧಿಸಿದ್ದೀರಿ. ಹೊಂದಾಣಿಕೆ ಹೇಗೆ ಸಾಗಿದೆ?
ಜೆಡಿಎಸ್ ಜೊತೆಗಿನ ಹೊಂದಾಣಿಕೆ ಧನಾತ್ಮಕವಾಗಿದೆ. ಎಲ್ಲವೂ ಪ್ಲಸ್ ಪಾಯಿಂಟ್ ಆಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಸಭೆಯಲ್ಲಿ ಪಾಲ್ಗೊಂಡು ಹೊಂದಾಣಿಕೆಯಿಂದ ಕೆಲಸ ಮಾಡುತ್ತಿದ್ದಾರೆ.
*ನಿಮ್ಮ ಈ ರಾಜಕೀಯ ಜೀವನಕ್ಕೆ ಯಾರು ಸ್ಫೂರ್ತಿ?
ಪ್ರಧಾನಿ ನರೇಂದ್ರ ಮೋದಿ ಅವರೇ ಸ್ಫೂರ್ತಿ. ಹಲವು ಕೇಂದ್ರದ ನಾಯಕರ ಪ್ರೇರಣೆ ಇದೆ. ಮೈಸೂರಿನ ಸ್ಥಳೀಯ ನಾಯಕರ ಸಲಹೆಯನ್ನೂ ಪಡೆಯುತ್ತೇನೆ. ಕೆಲವು ಕೌಶಲ್ಯಗಳನ್ನು ನಾನು ಅಭಿವೃದ್ಧಿಪಡಿಸಿಕೊಂಡು ಅಳವಡಿಸಿಕೊಂಡು ಮುನ್ನಡೆಯುತ್ತೇನೆ.
*ಹಾಲಿ ಸಂಸದ ಪ್ರತಾಪ್ ಸಿಂಹ ಅವರ ಟಿಕೆಟ್ ತಪ್ಪಿಸಿ ನಿಮಗೆ ನೀಡಲಾಗಿದೆ. ಇರುಸುಮುರುಸು ಆಗುತ್ತಿಲ್ಲವೇ?
ನಾನೇ ಅಭ್ಯರ್ಥಿ ಎಂಬ ಸೂಚನೆ ಬಂದ ತಕ್ಷಣ ಪ್ರತಾಪ್ ಸಿಂಹ ಅವರು ನನಗೆ ಕರೆ ಮಾಡಿ ಎಲ್ಲ ರೀತಿಯ ಸಹಕಾರ ಇದೆ ಎಂದು ಹೇಳಿದರು. ಅವರ ಬಗ್ಗೆ ನನಗೆ ವಿಶ್ವಾಸವಿದೆ.
*ನೀವು ಇಷ್ಟು ವರ್ಷಗಳ ಕಾಲ ಸುಖದ ಸುಪ್ಪತ್ತಿಗೆಯಲ್ಲಿ ಇದ್ದವರು. ರಾಜಕೀಯ ಹಾಗಲ್ಲ. ಇಲ್ಲಿ ಎದುರಾಳಿಗಳನ್ನು ಹೇಗೆ ಎದುರಿಸುವಿರಿ?
ಎಲ್ಲದಕ್ಕೂ ಸಿದ್ಧನಾಗಿಯೇ ರಾಜಕೀಯ ಪ್ರವೇಶಿಸಿದ್ದೇನೆ. ಎಲ್ಲವನ್ನೂ ಎದುರಿಸುತ್ತೇನೆ.
*ನಿಮ್ಮ ಮೈಸೂರು ಅರಮನೆಯ ಆಸ್ತಿ ರಕ್ಷಣೆಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೀರಿ ಎಂಬ ಟೀಕೆ ಕೇಳಿಬಂದಿದೆಯಲ್ಲ?
ನೋಡಿ, ನಮ್ಮ ಆಸ್ತಿ ವಿಚಾರಕ್ಕೂ ನನ್ನ ರಾಜಕೀಯ ಪ್ರವೇಶಕ್ಕೂ ಸಂಬಂಧವೇ ಇಲ್ಲ. ಆಸ್ತಿ ವಿಚಾರ ಕುರಿತಂತೆ ಕಾನೂನಾತ್ಮಕ ಹೋರಾಟ ಮುಂದುವರೆಯುತ್ತದೆ. ಅದರ ಬಗ್ಗೆ ನ್ಯಾಯಾಲಯ ತೀರ್ಮಾನ ಮಾಡುತ್ತದೆ.
*ಸಾರ್ವಜನಿಕ ಜೀವನಕ್ಕೂ, ಖಾಸಗಿ ಜೀವನಕ್ಕೂ ವ್ಯತ್ಯಾಸ ಕಾಣುತ್ತಿದೆಯೇ?
ಒಂದು ರೀತಿ ವ್ಯತ್ಯಾಸವಿದೆ. ಖಾಸಗಿ ಜೀವನ ನಡೆಸುವಾಗಲೂ ಜನ ನೋಡುತ್ತಿದ್ದರು. ಅರಮನೆ ಬಗ್ಗೆ ಕುತೂಹಲ ಇತ್ತು. ಅದರಲ್ಲಿ ಸ್ವಲ್ಪ ಎಕ್ಸ್‌ಪೋಸರ್ ಇತ್ತು. ಈಗ ಸಾರ್ವಜನಿಕ ಜೀವನದಲ್ಲಿ ಇರುವುದರಿಂದ ಏನೇ ಕೆಲಸ ಮಾಡಿದರೂ ಆನಂದ ಸಿಗಬೇಕಿದೆ. ಕಳೆದ 20 ದಿನಗಳಿಂದ ಜನರ ಭೇಟಿ ಮಾಡುತ್ತಿದ್ದೇನೆ. ಅವರು ಕಷ್ಟ ಸುಖ ಹಂಚಿಕೊಳ್ಳುತ್ತಿದ್ದಾರೆ. ನನಗೂ ಇದು ಹೊಸ ರೀತಿಯ ಅನುಭವ. ಇದೆಲ್ಲವೂ ಮುಂದಿನ ಕೆಲಸಕ್ಕೆ ಸ್ಪೂರ್ತಿ ಮತ್ತು ಶಕ್ತಿ ತುಂಬುತ್ತಿದೆ.
*ರಾಜಮನೆತನದ ಪ್ರತಿನಿಧಿಯಾಗಿ ನೋಡುವುದು ಬೇರೆ. ರಾಜಕೀಯಕ್ಕೆ ಬಂದಾಗ ನಿರೀಕ್ಷೆಗಳು ಬೆಟ್ಟದಷ್ಟಿರುತ್ತವೆ ಅಲ್ಲವೇ?
ಕಾಯಕವೇ ಕೈಲಾಸ ತತ್ವ ಈ ನೆಲದಲ್ಲಿ ಹುಟ್ಟಿದೆ. ಚಿಕ್ಕ ವಯಸ್ಸಿನಿಂದ ಈ ತತ್ವಗಳನ್ನು ಕೇಳಿಕೊಂಡು ಬೆಳೆದಿದ್ದೇವೆ. ಈ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗುತ್ತೇನೆ.
*ಬಿಜೆಪಿಯ ಹಿಂದುತ್ವ ಸಿದ್ಧಾಂತ ಮತ್ತು ಮೈಸೂರು ಭಾವೈಕ್ಯತೆಯ ಪರಂಪರೆ. ಎರಡನ್ನೂ ಹೇಗೆ ಒಟ್ಟಾಗಿ ಮುನ್ನಡೆಸುವಿರಿ?
ಅರಮನೆಗೆ ಇದು ಹೊಸದೇನಲ್ಲ. ನಮ್ಮ ತಾತ ವಿಎಚ್‌ಪಿ ಸ್ಥಾಪಕ ಅಧ್ಯಕ್ಷರಾಗಿದ್ದರು. ಕೆಲವು ತತ್ವಗಳು ಹಾಗೂ ಸಂಸ್ಥೆ ಹೇಗೆ ಮುಂದುವರೆಸಬೇಕು ಎಂದು ಆ ಕಾಲದಲ್ಲಿ ನಿರ್ಧಾರ ಮಾಡಿದ್ದರು. ಸಂಘ-ಪರಿವಾರ ನಮಗೆ ಹೊಸದಲ್ಲ. ನಾನು ಸಂಘ-ಪರಿವಾರದ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದೇನೆ. ಸಂಘದ ಸಿದ್ಧಾಂತ ಬಹಳ ಶ್ರೇಷ್ಠವಾದದ್ದು. ಎಲ್ಲರನ್ನೂ ಒಂದೇ ದೃಷ್ಟಿಕೋನದಲ್ಲಿ ನೋಡುತ್ತೇವೆ.
ಮೋದಿ ವರ್ಸಸ್ ಯಾರು ಎಂಬ ಪ್ರಶ್ನೆಯೇ ಅಪ್ರಸ್ತುತ: ಶಶಿ ತರೂರ್
*ನೀವು ಸಂಸದರಾಗಿ ಆಯ್ಕೆಯಾದಲ್ಲಿ ಕ್ಷೇತ್ರ ಅಥವಾ ಮೈಸೂರು-ಕೊಡಗು ಜಿಲ್ಲೆಗಳ ಅಭಿವೃದ್ಧಿ ಬಗ್ಗೆ ಏನಾದರೂ ಪರಿಕಲ್ಪನೆ ಹೊಂದಿದ್ದೀರಾ?
ಎರಡೂ ಜಿಲ್ಲೆಗಳು ಪರಂಪರೆಯ ಜಿಲ್ಲೆಗಳು ಎಂಬುದು ಹೆಮ್ಮೆಯ ವಿಷಯ. ಆದ್ದರಿಂದ ಮೈಸೂರು ಮೈಸೂರಾಗಿಯೇ ಉಳಿಯಬೇಕು, ಕೊಡಗು ಕೊಡಗಾಗಿಯೇ ಉಳಿಯಬೇಕು. ಪ್ರವಾಸೋದ್ಯಮ ಅವಕಾಶ ಎರಡೂ ಜಿಲ್ಲೆಯಲ್ಲಿದೆ. ಬೇಕಾದಷ್ಟು ಅಭಿವೃದ್ಧಿ ಆಗಬೇಕಿದೆ. ದಕ್ಷಿಣ ಭಾರತದಲ್ಲಿ ಸಾಂಸ್ಕೃತಿಕ ರಾಜಧಾನಿ ಮೈಸೂರು, ಕೊಡಗು ಪ್ರಕೃತಿಯ ಮಡಿಲು. ಪ್ರಕೃತಿಯ ರಕ್ಷಣೆಯ ಜತೆಗೆ ಅಭಿವೃದ್ಧಿ ಕೂಡ ಆಗಬೇಕು. ಇಲ್ಲಿ ಸುಸ್ಥಿರ ಅಭಿವೃದ್ಧಿ ಆಗಬೇಕು. ಅಂದರೆ, ಅಭಿವೃದ್ಧಿ ಎಂಬುದು ಪಾರಂಪರಿಕ ಕಾಳಜಿ ಮತ್ತು ಪ್ರಕೃತಿಯ ಮೇಲಿನ ಕಾಳಜಿಯೊಂದಿಗೆ ಇರಬೇಕು. ಅಭಿವೃದ್ಧಿ ಹೆಸರಲ್ಲಿ ಅಭಿವೃದ್ಧಿ ಮಾಡುವುದು ಬೇಕಿಲ್ಲ. ಎಲ್ಲಿ ನಿಜವಾದ ಸೇವೆ ಮತ್ತು ಜನರಿಗೆ ಅನುಕೂಲವಾಗುತ್ತದೆಯೋ ಅಲ್ಲಿ ಸೇವೆ ಆಗಬೇಕು.
*ಮತದಾರರು ಯದುವೀರ ಅವರಿಗೇ ಯಾಕೆ ಮತ ಹಾಕಬೇಕು?
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕೆಲಸದ ಮೂಲಕ ಭದ್ರ ಬುನಾದಿ ಹಾಕಿದ್ದಾರೆ. ಶ್ರೇಷ್ಠ ಭಾರತ ನಿರ್ಮಾಣದ ಗುರಿ ಹೊಂದಿದ್ದಾರೆ. ರೈಲ್ವೆ, ವಿಮಾನಯಾನ, ಉತ್ತಮ ರಸ್ತೆ ನಿರ್ಮಿಸಿದ್ದಾರೆ. ಕೇವಲ ಉದ್ಯೋಗ ಸೃಷ್ಟಿ ಮಾತ್ರವಲ್ಲದೆ ಉದ್ಯೋಗದಾತರನ್ನಾಗಿಸಲು ಕೈಗೊಂಡಿರುವ ಯೋಜನೆಯಾದ ಸ್ಟ್ಯಾಂಡಪ್, ಸ್ಟಾರ್ಟ್ ಅಪ್ ಇಂಡಿಯಾ ಪ್ರಮುಖವಾದದ್ದು. ಇದಕ್ಕೂ ಹೆಚ್ಚಾಗಿ ಆರ್ಥಿಕ ಪ್ರಗತಿ ಆಗುತ್ತಿದೆ. ಶ್ರೇಷ್ಠ ಭಾರತಕ್ಕಾಗಿ, ವಿಕಸಿತ ಭಾರತಕ್ಕಾಗಿ ಮತ ಚಲಾಯಿಸಬೇಕಿದೆ. ಮೈಸೂರು- ಕೊಡಗು ಜನಾಂಗದಲ್ಲಿ ಇದೊಂದು ಸೇತುವೆಯಂತೆ ಮುಂದುವರೆದು, ಪ್ರಧಾನಿಗೆ ನೆರವಾಗುವುದಕ್ಕಾಗಿ ನನಗೆ ಮತ ನೀಡಿ ಬೆಂಬಲಿಸಬೇಕು.