ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವೂ ಬೇಡ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ, ಸಿದ್ದರಾಮಯ್ಯ ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ಶೂನ್ಯ’ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.
ಬೆಂಗಳೂರು (ನ.26): ‘ಐದು ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಲಿದ್ದಾರೆ. ಇದರಲ್ಲಿ ಯಾವುದೇ ಸಂಶಯವೂ ಬೇಡ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ, ಸಿದ್ದರಾಮಯ್ಯ ಇಲ್ಲದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್ ದೊಡ್ಡ ಶೂನ್ಯ’ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಅಲ್ಲದೆ, ‘ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಸಾಕಾಗಿದ್ದರೆ ಡಾ। ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿ. ದಲಿತರು ಮುಖ್ಯಮಂತ್ರಿ ಆಗಲಿ.
ಅವರು ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಪಕ್ಷಕ್ಕೆ ಸೇವೆ ಸಲ್ಲಿಸಿರುವ ವಿಚಾರ ಬಂದರೆ ಪರಮೇಶ್ವರ್ ಅವರು ಡಿ.ಕೆ.ಶಿವಕುಮಾರ್‌ಗಿಂತ ಹೆಚ್ಚು ಸೇವೆ ಸಲ್ಲಿಸಿದ್ದು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ’ ಎಂದು ಹೇಳಿದ್ದಾರೆ. ಪಕ್ಷದಲ್ಲಿ ಅಧಿಕಾರ ಹಸ್ತಾಂತರದ ಬೆಳವಣಿಗೆ ನಡೆಯುತ್ತಿರುವ ಬೆನ್ನಲ್ಲೇ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ‘ರಾಜ್ಯದಲ್ಲಿ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನ ಪಕ್ಷದಲ್ಲಿ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿದರು.
ವೀರೇಂದ್ರ ಪಪ್ಪಿ, ವಿನಯ್ ಕುಲಕರ್ಣಿ ಜೈಲಿಗೆ ಹೋಗಿ ಎಷ್ಟು ದಿನ ಆಯಿತು? ಇಷ್ಟು ದಿನಕ್ಕೆ ನೆನಪಾಯಿತೇ? ಇದು ಸಹಿ ಸಂಗ್ರಹ ಅಲ್ಲದೆ ಮತ್ತೇನು? ಇದು ಹೈಕಮಾಂಡ್‌ಗೆ ಹಾಗೂ ಶಾಸಕಾಂಗ ಪಕ್ಷಕ್ಕೆ ಮಾಡುವ ಅವಮಾನ ಎಂದು ಹೇಳಿದರು. ಈಗ ನಡೆಯುತ್ತಿರುವ ಬೆಳವಣಿಗೆಗಳು ಪಕ್ಷಕ್ಕೆ ಹಾನಿ ಉಂಟು ಮಾಡಲಿವೆ. ಹೀಗಾಗಿ ಹೈಕಮಾಂಡ್ ಕೂಡಲೇ ಮಧ್ಯಪ್ರವೇಶ ಮಾಡಿ ಗೊಂದಲ ಬಗೆಹರಿಸಬೇಕು ಎಂದು ಹೇಳಿದ್ದಾರೆ.
ಅಧಿಕಾರ ಹಂಚಿಕೆ ಬಗ್ಗೆ ಹೈಕಮಾಂಡ್ ಹೇಳಿಲ್ಲ: ರಾಜ್ಯದಲ್ಲಿ ಸಿದ್ದರಾಮಯ್ಯ ಇಲ್ಲದೆ ಚುನಾವಣೆ ಎದುರಿಸುವುದು ಕಷ್ಟ. 2023ರ ಮೇ 18 ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿಕೆ ನೀಡಿರುವ ಪತ್ರ ಈಗಲೂ ಇದೆ. ಅದರಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಹೇಳಿಲ್ಲ. ಸುದ್ದಿಗಾರರ ಪ್ರಶ್ನಿಸಿದಾಗಲೂ ಯಾವುದೇ ಅಧಿಕಾರ ಹಂಚಿಕೆ ಇಲ್ಲ. ನಮ್ಮ ಅಧಿಕಾರ ಹಂಚಿಕೆ ಜನರೊಂದಿಗೆ ಮಾತ್ರ ಎಂದು ಕೆ.ಸಿ.ವೇಣುಗೋಪಾಲ್ ಹೇಳಿದ್ದರು ಎಂದು ರಾಜಣ್ಣ ಹೇಳಿದ್ದಾರೆ.
ಡಿಕೆಶಿ ಸರ್ಕಾರ ವಿಸರ್ಜಿಸಿ ಗೆದ್ದು ಸಿಎಂ ಆಗಲಿ
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲಿ ಎಂದು ಜನ ಮತ ಹಾಕಿದ್ದಾರೆ. ಅದಕ್ಕೆ ಅಪಚಾರ ಆಗಬಾರದು. ತಕ್ಷಣಕ್ಕೆ ನಾನು ಮುಖ್ಯಮಂತ್ರಿ ಆಗಬೇಕೆಂದರೆ ಸರ್ಕಾರ ವಿಸರ್ಜಿಸಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಗೆಲ್ಲಲಿ. ಆಗ ಗೆದ್ದು ಮುಖ್ಯಮಂತ್ರಿ ಆಗಲಿ ಎಂದು ರಾಜಣ್ಣ ಸವಾಲು ಹಾಕಿದ್ದಾರೆ.


