ನನಗೆ ಎಂಎಲ್‌ಸಿ ಸ್ಥಾನದ ಆಫರ್ ಇತ್ತು. ಅದನ್ನೆ ತಿರಸ್ಕರಿಸಿದ್ದೇನೆ. ಯಾವುದೇ ಸ್ಥಾನಮಾನಕ್ಕೆ ಆಸೆ ಪಟ್ಟು ನಾನು ಬಿಜೆಪಿಗೆ ಬಂದಿಲ್ಲ. ಲಾಭಿ ಮಾಡುವ ಅಭ್ಯಾಸ ನಮ್ಮ ಕುಟುಂಬದಲ್ಲೇ ಇಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಕೆ.ಎಂ.ದೊಡ್ಡಿ (ನ.26): ಹಿಂದೆ ಪಕ್ಷೇತರಳಾಗಿ ಸಂಸತ್ ಚುನಾವಣೆಗೆ ಸ್ಪರ್ಧೆ ಮಾಡಿದ್ದ ವೇಳೆ ನನಗೆ ಎಂಎಲ್‌ಸಿ ಸ್ಥಾನದ ಆಫರ್ ಇತ್ತು. ಅದನ್ನೆ ತಿರಸ್ಕರಿಸಿದ್ದೇನೆ. ಯಾವುದೇ ಸ್ಥಾನಮಾನಕ್ಕೆ ಆಸೆ ಪಟ್ಟು ನಾನು ಬಿಜೆಪಿಗೆ ಬಂದಿಲ್ಲ. ಲಾಭಿ ಮಾಡುವ ಅಭ್ಯಾಸ ನಮ್ಮ ಕುಟುಂಬದಲ್ಲೇ ಇಲ್ಲ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಬಿಜೆಪಿಯಲ್ಲಿ ಸೈಡ್ ಲೈನ್ ಆಗಿರುವ ವಿಚಾರವಾಗಿ ದೊಡ್ಡರಸಿನಕೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಬಿಜೆಪಿಗೆ ಸೇರಿರೋದು ಪಕ್ಷದ ಮೌಲ್ಯಗಳು, ಪ್ರಧಾನಿ ಮೋದಿ ಅವರ ಮೇಲಿನ ವಿಶ್ವಾಸ ಹಾಗೂ ಅವರ ನಾಯಕತ್ವದಲ್ಲಿ ದೇಶ ಇಷ್ಟೊಂದು ಅಭಿವೃದ್ಧಿಯಾಗುತ್ತಿರುವುದನ್ನು ನೋಡಿ ಎಂದು ಸ್ಪಷ್ಟಪಡಿಸಿದರು. ಕೆಲವರು ಲಾಭಿ ಮಾಡಿ ಅಧಿಕಾರ ಪಡೆಯುತ್ತಾರೆ. ನನಗೆ ಎಲ್ಲಿಯೂ ಹೋಗಿ ಅವಕಾಶಕ್ಕಾಗಿ ಲಾಭಿ ಮಾಡುವ ಅಭ್ಯಾಸವಿಲ್ಲ. ಬಿಜೆಪಿ ನನ್ನನ್ನು ಗುರುತಿಸಿ ಮುಂದಿನ ದಿನಗಳಲ್ಲಿ ನನಗೆ ಸೂಕ್ತ ಸ್ಥಾನ ಕೊಡುತ್ತದೆ. ನಮಗೂ ಸಮಯ ಬಂದಾಗ ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ವಿಧಾನಸಭೆ ಎಲೆಕ್ಷನ್‌ಗೆ ನಾನು/ ಅಭಿ ಸ್ಪರ್ಧೆ ಪಕ್ಕಾ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನ್ನ ಸ್ಪರ್ಧೆ ಖಚಿತ. ಅದು ಯಾವ ಕ್ಷೇತ್ರ ಎನ್ನುವುದನ್ನು ಬಿಜೆಪಿ ವರಿಷ್ಠರು ತೀರ್ಮಾನ ಮಾಡುತ್ತಾರೆ. ಆದರೆ, ಮದ್ದೂರು ಕ್ಷೇತ್ರ ನನ್ನ ಪ್ರಥಮ ಆಯ್ಕೆಯಾಗಿದೆ. ನಾನು ಅಥವಾ ಪುತ್ರ ಅಭಿಷೇಕ್ ಪೈಕಿ ಯಾರೇ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದರೂ ಅದು ಮದ್ದೂರಿನಿಂದಲೇ ಎಂದು ಮಾಜಿ ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2018ರ ಲೋಕಸಭಾ ಚುನಾವಣೆಯಲ್ಲಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದೆ. ಈಗ ನಾನು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಹೀಗಾಗಿ ಚುನಾವಣೆ ವೇಳೆ ನನ್ನ ಸ್ಪರ್ಧೆ ಬಗ್ಗೆ ಪಕ್ಷದ ನಾಯಕರು ಕೈಗೊಳ್ಳುವ ತೀರ್ಮಾನದ ಮೇಲೆ ನಾನು ನಿರ್ಧಾರ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದಲೇ ಸ್ಪರ್ಧೆಗಿಳಿಯುವಂತೆ ಬಿಜೆಪಿ ನಾಯಕರು ಆಹ್ವಾನ ನೀಡಿದ್ದರು. ಆದರೆ, ಆಗ ರಾಜ್ಯ ರಾಜಕಾರಣಕ್ಕೆ ಬರುವ ಮನಸ್ಸು ಇಲ್ಲ ಎಂದು ಇಂಗಿತ ವ್ಯಕ್ತಪಡಿಸಿದ್ದೆ. ಮದ್ದೂರು ನನ್ನ ಪತಿ ಅಂಬರೀಷ್ ಅವರ ಕರ್ಮಭೂಮಿಯಾಗಿದೆ. ಹೀಗಾಗಿ ನಾನು ಅಥವಾ ಪುತ್ರ ಅಭಿಷೇಕ್ ಅಂಬರೀಷ್ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದು ಅಂಬಿ ಅಭಿಮಾನಿಗಳ ಅಪೇಕ್ಷೆಯಾಗಿದೆ. ನಮ್ಮಿಬ್ಬರಲ್ಲಿ ಒಬ್ಬರು ಸ್ಪರ್ಧೆಗಿಳಿದರೆ ಅದು ಈ ಕ್ಷೇತ್ರದಿಂದಲೇ ಮಾತ್ರ ಎಂದರು.


