ರಾಜಣ್ಣ ವಿರುದ್ಧ ಯಾರೂ ಷಡ್ಯಂತ್ರ, ಪಿತೂರಿ ನಡೆಸಿಲ್ಲ. ನನಗೆ ತಿಳಿದಂತೆ ರಾಜಣ್ಣ ವಜಾಗೂ ಉಪಮುಖ್ಯಮಂತ್ರಿಗಳಿಗೆ ಯಾವುದೇ ಸಂಬಂಧವಲ್ಲ. ಹೈಕಮಾಂಡ್‌ ತೀರ್ಮಾನ ಮಾಡಿದ ಮೇಲೆ ತಲೆಬಾಗಬೇಕು.

ಬೆಂಗಳೂರು (ಸೆ.04): ‘ಕೆ.ಎನ್‌. ರಾಜಣ್ಣ ವಿರುದ್ಧ ಯಾರೂ ಷಡ್ಯಂತ್ರ, ಪಿತೂರಿ ನಡೆಸಿಲ್ಲ. ಅವರೇ ಹೈಕಮಾಂಡ್‌ ವಿರುದ್ಧ ಮಾತನಾಡಿ ಕ್ರಮಕ್ಕೆ ಗುರಿಯಾಗಿದ್ದಾರೆ. ಹೈಕಮಾಂಡ್‌ ನಿರ್ಧಾರಕ್ಕೆ ತಲೆಬಾಗದೆ ಹೈಕಮಾಂಡ್‌ ವಿರುದ್ಧವೇ ಸಡ್ಡು ಹೊಡೆಯಲು ಹೊರಟಿರುವುದು ಸರಿಯಲ್ಲ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಕೆ.ಎನ್‌ ರಾಜಣ್ಣ ಅವರಿಗೆ ತಿರುಗೇಟು ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜಣ್ಣ ಅವರು ಯಾವುದಕ್ಕೆ ಯಾವುದೋ ಸಂಬಂಧ ಕಲ್ಪಿಸಬಾರದು. ಹೈಕಮಾಂಡ್‌ ವಿರುದ್ಧ ಮಾತನಾಡಿದ್ದಕ್ಕೆ ಹೈಕಮಾಂಡ್‌ ಸೂಚನೆ ನೀಡಿ ಸಂಪುಟದಿಂದ ವಜಾಗೊಳಿಸಿದೆ. ಇದಕ್ಕೆ ಡಿ.ಕೆ. ಶಿವಕುಮಾರ್ ಕಾರಣ ಎಂಬಂತೆ ಪರೋಕ್ಷವಾಗಿ ಅವರ ವಿರುದ್ಧ ಗೂಬೆಕೂರಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಾನು ಮಾತನಾಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಜಣ್ಣ ವಿರುದ್ಧ ಯಾರೂ ಷಡ್ಯಂತ್ರ, ಪಿತೂರಿ ನಡೆಸಿಲ್ಲ. ನನಗೆ ತಿಳಿದಂತೆ ರಾಜಣ್ಣ ವಜಾಗೂ ಉಪಮುಖ್ಯಮಂತ್ರಿಗಳಿಗೆ ಯಾವುದೇ ಸಂಬಂಧವಲ್ಲ. ಹೈಕಮಾಂಡ್‌ ತೀರ್ಮಾನ ಮಾಡಿದ ಮೇಲೆ ತಲೆಬಾಗಬೇಕು. ಅದನ್ನು ಬಿಟ್ಟು ಹೈಕಮಾಂಡ್‌ ವಿರುದ್ಧ ಸೆಡ್ಡು ಹೊಡೆಯತ್ತೇನೆ. ದೆಹಲಿಗೆ ಹೋಗಿ ಜನಜಾತ್ರೆ ಮಾಡುತ್ತೇನೆ ಎನ್ನುವುದು ಸರಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಜತೆಗೆ ಆರ್‌ಎಸ್‌ಎಸ್‌ ಗೀತೆ ಹಾಡಿದವರ ಮೇಲೆ ಕ್ರಮವಿಲ್ಲ ನಮ್ಮ ಮೇಲೆ ಯಾಕೆ? ಎಂದು ಹೋಲಿಕೆ ಮಾಡಿ ಮಾತನಾಡುತ್ತಾರೆ. ಆರ್‌ಎಸ್‌ಎಸ್‌ಗೆ ಗೀತೆಗೆ ಸ್ಪಷ್ಟೀಕರಣ ನೀಡಿ ಕ್ಷಮೆ ಕೋರಿದ್ದಾರೆ. ಕ್ಷಮೆ ಕೋರಿದ ಮೇಲೆ ಇತಿಶ್ರೀ ಹಾಡಬೇಕು. ಜತೆಗೆ ಸಿದ್ದರಾಮಯ್ಯ ಅವರ ಪರ ಇರುವುದಕ್ಕೆ ಷಡ್ಯಂತ್ರ ಎನ್ನುತ್ತಾರೆ. ನಾವೂ ಕೂಡ ಸಿದ್ದರಾಮಯ್ಯ ಅವರ ಶಿಷ್ಯರೇ. ಇವರ ತಪ್ಪಿಗೆ ಅವರ ಹೆಸರು ಬಳಸಿಕೊಳ್ಳುವುದು ಸರಿಯಲ್ಲ ಎಂದರು.