ನಮ್ಮ ಸರ್ಕಾರ ನೀಡಿರುವ ಶಕ್ತಿ ಯೋಜನೆಯಡಿ ಪುಗ್ಸಟ್ಟೆ ಓಡಾಡುವ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ಕೊಡಲಿಲ್ಲ. ಇದರಿಂದಾಗಿ ಲೋಕಸಭೆಯಲ್ಲಿ ನಮಗೆ ಹಿನ್ನೆಡೆಯಾಯಿತು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಮಧುಗಿರಿ (ನ.16): ನಮ್ಮ ಸರ್ಕಾರ ನೀಡಿರುವ ಶಕ್ತಿ ಯೋಜನೆಯಡಿ ಪುಗ್ಸಟ್ಟೆ ಓಡಾಡುವ ಮಹಿಳೆಯರು ಲೋಕಸಭಾ ಚುನಾವಣೆಯಲ್ಲಿ ನಮಗೆ ಮತ ಕೊಡಲಿಲ್ಲ. ಇದರಿಂದಾಗಿ ಲೋಕಸಭೆಯಲ್ಲಿ ನಮಗೆ ಹಿನ್ನೆಡೆಯಾಯಿತು ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು. ತುಮಕೂರು ಜಿಲ್ಲೆಯ ಮಧಿಗಿರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, 1-2 ಲಕ್ಷ ವೇತನ ಪಡೆಯುವ ಮಹಿಳೆಯರು ಫ್ರೀ ಬಸ್‌ಲ್ಲಿ ಓಡಾಡುತ್ತಾರೆ. ಆದರೆ ಕಾಂಗ್ರೆಸ್‌ಗೆ ಮಾತ್ರ ಮತ ಹಾಕಲ್ಲ. ಈ ಹಿಂದೆ ಬಿಜೆಪಿ ಹಿಂದೂ-ಮುಸ್ಲಿಂ ಎಂದು ಚುನಾವಣೆ ಮಾಡಿತ್ತು. ಬಿಹಾರದಲ್ಲಿ ಅದರ ಪ್ಯಾಟರ್ನ್ ಬದಲಾಗಿದೆ. ಮಹಿಳೆಯರು ಮತ್ತು ಯುವಕರು ಎಂಬಂತಾಗಿದೆ. ಹಾಗಾಗಿ ಮಹಿಳೆಯರಿಗೆ ಚುನಾವಣೆ ಮುಂಚೆಯೇ ₹10000 ಕೊಟ್ಟು ಅಧಿಕ ಸ್ಥಾನ ಗೆದ್ದಿದ್ದಾರೆ ಎಂದು ಟೀಕಿಸಿದರು.
ಗುಣಮಟ್ಟದ ರಸ್ತೆಯಿದ್ದರೆ ಎಲ್ಲ ಗ್ರಾಮಕ್ಕೆ ಬಸ್
ತಾಲೂಕಿನ 21 ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸಲು ಶಾಸಕರು ಕೇಳಿದ್ದು, ಗುಣ ಮಟ್ಟದ ರಸ್ತೆಗಳಿದ್ದರೆ ಎಲ್ಲ ಗ್ರಾಮಗಳಿಗೂ ಬಸ್ ಓಡಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು. ಪಟ್ಟಣದ ಹಿಂದೂಪುರ ರಸ್ತೆಯ ಪಾಳ್ಯದಳ್ಳಿಯಲ್ಲಿ ಶನಿವಾರ ಸಾರಿಗೆ ಇಲಾಖೆ ಮತ್ತು ರೇಷ್ಮೆ ಇಲಾಖೆಯ ಸಹಯೋಗದೊಂದಿಗೆ ಸುಮಾರು 11.50 ಕೋಟಿ ರು.ವೆಚ್ಚದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ನೂತನ ಕಟ್ಟಡ ಹಾಗೂ ಸ್ವಯಂ ಚಾಲಿತ ವಾಹನ ಚಾಲನಾ ಪರೀಕ್ಷಾ ಪಥ ಹಾಗೂ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಧುಗಿರಿಯಲ್ಲಿ ಶಾಸಕ ಕೆ.ಎನ್.ರಾಜಣ್ಣ ಅವರ ಇಚ್ಚಾಶಕ್ತಿಯಿಂದಾಗಿ ಡಿಪೋ, ಎಆರ್‌ಟಿಓ ಕಚೇರಿ ಪ್ರಾರಂಭಿಸಿದ್ದು, ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿರುವ ಸಾರಿಗೆ ಕಚೇರಿಗೆ ಸ್ವಂತ ಕಟ್ಟಡ ಕಟ್ಟಲು ಇಂದು 11.50 ಕೋಟಿ ರು.ವೆಚ್ಚದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ರಾಜ್ಯದಲ್ಲಿ 5800 ಬಸ್ ಖರೀದಿಸಿದ್ದು, 9 ಸಾವಿರ ನೌಕರರನ್ನು ನೇಮಿಸಿದ್ದು ಈ ಪೈಕಿ ಅನುಕಂಪದ ಆಧಾರದ ಮೇಲೆ 1 ಸಾವಿರ ನೌಕರಿ ನೀಡಿದ್ದೇವೆ. ಪ್ರಸ್ತುತ 2 ಸಾವಿರ ಬಸ್ ಖರೀದಿಸಲು ಸಿಎಂ ಅನುಮೋದನೆ ನೀಡಿದ್ದು, ಇದರಲ್ಲಿ 500 ಬಸ್‌ಗಳನ್ನು ಸಾರಿಗೆ ಇಲಾಖೆಗೆ ಕೊಡಲಾಗುವುದು. 70 ಪಲ್ಲಕ್ಕಿ ಬಸ್ ಟೆಂಡರ್ ಮುಗಿದಿದ್ದು ಶೀಘ್ರದಲ್ಲೇ ಚಾಲನೆ ನೀಡಲಾಗುವುದು.
ರಾಜ್ಯದಲ್ಲಿ 45 ಡ್ರೈವಿಂಗ್ ಟ್ರ್ಯಾಕ್ ನಿರ್ಮಿಸುತ್ತಿದ್ದು, ಇದರಲ್ಲಿ 7 ಮುಗಿದಿದ್ದು, 28 ಪ್ರಗತಿಯಲ್ಲಿವೆ. 10 ಟೆಂಡರ್ ಆಗಿದೆ. ಅದರಲ್ಲಿ ಮಧುಗಿರಿ ಕೂಡ ಒಂದು. ಶಾಸಕ ಕೆ. ಎನ್.ರಾಜಣ್ಣ ಅವರ ಕಾಳಜಿಯಿಂದ ತಾಲೂಕಿನ ಜನರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರೇಷ್ಮೆ ಇಲಾಖೆ ಸ್ಥಳ ಬಿಡಿಸಿಕೊಂಡು ಈ ಸಾರಿಗೆ ಕಚೇರಿ ಕಾಮಗಾರಿ ಪ್ರಾರಂಭಿಸಲಾಗಿದೆ ಎಂದರು. ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಬಜೆಟ್‌ನಲ್ಲಿ 10 ಕೋಟಿ ಮೀಸಲಿಟ್ಟಿದ್ದು, ವಾರ್ತಾ ಮತ್ತು ಪ್ರಚಾರ ಇಲಾಖೆ ಪಟ್ಟಿ ಆಧಾರಿಸಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲಿದ್ದೇವೆ ಎಂದರು. ಶಾಸಕ ಕೆ. ಎನ್.ರಾಜಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಧುಗಿರಿ ಜಿಲ್ಲಾ ಕೇಂದ್ರವಾಗಲೂ ಎಸ್‌ಪಿ, ಡಿಸಿ, ಸಿಇಒ ಕಚೇರಿಗಳು ಬಾಕಿ ಇದ್ದು, ಅವುಗಳನ್ನು ತಂದು ಮಧುಗಿರಿ ಜಿಲ್ಲೆ ಮಾಡುವುದು ಖಚಿತ ಎಂದರು.
