ಸೋನಿಯಾ ಗಾಂಧಿ ಅವರು ಆವತ್ತು ರಾಜಕೀಯಕ್ಕೆ ಬಾರದೇ ಇದ್ದಿದ್ದರೆ ಆ ದಿನವೇ ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿತ್ತು. ಆವಾಗಿನ ಸಂದರ್ಭದಲ್ಲಿ ಪರಿಸ್ಥಿತಿ ಹಾಗಿತ್ತು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಕೊಪ್ಪಳ (ನ.27): ಆ ಕಷ್ಟದ ದಿನಗಳಲ್ಲಿ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಳ್ಳದಿದ್ದರೆ ಭಾರತ ಕಾಂಗ್ರೆಸ್ ಮುಕ್ತವಾಗುತ್ತಿತ್ತು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀತಾರಾಮ ಕೇಸರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನ ಬಿಟ್ಟಾಗ ಪಕ್ಷಕ್ಕೆ ಕಷ್ಟದ ದಿನಗಳು ಎದುರಾಗಿದ್ದವು. ಆಗ ಸೋನಿಯಾ ಗಾಂಧಿ ಅವರು ಪಕ್ಷಕ್ಕೆ ಬರುವುದಕ್ಕೆ ಮತ್ತು ನೇತೃತ್ವ ವಹಿಸಿಕೊಳ್ಳುವುದಕ್ಕೆ ಮುಂದಾಗಿರಲಿಲ್ಲ.

ರಾಜೀವಗಾಂಧಿ ನಿಧನದಿಂದ ಬಹಳ ನೋವಿನಲ್ಲಿದ್ದ ಅವರು, ಮುಂದೆ ಬರುವುದಕ್ಕೆ ಹಿಂದೇಟು ಹಾಕಿದ್ದರು. ಆದರೆ, ಕಾಂಗ್ರೆಸ್ ಪಕ್ಷದ ಸ್ಥಿತಿ ನೋಡಿ, ಎಲ್ಲರ ಕೋರಿಕೆಯ ಮೇರೆಗೆ ಅವರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡರು. ಅವರು ಅಂದು ಬಾರದೆ ಇದ್ದಿದ್ದರೆ ಬಿಜೆಪಿಯವರು ಹೇಳಿದಂತೆ ಭಾರತ ಕಾಂಗ್ರೆಸ್ ಮುಕ್ತವಾಗುತ್ತಿತ್ತು ಎಂದರು. ಆದರೆ ಮಾಧ್ಯಮಗಳು ಸುದ್ದಿ ತಿರುಚಿ ವರದಿ ಮಾಡುತ್ತಿವೆ. ಸೋನಿಯಾ ಗಾಂಧಿ ಬಾರದೆ ಕಾಂಗ್ರೆಸ್ ಮುಕ್ತ ಭಾರತ ಅಂತೆಲ್ಲ ಹೇಳುತ್ತಿದ್ದಾರೆ.

ಆದರೆ, ಈಗಲಾದರೂ ನಾನು ಹೇಳಿದಂತೆ ಹಾಕಿ ಎಂದು ಮನವಿ ಮಾಡಿಕೊಂಡರು. ಡಿ.ಕೆ.ಶಿವಕುಮಾರ ಮಾತುಕತೆಯಾಗಿದ್ದನ್ನು ಹೇಳಿದ್ದಾರೆ. ಆದರೆ, ನಾನು ಅಲ್ಲಿ ಇರಲಿಲ್ಲವಾದ್ದರಿಂದ ಆ ಬಗ್ಗೆ ನಾನು ಏನು ಹೇಳಲು ಆಗದು ಎಂದ ಅವರು, ಸಿಎಂ ಸಿದ್ದರಾಮಯ್ಯ ಅವರೇ ಐದು ವರ್ಷ ಸಿಎಂ ಆಗಿರುತ್ತಾರೆ ಎನ್ನುವ ಪ್ರಶ್ನೆಗೆ ಅವರು ನೇರವಾಗಿ ಉತ್ತರಿಸಲಿಲ್ಲ. ಆದರೆ, ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಪಕ್ಷದ ಒಳ್ಳೆಯ ಕಾರ್ಯಗಳು ಕಾಣಿಸುತ್ತಲೇ ಇಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.

4.5 ಲಕ್ಷ ಅಕ್ರಮ ಪಂಪ್‌ಸೆಟ್‌ ಸಕ್ರಮ: 4.5 ಲಕ್ಷ ಕೃಷಿ ಪಂಪ್ ಸೆಟ್‌ಗಳಿಗೆ ಅಕ್ರಮವಾಗಿ ಪಡೆದಿರುವ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸಲಾಗಿದೆ ಎಂದು ಹೇಳಿದರು. ಆದರೆ, ಇದನ್ನು ಇದೇ ರೀತಿ ಮುಂದುವರಿಸಲು ಸಾಧ್ಯವಿಲ್ಲ. ಈ ಬಗ್ಗೆ ಕ್ಯಾಬಿನೆಟ್ ಮುಂದೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ವಿದ್ಯುತ್ ಕಂಬದಿಂದ 500 ಮೀಟರ್ ಒಳಗಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ 500 ಮೀಟರ್‌ಗಿಂತ ಹೆಚ್ಚು ದೂರವಿರುವ ಪಂಪ್‌ಸೆಟ್‌ಗಳಿಗೆ ಕುಸುಮ್ ಬಿ ಯೋಜನೆಯಡಿ ಕೇಂದ್ರ ಸರ್ಕಾರದ ಶೇ.30 ಮತ್ತು ರಾಜ್ಯ ಸರ್ಕಾರದ ಶೇ.50 ಸಬ್ಸಿಡಿಯೊಂದಿಗೆ ಸೋಲಾರ್ ವಿದ್ಯುತ್ ಕಲ್ಪಿಸಲಾಗುತ್ತದೆ. ಸೋಲಾರ್ ಪಂಪ್‌ನಿಂದ ಸಾವಿರ ಅಡಿ ವರೆಗೆ ಪಂಪ್ ಮಾಡುವ ಸಾಮರ್ಥ್ಯವಿರುತ್ತದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ಟಿಸಿ ತರಲು ರೈತರಿಂದ ವಾಹನ ತರಿಸುವಂತಿಲ್ಲ

ರಾಜ್ಯದಲ್ಲಿ ರೈತರ ಕೃಷಿ ಪಂಪ್‌ಸೆಟ್‌ಗಳಿಗಾಗಿ ಟಿಸಿ ಬ್ಯಾಂಕ್ ಮತ್ತು ದುರಸ್ತಿ ಸೆಂಟರ್‌ಗಳನ್ನು ಸ್ಥಾಪಿಸಲಾಗಿದೆ. ವಿಫಲವಾದ ವಿದ್ಯುತ್ ಪರಿವರ್ತಕಗಳನ್ನು ದುರಸ್ತಿ ಸೆಂಟರ್‌ಗಳಿಗೆ ತರುವಾಗ ಹೆಸ್ಕಾಂಗಳಿಂದಲೇ ವಾಹನದ ವ್ಯವಸ್ಥೆ ಮಾಡಿ ಟಿಸಿಯನ್ನು ರೈತರ ಜಮೀನಿನಿಂದ ದುರಸ್ತಿ ಸೆಂಟರ್‌ಗಳಿಗೆ ತರಬೇಕು. ಆದರೆ ಯಾವುದೇ ಕಾರಣಕ್ಕೂ ರೈತರೇ ವಾಹನ ತೆಗೆದುಕೊಂಡು ಹೋಗಿ ದುರಸ್ತಿ ಕೇಂದ್ರಕ್ಕೆ ಟಿಸಿ ತರುವ ಪದ್ಧತಿ ಅನುಸರಿಸಬಾರದು. ಇಂತಹ ಕ್ರಮಗಳು ಕಂಡಬಂದಲ್ಲಿ ಅಂತಹ ಸಿಬ್ಬಂದಿ ಮತ್ತು ಎಂಜಿನಿಯರ್‌ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದರು.