ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಮುಂದುವರೆಯಬೇಕು. ಇಲ್ಲವೇ ಅನಿವಾರ್ಯತೆ ಬಂದರೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎನ್ನುವ ಮೂಲಕ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ತುಮಕೂರು (ನ.27): ರಾಜ್ಯದಲ್ಲಿ ಸದ್ಯ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರು ಮುಂದುವರೆಯಬೇಕು. ಇಲ್ಲವೇ ಅನಿವಾರ್ಯತೆ ಬಂದರೆ ಗೃಹ ಸಚಿವ ಡಾ। ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿಯಾಗಲಿ ಎನ್ನುವ ಮೂಲಕ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಸಿಎಂ ಆಗಬಾರದೆಂದು ಆಶಯ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿರಬೇಕು ಎಂಬುದು ನನ್ನ ವೈಯಕ್ತಿಕ ಆಶಯವಾಗಿದೆ.

ಒಂದು ಅಥವಾ ಎರಡು ದಿನದಲ್ಲಿ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರು ಎಲ್ಲವನ್ನೂ ಕ್ಲೀಯರ್ ಮಾಡುತ್ತಾರೆ ಎಂದರು. 2023ರಲ್ಲಿ ಡಿ.ಕೆ.ಶಿವಕುಮಾರ್ ಅಧ್ಯಕ್ಷರಾಗಿರಬಹುದು. ಆದರೆ, ಸಿದ್ದರಾಮಯ್ಯ ಅವರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಿದಲ್ವಾ? ಎಂದು ಪ್ರಶ್ನಿಸಿದ ರಾಜಣ್ಣ, 2013ರಲ್ಲಿ ಡಾ। ಜಿ.ಪರಮೇಶ್ವರ್‌ ಅವರು ಪಕ್ಷ ಅಧಿಕಾರಕ್ಕೆ ತಂದರು. ಆದರೆ ಅವರು ಸೋತರು. ಡಿಕೆ‌ಶಿ ಕೂಲಿ ಕೇಳಿದಂತೆ, ಪರಮೇಶ್ವರ್‌ ಅವರು ಕೂಡ ಕೂಲಿ ಕೇಳಬೇಕಲ್ಲ. ಪರಮೇಶ್ವರ್ ಅವರ ಹಳೇ ಕೂಲಿ ಕ್ಲೀಯರ್ ಆಗಲಿ ಎಂದು ಗೃಹ ಸಚಿವರ ಪರ ಬ್ಯಾಟಿಂಗ್ ಮಾಡಿದರು.

ಮುಂದಿನ 2028ರ ಚುನಾವಣೆಯಲ್ಲಿ ಡಿಕೆಶಿ ನೇತೃತ್ವದಲ್ಲಿ ಚುನಾವಣೆಗೆ ಹೋಗಿ ಒಟ್ಟಿಗೆ ಕೆಲಸ ಮಾಡಿ ಬಹುಮತ ತಂದ ಬಳಿಕ ಡಿಕೆಶಿ ಅವರು 5 ವರ್ಷ ಸಿಎಂ ಆಗಲಿ ಎಂದು ಪುನರುಚ್ಚರಿಸಿದರು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಯನ್ನಾಗಿ ಸಿಎಲ್‌ಪಿ ಆಯ್ಕೆ ಮಾಡಿದ್ದು. ಈಗ ಸಿಎಲ್‌ಪಿಯಲ್ಲೇ ತೀರ್ಮಾನ ಆಗಬೇಕು. ಸಿಎಲ್‌ಪಿಯಲ್ಲಿ ಯಾರಾದರೂ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕೆಂದು ಕೇಳಿದ್ದಾರಾ? ಎಂದು ಪ್ರಶ್ನಿಸಿದ ಅವರು, 30-30 ತಿಂಗಳು ಒಪ್ಪಂದ ಎಂದು ಸುಮ್ಮನೇ ಹೇಳುತ್ತಾರೆ ಎಂದರು.

ಎಲ್ಲವೂ ನನ್ನಿಂದಲೇ ಎನ್ನುವುದು ತಪ್ಪು

ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನೂ ಕೂಡ ಒಪ್ಪುವುದಿಲ್ಲ. ನಮಗಿರುವ 1.25 ಕೋಟಿ ಮತದಾರರಿಂದ ನಾವು ಶಾಸಕರು, ಮಂತ್ರಿ ಆಗಿದ್ದೇವೆ. ನಮಗೆ ಇತಿಮಿತಿ ಇರಬೇಕು. ಎಲ್ಲವೂ ನನ್ನಿಂದಲೇ ಆಗಿದೆ ಎನ್ನುವುದು ತಪ್ಪು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಗೆ ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಟಾಂಗ್‌ ನೀಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಬಹಳಷ್ಟು ಜನ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ದುಡಿದಿದ್ದಾರೆ. 1960ರಲ್ಲಿ ತೇನ್ ಸಿಂಗ್ ಹಿಮಾಲಯ ಪರ್ವತ ಏರಿದಾಗ ಇಡೀ ಜಗತ್ತಿನ ಎಲ್ಲಾ ಪತ್ರಿಕೆಗಳು ತೇನ್‌ಸಿಂಗ್ ಹಿಮಾಲಯ ಏರಿದರು ಎಂದು ಬರೆದರು. ಅವರ ಜೊತೆಗೆ ಇನ್ನೂ 14 ಜನರಿದ್ದರು. ಅವರ ಹೆಸರು ಬರಲಿಲ್ಲ. ಇದು ಹಾಗೆಯೇ ಆಗಿದೆ ಎಂದು ಹೇಳಿದರು.ಪಕ್ಷ ಅಧಿಕಾರಕ್ಕೆ ಬರಲು ಎಲ್ಲರ ಸಹಕಾರವಿದೆ. ಮೊದಲ‌ ಬಾರಿಗೆ ಗೆದ್ದವರು ಸೇರಿ ಬಹಳಷ್ಟು ಶಾಸಕರಿದ್ದಾರೆ.

ಪಕ್ಷ, ಶಾಸಕರು ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಸರ್ಕಾರ ಬಂದಿದೆ. ಎಲ್ಲರಿಗೂ ಅಷ್ಟೇ ಪ್ರಾಮುಖ್ಯತೆ ಸಿಗಬೇಕು. ಅಧಿಕಾರಕ್ಕೆ ಬರಲು ಅವರದೇ ಸ್ವಂತ ಎಫರ್ಟ್ ಇರುತ್ತದೆ. ಅದರ ಶ್ರೇಯಸ್ಸು ಕೆಲವೇ ಜನರು ತೆಗೆದುಕೊಳ್ಳುವುದನ್ನು ಒಪ್ಪುವುದಿಲ್ಲ. ಸ್ವಾಭಾವಿಕವಾಗಿ ಎಲ್ಲರೂ ಹಕ್ಕು ಮಂಡಿಸುತ್ತಾರೆ. ಎಲ್ಲರಿಗೂ ಅಧಿಕಾರ ಸಿಗಬೇಕು. ಡಾ.ಜಿ.ಪರಮೇಶ್ವರ್‌ 7 ವರ್ಷ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರು ಬಹಳಷ್ಟು ಕಾರ್ಯಕ್ರಮ‌ ಮಾಡಿದ್ದರಿಂದ ನಮ್ಮ‌ ಸರ್ಕಾರ ಬಂತು. ಆ ರೀತಿ ಆಗಬೇಕು ಎಂಬುದು ನಮ್ಮ ಭಾವನೆ ಎಂದು ಪ್ರತಿಪಾದಿಸಿದರು.ನಾನು ಸಿಎಂ ಸ್ಥಾನದ ಆಕಾಂಕ್ಷಿರ ಎಂದು ಪರಮೇಶ್ವರ್‌ ಅವರು ಮುಂಚೆಯೂ ಕೂಡ ಹೇಳಿದ್ದಾರೆ.