ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಯಾಗಲಿ, ನಾನಾಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು (ನ.27): ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಯಾಗಲಿ, ನಾನಾಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾನೂನು ಸಲಹೆಗಾರ ಪೊನ್ನಣ್ಣ ಅವರಿಗೆ ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ, ವಿಶ್ವದ ಶಕ್ತಿ) ಎಂದು ಹೇಳುತ್ತಿರುತ್ತೇನೆ. ಮಾತು ಕೊಡುತ್ತೇವೆ, ಆಡುತ್ತೇವೆ. ಅದನ್ನು ನಾನೇ ಕೊಟ್ಟರೂ, ನೀವು ಕೊಟ್ಟರೂ ಅದಕ್ಕೆ ವಿಶ್ವದಲ್ಲೇ ಪವರ್ ಇದೆ.

ಜಡ್ಜ್‌ ಆಗಿರಲಿ, ಭಾರತದ ಅಧ್ಯಕ್ಷರೇ ಆಗಿರಲಿ, ಮನೆಯಲ್ಲಾಡುವ ಮಾತಾಗಿದ್ದರೂ ಅದುವೇ ದೊಡ್ಡ ಶಕ್ತಿ. ಆ ಮಾತುಗಳಿಗೆ ರಕ್ಷಣೆ ಮಾಡಿಕೊಂಡು ನಾವು ಹೋಗುತ್ತಿದ್ದೇವೆ ಎಂದರು. ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳಲ್ಲಿ ಸರಿಯಾಗಿ ವಾದ ಮಂಡಿಸದ ವಕೀಲರನ್ನು ಬದಲಿಸಲಾಗುತ್ತದೆ. ವಕೀಲರ ಕಾರ್ಯ ವೈಖರಿ ಪರಿಶೀಲಿಸಲು ವಾದ ಮಂಡನೆಯ ವಿಡಿಯೋವನ್ನು ಪರಿಶೀಲಿಸಲಾಗುತ್ತದೆ. ವಕೀಲರು ಪಕ್ಷದ ಸದಸ್ಯತ್ವ ಹೊಂದಿಲ್ಲದಿದ್ದರೂ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧರಾಗಿರಬೇಕು ಎಂದು ಉಪಮುಖ್ಯಮಂತ್ರಿ ಹೇಳಿದರು. ಬೆಳಗಾವಿಯಲ್ಲಿ ನಾವು ಮಾಡಿರುವ ಕಾರ್ಯಕ್ರಮಗಳ ಮಾಹಿತಿ ಸೇರಿ ‘ಗಾಂಧಿ ಭಾರತ’ ಎಂಬ ಪುಸ್ತಕ ರಚಿಸಲಾಗಿದೆ. ಆ ಕೃತಿಯ ಶೇ. 95ರಷ್ಟು ಭಾಗ ಪೂರ್ಣಗೊಂಡಿದ್ದು, ಇದನ್ನು ಮಲ್ಲಿಕಾರ್ಜುನ ಖರ್ಗೆ ಅವರಿಂದ ಬಿಡುಗಡೆಗೊಳಿಸಲಾಗುವುದು ಎಂದು ಉಪಮುಖ್ಯಮಂತ್ರಿ ಹೇಳಿದರು.

ಬಿಜೆಪಿ ನಾಯಕರೇ ಕರೆ ಮಾಡಿದ್ದರು

ಚುನಾವಣೆಗೂ ಮುನ್ನ ಬಿಜೆಪಿ ನಾಯಕರೊಬ್ಬರು ನನಗೆ ಕರೆ ಮಾಡಿ, ಪೊನ್ನಣ್ಣ ಅವರಿಗೆ ಟಿಕೆಟ್ ನೀಡಬೇಡಿ. ಅವರ ತಂದೆ ಆರ್‌ಎಸ್ಎಸ್‌ನಲ್ಲಿದ್ದರು ಎಂದು ಹೇಳಿದ್ದರು. ಆದರೆ, ನಮ್ಮ ಪಕ್ಷಕ್ಕೆ ಬದ್ಧತೆಯಿಂದ ಪೊನ್ನಣ್ಣ ಕೆಲಸ ಮಾಡುತ್ತಿದ್ದಾರೆ. ಈಗ ಮುಖ್ಯಮಂತ್ರಿಯವರಿಗೆ ಸಲಹೆಗಾರರಾಗಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಸಚಿವ ಎಚ್.ಕೆ.ಪಾಟೀಲ್ ಮಾತನಾಡಿ, ಲೋಕಸಭೆ ವಿರೋಧ ಪಕ್ಷದ ನಾಯಕರು ವೋಟ್ ಚೋರಿ ಬಗ್ಗೆ ದೂರು ನೀಡಿದರೆ, ಅಫಿಡವಿಟ್‌ ಹಾಕಿ ಎನ್ನುತ್ತಾರೆ. ಈ ಮೂಲಕ ಸಾಂವಿಧಾನಿಕ, ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್, ಶಾಸಕ ಎ.ಎಸ್. ಪೊನ್ನಣ್ಣ ಸೇರಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.