ನಾನು ಯಾವ ಪ್ರತಿನಿಧಿಯಾಗಿಯೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿಲ್ಲ. ನಮ್ಮಲ್ಲಿ ನಾಯಕತ್ವ ಬದಲಾವಣೆ ಗೊಂದಲವಿಲ್ಲ. ಬಂಡಾಯವೇ ಇಲ್ಲ ಅಂದ್ಮೇಲೆ ಶಮನ ಎಲ್ಲಿಂದ ಬಂತು ಎಂದು ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.
ಯಾದಗಿರಿ (ನ.25): ನಾನು ಯಾವ ಪ್ರತಿನಿಧಿಯಾಗಿಯೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿಲ್ಲ. ನಮ್ಮಲ್ಲಿ ನಾಯಕತ್ವ ಬದಲಾವಣೆ ಗೊಂದಲವಿಲ್ಲ. ಬಂಡಾಯವೇ ಇಲ್ಲ ಅಂದ್ಮೇಲೆ ಶಮನ ಎಲ್ಲಿಂದ ಬಂತು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಡಿಕೆಶಿ ಭೇಟಿಯ ವೇಳೆ ಬಂಡಾಯ ಶಮನಕ್ಕೆ ಪ್ರಯತ್ನಿಸಲಾಯಿತೆ ಎಂಬ ಮಾಧ್ಯಮಗಳ ಪ್ರಶ್ನೆಗೆ ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿ, ಡಿ.ಕೆ.ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಿದ್ದು, ನಮ್ಮ ಸಹೋದ್ಯೋಗಿ. ಆಗಾಗ ಅವರ ಜೊತೆ ನಮ್ಮದು ಆತ್ಮೀಯ ಭೇಟಿ ಇರುತ್ತದೆ.
ಇಂತಹ ಭೇಟಿಗಳನ್ನು ನಾಯಕತ್ವ ಬದಲಾವಣೆ ಚರ್ಚೆ ಎಂಬ ಗೊಂದಲ ಸೃಷ್ಟಿ ಸರಿಯಲ್ಲ. ಬಿಜೆಪಿಯವರ ಮಾತು ಕೇಳಿ ಬಂಡಾಯ ಎಂಬ ಗೊಂದಲದ ಪ್ರಶ್ನೆ ಕೇಳಬೇಡಿ ಎಂದು ಡಿಕೆಶಿ ಭೇಟಿಯ ಕುರಿತು ಸ್ಪಷ್ಟನೆ ನೀಡಿದರು. ಡಿಕೆಶಿ ಭೇಟಿ ವೇಳೆ ಬೆಂಗಳೂರು ನಗರ ಪಾಲಿಕೆ ಚುನಾವಣೆ ವಿಚಾರ ಮಾತನಾಡಿದ್ದೇವೆ. ಎಐಸಿಸಿ ತಮಗೆ ಯಾವುದೇ ವಿಚಾರ ಒಪ್ಪಿಸಿಲ್ಲ. ಅದರ ಜವಾಬ್ದಾರಿಯೂ ನನಗಿಲ್ಲ. ಡಿಕೆಶಿ ನಾನು 40 ವರ್ಷಗಳಿಂದ ಪರಿಚಯವಿದ್ದು, ಆತ್ಮೀಯತೆ ಇದೆ.
ಹಾಗಾಗಿ, ನಾವು ಅವರ ಮನೆಗೆ, ಅವರು ನಮ್ಮ ಮನೆಗೆ ಬರುತ್ತಾರೆ ಎಂದು ಸ್ಪಷ್ಟನೆ ನೀಡಿದರು. ನಾನು ರಾಜ್ಯದ ಮುಖ್ಯಮಂತ್ರಿ ಪ್ರತಿನಿಧಿ, ಎಐಸಿಸಿ ಪ್ರತಿನಿಧಿ ಅಲ್ಲ. ನಾನು ವೈಯಕ್ತಿಕವಾಗಿ ಆಗಾಗ ಡಿಕೆಶಿ ಅವರನ್ನು ಭೇಟಿಯಾಗುತ್ತಲೇ ಇರುವೆ. ಬಂಡಾಯವೇ ಇಲ್ಲ, ಶಮನ ಎಲ್ಲಿಂದ ಆಗುತ್ತದೆ. ಎಲ್ಲ ಕಾಂಗ್ರೆಸ್ ಶಾಸಕರು ಒಂದೇ ಕುಟುಂಬ ಇದ್ದಂತೆ ಇದ್ದೇವೆ. ಡಿಕೆಶಿ ನೇರವಾಗಿ ಹೇಳಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ. ನಾವೆಲ್ಲರೂ ಜೊತೆಯಲ್ಲಿದ್ದೇವೆ ಎಂದಿದ್ದಾರೆ ಎಂದು ಗೊಂದಲಕ್ಕೆ ತೆರೆ ಎಳೆದರು.
ವಿದ್ಯುತ್ ಕಳ್ಳತನ ನಿಯಂತ್ರಣಕ್ಕೆ ಕ್ರಮ
ಅನಧಿಕೃತವಾಗಿ ಹುಕ್‌ಗಳ ಮೂಲಕ ವಿದ್ಯುತ್ ಕಳ್ಳತನವನ್ನು ತಡೆಯುವ ಮತ್ತು ಹೆಚ್ಚಿನ ಲೋಡ್ ದಿಂದಾಗಿ ವಿದ್ಯುತ್ ಟ್ರಾನ್ಸಪಾರ್ಮರ್ ಗಳು ಸುಟ್ಟು ಹೋಗುವುದನ್ನು ತಡೆಯಲು ಅವಶ್ಯಕ ಕ್ರಮ ಕೈಗೊಳ್ಳುವಂತೆ ರಾಜ್ಯ ಇಂಧನ ಖಾತೆ ಸಚಿವ ಕೆ. ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕ ವಿದ್ಯುತ್ ಪ್ರಸರಣ ಹಾಗೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ವಿದ್ಯುತ್‌ನ ಕೊರತೆ ಇಲ್ಲದಿದ್ದರೂ ಸಮರ್ಪಕ ನಿರ್ವಹಣೆ ಅತ್ಯವಶ್ಯಕ. ಪಂಪ್‌ಸೆಟ್ ಗಳಿಗೆ ಹಾಗೂ ಇತರೆ ಅವಶ್ಯಕತೆ ಮತ್ತು ಕೈಗಾರಿಕೆಗಳ ವ್ಯಾಪ್ತಿಯಲ್ಲಿ ವಿದ್ಯುತ್ ಕಳ್ಳತನ ಆಗದಂತೆ ನಿಗಾವಹಿಸುವಂತೆ ಅವರು ಸೂಚಿಸಿ, ಅಧಿಕ ಲೋಡ್ ದಿಂದಾಗಿ ಟ್ರಾನ್ಸಪಾರ್ಮರ್ ಗಳು ಸುಟ್ಟು ಹೋಗದಂತೆ ನೋಡಿಕೊಳ್ಳಲು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈಗಾಗಲೇ ಸ್ಥಾಪಿಸಿರುವ ವಿದ್ಯುತ್ ಉಪ ಕೇಂದ್ರ ಗಳ ವ್ಯಾಪ್ತಿಯಲ್ಲಿ ವಿದ್ಯುತ್ ಲಿಂಕ್ ಲೈನ್ಸ್ ಮಾಡುವ ಕಾರ್ಯ ಆದ್ಯತೆ ಮೇಲೆ ಕೈಗೊಳ್ಳಬೇಕು. ವಿದ್ಯುತ್ ಕೇಂದ್ರವಾರು ಸಂಪೂರ್ಣ ಲಿಂಕ್ ಲೈನ್ ಆಗಿರುವ ಬಗ್ಗೆ ಕ.ವಿ. ಪ್ರಸರಣ ನಿಗಮ ಹಾಗೂ ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಅಧಿಕಾರಿಗಳು ಅವಶ್ಯಕ ನಿಗಾ ವಹಿಸುವಂತೆ ಅವರು ಸೂಚಿಸಿದರು. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಯಿಸಿರುವ ಕಡೆಗಳಲ್ಲಿ ತಕ್ಷಣ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿಶೇಷವಾಗಿ ತಾಂಡಾ, ದೊಡ್ಡಿ ಮತ್ತು ಅರ್ಹರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಒಂಬತ್ತು ವಿದ್ಯುತ್ ಉಪ ಕೇಂದ್ರಗಳಾದ ಕೆಂಭಾವಿ, ಹುಣಸಿಹೊಳೆ, ಕವಳೂರ, ಕಂದಕೂರ, ಅಡಕಲಬಂಡಿ, ವನದುರ್ಗ, ಹಯ್ಯಾಳ (ಬಿ), ಕೊಡೇಕಲ್, ಗಡ್ಡೆಸೂಗೂರುಗಳ ಜಮೀನಿನ ಹಾಗೂ ಟೆಂಡರ್ ಪ್ರಕ್ರಿಯೆ ಬೇಗ ಪೂರ್ಣಗೊಳಿಸಿ ಮಾರ್ಗಸೂಚಿಯನ್ವಯ ಕ್ರಮ ಕೈಗೊಳ್ಳಲು ಸೂಚಿಸಿದರು.

