ಸುದೀಪ್ ರಾಜಕೀಯ ಪ್ರವೇಶ ಇಲ್ಲ: ಬಿಜೆಪಿಯ ಪರ ಪ್ರಚಾರ
ಖ್ಯಾತ ಚಿತ್ರನಟ ಸುದೀಪ್ ಅವರು ಪರೋಕ್ಷವಾಗಿ ಆಡಳಿತಾರೂಢ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ ಕಡೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ.
ಬೆಂಗಳೂರು (ಏ.06): ಖ್ಯಾತ ಚಿತ್ರನಟ ಸುದೀಪ್ ಅವರು ಪರೋಕ್ಷವಾಗಿ ಆಡಳಿತಾರೂಢ ಬಿಜೆಪಿಗೆ ಬೆಂಬಲ ಸೂಚಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ ಕಡೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕೈಗೊಳ್ಳುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ಅವರು ನೇರವಾಗಿ ರಾಜಕೀಯ ಪ್ರವೇಶಕ್ಕೆ ಇಳಿಯದೇ ಇರಲು ನಿರ್ಧರಿಸಿದ್ದಾರೆ. ‘ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಯಾರ ಪರವಾಗಿಯೂ ಟಿಕೆಟ್ ಕೇಳುವುದಿಲ್ಲ’ ಎಂದೂ ಸ್ಪಷ್ಟಪಡಿಸಿದ್ದಾರೆ. ‘ಪ್ರಧಾನಿ ಮೋದಿ ನಾಯಕತ್ವದಲ್ಲಿ ಹಲವು ಒಳ್ಳೆಯ ಕೆಲಸಗಳಾಗಿವೆ. ಅವುಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಮೆಚ್ಚುಗೆ ವ್ಯಕ್ತಪಡಿಸುತ್ತೇನೆ’ ಎಂಬ ಮಾತನ್ನೂ ಸುದೀಪ್ ಹೇಳಿದ್ದಾರೆ.
ಬುಧವಾರ ಪಂಚತಾರಾ ಹೋಟೆಲ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಸುದೀಪ್, ‘ನನ್ನ ಕಷ್ಟದ ದಿನಗಳಲ್ಲಿ ಜತೆಗೆ ನಿಂತ ‘ಬೊಮ್ಮಾಯಿ ಮಾಮ’ನ ಪರ ಈಗ ನಾನು ನಿಲ್ಲುತ್ತೇನೆ. ಬೊಮ್ಮಾಯಿ ಅವರನ್ನು ಬೆಂಬಲಿಸುತ್ತೇನೆ ಎಂದ ಮೇಲೆ ಅವರು ಬಯಸಿದ್ದನ್ನು ಮಾಡುತ್ತೇನೆ. ನಿಮಗೆ ಏನೇನು ಆಗಬೇಕು ಅದನ್ನು ಮಾಡುತ್ತೇನೆ ಎಂದಿದ್ದೇನೆ. ಅವರು ಹೇಳಿದ ಕಡೆ ಪ್ರಚಾರ ಮಾಡುತ್ತೇನೆ’ ಎಂದು ತಿಳಿಸಿದರು.
ಒಂದೇ ಕ್ಷೇತ್ರಕ್ಕೆ ಸಿದ್ದು ಕಟ್ಟಿಹಾಕಲು ಯತ್ನ: ಕೆಲವು ನಾಯಕರಿಂದ ಹೈಕಮಾಂಡ್ ಮೇಲೆ ಒತ್ತಡ
‘ಬೊಮ್ಮಾಯಿ ಅವರನ್ನು ನಾನು ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿರುವುದರಿಂದ ಅವರನ್ನು ಪ್ರೀತಿಯಿಂದ ‘ಮಾಮ’ ಎಂದು ಕರೆಯುತ್ತೇನೆ. ತಪ್ಪು ತಿಳಿದುಕೊಳ್ಳಬೇಡಿ. ಅವರನ್ನು ಹಾಗೆಯೇ ಕರೆಯುತ್ತೇನೆ. ಚಿತ್ರರಂಗದ ಕಷ್ಟದಿನಗಳಲ್ಲಿ ನನ್ನ ಜತೆ ಕೆಲವೇ ಕೆಲವರು ನನ್ನ ಜತೆ ನಿಂತಿದ್ದು, ಅದರಲ್ಲಿ ಒಂದು ಮುಖ್ಯವಾದ ವ್ಯಕ್ತಿ ಪ್ರೀತಿಯ ಬಸವರಾಜ ಬೊಮ್ಮಾಯಿ ಮಾಮ. ಒಳ್ಳೆಯ ಪ್ರೀತಿಯಾದ ವ್ಯಕ್ತಿಗೆ ಚಿರುಋುಣಿ’ ಎಂದರು.
‘ನಿಮ್ಮ ಪರ ನಿಂತುಕೊಳ್ಳುತ್ತೇನೆ ಎಂದು ಹೇಳಲು ಇಂದು ಇಲ್ಲಿಗೆ ಬಂದೆ. ನಾವು ಬೆಳೆದು ಬಂದ ಹಾದಿಯಲ್ಲಿ ಗಾಡ್ ಫಾದರ್ ಪ್ರತಿಯೊಂದು ವಿಚಾರದಲ್ಲಿ ಇರುತ್ತಾರೆ. ಆದರೆ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಗಾಡ್ ಫಾದರ್ ಇರಲಿಲ್ಲ. ಗಾಡ್ ಆ್ಯಂಡ್ ಫಾದರ್ ಇದ್ದರು. ಕೆಲವರು ಪ್ರೀತಿಗಾಗಿ ನಿಂತಿದ್ದರು. ‘ಮಾಮ’ ಅವರು ಆಗ ರಾಜಕೀಯ ಎಂಟ್ರಿ ಕೊಡುತ್ತಿದ್ದರು. ಅವಾಗಿನಿಂದ ಪರಿಚಯ. ಅವರ ವ್ಯಕ್ತಿತ್ವಕ್ಕೆ ತಲೆ ಬಾಗುತ್ತೇನೆ. ಅವರಿಗೆ ನನ್ನ ಬೆಂಬಲ ನೀಡುತ್ತೇನೆ. ವ್ಯಕ್ತಿಗೆ ಬೆಂಬಲ ನೀಡುತ್ತೇನೆ. ನಿನ್ನೆಯೂ ಅದೇ ಹೇಳಿದ್ದೆ, ಇವತ್ತು ಅದೇ ಹೇಳುತ್ತೇನೆ.
ನಾಳೆಯೂ ಅದೇ ಹೇಳುತ್ತೇನೆ. ಈ ಮೂಲಕ ಕೆಲವು ಸ್ನೇಹಿತರ ಪರವಾಗಿ ನಿಲ್ಲುತ್ತೇನೆ’ ಎಂದು ವಿವರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ಆರ್.ಅಶೋಕ್, ಡಾ.ಕೆ.ಸುಧಾಕರ್ ಹಾಗೂ ಮುನಿರತ್ನ ಉಪಸ್ಥಿತರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಸುದೀಪ್ ನನ್ನ ಪರವಾಗಿದ್ದಾರೆ. ನಾನು ಬಿಜೆಪಿಯಲ್ಲಿದ್ದೇನೆ. ಸುದೀಪ್ ಅವರು ನಾನು ಹೇಳಿದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಅವರ ಪ್ರಚಾರಕ್ಕೆ ಸಂಬಂಧಿಸಿದಂತೆ ರೂಪುರೇಷೆ ಸಿದ್ಧಪಡಿಸಿ ವಿಶೇಷ ಪ್ಲ್ಯಾನ್ ರೂಪಿಸುತ್ತೇವೆ. ಸುಮಾರು 15 ದಿನ ಪ್ರಚಾರದಲ್ಲಿ ಇರುತ್ತಾರೆ. ನಮ್ಮ ಪಕ್ಷದ ಪರವಾಗಿಯೇ ಇರುತ್ತಾರೆ.
- ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಡಿ.ಕೆ.ಶಿವಕುಮಾರ್‌ಗೆ ಸಿಎಂ ಹುದ್ದೆ ಕೊಡಲ್ಲ ಎಂದಿಲ್ಲ: ಸಿದ್ದರಾಮಯ್ಯ
ನನ್ನ ಮೇಲೆ ಯಾರೂ ಒತ್ತಡ ಹೇರಿಲ್ಲ. ಯಾರೋ ಒತ್ತಡ ಮಾಡಿದ್ದಕ್ಕೆ ಬರುವ ವ್ಯಕ್ತಿ ನಾನಲ್ಲ. ನಾನು ಹಾಗೆ ಕಾಣಿಸುತ್ತೇನೆಯೇ? ಪ್ರೀತಿಗಾಗಿ ಬಂದವನು ನಾನು. ಪ್ರಧಾನಿ ಮೋದಿ ನಾಯಕತ್ವದಲ್ಲಿ ಹಲವು ಒಳ್ಳೆಯ ಕೆಲಸಗಳಾಗಿವೆ. ಅವುಗಳನ್ನು ನಾನು ಒಪ್ಪಿಕೊಳ್ಳುತ್ತೇನೆ. ಮೆಚ್ಚುಗೆ ವ್ಯಕ್ತಪಡಿಸುತ್ತೇನೆ.
- ಕಿಚ್ಚ ಸುದೀಪ್