ನೀಟ್ ಪ್ರಶ್ನೆಪತ್ರಿಕೆ ಸೋರಿಕೆ, ಸಿಬಿಎಸ್‌ಇ ಮೌಲ್ಯಮಾಪನ ಅವ್ಯವಸ್ಥೆ ಮತ್ತು ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಜೂ.17ರಿಂದ ರಾಷ್ಟ್ರವ್ಯಾಪಿ ಹೋರಾಟಕ್ಕೆ ಸಜ್ಜು.. ರಾಹುಲ್ ಗಾಂಧಿ ಕೋಟಾದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಪಟ್ಟು.

  • ಕೋಟಾದಲ್ಲಿ ರಾಗಾರಿಂದ ಚಾಲನೆ.
  • ಬಳಿಕ 4 ನಗರಗಳಲ್ಲಿ ಹೋರಾಟ.
  • ಪ್ರಧಾನ್‌ ರಾಜೀನಾಮೆಗೆ ಬಿಗಿಪಟ್ಟು.
  • ಇತ್ತೀಚೆಗೆ ನೀಟ್‌, ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಭಾರಿ ಅಕ್ರಮ.
  • ಪ್ರಶ್ನೆಪತ್ರಿಕೆ ಸೋರಿಕೆ, ಮೌಲ್ಯಮಾಪನದಲ್ಲಿ ವ್ಯತ್ಯಾಸ.
  • ಇದಕ್ಕೆ ಶಿಕ್ಷಣ ಸಚಿವ ಪ್ರಧಾನ್‌ ಹೊಣೆ: ಕಾಂಗ್ರೆಸ್‌ ಆರೋಪ.

ಪಿಟಿಐ ನವದೆಹಲಿ (ಜೂ.14): ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ(NEET Paper Leak), ಸಿಬಿಎಸ್‌ಇ(CBSE) 12ನೇ ತರಗತಿಯ ಮೌಲ್ಯಮಾಪನ ಅವ್ಯವಸ್ಥೆ ಸೇರಿದಂತೆ ಪರೀಕ್ಷಾ ಅಕ್ರಮ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶದಿಂದ ಜೂ.17ರಿಂದ ರಾಷ್ಟ್ರವ್ಯಾಪಿ ಹೋರಾಟ ಆರಂಭಿಸಲು ಕಾಂಗ್ರೆಸ್‌(Congress) ನಿರ್ಧರಿಸಿದೆ. ಈ ವೇಳೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ(Dharmendra Pradhan resign)ಗೆ ಆಗ್ರಹಿಸಲಾಗುತ್ತದೆ.

ಅಭಿಯಾನಕ್ಕೆ ರಾಹುಲ್ ಗಾಂಧಿ ಚಾಲನೆ

ಜೂ.17ರಂದು, ದೇಶದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವಾದ ರಾಜಸ್ಥಾನದ ಕೋಟಾದಲ್ಲಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಅಭಿಯಾನದ ಮೊದಲ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಜು.10ರಂದು ಅಲಹಾಬಾದ್, ಜು.11ರಂದು ಪಟನಾ ಹಾಗೂ ಜು.14ರಂದು ದೆಹಲಿಯಲ್ಲಿ ಪ್ರತಿಭಟನೆಗಳು ನಡೆಯಲಿವೆ. ಕೇಂದ್ರ ಸರ್ಕಾರ ಪರೀಕ್ಷಾ ಪ್ರಕ್ರಿಯೆಯಲ್ಲಿ ಸುಧಾರಣೆ ಮತ್ತು ಮರುಪರೀಕ್ಷೆಯ ಭರವಸೆ ನೀಡಿದ ಹೊರತಾಗಿಯೂ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌ ಶನಿವಾರ ಹೇಳಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಪಟ್ಟು

ವಿದ್ಯಾರ್ಥಿಗಳ ಅನುಭವ ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದು, ಪರೀಕ್ಷಾ ಶುಲ್ಕ ರದ್ದತಿ, ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹ ಪ್ರತಿಭಟನೆಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.