ಡಿ.ಕೆ.ಶಿವಕುಮಾರ್‌ಗೆ ಸಿಎಂ ಹುದ್ದೆ ಕೊಡಲ್ಲ ಎಂದಿಲ್ಲ: ಸಿದ್ದರಾಮಯ್ಯ
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ’ ಎಂದು ನಾನು ಹೇಳಿದ್ದೇನೆ ಎಂಬ ಎನ್‌ಡಿಟಿವಿ ವರದಿ ಶುದ್ದ ಸುಳ್ಳು. ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗುತ್ತದೆ.
ಬೆಂಗಳೂರು (ಏ.05): ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ’ ಎಂದು ನಾನು ಹೇಳಿದ್ದೇನೆ ಎಂಬ ಎನ್‌ಡಿಟಿವಿ ವರದಿ ಶುದ್ದ ಸುಳ್ಳು. ಪ್ರಜಾಪ್ರಭುತ್ವ ಮಾದರಿಯಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗುತ್ತದೆ. ಹೈಕಮಾಂಡ್ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸುತ್ತಾರೆ ಎಂದಷ್ಟೇ ಹೇಳಿದ್ದೇನೆ. ಆದರೆ, ನನ್ನ ಹೇಳಿಕೆಯನ್ನು ದುರುದ್ದೇಶದಿಂದ ಎನ್‌ಡಿಟಿವಿ ತಿರುಚಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಶಿವಕುಮಾರ್ ಕುರಿತು ಸಿದ್ದರಾಮಯ್ಯ ನೀಡಿದ್ದಾರೆ ಎನ್ನಲಾದ ಹೇಳಿಕೆ ತೀವ್ರ ಸಂಚಲನ ಉಂಟುಮಾಡಿತ್ತು. ಇದನ್ನು ಸಂಪೂರ್ಣವಾಗಿ ಅಲ್ಲಗಳೆದಿರುವ ಸಿದ್ದರಾಮಯ್ಯ ಅವರು, ‘ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಪ್ರಕಟಿಸಿ ಪಕ್ಷಕ್ಕೆ ಕೆಟ್ಟತರುವ ಪ್ರಯತ್ನವನ್ನು ಎನ್‌ಡಿಟಿವಿ ಮಾಡಿದೆ. ಕೂಡಲೇ ಈ ಸುದ್ದಿಯನ್ನು ಅಳಿಸಿಹಾಕಬೇಕು ಹಾಗೂ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದ್ದಾರೆ. ಇದಲ್ಲದೆ, ಸಿದ್ದರಾಮಯ್ಯ ಅವರ ಸಾಮಾಜಿಕ ಜಾಲತಾಣ ತಂಡವು ಎನ್‌ಟಿಡಿವಿ ಸಂದರ್ಶನದ ಅಸಲಿ ವಿಡಿಯೋ ಬಿಡುಗಡೆ ಮಾಡಿದ್ದು, ‘ಅದರಲ್ಲಿ ಇಂತಹ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿಯೇ ಇಲ್ಲ’ ಎಂದು ಪ್ರತಿಪಾದಿಸಿದೆ.
ಇಂದು 122 ಕ್ಷೇತ್ರಗಳಿಗೆ ಹೆಸರು ಶಿಫಾರಸಿಗೆ ಕಸರತ್ತು: ಶನಿವಾರ ಬಿಜೆಪಿ ಮೊದಲ ಅಭ್ಯರ್ಥಿ ಪಟ್ಟಿ ಪ್ರಕಟ?
ಈ ಬಗ್ಗೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನೂ ಮುಖ್ಯಮಂತ್ರಿ ಆಕಾಂಕ್ಷಿ, ಡಿ.ಕೆ. ಶಿವಕುಮಾರ್ ಅವರೂ ಆಕಾಂಕ್ಷಿ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯನ್ನು ಪ್ರಜಾಪ್ರಭುತ್ವ ಪ್ರತಿಕ್ರಿಯೆಯಲ್ಲಿ ಮಾಡುತ್ತೇವೆ ಎಂದು ಹೇಳಿದ್ದೆ. ಆದರೆ ನನ್ನ ಹೇಳಿಕೆ ತಿರುಚಲಾಗಿದೆ. ನನ್ನ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಭಿನ್ನಾಭಿಪ್ರಾಯವನ್ನು ಹುಟ್ಟುಹಾಕುವ ವಿರೋಧ ಪಕ್ಷಗಳ ಹುನ್ನಾರಕ್ಕೆ ಮಾಧ್ಯಮಗಳು ಆಯುಧವಾಗಿ ಬಳಕೆಯಾಗಬಾರದು. ವಾಸ್ತವವನ್ನು ಮರೆ ಮಾಚಿ ಸುಳ್ಳುಗಳನ್ನು ಬಿತ್ತುವ ಕೆಲಸ ಮಾಡಬಾರದು’ ಎಂದು ಹೇಳಿದರು.
ಸಿದ್ದರಾಮಯ್ಯ ಹೇಳಿದ್ದೇನು?: ಇನ್ನು ಸಾಮಾಜಿಕ ಜಾಲತಾಣದಲ್ಲಿ ಸಂದರ್ಶಕಿ ಹಾಗೂ ತಮ್ಮ ನಡುವಿನ ಸಂಭಾಷಣೆಯನ್ನೂ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಸಿದ್ದರಾಮಯ್ಯ ಅವರು, ‘ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ, ಡಿ.ಕೆ. ಶಿವಕುಮಾರ್ ಅವರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ. ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಇದು ಸಹಜ ಇದರಲ್ಲಿ ಯಾವುದೇ ತಪ್ಪಿಲ್ಲ. ಮತ್ಯಾರಾದರೂ ಮುಖ್ಯಮಂತ್ರಿಯಾಗಲು ಬಯಸಿದರೆ ಅದೂ ತಪ್ಪಲ್ಲ. ಕೊನೆಯದಾಗಿ ಹೈಕಮಾಂಡ್ ಹಾಗೂ ಚುನಾಯಿತ ಶಾಸಕರು ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡುತ್ತಾರೆ. ಇದು ನಮ್ಮ ಪ್ರಜಾಪ್ರಭುತ್ವದ ಪ್ರಕ್ರಿಯೆ’ ಎಂದು ಹೇಳಿದ್ದೆ ಎಂದು ತಿಳಿಸಿದ್ದಾರೆ.
ಆಟೋ ಮೇಲೆ ಪಕ್ಷಗಳ ಸ್ಟಿಕ್ಕರ್, ಬ್ಯಾನರ್ ಇದ್ದರೆ ಕೇಸ್: ಈವರೆಗೂ 450ಕ್ಕೂ ಹೆಚ್ಚು ಪ್ರಕರಣ ದಾಖಲು
ಅದಾನಿ ಟೀವಿ- ಸುರ್ಜೇವಾಲಾ ಟಾಂಗ್: ಈ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಿಡಿ ಕಾರಿದ್ದು, ‘ಕಾಂಗ್ರೆಸ್ ಮುಖ್ಯಮಂತ್ರಿ ಹುದ್ದೆ ಬಗ್ಗೆ ಎನ್‌ಡಿಟಿವಿ (ಅದಾನಿ ಮಾಲೀಕತ್ವದ ಟೀವಿ) ಸುಳ್ಳು ಸುದ್ದಿ ಪ್ರಕಟಿಸಿದೆ. ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರ ರಾಜೀನಾಮೆಯಿಂದಾಗಿ ಬಿಜೆಪಿಯು ಪ್ರತಿ ದಿನವೂ ಕುಸಿಯುತ್ತಿದೆ. ಹೀಗಾಗಿ ಕಾಂಗ್ರೆಸ್ ನಾಯಕರಲ್ಲಿ ಬಿರುಕುಗಳನ್ನು ಸೃಷ್ಟಿಸಲು ಬಿಜೆಪಿಯು ಅದಾನಿಯವರ ಎನ್‌ಡಿಟಿವಿ ಬಳಸುತ್ತದೆ. 40 ಪರ್ಸೆಂಟ್ ಸರ್ಕಾರ ತನ್ನ ಪಾಪಗಳಿಗೆ ಬೆಲೆ ತೆರಬೇಕಾಗುತ್ತದೆ. ಅದಾನಿ ಟೀವಿ ಕೂಡ ಬಿಜೆಪಿಯನ್ನು ಉಳಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.