ಕೋವಿಡ್ ಹೆಸರಲ್ಲಿ ಪಂಚರತ್ನ ತಡೆಯಲು ಯತ್ನ: ಎಚ್.ಡಿ.ಕುಮಾರಸ್ವಾಮಿ
ದೇಶದಲ್ಲಿ ಕೋವಿಡ್‌ನ ಹೊಸ ರೂಪಾಂತರಿ ಪತ್ತೆಯಾಗುತ್ತಿದ್ದಂತೆ ರಾಜ್ಯದಲ್ಲೂ ಮತ್ತೆ ಕೋವಿಡ್ ನಿರ್ಬಂಧ ಹೇರುವ ಆತಂಕ ಸೃಷ್ಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿದೆ.
ಮದ್ದೂರು (ಡಿ.23): ದೇಶದಲ್ಲಿ ಕೋವಿಡ್‌ನ ಹೊಸ ರೂಪಾಂತರಿ ಪತ್ತೆಯಾಗುತ್ತಿದ್ದಂತೆ ರಾಜ್ಯದಲ್ಲೂ ಮತ್ತೆ ಕೋವಿಡ್ ನಿರ್ಬಂಧ ಹೇರುವ ಆತಂಕ ಸೃಷ್ಟಿಯಾಗಿರುವುದು ರಾಜ್ಯ ರಾಜಕೀಯದಲ್ಲಿ ಆರೋಪ, ಪ್ರತ್ಯಾರೋಪಕ್ಕೆ ದಾರಿ ಮಾಡಿಕೊಟ್ಟಿದೆ. ಜೆಡಿಎಸ್‌ನ ಪಂಚರತ್ನ ರಥಯಾತ್ರೆ ಹತ್ತಿಕ್ಕಲು ‘ಕೇಶವಕೃಪಾ’ದಲ್ಲಿ ಚರ್ಚೆ ನಡೆಯುತ್ತಿದೆ. ಕೊರೋನಾ ಭೂತ ಬಿಟ್ಟು ಪಂಚರತ್ನ ಯಾತ್ರೆ ಹತ್ತಿಕ್ಕಲು ಸರ್ಕಾರ ಮುಂದಾದರೆ ಅದು ಸಾಧ್ಯವಿಲ್ಲ. ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ತಾಲೂಕಿನ ಗೆಜ್ಜಲಗೆರೆಯಲ್ಲಿ ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಜೆಡಿಎಸ್‌ನ ಪಂಚರತ್ನ ರಥಯಾತ್ರೆಗೆ ವ್ಯಕ್ತವಾಗುತ್ತಿರುವ ಭಾರೀ ಜನಬೆಂಬಲ ಕಂಡು ಕೇಶವಕೃಪಾದಲ್ಲಿ ಅದನ್ನು ಹತ್ತಿಕ್ಕಲು ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ಇದೆ. ಪ್ರಧಾನಿಗಳ ಗಮನಕ್ಕೆ ತಂದು ಯಾತ್ರೆಗೆ ನಿರ್ಬಂಧ ಹೇರಲು ಹುನ್ನಾರ ನಡೆಯುತ್ತಿದೆ ಎಂಬ ಮಾಹಿತಿ ನನಗಿದೆ ಎಂದರು. ಇದೇ ವೇಳೆ ಕೊರೋನಾ ವಿಚಾರವಾಗಿ ಲಘುವಾಗಿ ಮಾತನಾಡುವುದಿಲ್ಲ ಎಂದ ಅವರು, ಯಾವುದೇ ಸಾಂಕ್ರಾಮಿಕ ರೋಗ ಬಂದಾಗಲೂ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು.
ಮಂಡ್ಯ ಪ್ರವೇಶಿಸಿದ ಜೆಡಿಎಸ್ ಪಂಚರತ್ನ ಯಾತ್ರೆ: ಕಾಪ್ಟರ್‌ನಿಂದ ಹೂಮಳೆ
ಅದಕ್ಕೆ ಎಲ್ಲಾ ರೀತಿಯ ಸಹಕಾರ ಕೊಡಲು ನಾನು ಸಿದ್ಧ ಎಂದರು. ಆದರೆ, ಕೊರೋನಾ ಭೂತ ಬಿಟ್ಟು ಪಂಚರತ್ನ ರಥಯಾತ್ರೆ ಹತ್ತಿಕ್ಕಲು ಮುಂದಾದರೆ ಅದು ಸಾಧ್ಯವಿಲ್ಲ. ಚೀನಾದಲ್ಲಿ ಕೋವಿಡ್ ಆರ್ಭಟಿಸುತ್ತಿರುವುದು ಗೊತ್ತಿದೆ. ನಮ್ಮಲ್ಲೂ ಎರಡ್ಮೂರು ಕಡೆ ಕೊರೋನಾ ಆರಂಭವಾಗಿದೆ ಎನ್ನುತ್ತಿದ್ದಾರೆ. ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅದನ್ನೇ ಅಸ್ತ್ರವನ್ನಾಗಿಸಿಕೊಂಡು ರಥಯಾತ್ರೆ ಹತ್ತಿಕ್ಕುವುದಕ್ಕೆ ಬಳಸಿದರೆ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.
ಎಚ್‌ಡಿಕೆಯೊಂದಿಗೆ ರೈತ ನಾಯಕಿ ಜತೆ ಚರ್ಚೆ: ಗೆಜ್ಜಲಗೆರೆ ಗ್ರಾಮದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ರೈತನಾಯಕಿ ಸುನಂದಜಯರಾಂ ಭೇಟಿ ಮಾಡಿ ರೈತರ ಸಮಸ್ಯೆ ಕುರಿತು ಗಮನಕ್ಕೆ ತಂದರು. ಗೆಜ್ಜಲಗೆರೆ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ರಥಯಾತ್ರೆ ಹಿನ್ನೆಲೆ ವಾಸ್ತವ್ಯ ಹೂಡಿದ್ದ ಕುಮಾರಸ್ವಾಮಿ ಅವರನ್ನು ಬೆಳಗ್ಗೆ ಭೇಟಿ ಮಾಡಿದ ರೈತ ನಾಯಕಿ ಸುನಂದಜಯರಾಂ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಂತೆ ಸರ್ಕಾರದ ಮಟ್ಟದಲ್ಲಿ ಒತ್ತಾಯ ಮಾಡುವಂತೆ ಮನವಿ ಮಾಡಿದರು. ಕಬ್ಬಿನ ದರ ಸೇರಿದಂತೆ ರೈತರ ಸಮಸ್ಯೆ ಬಗ್ಗೆ ಸರ್ಕಾರ ಕಿಂಚಿತ್ತು ತಲೆಕೆಡಿಸಿಕೊಂಡಿಲ್ಲ.
Ramanagara: ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ
ವಿರೋಧ ಪಕ್ಷದ ನಾಯಕರಾಗಿರುವ ನೀವುಗಳು ಸರ್ಕಾರ ಮಟ್ಟದಲ್ಲಿ ಹೋರಾಟ ನಡೆಸಿ ಕಬ್ಬಿಗೆ ಎಫ್‌ಆರ್‌ಪಿ ದರ ಕೊಡಿಸುವಂತೆ ಕೋರಿದರು. ಜಿಲ್ಲೆಯ ಮೈಷುಗರ್ ಕಾರ್ಖಾನೆಯನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿಪಡಿಸಲು ಸರ್ಕಾರದ ಗಮನ ಸೆಳೆಯಬೇಕು. ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಬೇಕೆಂದು ಜೊತೆಗೆ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಹೆಚ್ಚು ಅನುಕೂಲಗಳನ್ನು ಕಲ್ಪಿಸಬೇಕೆಂದು ಕೊರಿದರು. ಈ ವೇಳೆ ಶಾಸಕ ಡಿ.ಸಿ.ತಮ್ಮಣ್ಣ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಕುದರಗುಂಡಿ ರೈತ ಮುಖಂಡ ನಾಗರಾಜು ಕುಮಾರಸ್ವಾಮಿ ಅವರೊಂದಿಗೆ ಲಘು ಉಪಹಾರ ಸೇವಿಸಿದರು.