ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮಬದ್ಧಗೊಳಿಸುವ ಯೋಜನೆ (ಪಿಎಂಎಫ್ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ. ಕೆಪೆಕ್ ಎಂದೇ ಹೆಸರಾದ ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ ಈ ಗಣನೀಯ ಸಾಧನೆ ಮಾಡಿದೆ.
ಬೆಂಗಳೂರು : ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮಬದ್ಧಗೊಳಿಸುವ ಯೋಜನೆ (ಪಿಎಂಎಫ್ಎಂಇ) ಅನುಷ್ಠಾನದಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದುಕೊಂಡಿದೆ.
ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ
ಕರ್ನಾಟಕದಲ್ಲಿ ಪಿಎಂಎಫ್ಎಂಇ ಯೋಜನೆ ಅನುಷ್ಠಾನದ ಜವಾಬ್ದಾರಿ ಹೊತ್ತಿರುವ ಕೆಪೆಕ್ ಎಂದೇ ಹೆಸರಾದ ಕರ್ನಾಟಕ ಆಹಾರ ಸಂಸ್ಕರಣೆ ಮತ್ತು ರಫ್ತು ನಿಗಮ ಈ ಗಣನೀಯ ಸಾಧನೆ ಮಾಡಿದೆ. ಸಾಲ ವಿತರಣೆಯಲ್ಲಿ ಕರ್ನಾಟಕದ ಜೊತೆ ನೆರೆಯ ತಮಿಳುನಾಡು ಕೂಡ ಮೊದಲ ಸ್ಥಾನ ಹಂಚಿಕೊಂಡಿದೆ.
2021-22ರಲ್ಲಿ ಆರಂಭವಾದ ಈ ಯೋಜನೆ
2021-22ರಲ್ಲಿ ಆರಂಭವಾದ ಈ ಯೋಜನೆಯ ನೆರವು ಬಯಸಿ ಕೆಪೆಕ್‌ಗೆ ಈ ಜನವರಿ ಅಂತ್ಯಕ್ಕೆ 8,734 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 7,872 ಅರ್ಜಿದಾರರಿಗೆ ಸಾಲ ವಿತರಿಸುವ ಮೂಲಕ ಶೇ.90ರಷ್ಟು ಸಾಧನೆ ಮಾಡಲಾಗಿದೆ. ಸಾಲ ಮಂಜೂರಾದ ಶೇ.90ರಷ್ಟು ಅರ್ಜಿಗಳಿಗೆ ಕೆಪೆಕ್ ಸಹಾಯಧನ ಸಂಪರ್ಕಿತ ಸಾಲ ವಿತರಣೆ ಮಾಡಲಾಗಿದೆ.
2025-26ರ ಆರ್ಥಿಕ ವರ್ಷ ಒಂದರಲ್ಲೇ 8,162 ಅರ್ಜಿಗಳನ್ನು ಸ್ವೀಕರಿಸಿ 2,346 ಅರ್ಜಿಗಳಿಗೆ ಸಾಲ ಮಂಜೂರಾಗಿದೆ. ಈ ಪೈಕಿ 1,764 ಅರ್ಜಿದಾರರಿಗೆ ಸಾಲ ವಿತರಿಸಲಾಗಿದೆ. 2,486 ಅರ್ಜಿಗಳು ಬ್ಯಾಂಕುಗಳಲ್ಲಿ ಪರಿಶೀಲನಾ ಹಂತದಲ್ಲಿದೆ. ಯೋಜನೆ ಆರಂಭವಾದ 5 ವರ್ಷಗಳಲ್ಲಿ ಇದು ಗರಿಷ್ಠ ಸಾಧನೆ. ಸಾಲ ವಿತರಣೆಯಲ್ಲಿ ಕರ್ನಾಟಕ ರಾಜ್ಯ ರಾಷ್ಟ್ರದಲ್ಲೇ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್ ಶಿವಪ್ರಕಾಶ್ ತಿಳಿಸಿದ್ದಾರೆ.
ಬ್ಯಾಂಕುಗಳೊಂದಿಗೆ ಕೆಪೆಕ್ ಸಂಸ್ಥೆ ಸತತವಾಗಿ ನಡೆಸಿದ ಸಭೆಗಳು, ಅನುಸರಣಾ ಕ್ರಮಗಳು, ಬ್ಯಾಂಕುಗಳು ಹಾಗೂ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ. ಇನ್ನು 2,486 ಅರ್ಜಿಗಳು ಬ್ಯಾಂಕುಗಳ ಪರಿಶೀಲನಾ ಹಂತದಲ್ಲಿದ್ದು, ಸದ್ಯದಲ್ಲೇ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಬ್ಯಾಂಕರುಗಳ ಸಭೆ ನಡೆಯಲಿದೆ. ಈ ಆರ್ಥಿಕ ವರ್ಷಾಂತ್ಯಕ್ಕೆ 4,000 ಅರ್ಜಿಗಳಿಗೆ ಸಹಾಯಧನ ಸಂಪರ್ಕಿತ ಸಾಲ ಮಂಜೂರಾತಿ ವಿಶ್ವಾಸವಿದೆ ಎಂದು ಶಿವಪ್ರಕಾಶ್ ಹೇಳಿದ್ದಾರೆ.
ಸಾಲ ವಿತರಣೆಯಲ್ಲಿ ಟಾಪ್ 10 ರಾಜ್ಯಗಳು
ಸ್ಥಾನ ರಾಜ್ಯ ಸಾಲ ಮಂಜೂರು ಸಾಲ ವಿತರಣೆ ಶೇಕಡವಾರು ಸಾಧನೆ
1 ಕರ್ನಾಟಕ 8,734 7,872 90%
2 ತಮಿಳುನಾಡು 18,167 16,388 90%
3 ಕೇರಳ 8,316 7,150 86%
4 ಉತ್ತರಪ್ರದೇಶ 22,861 19,730 86%
5 ಮಹಾರಾಷ್ಟ್ರ 28,069 23,557 84%
6 ಅಸ್ಸಾಂ 5,599 4,582 82%
7 ತೆಲಂಗಾಣ 7,393 5,850 79%
8 ಮಧ್ಯಪ್ರದೇಶ 13,885 10,966 79%
9 ಆಂಧ್ರ ಪ್ರದೇಶ 8,879 6,695 75%
10 ಬಿಹಾರ 2,9393 20,087 68%
ಸಾಧನೆಯ ಹಾದಿ
- ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮಬದ್ದತೆಗೆ ಸ್ಕೀಂ
- ರಾಜ್ಯದಲ್ಲಿ ಯೋಜನೆ ಅನುಷ್ಠಾನ ಹೊತ್ತಿರುವ ಕೆಪೆಕ್
- 2025-26ರಲ್ಲಿ 2,346 ಅರ್ಜಿಗಳಿಗೆ ಸಾಲ ಮಂಜೂರು
- ತಮಿಳುನಾಡಿನ ಜತೆ ರಾಜ್ಯಕ್ಕೆ ಮೊದಲ ಸ್ಥಾನ ಪ್ರಾಪ್ತಿ
- ಈ ಪೈಕಿ 1,764 ಮಂದಿಗೆ ಈಗಾಗಲೇ ಸಾಲ ವಿತರಣೆ
- ಯೋಜನೆ ಆರಂಭವಾದ 5 ವರ್ಷದಲ್ಲಿ ಗರಿಷ್ಠ ಸಾಧನೆ


