ಉದ್ಯಮಿ ಸಿಜೆ ರಾಯ್ ಅವರ ದುರಂತ ಅಂತ್ಯದ ನಂತರ, ಖ್ಯಾತ ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಅವರು ತೆರಿಗೆ ಅಧಿಕಾರಿಗಳ ಕಿರುಕುಳ ಮತ್ತು ವ್ಯವಸ್ಥೆಯಲ್ಲಿನ ಲೋಪದೋಷಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ದಾಖಲೆಯ ತೆರಿಗೆ ಸಂಗ್ರಹದ ನಡುವೆಯೂ ಈ ರೀತಿಯ ಕ್ರೂರ ದಾಳಿಗಳ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು (ಫೆ.1): ದೇಶದ ತೆರಿಗೆ ವ್ಯವಸ್ಥೆಯಲ್ಲಿನ ಲೋಪದೋಷ ಹಾಗೂ ಅಧಿಕಾರಿಗಳ ಅತಿರೇಕದ ವರ್ತನೆಯ ವಿರುದ್ಧ ಕರ್ನಾಟಕದ ಖ್ಯಾತ ಉದ್ಯಮಿ ಟಿ.ವಿ. ಮೋಹನ್‌ದಾಸ್ ಪೈ ಈಗ 'ಬಿಗ್ ಬಾಂಬ್' ಸಿಡಿಸಿದ್ದಾರೆ. ಇತ್ತೀಚೆಗೆ ಉದ್ಯಮಿ ಸಿಜೆ ರಾಯ್(CJ Roy) ಅವರ ದುರಂತ ಅಂತ್ಯದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪೈ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪ್ರಧಾನಿ ಮೋದಿ ಅವರಿಗೆ 'X' (ಟ್ವಿಟರ್) ಮೂಲಕ ನೇರ ಮನವಿ ಸಲ್ಲಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿದ್ಧಾರ್ಥ್ ಆಯ್ತು, ಈಗ ರಾಯ್; ರಕ್ಷಿಸೋರು ಯಾರು?

ನಾವು ಈಗಾಗಲೇ ಸಿದ್ಧಾರ್ಥ್ ಅವರನ್ನು ಕಳೆದುಕೊಂಡಿದ್ದೇವೆ, ಈಗ ಸಿಜೆ ರಾಯ್ ಅವರ ಸರದಿ. ಐಟಿ ಅಧಿಕಾರಿಗಳ ಟಾರ್ಚರ್‌ಗೆ ಅನೇಕ ಉದ್ಯಮಿಗಳು ನಲುಗಿ ಹೋಗುತ್ತಿದ್ದಾರೆ. ದಯವಿಟ್ಟು ಸಿಜೆ ರಾಯ್ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ನಡೆಸಿ ಎಂದು ಪೈ ಆಗ್ರಹಿಸಿದ್ದಾರೆ. ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ, ಆದರೆ ಸಾಮಾನ್ಯ ತೆರಿಗೆದಾರರನ್ನು ರಕ್ಷಿಸುವವರು ಯಾರು? ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ದಾಖಲೆಯ ತೆರಿಗೆ ಸಂಗ್ರಹ, ಆದರೂ ಏಕೆ ಈ ಕ್ರೌರ್ಯ?

ಕಳೆದ ಮೂರು ವರ್ಷಗಳಲ್ಲಿ ನೇರ ತೆರಿಗೆಯಿಂದ ಬರೋಬ್ಬರಿ 72 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದ್ದೀರಿ. ಡಿಜಿಟಲ್ ಕ್ರಾಂತಿಯ ಮೂಲಕ ದಾಖಲೆಯ ಹಣ ಸರ್ಕಾರದ ಬೊಕ್ಕಸ ಸೇರುತ್ತಿದೆ. ಹೀಗಿರುವಾಗ ಈ ರೀತಿಯ ಕ್ರೂರ ರೇಡ್‌ಗಳ ಅಗತ್ಯವೇನಿದೆ? ಈ ರೇಡ್‌ಗಳಿಂದ ಸಂಗ್ರಹವಾದ ಮೊತ್ತ ಎಷ್ಟು? ಎಷ್ಟು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇವೆ? ದಯವಿಟ್ಟು ಇದರ ವಿವರ ನೀಡಿ ಎಂದು ಪೈ ಲೆಕ್ಕ ಕೇಳಿದ್ದಾರೆ.

ಅಧಿಕಾರಿಗಳಿಗೆ ಶಿಕ್ಷೆ ಇಲ್ವಾ?

ತಪ್ಪಾಗಿ ರೇಡ್ ಮಾಡಿದ ಸಂದರ್ಭದಲ್ಲಿ ಅಥವಾ ಕಿರುಕುಳ ನೀಡಿದ ಅಧಿಕಾರಿಗಳ ವಿರುದ್ಧ ಸರ್ಕಾರ ಇದುವರೆಗೆ ಕಠಿಣ ಕ್ರಮ ಕೈಗೊಂಡಿದೆಯೇ? ಖಂಡಿತ ಇಲ್ಲ ಎಂದು ಪೈ ಆಕ್ರೋಶ ಹೊರಹಾಕಿದ್ದಾರೆ. ಟ್ಯಾಕ್ಸ್ ಕಟ್ಟುವವರನ್ನು ರಕ್ಷಿಸಿ, ಅವರಿಗೆ ಗೌರವ ನೀಡಿ ಎಂಬುದು ಉದ್ಯಮಿಗಳ ಒಕ್ಕೊರಲ ಒತ್ತಾಯವಾಗಿದೆ.