ಸತತ ಮೂರು ದಿನಗಳ ಕಾಲ ದೆಹಲಿಯ ಗುದ್ದಾಟ ನಡೆಸಿದ ಬಳಿಕ ಸಿದ್ಧರಾಮಯ್ಯ 2ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. 1947ರ ಆಗಸ್ಟ್‌ 3 ರಂದು ಜನಿಸಿದ್ದ ಸಿದ್ಧರಾಮಯ್ಯ, 2ನೇ ಬಾರಿಗೆ ಸಿಎಂ ಪದವಿಗೇರಿದ ಕೆಲವೇ ಕೆಲವು ನಾಯಕರಲ್ಲಿ ಒಬ್ಬರಾಗಿದ್ದಾರೆ. 

ಬೆಂಗಳೂರು (ಮೇ.18): 2ನೇ ಬಾರಿಗೆ ನಾಡಿನ ದೊರೆಯಾಗಿ ಸಿದ್ಧರಾಮಯ್ಯ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 1947ರ ಆಗಸ್ಟ್‌ 3 ರಂದು ಮೈಸೂರು ಜಿಲ್ಲೆಯ ವರುಣಾ ಹೋಬಳಿಯ ಸಿದ್ಧರಾಮನಹುಂಡಿ ಎನ್ನುವ ಪುಟ್ಟ ಗ್ರಾಮದಲ್ಲಿ ಜನಿಸಿದ ಸಿದ್ಧರಾಮಯ್ಯ, ರಾಜ್ಯದ ಅತ್ಯಂತ ಜನಪ್ರಿಯ ನಾಯಕರಾಗಿ ಬೆಳೆದ ಹಾದಿಯೇ ಸ್ಫೂರ್ತಿ ನೀಡುವಂಥದ್ದು. ಬಡ ರೈತ ಕುಟುಂಬದ ಬಂದ ಸಿದ್ಧರಾಮಯ್ಯನವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ ಪದವಿ ಪಡೆದಿದ್ದಾರೆ. ಆ ಮೂಲಕ ಇಡೀ ಕುಟುಂಬದಲ್ಲಿ ಪದವಿ ಪೂರೈಸಿದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದರು. ಅದಾದ ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ವಿದ್ಯಾಭ್ಯಾಸ ಮಾಡಿದ್ದ ಸಿದ್ಧರಾಮಯ್ಯ, ಕೆಲ ಕಾಲ ಕಾನೂನು ವೃತ್ತಿಯಲ್ಲೂ ಕೆಲಸ ಮಾಡಿದ್ದರು. ವಿದ್ಯಾರ್ಥಿ ದಿನಗಳಲ್ಲಿಯೇ ಉತ್ತಮ ವಾಗ್ಮಿ ಹಾಗೂ ಭಾಷಣದ ಮೂಲಕ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದ ಸಿದ್ಧರಾಮಯ್ಯ ಡಾ. ರಾಮ್ ಮನೋಹರ್ ಲೋಹಿಯಾ ಅವರು ಪ್ರತಿಪಾದಿಸಿದ ಸಮಾಜವಾದದಿಂದ ಅವರು ಪ್ರಭಾವಿತರಾಗಿದ್ದರು. ಸಮಾಜದಲ್ಲಿ ದೀನದಲಿತರು ಮತ್ತು ದುರ್ಬಲ ವರ್ಗಳಿಗೆ ಸಾಮಾಜಿಕ ನ್ಯಾಯವನ್ನು ಸಿಗಲು ಹೆಚ್ಚು ಅರ್ಥಪೂರ್ಣ ಹಾಗೂ ಪರಿಣಾಮಕಾರಿಯಾದ ಮಾರ್ಗವನ್ನು ಹುಡುಕುವ ಹಾದಿಯಲ್ಲಿ ಕಾನೂನು ಕ್ಷೇತ್ರಕ್ಕೆ ವಿದಾಯ ಹೇಳಿ ರಾಜಕೀಯ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದರು.

ಇದರೊಂದಿಗೆ ಕರ್ನಾಟಕ ರಾಜಕೀಯದಲ್ಲಿ ಸಿದ್ಧರಾಮಯ್ಯ ಎನ್ನುವ ಪ್ರಭಾವಿ ನಾಯಕನ ದಿನಗಳು ಆರಂಭವಾಗಿದ್ದವು. 1983ರಲ್ಲಿ ಭಾರತೀಯ ಲೋಕದಳ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಸಿದ್ಧರಾಮಯ್ಯ, ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಕರ್ನಾಟಕದ 7ನೇ ವಿಧಾನಸಭೆಗೆ ಪ್ರವೇಶ ಪಡೆದಿದ್ದರು. ನಂತರ, ಆಡಳಿತಾರೂಢ ಜನತಾ ಪಕ್ಷಕ್ಕೆ ಸೇರಿಕೊಂಡ , ಅವರು ಕನ್ನಡವನ್ನು ಅಧಿಕೃತ ಭಾಷೆಯಾಗಿ ಅನುಷ್ಠಾನಗೊಳಿಸುವುದನ್ನು ಮೇಲ್ವಿಚಾರಣೆ ಮಾಡಲು ಸ್ಥಾಪಿಸಲಾದ ಕನ್ನಡ ಕಾವಲು ಸಮಿತಿಯ (ಕನ್ನಡ ಕಾವಲು ಸಮಿತಿ) ಮೊದಲ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಈ ಸಂಸ್ಥೆಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಮೃದ್ಧಿಗಾಗಿ ಶ್ರಮಿಸಿದರು. ಆ ಬಳಿಕ ರೇಷ್ಮೇ ಸಚಿವರಾಗಿಯೂ ಕೆಲಸ ಮಾಡಿದ್ದ ಅವರು, ರಾಜ್ಯದಲ್ಲಿ ರೇಷ್ಮೆ ಇಲಾಖೆ ಮತ್ತು ರೇಷ್ಮೆ ಉದ್ಯಮದ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1985 ರ ಮಧ್ಯಂತರ ಚುನಾವಣೆಯ ಸಮಯದಲ್ಲಿ, ಸಿದ್ದರಾಮಯ್ಯ ಅವರು 8 ನೇ ಕರ್ನಾಟಕ ವಿಧಾನಸಭೆಗೆ ಅದೇ ಕ್ಷೇತ್ರದಿಂದ ಮರು ಆಯ್ಕೆಯಾದರು. ಈ ವೇಳೆ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಸಚಿವರಾಗಿ ಗಮನಾರ್ಹವಾಗಿ ಸೇವೆ ಸಲ್ಲಿಸಿದರು. ಅವರು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ಅವರು ಜಾರಿಗೊಳಿಸಿದ ಕಾರ್ಯಕ್ರಮಗಳು ಮತ್ತು ನೀತಿಗಳಲ್ಲಿ ಗ್ರಾಮೀಣ ಜನರ ಮೇಲಿನ ಪ್ರೀತಿ ಮತ್ತು ವಾತ್ಸಲ್ಯವೂ ವ್ಯಕ್ತವಾಗಿತ್ತು. ಸಿದ್ದರಾಮಯ್ಯ ಒಬ್ಬ ಮಾಸ್ ಲೀಡರ್. ಸಾಮಾನ್ಯವಾಗಿ ಸಮಾಜದ ಎಲ್ಲಾ ವರ್ಗಗಳಲ್ಲಿ ಇವರು ಜನಪ್ರಿಯರಾಗಿದ್ದಾರೆ. ವಿಶೇಷವಾಗಿ ಹಿಂದುಳಿದ ವರ್ಗಗಳ ಜನರಿಗೆ ಇವರೇ ಭರವಸೆಯ ಸಂಕೇತ, ಜನತಾದಳದ ಪ್ರಧಾನ ಕಾರ್ಯದರ್ಶಿಯಾಗಿ ಅವರು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸಿಸಿದ್ದರು.

1994 ರ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಮತ್ತೊಮ್ಮೆ ಆಯ್ಕೆಯಾದರು. ಅವರು ಹಣಕಾಸು ಮತ್ತು ಅಬಕಾರಿ ಖಾತೆಯನ್ನು ಹೊಂದಿದ್ದಲ್ಲದೆ, ಉಪಮುಖ್ಯಮಂತ್ರಿಯೂ ಆಗಿದ್ದರು. ಈ ಹಂತದಲ್ಲಿ ಅವರ ಜನಪ್ರಿಯತೆ ಏರುಗತಿಯಲ್ಲಿ ಸಾಗಿತ್ತು. ರಾಜ್ಯದ ಬೊಕ್ಕಸವನ್ನು ತುಂಬಿಸುವಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಲ್ಲದೆ, ಹಿಂದಿನ ಸರ್ಕಾರ ಮಾಡಿದ್ದ ಎಲ್ಲಾ ಸಾಲವನ್ನು ಮರುಪಾವತಿ ಮಾಡಿದ್ದರು. ಅವರು ಹಣಕಾಸು ಸಚಿವರಾಗಿದ್ದ ಸಮಯದಲ್ಲಿ ರಾಜ್ಯ ಮತ್ತೆ ಸಾಲಕ್ಕೆ ಇಳಿದಿರಲಿಲ್ಲ ಎನ್ನುವುದೇ ಹೆಮ್ಮೆಯ ಸಂಗತಿಯಾಗಿತ್ತು. ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಸಂಗ್ರಹಿಸುವ ಕೆಲಸವನ್ನು ಸಿದ್ಧರಾಮಯ್ಯ ಮಾಡಿದ್ದಲ್ಲದೆ, ಕ್ರೆಡಿಟ್ ರೇಟಿಂಗ್ ಕಂಪನಿಯು ತನ್ನ ವರದಿಯಲ್ಲಿ ಕರ್ನಾಟಕವನ್ನು ದೇಶದಲ್ಲಿ ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುವ ರಾಜ್ಯ ಎಂದು ಗುರುತಿಸುವಂತೆ ಮಾಡಿದ್ದರು. ಅವರು 1999 ರಿಂದ 2004 ರಲ್ಲಿ ಜನತಾ ದಳ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು.

ಕರ್ನಾಟಕ್ಕೆ ನಿಗವಾದ ಪ್ರಗತಿ ಹಾಗೂ ಮಾದರಿ ರಾಜ್ಯವಾಗಿ ಮಾಡುವ ನಿಟ್ಟಿನಲ್ಲಿ ತಮ್ಮದೇ ದೃಷ್ಟಿಕೋನವನ್ನು ಹೊಂದಿದ್ದ ಅವರು 2004ರ ಆಗಸ್ಟ್‌ನಲ್ಲಿ ಮತ್ತೊಮ್ಮೆ ವಿಧಾನಭೆ ಚುನಾವಣೆಯಲ್ಲಿ ಗೆಲುವು ಕಂಡರು. ಹಣಕಾಸು ಮತ್ತು ಅಬಕಾರಿಯೊಂದಿಗೆ ಕರ್ನಾಟಕದ ಉಪಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಪಡೆದರು. ವ್ಯವಸ್ಥೆಯಲ್ಲಿ ಸೋರಿಕೆ ಹಾಗೂ ಲೋಪದೋಷಗಳನ್ನು ಸುಧಾರಿಸಿ ಆದಾಯ ಸಂಗ್ರಹ ಮಾಡುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದರು. ಈ ಅವಧಿಯಲ್ಲಿ ಅವರ ಬಜೆಟ್‌ಅನ್ನು ರಾಜ್ಯದ ಎಲ್ಲಾ ವರ್ಗದ ಜನರು ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞರು, ಆರ್ಥಿಕ ತಜ್ಞರು ಮತ್ತು ರಾಜಕೀಯ ಚಿಂತಕರು ಬಹುವಾಗಿ ಮೆಚ್ಚಿದ್ದರು.

ಮೂರು ಅಹಿಂದ ಸಮಾವೇಶಗಳನ್ನು ಆಯೋಜನೆ ಮಾಡಿದ ಬೆನ್ನಲ್ಲಿಯೇ 2006ರಲ್ಲಿ ಜೆಡಿಎಸ್‌ಅನ್ನು ತೊರೆದ ಅವರು ಅಖಿಲ ಭಾರತ ಪ್ರೊಗ್ರೆಸಿವ್‌ ಜನತಾ ದಳ (ಎಬಿಪಿಜೆಡಿ) ಸೇರಿಕೊಂಡಿದ್ದರು. ಈ ಪಕ್ಷವು ತನ್ನದೇ ಆದ ಸಂಘಟನೆ ಮತ್ತು ಗುರುತಿನಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತ್ತು. 2006ರಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ನ ಪ್ರಸ್ತಾಪದ ಮೇರೆಗೆ ಅವರು, ತಮ್ಮ ಅಪಾರ ಅಭಿಮಾನಿಗಳೊಂದಿಗೆ ಕಾಂಗ್ರೆಸ್‌ ಪಕ್ಷವನ್ನು ಸೇರುವ ಮೂಲಕ ರಾಜಕೀಯದ ಮತ್ತೊಂದು ಯುಗವನ್ನು ಆರಂಭ ಮಾಡಿದ್ದರು.ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮತ್ತೆ ಅದೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಸಂಪೂರ್ಣ ಬೆಂಬಲ, ಪ್ರೀತಿ ಮತ್ತು ಪ್ರೀತಿಯಿಂದ ಆ ಚುನಾವಣೆಯಲ್ಲಿ ಗೆಲುವು ಕಂಡಿದ್ದರು.

2008ರ ಚುನಾವಣೆಯಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ನೇಮಕವಾಗಿದ್ದ ಸಿದ್ಧರಾಮಯ್ಯ, ಕಾಂಗ್ರೆಸ್ ಪಕ್ಷವು ಗರಿಷ್ಠ ವೋಟ್‌ ಶೇರ್‌ ಪಡೆಯಲು ಶ್ರಮಿಸಿದ್ದರು. ಅದರೊಂದಿಗೆ ಮರುವರ್ಗೀಕರಣವಾಗಿದ್ದ ವರುಣಾ ಕ್ಷೇತ್ರದಿಂದ 2008ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಸಿದ್ದು ಕ್ಯಾಬಿನೆಟ್ ಸಚಿವರ ಸಂಭಾವ್ಯ ಪಟ್ಟಿ, ಸವದಿ, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಹಲವರಿಗೆ ಸ್ಥಾನ!

ಕಾಂಗ್ರೆಸ್ ಹೈಕಮಾಂಡ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿತು, ತಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಸಿದ್ಧರಾಮಯ್ಯ ಪ್ರತಿಪಕ್ಷವನ್ನು ಟೀಕೆ ಮಾಡುವ ಸಣ್ಣ ಅವಕಾಶವನ್ನೂ ಕೂಡ ಬಿಟ್ಟಿರಲಿಲ್ಲ. 2013ರ ಚುನಾವನೆಯಲ್ಲಿ "ವರುಣಾ" ಕ್ಷೇತ್ರದಿಂದ 14 ನೇ ವಿಧಾನಸಭೆಗೆ ಮರು ಆಯ್ಕೆಯಾಗಿದ್ದಲ್ಲದೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದರು. ಅದೇ ವರ್ಷದ ಮೇ 13ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

2024ರ ಲೋಕಸಭಾ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ? ಅಧಿಕಾರ ಹಂಚಿಕೆ ಸುಳಿವು!

2018ರ ಚುನಾವಣೆಯಲ್ಲಿ ಬಾದಾಮಿ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಸಿದ್ಧರಾಮಯ್ಯ, ಬಾದಾಮಿಯಲ್ಲಿ ಅಲ್ಪ ಅಂತರದ ಗೆಲುವು ಕಂಡರೆ, ಚಾಮುಂಡೇಶ್ವರಿಯಲ್ಲಿ ಸೋಲು ಕಂಡಿದ್ದರು. 2019ರಲ್ಲಿ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿದ್ದರು. ವಿಧಾನಸಭೆಯ ಪ್ರತಿಪಕ್ಷದ ನಾಯಕರಾಗಿ ಬಿಜೆಪಿ ವಿರುದ್ಧ ವಿಧಾನಸಭೆಯಲ್ಲಿ ಟೀಕೆಗಳ ಸುರಿಮಳೆ ಮಾಡಿದ್ದರು. 2023ರ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅವರು ಬಿಜೆಪಿಯ ವಿ.ಸೋಮಣ್ಣ ಅವರನ್ನು ಸೋಲಿಸುವ ಮೂಲಕ, 16ನೇ ವಿಧಾನಸಭೆಗೆ ಆಯ್ಕೆಯಾಗಿದ್ದು, 2ನೇ ಬಾರಿಗೆ ಸಿಎಂ ಆಗಿ ಅಧಿಕಾರ ವಹಿಸಿಕೊಳ್ಳುವ ಹಾದಿಯಲ್ಲಿದ್ದಾರೆ.

Suvarna News 24x7 Live | ಏಷ್ಯಾನೆಟ್ ಸುವರ್ಣ ನ್ಯೂಸ್ | Siddaramaiah CM Of Karnataka | Karnataka Congress