2024ರ ಲೋಕಸಭಾ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿ? ಅಧಿಕಾರ ಹಂಚಿಕೆ ಸುಳಿವು!
ಕರ್ನಾಟಕ ಸಿಎಂ ಜಟಾಪಟಿ ಅಂತ್ಯಗೊಂಡಿದೆ. ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾದರೆ, ಡಿಕೆ ಶಿವಕುಮಾರ್‌ಗೆ ಪಟ್ಟ ನೀಡಲಾಗಿದೆ. ಆದರೆ ಸಿದ್ದು ಅವಧಿ ಕೇವಲ 1 ವರ್ಷ ಮಾತ್ರ. 2024ರ ಲೋಕಸಭಾ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗುತ್ತಿದೆ. ಕಾಂಗ್ರೆಸ್ ಹೈಕಮಾಂಡ್, ಡಿಕೆ ಶಿವಕುಮಾರ್ ಈ ಕುರಿತು ಕೆಲ ಸೂಚನೆ ನೀಡಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯನವರ ಮೌನ ಎಲ್ಲದಕ್ಕೂ ಉತ್ತರ ಹೇಳುತ್ತಿದೆ.
ನವದೆಹಲಿ(ಮೇ.18): ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆದ ಪೈಪೋಟಿ ಅಂತ್ಯವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಸಂಧಾನ ಸೂತ್ರ ಫಲಿಸಿಲಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ, ಡಿಕೆ ಶಿವಕುಮಾರ್‌ಗೆ ಡಿಸಿಎಂ ಸ್ಥಾನ ನೀಡಲಾಗಿದೆ. ಆದರೆ ಸಿದ್ದರಾಮಯ್ಯನವರ ಮುಖ್ಯಮಂತ್ರಿ ಅವಧಿ ಕೇವಲ 1 ವರ್ಷ ಮಾತ್ರ. ಮಂದಿನ ವರ್ಷದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಈ ಕುರಿತು ಕಾಂಗ್ರೆಸ್ ಹೈಕಮಾಂಡ್, ಖುದ್ದು ಡಿಕೆ ಶಿವಕುಮಾರ್ ಕೆಲ ಮಾಹಿತಿ ಬಹಿರಂಗಪಡಿಸಿದ್ದಾರೆ. ಇತ್ತ ಮುಖ್ಯಮಂತ್ರಿ ಸ್ಥಾನ ಸಿಕ್ಕರೂ ಸಿದ್ದರಾಮಯ್ಯ ಮುಖದಲ್ಲಿ ನಗು ಕಾಣಿಸುತ್ತಿಲ್ಲ. ಕಳೆದ ಕೆಲ ದಿನಗಳಿಂದ ಸಿದ್ದರಾಮಯ್ಯ ಗಂಭೀರವಾಗಿದ್ದು, ಅದೇ ಗಂಭೀರತೆ ಮುಂದುವರಿದಿದೆ.
ದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದ ನೂತನ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಹೆಸರು ಘೋಷಣೆ ಮಾಡಿದ್ದಾರೆ. ಇದೇ ವೇಳೆ ಅಧಿಕಾರ ಹಂಚಿಕೆ ಸೂತ್ರದ ಕುರಿತು ಮಾತನಾಡಲು ನಿರಾಕರಿಸಿದ್ದಾರೆ. ಆದರೆ ಈ ಸುದ್ದಿಗೋಷ್ಠಿಯಲ್ಲಿ ವೇಣುಗೋಪಾಲ್ ಸಣ್ಣ ಸುಳಿವನ್ನೂ ನೀಡಿದ್ದಾರೆ. ಡಿಕೆ ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿಯಾಗಿರಲಿದ್ದಾರೆ ಎಂದರು. ಇಷ್ಟೇ ಅಲ್ಲ ಡಿಕೆ ಶಿವಕುಮಾರ್ 2024ರ ಲೋಕಸಭಾ ಚನಾವಣೆವರೆಗೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ ಎಂದಿದ್ದಾರೆ. ಹೀಗಾಗಿ 2024ರ ಬಳಿಕ ಅಂದರೆ ಲೋಕಸಭಾ ಚನಾವಣೆ ಬಳಿಕ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಅನ್ನೋ ಸಣ್ಣ ಸೂಚನೆ ನೀಡಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಸಿಎಂ ಆಗಿ ಸಿದ್ದರಾಮಯ್ಯ ಮೇ.20ಕ್ಕೆ ಪ್ರಮಾಣವಚನ, ಡಿಕೆ ಶಿವಕುಮಾರ್ ಏಕೈಕ ಉಪಮುಖ್ಯಮಂತ್ರಿ!
ಸಿಎಂ, ಡಿಸಿಎಂ ಘೋಷಣೆ ಬಳಿಕ ಖಾಸಗಿ ಸುದ್ದಿ ವಾಹನಿಗೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್ ಅಧಿಕಾರ ಸೂತ್ರದ ಕುರಿತು ಮಾತನಾಡಿದರೆ ಆಡಳಿತಕ್ಕೆ ಧಕ್ಕೆಯಾಗಲಿದೆ ಎಂದು ಬಾಂಬ್ ಸಿಡಿಸಿದ್ದಾರೆ. ಖಾಸಗಿ ವಾಹನಿಗೆ ನೀಡಿದ ಸಂದರ್ಶನದಲ್ಲಿ ಅಧಿಕಾರ ಹಂಚಿಕೆ, ಸೋನಿಯಾ ಗಾಂಧಿ ಜೊತೆಗಿನ ಸಂಧಾನ ಮಾತುಕತೆ ಕುರಿತು ಯಾವುದೇ ಮಾಹಿತಿ ನೀಡಲು ಡಿಕೆಶಿ ನಿರಾಕರಿಸಿದ್ದಾರೆ.
ಸೋನಿಯಾ ಗಾಂಧಿ ಜೊತೆಗಿನ ಮಾತುಕತೆ ಬಳಿಕ ಡಿಕೆ ಶಿವಕುಮಾರ್ ಮುಖದಲ್ಲಿ ನಗು ಕಾಣಿಸುತ್ತಿದೆ. ಆದರೆ ಸಿದ್ದರಾಮಯ್ಯ ಮುಖದ ಗಂಭೀರತೆ ಮುಂದುವರಿದಿದೆ. ಇತ್ತ ಟ್ವೀಟ್ ಮೂಲಕ ಸಿದ್ದರಾಮಯ್ಯ, ಕನ್ನಡಿಗರ ಹಿತ ರಕ್ಷಣೆಗೆ ನಮ್ಮ ಕೈಗಳು ಸದಾ ಒಂದಾಗಿರಲಿದೆ. ಜನಪರ, ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ನಮ್ಮ ಎಲ್ಲಾ ಗ್ಯಾರೆಂಟಿಗಳನ್ನು ಈಡೇರಿಸಲು ಕಾಂಗ್ರೆಸ್ ಪಕ್ಷ ಒಂದು ಕುಟುಂಬವಾಗಿ ಕೆಲಸ ಮಾಡಲಿದೆ ಎಂದಿದ್ದಾರೆ. ಈ ಟ್ವೀಟ್ ಹೊರತು ಪಡಿಸಿ ಸಿದ್ದರಾಮಯ್ಯ ಯಾವುದೇ ಹೇಳಿಕೆ ನೀಡಿಲ್ಲ.
ನೂತನ ಸರ್ಕಾರದಲ್ಲಿ ಸಿಎಂ ಸಿದ್ದುಗಿಂತ ಡಿಕೆ ಶಿವಕುಮಾರ್ ಪವರ್‌ಫುಲ್, ಕನಕಪುರ ಬಂಡೆಗೆ 2 ಹೊಣೆ!