ಬೆಂಗಳೂರು, (ಅ.17):  'ಕಾವೇರಿ' ನಿವಾಸ ಬೇಕೆಂದು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಹಿನ್ನೆಡೆಯಾಗಿದೆ.

ನಿಯಮದಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರೇ ಸಿದ್ದರಾಮಯ್ಯ ವಾಸವಿದ್ದ ಕಾವೇರಿ ನಿವಾಸಕ್ಕೆ ಹೋಗುವುದು ಪಕ್ಕಾ ಆಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಕಾವೇರಿ ನಿವಾಸವನ್ನು ಖಾಲಿ ಮಾಡಬೇಕಿದೆ.

'ಕಾವೇರಿ'ಯೇ ಬೇಕೆಂದು ಸಿದ್ದರಾಮಯ್ಯ ಪಟ್ಟು: ಸರ್ಕಾರಕ್ಕೆ ಪತ್ರ

ಈ ಬಗ್ಗೆ ಇಂದು [ಗುರುವಾರ] ಕಲಬುರಗಿಯಲ್ಲಿ ಪ್ರತಿಕ್ರಿಯಿಸಿರುವ ಬಿಎಸ್ ವೈ, ಎರಡ್ಮೂರು ದಿನಗಳಲ್ಲಿ ನಾನೇ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗ್ತೀನಿ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಬೇರೆ ನಿವಾಸ ಕೊಡಲಾಗುತ್ತೆ ಎಂದು ಸ್ಪಷ್ಟಪಡಿಸಿದರು. 

ಅಷ್ಟೇ ಅಲ್ಲದೇ ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಸಹ ಆದೇಶ ಹೊರಡಿಸಿದ್ದು, ಸಿದ್ದರಾಮಯ್ಯ ಅವರಿಗೆ ಬಿಎಸ್ ವೈ ಲಕ್ಕಿ ಮನೆಯಾಗಿದ್ದ ರೇಸ್ ವ್ಯೂ ಕಾಟೇಜ್ ನಂ-2 ನಿವಾಸವನ್ನು ಹಂಚಿಕೆ ಮಾಡಲಾಗಿದೆ.

CM ಸೇರಿ 13 ಸಚಿವರಿಗೆ ನಿವಾಸ ಹಂಚಿಕೆ: ಮತ್ತೆ ಲಕ್ಕಿ ಮನೆಗೆ ಯಡಿಯೂರಪ್ಪ

ಸಿದ್ದರಾಮಯ್ಯ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ 'ಕಾವೇರಿ' ನಿವಾಸದಲ್ಲಿದ್ದರು. ನಂತರ ಮೈತ್ರಿ ಸರ್ಕಾರ ಅಸ್ಥಿತ್ವಕ್ಕೆ ಬಂದು ಯಾವುದೇ ಶಾಸನಬದ್ಧ ಹುದ್ದೆ ಇಲ್ಲದೇ ಇದ್ದರೂ ಸಹ ಅವರು ಕಾವೇರಿ ನಿವಾಸದಲ್ಲಿಯೇ ವಾಸ್ತವ್ಯ ಮುಂದುವರೆಸಿದ್ದರು.

ಆದ್ರೆ, ಇದೀಗ ಕಾವೇರಿಗೆ ಯಡಿಯೂರಪ್ಪ ಅವರು ಪ್ರವೇಶ ಮಾಡಲು ನಿರ್ಧರಿಸಿದ್ದಾರೆ. ಇದ್ರಿಂದ ಆರುವರೆ ವರ್ಷದಿಂದ ಇದ್ದ ಸಿದ್ದರಾಮಯ್ಯ ಅವರು ಸರ್ಕಾರ ಹಂಚಿಕೆ ಮಾಡಿದ ರೇಸ್ ವ್ಯೂ ಕಾಟೇಜ್ ಮನೆಗೆ ಶಿಫ್ಟ್ ಆಗಬೇಕಾದ ಅನಿವಾರ್ಯತೆ ಎದುರಾಗಿದೆ.  ನನಗೆ ಕಾವೇರಿ ನಿವಾಸವೇ ಕೊಡಿ ಎಂದು ಮೊನ್ನೇ ಅಷ್ಟೇ ವಿಪಕ್ಷ ನಾಯಕರಾದ ಮೇಲೆ ಸರ್ಕಾರಕ್ಕೆ ಪತ್ರ ಬರೆದಿದ್ದರು. 

ಬಿಎಸ್ ವೈ ಲಕ್ಕಿ ಮನೆ ಸಿದ್ದುಗೆ
ಹೌದು.. ರೇಸ್ ಕೋರ್ಸ್‌ ರಸ್ತೆಯಲ್ಲಿರುವ 'ರೇಸ್ ವ್ಯೂ ಕಾಟೇಜ್' ಒಂದು ರೀತಿಯಲ್ಲಿ ಬಿಎಸ್‍ವೈಗೆ ಇದು ಲಕ್ಕಿ ಮನೆ.  ಈ ಲಕ್ಕಿ ಮನೆಯಲ್ಲಿ ಉತ್ತಮವಾದ ಪರಿಸರ ವಾತಾವರಣ ಇದೆ. ಅಲ್ಲದೆ, ವಾಕಿಂಗ್ ಪಾಥ್, ಹುಲ್ಲು ಹಾಸು, ಬೃಹತ್ ಮರಗಳ ನೆರಳು ಈ ರೇಸ್ ಕೋರ್ಸ್ ನಿವಾಸದಲ್ಲಿ ಇದೆ. ಹೀಗಾಗಿ ಯಡಿಯೂರಪ್ಪ ಅವರಿಗೆ ಈ ಮನೆ ಇಷ್ಟ ಆಗಿದೆ. 

ಆರೂವರೆ ವರ್ಷಗಳ ಬಳಿಕ ಸರ್ಕಾರಿ ನಿವಾಸ ತೊರೆದ ಸಿದ್ದರಾಮಯ್ಯ, ಕಾವೇರಿಗೆ BSY ಲಗ್ಗೆ

ಮುಖ್ಯವಾಗಿ ಈ ಹಿಂದೆಯೂ ಸಿಎಂ ಆಗಿದ್ದಾಗ ಯಡಿಯೂರಪ್ಪನವರು ಅದೇ ನಿವಾಸದಲ್ಲಿದ್ದರು. ಅಲ್ಲದೆ, 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್‍ವೈ ಉಪ ಮುಖ್ಯಮಂತ್ರಿ ಮತ್ತು  ಮುಖ್ಯಮಂತ್ರಿಯಾಗಿದ್ದರು.

 2008ರಲ್ಲಿ ಸಿಎಂ ಆದಾಗ ಯಡಿಯೂರಪ್ಪ ಇದೇ ಮನೆಯಲ್ಲಿ ಇದ್ದರು. ಈ ಮನೆಗೆ ಬಂದ ಮೇಲೆ ಸಿಎಂ ಸ್ಥಾನ ಸಿಕ್ಕಿತು ಎಂಬ ನಂಬಿಕೆ ಯಡಿಯೂರಪ್ಪ ಅವರಿಗೆ ಇದೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ `ರೇಸ್ ವ್ಯೂ ಕಾಟೇಜ್’ ಅದೃಷ್ಟ ಮನೆ ಎಂದು ಹೇಳಲಾಗುತ್ತಿದೆ. ಇದೀಗ ಈ ಮನೆಯನ್ನು ಸಿದ್ದರಾಮಯ್ಯ ಅವರಿಗೆ ಹಂಚಿಕೆ ಮಾಡಲಾಗಿದ್ದು, ಅವರು ಈ ಮನೆಗೆ ಹೋಗುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

ಈ ಹಿಂದೆ ಸಿದ್ದರಾಮಯ್ಯ ಹೇಳಿದ್ದೇನು?
 ಕಾವೇರಿ ನಿವಾಸ ಕೇಳಿ ಸಿಎಂಗೆ ಪತ್ರ ಬರೆದ್ದೇನೆ. ಅದರಲ್ಲಿ‌ ತಪ್ಪೇನಿದೆ ಹೇಳಿ? ಅವರೂ ಕಾವೇರಿಗೆ ಬರೋದಾಗಿ ಆದೇಶ ಮಾಡಿದಾರೆ. ಅವರ ಆದೇಶವನ್ನು ಅವರು ಬದಲಾವಣೆ ಮಾಡ್ಕೋಬಹುದಲ್ಲ? ಎಂದು ಹೇಳಿದ್ದರು. 

ಅವರು ಮೊದಲು ರೇಸ್ ಕೋರ್ಸ್ ಮನೆಗೆ ಆದೇಶ ಮಾಡ್ಕೊಂಡಿದ್ರು. ನಾನು ಕಾವೇರಿ ಮನೆಯಲ್ಲಿ ಇದೀನಿ. ಈಗ ಬದಲಾವಣೆ ಮಾಡ್ಬೇಕು ಅಂದ್ರೆ ಕಷ್ಟ. ಬೇರೆ ಮನೆಗೆ ಹೋಗ್ಬೇಕಾದ್ರೆ ಸಾಮಾನುಗಳನ್ನೆಲ್ಲ ಹೊತ್ಕೊಂಡ್ ಹೋಗಬೇಕು. ಬೇರೆ ಮನೆವ ಇದೆಯೋ ಇಲ್ವೋ ಅದೂ ಗೊತ್ತಿಲ್ಲ. ಹಾಗಾಗಿ‌ ಕಾವೇರಿಯನ್ನೇ ಕೊಡಿ ಅಂತ ಕೇಳಿದೀನಿ. ಸಿಎಂ ಏನ್ ತೀರ್ಮಾನ ಮಾಡ್ತಾರೋ ನೋಡೋಣ ಎಂದಿದ್ದರು.