Dinesh Gundu Rao on CM change: ರಾಜ್ಯ ಸಚಿವ ಸಂಪುಟ ಪುನರ್‌ ರಚನೆ ಯಾವಾಗ ಬೇಕಾದರೂ ನಡೆಯಬಹುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಮುಖ್ಯಮಂತ್ರಿಗಳು ಸೋಮವಾರ ಔತಣಕೂಟಕ್ಕೆ ಕರೆದಿದ್ದು, ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ ತೀರ್ಮಾನ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.

 ಮಂಗಳೂರು (ಅ.11): ರಾಜ್ಯ ಸಚಿವ ಸಂಪುಟ ಪುನರ್‌ ರಚನೆ ಯಾವಾಗ ಬೇಕಾದರೂ ನಡೆಯಬಹುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಮಂಗಳೂರಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ಬಗ್ಗೆ ಮುಖ್ಯಮಂತ್ರಿ ಏನನ್ನೂ ಹೇಳಿಲ್ಲ. ಸಚಿವ ಸಂಪುಟ ಪುನರ್‌ ರಚನೆ ಯಾವಾಗ ಬೇಕಾದರೂ ಆಗಬಹುದು ಅಥವಾ ಹೊಸ ಸಚಿವ ಸಂಪುಟವೂ ರಚನೆ ಆಗಬಹುದು. ಇಂಥದ್ದೇ ತಿಂಗಳು ಸಂಪುಟ ಪುನರ್‌ ರಚನೆ ಎಂದು ಮುಖ್ಯಮಂತ್ರಿಗಳು ಹೇಳಿಲ್ಲ ಎಂದರು.

ಮುಖ್ಯಮಂತ್ರಿಗಳು ಸೋಮವಾರ ಔತಣಕೂಟಕ್ಕೆ ಕರೆದಿದ್ದಾರೆ. ನನ್ನನ್ನೂ ಬರಬೇಕು ಎಂದು ಕರೆದಿದ್ದಾರೆ. ಅಲ್ಲಿ ಏನಾಗುತ್ತೋ ನೋಡೋಣ ಎಂದರು.

ಇದನ್ನೂ ಓದಿ: ಬಿಜೆಪಿಯಲ್ಲಿ ಭ್ರಷ್ಟರನ್ನು ಕ್ಲೀನ್ ಮಾಡುವ ವಾಷಿಂಗ್ ಮೆಷಿನ್ ಇದೆ: ಸಚಿವ ಸಂತೋಷ್ ಲಾಡ್

ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್‌ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಈಗ ಮುಖ್ಯಮಂತ್ರಿ ಇದ್ದಾರೆ. ಪಕ್ಷದ ಹೈಕಮಾಂಡ್‌, ಹಿರಿಯ ಮುಖಂಡರು ನಿರ್ಧಾರ ಕೈಗೊಳ್ಳಲಿದ್ದಾರೆ. ಅವರ ತೀರ್ಮಾನ ಅಂತಿಮ ಎಂದರು.

ದಲಿತ ಸಚಿವರ ರಹಸ್ಯ ಸಭೆ ಕುರಿತು ಪ್ರತಿಕ್ರಿಯಿಸಿದ ಸಚಿವ ದಿನೇಶ್‌ ಗುಂಡೂರಾವ್‌, ಅವರು ಯಾವಾಗಲೂ ಸಭೆ ಸೇರಿ ಚರ್ಚೆ ನಡೆಸುತ್ತಲೇ ಇರುತ್ತಾರೆ. ಅವರೆಲ್ಲ ಸ್ನೇಹಿತರು, ಹಾಗೆ ಅವರು ಸೇರಿ ಮಾತನಾಡಿದ್ದಾರೆ. ಅದಕ್ಕೆ ಬೇರೆ ಬಣ್ಣ ಕೊಡುವುದು, ಕತೆ ಕಟ್ಟುವುದು ಸರಿಯಲ್ಲ ಎಂದರು.