2,185 ಕೋಟಿ ರು. ಅನುದಾನ ಕಡಿತಗೊಳಿಸಲಾಗಿದೆ. ಇದು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುವರ್ಣ ವಿಧಾನಸಭೆ (ಡಿ.17): ಕಡಿಮೆ ಬಡ್ಡಿದರದ ಸಾಲ ನೀಡಲು ನಬಾರ್ಡ್‌ನಿಂದ ರಾಜ್ಯಕ್ಕೆ 2024-25ನೇ ಸಾಲಿನಲ್ಲಿ 5,600 ಕೋಟಿ ರು. ಅನುದಾನ ಬರಬೇಕಿತ್ತು. ಅದರಲ್ಲಿ 3,415 ಕೋಟಿ ರು. ಮಾತ್ರ ಸಂದಾಯವಾಗಿದ್ದು, 2,185 ಕೋಟಿ ರು. ಅನುದಾನ ಕಡಿತಗೊಳಿಸಲಾಗಿದೆ. ಇದು ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್‌ನ ಡಾ.ಎಚ್.ಡಿ.ರಂಗನಾಥ್ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ನಬಾರ್ಡ್ ಅನುದಾನ ಕಡಿತದಿಂದ ರಾಜ್ಯದಲ್ಲಿ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡುವಲ್ಲಿ ಸಮಸ್ಯೆಯಾಗಿದೆ. ಆದರೂ, ರೈತರಿಗೆ ಗುರಿಯಂತೆ ಸಾಲ ನೀಡಲಾಗುವುದು ಎಂದರು.
5,600 ಬದಲು 3,415 ಕೋಟಿ ಅನುದಾನ: ಇದಕ್ಕೂ ಮುನ್ನ ಮಾತನಾಡಿದ ರಂಗನಾಥ್, ತುಮಕೂರು ಡಿಸಿಸಿ ಬ್ಯಾಂಕ್‌ನಿಂದ ಕುಣಿಗಲ್ ತಾಲೂಕಿನ ಸಹಕಾರ ಸಂಘಗಳ ಮೂಲಕ 2024-25ರಲ್ಲಿ 14,850 ರೈತರಿಗೆ 40.33 ಕೋಟಿ ರು. ಅಲ್ಪಾವಧಿ ಕೃಷಿ ಸಾಲ ನೀಡುವ ಗುರಿ ನಿಗದಿ ಮಾಡಲಾಗಿತ್ತು. ಅದರಲ್ಲಿ 10,833 ರೈತರಿಗೆ 38.40 ಕೋಟಿ ರು. ಸಾಲ ಪಡೆದಿದ್ದಾರೆ. 11 ರೈತರಿಗೆ 1.58 ಕೋಟಿ ರು. ಮಧ್ಯಮಾವಧಿ-ಧೀರ್ಘಾವಧಿ ಕೃಷಿ ಸಾಲ ನೀಡಲಾಗಿದೆ ಎಂದು ಹೇಳಿದರು. 2025-26ನೇ ಸಾಲಿನಲ್ಲಿ ತಾಲೂಕಿನ 13,750 ರೈತರಿಗೆ 40 ಕೋಟಿ ರು. ಅಲ್ಪಾವಧಿ ಕೃಷಿ ಸಾಲ ನೀಡುವ ಗುರಿ ನಿಗದಿ ಮಾಡಲಾಗಿದ್ದು, ನವೆಂಬರ್ ಅಂತ್ಯಕ್ಕೆ ಕೇವಲ 2,983 ರೈತರಿಗೆ 10.50 ಕೋಟಿ ರು. ಅಲ್ಪಾವಧಿ ಕೃಷಿ ಸಾಲ ಪಡೆದಿದ್ದಾರೆ.
20 ರೈತರಿಗೆ 2 ಕೋಟಿ ರು. ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲ ನೀಡುವ ಗುರಿಯಲ್ಲಿ 13 ರೈತರು 1.30 ಕೋಟಿ ರು. ಸಾಲ ಪಡೆದಿದ್ದಾರೆ. ಅದೇ ಮಧುಗಿರಿಯಲ್ಲಿ 100 ಕೋಟಿ ರು.ವರೆಗೆ ಸಾಲ ನೀಡಲಾಗಿದೆ. ಈ ತಾರತಮ್ಯ ಸರಿಪಡಿಸುವಂತೆ ಒತ್ತಾಯಿಸಿದರು. ಉತ್ತರ ನೀಡಿದ ಸಿದ್ದರಾಮಯ್ಯ, ಮಧುಗಿರಿಯಲ್ಲಿ ಶೇ.26ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿದ್ದಾರೆ. ಅದೇ ಕುಣಿಗಲ್‌ನಲ್ಲಿ ಶೇ.8ರಷ್ಟು ಎಸ್ಸಿ/ಎಸ್ಟಿ ಸಮುದಾಯದವರಿದ್ದಾರೆ. ಇದರಿಂದಾಗಿ ಮಧುಗಿರಿಯಲ್ಲಿ ಹೆಚ್ಚಿನ ಸಾಲ ವಿತರಿಸಲಾಗಿದೆ. ಆದರೂ, ಈ ವಿಚಾರವನ್ನು ಮತ್ತೊಮ್ಮೆ ಪರಿಶೀಲಿಸುತ್ತೇನೆ. ತಾರತಮ್ಯವಾಗಿದ್ದರೆ ಸರಿಪಡಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ರಂಗನಾಥ್ ಏರುಧ್ವನಿಯ ಮಾತು
ಪ್ರಶ್ನೆ ಕೇಳುವ ಸಂದರ್ಭದಲ್ಲ ಡಾ.ರಂಗನಾಥ್ ಉದ್ವೇಗಕ್ಕೊಳಗಾಗಿ ಏರುಧ್ವನಿಯಲ್ಲಿ ಮಾತನಾಡಿದರು. ಅದನ್ನು ಗಮನಿಸಿದ ಸಿಎಂ ಸಿದ್ದರಾಮಯ್ಯ ಉತ್ತರ ನೀಡುವಾಗ, ಡಾ.ರಂಗನಾಥ್ ಸ್ವಲ್ಪ ಏರುಧ್ವನಿಯಲ್ಲಿ ಮಾತನಾಡಿದರು. ಅವರ ಸಮಸ್ಯೆ ಅರ್ಥ ಆಗುತ್ತದೆ. ಅದನ್ನು ಸರಿಪಡಿಸುತ್ತೇವೆ. ನಮ್ಮ ಮೇಲೆ ವಿಶ್ವಾಸ, ನಂಬಿಕೆ ಇಡಿ ಎಂದರು.


