ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತರೆ ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ, ಇವಿಎಂ ಸರಿಯಿಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲು ಸಿದ್ಧತೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಮಾ.29): ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತ ನಂತರ ನ್ಯಾಯಸಮ್ಮತ ಚುನಾವಣೆ ನಡೆದಿಲ್ಲ, ಇವಿಎಂ ಸರಿಯಿಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟೀಕಿಸಿದರು.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಸರ್ಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂಬ ಮಾತಿಗೆ ತಿರುಗೇಟು ನೀಡಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೋತ ತಕ್ಷಣ ದೂರು ಸಲ್ಲಿಸಲು ಮತ್ತೊಂದು ಹೇಳಿಕೆ ಸಿದ್ಧಪಡಿಸಿ ಇಟ್ಟುಕೊಂಡಿರಬಹುದು. ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಸರ್ಕಾರವನ್ನು ದುರುಪಯೋಗಪಡಿಸಿಕೊಂಡಿದೆ ಎನ್ನುವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಸಿ.ಟಿ. ರವಿ ಉತ್ತರಿಸಿದರು. ನ್ಯಾಯಸಮ್ಮತ ಚುನಾವಣೆ ನಡೆಯಲಿಲ್ಲ ಎಂದು ದೂರಲು, ಇವಿಎಂ ಸರಿಯಿಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ಈಗಲೇ ಆರೋಪಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿರಬಹುದು ಎಂದು ಲೇವಡಿ ಮಾಡಿದರು.

ಎಬಿಪಿ ಸಿ ವೋಟರ್ ಚುನಾವಣಾ ಸಮೀಕ್ಷೆ ಪ್ರಕಟ, ಯಾರಿಗೆ ಸಿಗಲಿದೆ ಕರ್ನಾಟಕದ ಕಿರೀಟ?

ಮೀಸಲಾತಿ ವಿಚಾರದಲ್ಲಿ ಎಲ್ಲರಿಗೂ ನ್ಯಾಯ: ಮೀಸಲಾತಿ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಮಾಡುವುದಕ್ಕೆ ನಮ್ಮದು ಕಾಂಗ್ರೆಸ್ ಸರ್ಕಾರವಲ್ಲ. ಎಲ್ಲರಿಗೂ ನ್ಯಾಯ ಕೊಡಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ಕೆಲವರು ರಾಜಕೀಯ ಪ್ರೇರಿತವಾಗಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡುತ್ತಾರೆ. ಸದಾಶಿವ ಆಯೋಗ ಬಂಜಾರ, ಬೋವಿ, ಕೊರಚ, ಕೊರಮ ಈ ಸಮುದಾಯಗಳಿಗೆ ನಿಗಧಿ ಪಡಿಸಿದ್ದೇ ಶೇ.3 ರಷ್ಟು ಮೀಸಲಾತಿ. ನಮ್ಮ ಸರ್ಕಾರ ಕೊಟ್ಟಿರುವುದು ಶೇ.4.50 ರಷ್ಟು, ಹಿಂದಿದ್ದ ಕಾಂಗ್ರೆಸ್ ಸರ್ಕಾರ ಶೇ.2.50 ರಿಂದ ಶೇ.3 ಮೀಸಲಾಯಿ ಅಷ್ಟೇ ನೀಡಬೇಕು ಎಂದು ಟಿಪ್ಪಣಿ ತಯಾರಿಸಿತ್ತು ಎಂದು ವಿವರಿಸಿದರು.

ಮೀಸಲಾತಿಯಿಂದ ಯಾರಿಗೂ ಆತಂಕವಿಲ್ಲ: ಸದಾಶಿವ ಆಯೋಗ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚಿನ ಪ್ರಮಾಣದ ಮೀಸಲಾತಿಯನ್ನು ನೀಡಿವುದರಿಂದ ಆತಂಕ ಪಡುವ ಅಗತ್ಯವಿಲ್ಲ. ಇದರ ಮೇಲೆ ಯಾರಿಗಾದರೂ ಅನ್ಯಾಯವಾಗಿದೆ ಎನ್ನಿಸಿದರೆ ಅದನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಹೇಳಿದ್ದಾರೆ. ಬಂಜಾರ, ಬೋವಿ ಸಮಾಜ ಬಿಜೆಪಿ ಜೊತೆಗೆ ಮುಂಚಿನಿಂದಲೂ ಇದೆ. ನಾವೂ ಅವರ ಜೊತೆಗಿದ್ದೇವೆ. ಯಾರನ್ನೂ ಬಿಟ್ಟುಕೊಡುವ, ಕಡೆಗಣಿಸುವ ಪ್ರಶ್ನೆಯಿಲ್ಲ ಎಂದು ತಿಳಿಸಿದರು.

ಬಿಜೆಪಿ ಕೇಂದ್ರ ಸಮಿತಿ ನಿರ್ಧಾರಕ್ಕೆ ಬದ್ಧ: ಚುನಾವಣೆ ದಿನಾಂಕ ಇಂದಷ್ಟೇ ಘೋಷಣೆ ಆಗಿದೆ. ನಾವು ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪ್ರಜಾಸತ್ತಾತ್ಮಕವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅದನ್ನು ರಾಜ್ಯ ಚುನಾವಣಾ ಸಮಿತಿಯಲ್ಲಿ ಚರ್ಚಿಸಿ ಕೇಂದ್ರೀಯ ಚುನವಣಾ ಸಮಿತಿಗೆ ಶೀಫಾರಸು ಮಾಡುತ್ತೇವೆ. ಅಲ್ಲಿ ಅಂತಿಮ ತೀರ್ಮಾನ ಆಗಲಿದೆ. ನಾವು ಇನ್ನುಮುಂದೆ ಮತಬೇಟೆ ಆರಂಭಿಸುತ್ತೇವೆ. ನಿರಂತರವಾಗಿ ಕೆಲಸ ಮಾಡಿದವರು ಚುನಾವಣೆ ಸಮಯದಲ್ಲಿ ಹೆಚ್ಚು ಕಷ್ಟಪಡುವ ಸ್ಥಿತಿ ಬರುವುದಿಲ್ಲ. ಅಂದಿನ ಪಾಠವನ್ನು ಅಂದೇ ಓದಿಕೊಳ್ಳುವ ವಿದ್ಯಾರ್ಥಿ ಪರೀಕ್ಷೆ ಸಂದರ್ಭದಲ್ಲಿ ಪರಿಶ್ರಮ ಪಡಬೇಕಾಗಿ ಬರುವುದಿಲ್ಲ. ಹಾಗೆ 365 ದಿನವೂ ನಾವು ಜನರ ಜೊತೆ ಇದ್ದು ಕೆಲಸ ಮಾಡುವುದರಿಂದ ಚುನಾವಣೆಗಾಗಿ ವಿಶೇಷ ಪ್ರಯತ್ನ ಮಾಡುವ ಸಂದರ್ಭ ಬರುವುದಿಲ್ಲ. ಬಿಜೆಪಿ ಮತ್ತೆ ಗೆಲ್ಲಲಿದೆ ಎಂದರು.

ಆಟೋ ಚಾಲಕರ ಕೈ ಹಿಡಿದ ಕುಮಾರಣ್ಣ: ಮಾಸಿಕ 2 ಸಾವಿರ ರೂ. ನೆರವು ಘೋಷಣೆ

ಚುನಾವಣಾ ಆಯೋಗದ ನಡೆ ಸ್ವಾಗತಾರ್ಹ: ಇನ್ನು ಚುನಾವಣಾ ಆಯೋಗ ಈ ಬಾರಿ ವಿಶೇಷವಾಗಿ 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ ಒದಗಿಸಿಕೊಟ್ಟಿದೆ. ಇದರಿಂದ ವಯೋ ವೃದ್ಧರು ಮತಗಟ್ಟೆಗೆ ಬರುವ ಕಷ್ಟ ತಪ್ಪುತ್ತದೆ. ಮುಂಚಿತವಾಗಿ ನೊಂದಾಯಿಸಿಕೊಂಡ ಮತದಾರರಿಗೆ ಆಯೋಗ ಅವರಿರುವಲ್ಲಿಗೆ ಹೋಗಿ ಸೀಲ್ಡ್ ಬ್ಯಾಲೆಟ್ ಬಾಕ್ಸ್‌ನಲ್ಲಿ ಮತ ಹಾಕಿಸಿಕೊಳ್ಳುವ ಕಾರ್ಯ ಮಾಡಿರುವುದನ್ನು ಸ್ವಾಗತಿಸುತ್ತೇವೆ ಎಂದರು.