ಟೆಂಪಲ್ ರನ್ ಮುಗಿಸಿ ಬೆಂಗಳೂರಿಗೆ ಬೊಮ್ಮಾಯಿ ವಾಪಸ್, ಏ.15ಕ್ಕೆ ನಾಮಪತ್ರ ಸಲ್ಲಿಕೆ!
ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ದೇವಸ್ಥಾನಕ್ಕೆ ತೆರಳಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಬೆಂಗಳೂರಿಗೆ ಮರಳಿದ್ದಾರೆ. ಬಿಜೆಪಿ ಬಂಡಾಯದ ಕುರಿತು ಮಾತನಾಡಲು ನಿರಾಕರಿಸಿದ ಬೊಮ್ಮಾಯಿ, ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬೆಂಗಳೂರು(ಏ.12): ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ದೇವಸ್ಥಾನ ಭೇಟಿಗೆ ತೆರಳಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಇದೀಗ ಮರಳಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬಿಜೆಪಿ ಬಂಡಾಯ ಹಾಗೂ ನಾಯಕ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಬೊಮ್ಮಾಯಿ, ಏಪ್ರಿಲ್ 15 ರಂದು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಏಪ್ರಿಲ್ 15ರ ಶನಿವಾರ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ಮಾಡಿ ರಾಜ್ಯದ ಉದ್ದಗಲ ಪ್ರಚಾರ ಆರಂಭಿಸಲಿದ್ದಾರೆ.
ಬಿಜೆಪಿ ಟಿಕೆಟ್ ಘೋಷಣೆ ಬೆನ್ನಲ್ಲೇ ಬಸವರಾಜ್ ಬೊಮ್ಮಾಯಿ ದೇವಸ್ಥಾನ ಯಾತ್ರೆ ಹೊರಟ್ಟಿದ್ದರು. ಪತ್ನಿ ಸಮೇತ ಬುಧವಾರ ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಸಹಿತ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದರು.ಧರ್ಮಸ್ಥಳಕ್ಕೆ ಮಧ್ಯಾಹ್ನ ಆಗಮಿಸಿದ ಸಿಎಂ ಬೊಮ್ಮಾಯಿ ಅವರು ಮಂಜುನಾಥ ಸ್ವಾಮಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಮಾಡಿ ಮಂಗಳೂರಿಗೆ ಆಗಮಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರದ ಖಾಸಗಿ ಹೋಟೆಲ್‌ನಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದರು. ಈ ವೇಳೆ ಮಂಗಳೂರಿನ ಗೋಳಿಬಜೆ ಚಹಾ ಸೇವಿಸಿ ಬಳಿಕ ದೇವಸ್ಥಾನ ಭೇಟಿಗೆ ತೆರಳಿದರು. ಮಂಗಳೂರಿನಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನ ಹಾಗೂ ಕಂಕನಾಡಿ ಬ್ರಹ್ಮ ಬೈದೆರ್ಕಳ ಗರಡಿಗೆ ಭೇಟಿ ನೀಡಿದರು.
ಬಿಜೆಪಿ ಪಾಳೆಯದಲ್ಲಿ ಬಂಡಾಯದ ಕಿಚ್ಚು, 25 ಕ್ಷೇತ್ರಗಳಲ್ಲಿ ಇತರ ಪಕ್ಷಗಳಿಗೆ ಲಾಭ ಹೆಚ್ಚು
ಇಂದು ಬೆಳಗ್ಗೆ ಕಟೀಲು ಹಾಗೂ ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲಕ್ಕೆ ಭೇಟಿ ನೀಡಿದ ಬಸವರಾಜ್ ಬೊಮ್ಮಾಯಿ ಬೆಂಗಳೂರಿಗೆ ಮರಳಿದ್ದಾರೆ. ಟಿಕೆಟ್ ಘೋಷಣೆ ಬಳಿಕ ಬೊಮ್ಮಾಯಿ ದೇವಸ್ಥಾ ಭೇಟಿಗೆ ತೆರಳಿದರೆ, ಇತ್ತ ಟಿಕೆಟ್ ವಂಚಿತ ಹಲವು ನಾಯಕರು ಬಂಡಾಯ ಎದ್ದಿದ್ದಾರೆ. ಇದೀಗ ಬಂಡಾಯ ನಾಯಕರನ್ನು ಸಮಾಧಾನಿಸುವ ಪ್ರಯತ್ನ ಮಾಡಲಿದ್ದಾರೆ.
ಬಿಜೆಪಿ ಟಿಕೆಟ್ ವಂಚಿತರು ದೊಡ್ಡ ಪ್ರಮಾಣದಲ್ಲೇ ಕಾಂಗ್ರೆಸ್‌ನತ್ತ ದಾಪುಗಾಲು ಹಾಕುವ ಲಕ್ಷಣಗಳು ಗೋಚರಿಸಿದ್ದು, ಮುಖ್ಯವಾಗಿ ಬಿಜೆಪಿ ವಿರುದ್ಧ ಬಂಡೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ನಾಯಕರ ಸಂಪರ್ಕ ಸಾಧಿಸಿ ಟಿಕೆಟ್ ಬಯಕೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮತ್ತೊಬ್ಬ ಟಿಕೆಟ್ ವಂಚಿತ ಕುಂದಗೋಳದ ಎಸ್.ಐ.ಚಿಕ್ಕನಗೌಡರ ಸಹ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿದ್ದಾರೆ.ಧಾರವಾಡ ವಿಧಾನಸಭಾ ಕ್ಷೇತ್ರಕ್ಕೆ ಹಾಲಿ ಶಾಸಕ ಅಮೃತ ದೇಸಾಯಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಬಯಲುಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವನಪ್ಪ ಅಷ್ಟಗಿ, ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸೇರಿದಂತೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ಬುಧವಾರ ರಾಜಿನಾಮೆ ನೀಡುವ ಮೂಲಕ ಬಂಡಾಯ ಎದ್ದಿದ್ದಾರೆ.
35, 58, 131, ರಾಜ್ಯ ಚುನಾವಣಾ ಅಖಾಡದಲ್ಲಿ ಮೂರು ಪಕ್ಷಗಳ ನಿಗೂಢ ಲೆಕ್ಕಾಚಾರ!