Asianet Suvarna News Asianet Suvarna News

ಕೋಟ್ಯಧಿಪತಿಗಳಿಂದ ಬೆಂಗಳೂರಿನಲ್ಲಿ ನಾಮಪತ್ರ: ಪ್ರಿಯಕೃಷ್ಣ ಸಹಸ್ರ ಕೋಟಿ ಒಡೆಯ

ನಗರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸಹಸ್ರ ಕೋಟಿ ರುಪಾಯಿ ಒಡೆಯ ಪ್ರಿಯಕೃಷ್ಣ, ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಕೆ.ಜೆ.ಜಾರ್ಜ್‌, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಜಮೀರ್‌ ಅಹಮದ್‌ಖಾನ್‌ ಸೇರಿದಂತೆ 12 ಮಂದಿ ಅಭ್ಯರ್ಥಿಗಳು ಮಂಗಳವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ.

Karnataka Election 2023 Nomination in Bengaluru by billionaires gvd
Author
First Published Apr 19, 2023, 9:39 AM IST

ಬೆಂಗಳೂರು (ಏ.19): ನಗರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಸಹಸ್ರ ಕೋಟಿ ರುಪಾಯಿ ಒಡೆಯ ಪ್ರಿಯಕೃಷ್ಣ, ಮಾಜಿ ಸಚಿವರಾದ ಎಂ.ಕೃಷ್ಣಪ್ಪ, ಕೆ.ಜೆ.ಜಾರ್ಜ್‌, ಕೃಷ್ಣ ಬೈರೇಗೌಡ, ರಾಮಲಿಂಗಾರೆಡ್ಡಿ, ಜಮೀರ್‌ ಅಹಮದ್‌ಖಾನ್‌ ಸೇರಿದಂತೆ 12 ಮಂದಿ ಅಭ್ಯರ್ಥಿಗಳು ಮಂಗಳವಾರ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿದ 12 ಮಂದಿಯೂ ಕೋಟಿ ಕಲಿಗಳೇ ಆಗಿದ್ದು, ಗೋವಿಂದರಾಜ ನಗರ ಅಭ್ಯರ್ಥಿ ಪ್ರಿಯಕೃಷ್ಣ ಬರೋಬ್ಬರಿ 1,156.83 ಕೋಟಿ ಆಸ್ತಿ ಘೋಷಿಸುವ ಮೂಲಕ ಸಹಸ್ರ ಕೋಟಿ ಒಡೆಯ ಎನಿಸಿದ್ದಾರೆ.

ಇನ್ನು ಅವರ ತಂದೆ ವಿಜಯನಗರ ಅಭ್ಯರ್ಥಿ ಸುಮಾರು 400 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಸರ್ವಜ್ಞ ನಗರದ ಅಭ್ಯರ್ಥಿ ಕೆ.ಜೆ.ಜಾರ್ಜ್‌ 214.11 ಕೋಟಿ ಹಾಗೂ ಅವರ ಮಗ ರಾಣಾ ಜಾರ್ಜ್‌ ಕೂಡ ತಂದೆ ಸ್ಪರ್ಧಿಸಿರುವ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಅವರ ಆಸ್ತಿ ಮೌಲ್ಯ .172.97 ಕೋಟಿ ಎಂದು ಘೋಷಿಸಲಾಗಿದೆ. ಬಿಟಿಎಂ ಲೇಔಟ್‌ ಅಭ್ಯರ್ಥಿ ರಾಮಲಿಂಗಾರೆಡ್ಡಿ ತಮ್ಮ ಬಳಿ 110.66 ಕೋಟಿ ಆಸ್ತಿ ಹೊಂದಿರುವುದಾಗಿ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಹೆಸರಿನಲ್ಲಿ ನಾಮಪತ್ರ ಸಲ್ಲಿಕೆ ಮಾಡಿರುವ ಹನ್ನೆರಡು ಮಂದಿ ಪೈಕಿ 11 ಮಂದಿ ಪಕ್ಷದ ಅಧಿಕೃತ ಬಿ-ಫಾರಂ ಸಲ್ಲಿಕೆ ಮಾಡಿದ್ದಾರೆ. ಇನ್ನು ಕೆ.ಜೆ.ಜಾರ್ಜ್‌ ಪುತ್ರ ರಾಣಾ ಜಾರ್ಜ್‌ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರೂ, ಬಿ-ಫಾರಂ ಸಲ್ಲಿಸಿಲ್ಲ. ಹೀಗಾಗಿ ಪಕ್ಷದ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿದರೂ ಅಧಿಕೃತ ಅಭ್ಯರ್ಥಿ ಎಂದು ಹೇಳಲಾಗದು ಎಂದು ತಿಳಿದುಬಂದಿದೆ.

ಶೆಟ್ಟರ್‌ ಇಷ್ಟು ವರ್ಷ ಗೆದ್ದಿದ್ದು ಬಿಜೆಪಿ ವರ್ಚಸ್ಸಿನಿಂದ, ವೈಯಕ್ತಿಕವಾಗಲ್ಲ: ಅರುಣ್‌ ಸಿಂಗ್‌

5 ವರ್ಷದಲ್ಲಿ ಜಾರ್ಜ್‌ ಆಸ್ತಿ ದುಪ್ಪಟ್ಟು ಹೆಚ್ಚಳ: ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿ ಕೆ.ಜೆ.ಜಾರ್ಜ್‌ 173.72 ಕೋಟಿ ಚರಾಸ್ತಿ ಮತ್ತು 41.11 ಕೋಟಿ ಸ್ಥಿರಾಸ್ತಿ ಸೇರಿ 214.11 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. 2018ರಲ್ಲಿ ಅವರ ಆಸ್ತಿ 80.36 ಕೋಟಿಗಳಿಷ್ಟಿತ್ತು. ಕಳೆದ 5 ವರ್ಷದಲ್ಲಿ ಬರೋಬ್ಬರಿ 133.75 ಕೋಟಿ ಆಸ್ತಿ ಹೆಚ್ಚಾಗಿದೆ. ಪ್ರಸ್ತುತ ಕೆ.ಜೆ.ಜಾರ್ಜ್‌ 69.35 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಜಾರ್ಜ್‌ ಹಾಗೂ ಪತ್ನಿ ಸೇರಿ 1.89 ಕೇಜಿ ಚಿನ್ನಾಭರಣ ಹಾಗೂ 304.44 ಗ್ರಾಂ ವಜ್ರದ ಆಭರಣ ಹೊಂದಿರುವುದಾಗಿ ತಿಳಿಸಿದ್ದಾರೆ. ಉಳಿದಂತೆ 37.7 ಕೋಟಿ ಹೊಣೆಗಾರಿಕೆ (ಸಾಲ) ಹೊಂದಿರುವ ಜಾರ್ಜ್‌ ತಮ್ಮ ಬಳಿ ಯಾವುದೇ ವಾಹನ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಇನ್ನು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ 4 ಕೋಟಿ ಸಾಲ ನೀಡುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ರಾಣಾ ಜಾರ್ಜ್‌ ಬಳಿ 111 ಎಕರೆ ಭೂಮಿ: ಸರ್ವಜ್ಞ ನಗರ ಕ್ಷೇತ್ರಕ್ಕೆ ಕಾಂಗ್ರೆಸ್‌ ಹೆಸರಿನಲ್ಲಿ ನಾಮಪತ್ರ ಸಲ್ಲಿಸಿರುವ ರಾಣಾಜಾರ್ಜ್‌ (ಕೆ.ಜೆ.ಜಾರ್ಜ್‌ ಪುತ್ರ) ತಮ್ಮ ಬಳಿ .172.97 ಕೋಟಿ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ .92.72 ಕೋಟಿ ಚರಾಸ್ತಿ ಹಾಗೂ .80.25 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಅವರ ಬಳಿ .34.68 ಲಕ್ಷ ಮೌಲ್ಯದ ಚಿನ್ನಾಭರಣವಿದ್ದು, ಮೌಲ್ಯ ಮಾತ್ರ ಘೋಷಿಸಿರುವ ಅವರು ಚಿನ್ನಾಭರಣದ ತೂಕವನ್ನು ಉಲ್ಲೇಖಿಸಿಲ್ಲ. ಇನ್ನು ಸ್ಥಿರಾಸ್ತಿ ಪೈಕಿ 111.24 ಎಕರೆ ಕೃಷಿ ಭೂಮಿಯನ್ನು ಅವರು ಹೊಂದಿದ್ದು, .78.98 ಕೋಟಿ ಮೌಲ್ಯದ ಸಾಲಗಳನ್ನೂ ಹೊಂದಿರುವುದಾಗಿ ತಿಳಿಸಿದ್ದಾರೆ.

ರಾಮಲಿಂಗಾರೆಡ್ಡಿ ಆಸ್ತಿ .44.07 ಕೋಟಿ ಹೆಚ್ಚಳ: ಬಿಟಿಎಂ ಲೇಔಟ್‌ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಹಾಲಿ ಶಾಸಕ ರಾಮಲಿಂಗಾರೆಡ್ಡಿ ಬಳಿ .110.66 ಕೋಟಿ ಆಸ್ತಿಯಿದೆ. ಅದರಲ್ಲಿ .36.12 ಕೋಟಿ ಚರಾಸ್ತಿ ಮತ್ತು .74.54 ಕೋಟಿ ಸ್ಥಿರಾಸ್ತಿಯಿದೆ. 2018ರಲ್ಲಿ ರಾಮಲಿಂಗಾ ರೆಡ್ಡಿ ಬಳಿ .66.59 ಕೋಟಿ ಆಸ್ತಿಯಿತ್ತು. ಕಳೆದ 5 ವರ್ಷಗಳಲ್ಲಿ .44.07 ಕೋಟಿ ಮೌಲ್ಯದ ಆಸ್ತಿ ಹೆಚ್ಚಳವಾಗಿದೆ. ಪ್ರಸ್ತುತ ರಾಮಲಿಂಗಾ ರೆಡ್ಡಿ ಬಳಿ ಯಾವುದೇ ಚಿನ್ನಾಭರಣವಿಲ್ಲ, ಅವರ ಪತ್ನಿ ಬಳಿ 1.5 ಕೇಜಿ ಚಿನ್ನ, 9.5 ಕೇಜಿ ಬೆಳ್ಳಿಯಿದೆ. .35.08 ಕೊಟಿ ಹೊಣೆಗಾರಿಕೆಯನ್ನು ರಾಮಲಿಂಗಾರೆಡ್ಡಿ ಹೊಂದಿದ್ದಾರೆ.

ಆರ್‌.ವಿ.ದೇವರಾಜ್‌ ಬಳಿ 5.34 ಕೆ.ಜಿ. ಚಿನ್ನಾಭರಣ: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆರ್‌.ವಿ.ದೇವರಾಜ್‌ .97.83 ಕೋಟಿ ಆಸ್ತಿ ಘೋಷಿಸಿದ್ದಾರೆ. ಈ ಪೈಕಿ .12.52 ಕೋಟಿ ಚರಾಸ್ತಿ, .81.31 ಕೋಟಿ ಸ್ಥಿರಾಸ್ತಿಯಿದೆ. ಅವರು ಮತ್ತು ಪತ್ನಿಯ ಬಳಿ ಸೇರಿ 5.34 ಕೇಜಿ ಚಿನ್ನಾಭರಣವಿದೆ. ಬಿಎಂಡಬ್ಲ್ಯೂ, ಕಿಯಾ ಸೇರಿ 5 ಕಾರುಗಳ ಒಡೆಯರಾಗಿದ್ದಾರೆ. ಆಸ್ತಿಯ ಜತೆಗೆ .22.5 ಕೋಟಿ ಸಾಲ ಹೊಂದಿರುವುದಾಗಿಯೂ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ದಕ್ಷಿಣ ಅಭ್ಯರ್ಥಿ ಆರ್‌.ಕೆ. ರಮೇಶ್‌ ಆಸ್ತಿ .94 ಕೋಟಿ: ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಕೆ.ರಮೇಶ್‌ .94.69 ಕೋಟಿ ಆಸ್ತಿ ಘೋಷಣೆ ಮಾಡಿದ್ದಾರೆ. ಈ ಪೈಕಿ .22.16 ಕೋಟಿ ಚರಾಸ್ತಿ ಮತ್ತು .72.53 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಚರಾಸ್ತಿ ಪೈಕಿ .9.62 ಕೋಟಿ ಮೊತ್ತವನ್ನು ಖಾಸಗಿ ವ್ಯಕ್ತಿಗಳು, ವಿವಿಧ ಸಂಸ್ಥೆಗಳಿಗೆ ಸಾಲದ ರೂಪದಲ್ಲಿ ನೀಡಿದ್ದಾರೆ. ಇನ್ನು ರಮೇಶ್‌ ಅವರು 772 ಗ್ರಾಂ ಚಿನ್ನಾಭರಣ, 2 ಕೇಜಿ ಬೆಳ್ಳಿಯ ವಸ್ತುಗಳನ್ನು ಹೊಂದಿದ್ದು, .31.70 ಕೋಟಿ ಸಾಲ ಮಾಡಿರುವುದಾಗಿ ಚುನಾವಣಾ ಪ್ರಮಾಣಪತ್ರದಲ್ಲಿ ಘೋಷಿಸಿದ್ದಾರೆ.

ಉಮಾಪತಿ ಶ್ರೀನಿವಾಸ್‌ಗೌಡ ಬಳಿ 49 ಎಕರೆ ಕೃಷಿ ಭೂಮಿ: ಬೊಮ್ಮನಹಳ್ಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಉಮಾಪತಿ ಶ್ರೀನಿವಾಸ ಗೌಡ .74.2 ಕೋಟಿ ಆಸ್ತಿ ಘೋಷಿಸಿದ್ದಾರೆ. ಈ ಪೈಕಿ .10.39 ಕೋಟಿ ಚರಾಸ್ತಿ ಮತ್ತು .63.81 ಕೋಟಿ ಸ್ಥಿರಾಸ್ತಿ ಹೊಂದಿದ್ದಾರೆ. ಚಲನಚಿತ್ರ ನಿರ್ಮಾಪಕರೂ ಆಗಿರುವ ಉಮಾಪತಿ ಶ್ರೀನಿವಾಸಗೌಡ ಅವರು ಎಸ್‌.ದರ್ಶನ್‌ ಹೆಸರಿನವರಿಗೆ .2 ಕೋಟಿ ಹಾಗೂ ಚಿಕ್ಕಣ್ಣ ಹೆಸರಿನವರಿಗೆ .26 ಲಕ್ಷ ಸಾಲ ನೀಡಿದ್ದಾರೆ. ಚರಾಸ್ತಿ ಪೈಕಿ ಉಮಾಪತಿ ಬಳಿ 6.80 ಕೆ.ಜಿ ಚಿನ್ನಾಭರಣ ಮತ್ತು 60 ಕೆ.ಜಿ ಬೆಳ್ಳಿಯ ವಸ್ತುಗಳಿವೆ. ಜತೆಗೆ 49.16 ಎಕರೆ ಕೃಷಿ ಭೂಮಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಚಲನಚಿತ್ರ ನಿರ್ಮಾಪಕ ಕೆ.ಮಂಜು ಸೇರಿ ಖಾಸಗಿ ವ್ಯಕ್ತಿಗಳು ಮತ್ತು ಹಣಕಾಸು ಸಂಸ್ಥೆಗಳಿಂದ .31.99 ಕೋಟಿ ಸಾಲ ಪಡೆದಿದ್ದಾರೆ.

ಜಮೀರ್‌ ಖಾನ್‌ ಆಸ್ತಿ 73.61 ಕೋಟಿ ರು. : ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜಮೀರ್‌ ಅಹಮದ್‌ ಖಾನ್‌ .73.61 ಕೋಟಿ ಆಸ್ತಿ ಘೋಷಿಸಿದ್ದಾರೆ. ಈ ಪೈಕಿ .7.79 ಕೋಟಿ ಚರಾಸ್ತಿ ಮತ್ತು .65.82 ಕೋಟಿ ಮೌಲ್ಯ ಸ್ಥಿರಾಸ್ತಿಯಿದೆ. ಕಳೆದ ಬಾರಿ .40.45 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದರು. ಪ್ರಸಕ್ತ ಚುನಾವಣೆ ಪ್ರಮಾಣಪತ್ರದಲ್ಲಿ .73.61 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದು, ತನ್ಮೂಲಕ 5 ವರ್ಷದಲ್ಲಿ .33.16 ಕೋಟಿ ಮೊತ್ತದ ಆಸ್ತಿ ವೃದ್ಧಿಯಾದಂತಾಗಿದೆ. ಇನ್ನು ಚರಾಸ್ತಿ ಪೈಕಿ 830 ಗ್ರಾಂ ಚಿನ್ನ, 1 ಕೇಜಿ ಬೆಳ್ಳಿ ಹೊಂದಿದ್ದಾರೆ. ಪುಟ್ಟಣ್ಣ, ಚಲುವರಾಯ ಸ್ವಾಮಿ ಸೇರಿ ಖಾಸಗಿ ವ್ಯಕ್ತಿಗಳು, ಸಂಸ್ಥೆಗಳ ಮೂಲಕ .42.93 ಕೋಟಿ ಸಾಲ ಪಡೆದಿದ್ದಾರೆ. ಜಮೀರ್‌ ಅಹಮದ್‌ ಖಾನ್‌ ಅವರ ಮೇಲೆ ಹಲವು ಪ್ರಕರಣಗಳು ಇದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ), ಜಾರಿ ನಿರ್ದೇಶನಾಲಯದಲ್ಲಿ (ಇಡಿ) ಅಕ್ರಮ ಹಣ ವರ್ಗಾವಣೆ ಸಂಬಂಧದ ಪ್ರಕರಣ ಬಾಕಿಯಿರುವುದಾಗಿ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

ಕೃಷ್ಣ ಬೈರೇಗೌಡರ ಅರ್ಧಕ್ಕಿಂತ ಹೆಚ್ಚು ಆಸ್ತಿ ಪತ್ನಿಗೆ ಸೇರಿದ್ದು: ಬ್ಯಾಟರಾಯನಪುರ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರು .16.8 ಕೋಟಿ ಆಸ್ತಿ ಹೊಂದಿದ್ದಾರೆ. ಈ ಪೈಕಿ ಚರಾಸ್ತಿ .5.61 ಕೋಟಿ ಹಾಗೂ ಸ್ಥಿರಾಸ್ತಿ .11.19 ಕೋಟಿ ಇದೆ. ಒಟ್ಟಾರೆ ಆಸ್ತಿ ಪೈಕಿ ಪತ್ನಿ ಮೀನಾಕ್ಷಿ ಶೇಷಾದ್ರಿ ಅವರ ಆಸ್ತಿ .9.96 ಕೋಟಿಗಳಾಗಿದ್ದು, .6.62 ಕೋಟಿ ಕೃಷ್ಣ ಬೈರೇಗೌಡರ ಹೆಸರಿನಲ್ಲಿದೆ. ಒಟ್ಟು ಸ್ಥಿರಾಸ್ತಿ ಪೈಕಿ 51 ಎಕರೆ ಕೃಷಿ ಭೂಮಿ ಹೊಂದಿದ್ದಾರೆ. ಕೃಷ್ಣ ಬೈರೇಗೌಡ ಅವರ ಬಳಿ ಯಾವುದೇ ಚಿನ್ನಾಭರಣವಿಲ್ಲ. ಪತ್ನಿ ಬಳಿ 380 ಗ್ರಾಂ ಚಿನ್ನ ಮತ್ತು 500 ಗ್ರಾಂ ಬೆಳ್ಳಿಯಿದೆ. ಕೃಷ್ಣ ಬೈರೇಗೌಡ ಅವರು .95.21 ಲಕ್ಷ ಸಾಲವನ್ನೂ ಹೊಂದಿದ್ದಾರೆ.

ಅನೂಪ್‌ ಅಯ್ಯಂಗಾರ್‌ ಬಳಿ ಸ್ವಂತ ಮನೆ ಇಲ್ಲ: ಮಲ್ಲೇಶ್ವರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅನೂಪ್‌ ಅಯ್ಯಂಗಾರ್‌ .4.33 ಕೋಟಿ ಮೌಲ್ಯದ ಆಸ್ತಿ ಘೋಷಿಸಿಕೊಂಡಿದ್ದಾರೆ. ಈ ಪೈಕಿ .3.43 ಕೋಟಿ ಚರಾಸ್ತಿಯಾಗಿದ್ದರೆ, 90 ಲಕ್ಷ ಸ್ಥಿರಾಸ್ತಿ. ಚರಾಸ್ತಿ ಪೈಕಿ 2 ಕೇಜಿ ಚಿನ್ನಾಭರಣ, 30 ಕೇಜಿ ಬೆಳ್ಳಿ ಹೊಂದಿದ್ದಾರೆ. ಅನೂಪ್‌ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿಯಿಲ್ಲ. ಆದರೆ, ಅವರ ಪತ್ನಿ ಹೆಸರಿನಲ್ಲಿ .90 ಲಕ್ಷ ಮೌಲ್ಯದ ಕೃಷಿಯೇತರ ಭೂಮಿಯಿದೆ. ಅಲ್ಲದೆ, ಅನೂಪ್‌ ಅಯ್ಯಂಗಾರ್‌ ಹಾಗೂ ಪತ್ನಿ ಬಳಿ ಸ್ವಂತ ಮನೆ ಇಲ್ಲ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದ್ದು, ಜತೆಗೆ .2.46 ಕೋಟಿ ಸಾಲವನ್ನು ಘೋಷಿಸಿದ್ದಾರೆ.

ಸುರೇಶ್‌ ಕುಮಾರ್‌ ಆಸ್ತಿ ಕೇವಲ 4 ಕೋಟಿ ಮಾತ್ರ: ರಾಜಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮಾಜಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಒಟ್ಟು .4.78 ಕೋಟಿ ಇದೆ. ಯಾವುದೇ ಸ್ಥಿರಾಸ್ತಿಯನ್ನು ಹೊಂದಿಲ್ಲ. ತಮ್ಮ ಹೆಸರಲ್ಲಿ 38.57 ಲಕ್ಷ ರು. ಮೌಲ್ಯದ ಚರಾಸ್ತಿ ಹೊರತು ಪಡಿಸಿದರೆ ಬೇರೆ ಯಾವುದೇ ಆಸ್ತಿಯನ್ನು ಹೊಂದಿಲ್ಲ. ಪತ್ನಿ ಸಾವಿತ್ರಿ ಬಳಿ 39.62 ಲಕ್ಷ ರು. ಮೌಲ್ಯದ ಚರಾಸ್ತಿ, ತಾಯಿ ಸುಶೀಲಮ್ಮ ಅವರ ಹೆಸರಲ್ಲಿ 4.93 ಲಕ್ಷ ರು. ಮೌಲ್ಯ ಚರಾಸ್ತಿ ಇದೆ. 3.95 ಕೊಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ತಾಯಿ ಹೆಸರಲ್ಲಿ ಬಸವೇಶ್ವರನಗರದಲ್ಲಿ ಮನೆಯೊಂದನ್ನು ಬಿಟ್ಟರೆ ಬೇರಾವುದೇ ಸ್ಥಿರಾಸ್ತಿ ಇಲ್ಲ ಸುರೇಶ್‌ ಕುಮಾರ್‌ ಬಳಿ ಯಾವುದೇ ಚಿನ್ನಾಭರಣಗಳು ಇಲ್ಲ. ಪತ್ನಿ 9ಲಕ್ಷ ರು.ಗಿಂತ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ತಾಯಿ ಬಳಿ 3.65 ಲಕ್ಷ ರು. ಮೌಲ್ಯದ ಚಿನ್ನ ಇದೆ.

ಎಚ್‌.ರವೀಂದ್ರ ಕುಟುಂಬದ ಬಳಿ .15.62 ಕೋಟಿ ಆಸ್ತಿ: ವಿಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಂಗಳವಾರ ಉಮೇದುವಾರಿಕೆ ಸಲ್ಲಿಸಿರುವ ಎಚ್‌.ರವಿಂದ್ರ ಅವರು ತಮ್ಮ ಕುಟುಂಬ 15.62 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಕುಟುಂಬದ 15.62 ಕೋಟಿ ರು. ಮೌಲ್ಯದ ಆಸ್ತಿ ಪೈಕಿ 12.86 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 2.76 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ರವೀಂದ್ರ ಅವರು 10.47 ಕೋಟಿ ರು. ಸಾಲ ನೀಡಿದ್ದಾರೆ. 16.80 ಲಕ್ಷ ರು. ಮೌಲ್ಯದ 280 ಗ್ರಾಂ ಚಿನ್ನಾಭರಣ, 64 ಸಾವಿರ ರು. ಮೌಲ್ಯದ 864 ಗ್ರಾಂ ಬೆಳ್ಳಿ ಸೇರಿದಂತೆ 10.93 ಕೋಟಿ ರು. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಅಂತೆಯೆ 99.25 ಲಕ್ಷ ರು. ಮೌಲ್ಯದ 38 ಗುಂಟೆ ಕೃಷಿ ಭೂಮಿ, 65 ಲಕ್ಷ ರು. ಮೌಲ್ಯದ ವಾಣಿಜ್ಯ ಕಟ್ಟಡಗಳು, ಮನೆ ಸೇರಿದಂತೆ 2.04 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೆ ರವೀಂದ್ರ ಅವರಿಗೆ 22.21 ಕೋಟಿ ರು. ಸಾಲವಿದೆ. ಇವರ ಪತ್ನಿ ಪ್ರೇಮಾ ಅವರ ಬಳಿ ಚಿನ್ನ, ಕಾರು ಸೇರಿದಂತೆ 1.79 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 72 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಅಂತೆಯೆ 1.86 ಕೋಟಿ ರು. ಸಾಲಗಾರರಾಗಿದ್ದಾರೆ.

ಕೆ.ಸಿ.ರಾಮಮೂರ್ತಿ ಬಳಿ 33 ಕೋಟಿ ಆಸ್ತಿ: ವಿಧಾನಸಭೆ ಚುನಾವಣೆಗೆ ಜಯನಗರ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸಿ.ಕೆ. ರಾಮಮೂರ್ತಿ ಒಟ್ಟು 33.90 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ರಾಮಮೂರ್ತಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿ ವಿವರ ಪ್ರಮಾಣ ಪತ್ರದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಸಿ.ಕೆ.ರಾಮಮೂರ್ತಿ ಹೆಸರಲ್ಲಿ 97.99 ಲಕ್ಷ ರು. ಮೌಲ್ಯದ ಚರಾಸ್ತಿ, 20 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ನಾಗರತ್ನ ಹೆಸರಲ್ಲಿ 4.55 ಕೋಟಿ ರು. ಮೌಲ್ಯದ ಚರಾಸ್ತಿ, 28.13 ಕೊಟಿ ರು ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಪುತ್ರಿಯರಾದ ಐಶ್ವರ್ಯ ಹೆಸರಲ್ಲಿ 3.83 ಲಕ್ಷ ರು. ಮೌಲ್ಯದ ಚರಾಸ್ತಿ ಮತ್ತು ಅಮೂಲ್ಯ ಹೆಸರಲ್ಲಿ 31,200 ರು. ಚರಾಸ್ತಿ ಇದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಿದ್ದಾರೆ. ರಾಮಮೂರ್ತಿ ಅವರಿಗೆ 32.83 ಲಕ್ಷ ರು. ಸಾಲ ಇದ್ದು, ಪತ್ನಿಗೆ 4.47 ಕೋಟಿ ರು. ಸಾಲ ಇದೆ. ಪತ್ನಿ ಬಳಿ 43.50 ಲಕ್ಷ ರು. ಮೌಲ್ಯದ ಚಿನ್ನಾಭರಣ ಇದೆ ಎಂದು ತಿಳಿಸಲಾಗಿದೆ.

ಉಮೇಶ್‌ ಶೆಟ್ಟಿ ಬಳಿ 30 ಕೋಟಿಯ ಆಸ್ತಿ: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಉಮೇಶ್‌ ಶೆಟ್ಟಿತಮ್ಮ ಕುಟುಂಬ 30.47 ಕೋಟಿ ರು. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಒಟ್ಟು ಆಸ್ತಿ ಪೈಕಿ 6.54 ಕೋಟಿ ರು. ಮೌಲ್ಯದ ಚರಾಸ್ತಿ ಮತ್ತು 23.93 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. 24 ಲಕ್ಷ ರು. ಮೌಲ್ಯದ ಫಾರ್ಚೂನರ್‌ ಕಾರು, 80 ಲಕ್ಷ ರು. ಮೌಲ್ಯದ ಬೆನ್‌್ಜ ಕಾರು, 14 ಲಕ್ಷ ರು. ಮೌಲ್ಯದ ಮಹೀಂದ್ರ ಜೀಮ್‌, 25 ಸಾವಿರ ರು,. ಮೌಲ್ಯದ ರಾಯಲ್‌ ಎನ್‌ಫೀಲ್ಡ್‌ ಬೈಕ್‌ ಇದೆ. 11 ಲಕ್ಷ ರು. ಮೌಲ್ಯದ 210 ಗ್ರಾಂ ಚಿನ್ನಾಭರಣ, 1.35 ಲಕ್ಷ ರು. ಮೌಲ್ಯದ 225 ಗ್ರಾಂ ಬೆಳ್ಳಿ ಸೇರಿದಂತೆ ಇವರ ಬಳಿ ಒಟ್ಟು 5.26 ಕೋಟಿ ರು. ಮೌಲ್ಯದ ಚರಾಸ್ತಿ ಇದೆ. 

ಮನೆ, ವಾಣಿಜ್ಯ ಕಟ್ಟಡ, ಕೃಷಿ ಭೂಮಿ, ಕೃಷಿಯೇತರ ಭೂಮಿ ಸೇರಿದಂತೆ 14. 75 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. 9.98 ಕೋಟಿ ರು. ಸಾಲವಿದೆ. ಪತ್ನಿ ದೀಪಿಕಾ ಯು.ಶೆಟ್ಟಿಅವರು 17 ಲಕ್ಷ ರು. ಮೌಲ್ಯದ ಬಿಎಂಡಬ್ಲ್ಯೂ ಕಾರು, 28 ಲಕ್ಷ ರು. ಮೌಲ್ಯದ ಐದು ಯೆಲ್ಲೋ ಬೋರ್ಡ್‌ನ ಐದು ಕಾರು ಹೊಂದಿದ್ದಾರೆ. 26 ಲಕ್ಷ ರು. ಮೌಲ್ಯದ 1475 ಗ್ರಾಂ ಚಿನ್ನಾಭರಣ ಮತ್ತು 90 ಸಾವಿರ ರು. ಮೌಲ್ಯದ1500 ಗ್ರಾಂ ಬೆಳ್ಳಿ ವಸ್ತುಗಳು ಸೇರಿದಂತೆ 1.20 ಕೋಟಿ ರು,. ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ನಿವೇಶನ, ವಾಣಿಜ್ಯ ಕಟ್ಟಡ ಸೇರಿದಂತೆ 9.28 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ದೀಪಿಕಾ 1.74 ಕೋಟಿ ರು. ಸಾಲ ಮಾಡಿದ್ದಾರೆ.

ಮಂಜುಳಾ ಲಿಂಬಾವಳಿ 53 ಕೋಟಿ ಶ್ರೀಮಂತೆ: ಇದೇ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕಿಳಿದಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಪತ್ನಿ ಮಂಜುಳಾ ಲಿಂಬಾವಳಿ ಕುಟುಂಬ ಒಟ್ಟು ಆಸ್ತಿಯು 53 ಕೋಟಿ ರು. ಮೌಲ್ಯದಾಗಿದ್ದು, ಪತಿಗಿಂತಲೂ ಪತ್ನಿ ಶ್ರೀಮಂತೆಯಾಗಿದ್ದಾರೆ. ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿವಿವರ ಪ್ರಮಾಣ ಪತ್ರದಲ್ಲಿ ಈ ಕುರಿತು ವಿವರ ಒದಗಿಸಲಾಗಿದೆ. ಅರವಿಂದ ಲಿಂಬಾವಳಿ ಚರಾಸ್ತಿಯು 7.58 ಕೋಟಿ ರು. ಮೌಲ್ಯದ್ದಾಗಿದ್ದರೆ, ಮಂಜುಳಾ ಚರಾಸ್ತಿಯು 12.11 ಕೋಟಿ ರು. ಮೌಲ್ಯದ್ದಾಗಿದೆ. ಇನ್ನು, ಪತಿ ಹೆಸರಲ್ಲಿ 3.50 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದ್ದರೆ, ಮಂಜುಳಾ ಹೆಸರಲ್ಲಿ 24.96 ಕೋಟಿ ರು. ಮೌಲ್ಯದ್ದಾಗಿದೆ. 

ಪುತ್ರಿ ರೇಣುಕಾ ಹೆಸರಲ್ಲಿ ಚರಾಸ್ತಿ 33.87 ಲಕ್ಷ ರು. ಮೌಲ್ಯದ್ದಾಗಿದ್ದು, ಸ್ಥಿರಾಸ್ತಿಯು 4.50 ಕೋಟಿ ರು. ಮೌಲ್ಯದ್ದಾಗಿದೆ ಎಂದು ಆಸ್ತಿ ವಿವರದಲ್ಲಿ ಉಲ್ಲೇಖಿಸಲಾಗಿದೆ. ಸಾಲದಲ್ಲಿಯೂ ಸಹ ಪತಿಗಿಂತ ಹೆಚ್ಚು ಹೊಂದಿದ್ದು, 9.99 ಕೋಟಿ ರು. ಸಾಲ ಇದೆ. 4.30 ಕೋಟಿ ರು. ಅರವಿಂದ ಲಿಂಬಾವಳಿ ಅವರು ಸಾಲ ಹೊಂದಿದ್ದಾರೆ. ಪುತ್ರಿಗೆ 3. 95 ಕೋಟಿ ಸಾಲ ಇದೆ. ಮಂಜುಳಾ ಹೆಸರಲ್ಲಿ 1.03 ಕೋಟಿ ರು. ಮೌಲ್ಯದ ಮರ್ಜಿಡಿಜ್‌ ಬೆಂಜ್‌ ಕಾರ್‌ ಇದೆ. 33.60 ಲಕ್ಷ ರು. ಮೌಲ್ಯದ 600 ಗ್ರಾಂ ಚಿನ್ನ, 1.63 ಲಕ್ಷ ರು. ಮೌಲ್ಯದ 2 ಕೆಜಿ ಬೆಳ್ಳಿ, ಅರವಿಂದ ಲಿಂಬಾವಳಿ ಬಳಿ 6.72 ಲಕ್ಷ ರು. ಮೌಲ್ಯದ 120 ಗ್ರಾಂ ಚಿನ್ನ ಇದೆ. ಪುತ್ರಿ ಬಳಿ 4.50 ಲಕ್ಷ ರು. ಮೌಲ್ಯದ ಚಿನ್ನ ಇದೆ ಎಂದು ನಮೂದಿಸಲಾಗಿದೆ.

ರೋಣ, ಹುಬ್ಬಳ್ಳಿಯಲ್ಲಿ ಆಪ್‌ ಪರ ಪಂಜಾಬ್‌ ಸಿಎಂ ಭಗವಂತಸಿಂಗ್‌ ಮಾನ್‌ ಪ್ರಚಾರ

ಬೈರತಿ ಬಸವರಾಜು ಬಳಿ 118 ಕೋಟಿ: ಕೆ.ಆರ್‌.ಪುರಂ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಬಿ.ಎ.ಬಸವರಾಜು(ಬೈರತಿ ಬಸವರಾಜ) ಅವರು ತಮ್ಮ ಕುಟುಂಬ ಒಟ್ಟು 118.44 ಕೋಟಿ ರು. ಮೌಲ್ಯದ ಆಸ್ತಿ ಹೊಂದಿದ್ದಾರೆ. ಒಟ್ಟು ಆಸ್ತಿ ಪೈಕಿ 32.56 ಕೋಟಿ ರು. ಮೌಲ್ಯದ ಚರಾಸ್ತಿ, 85.88 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. 10.74 ಲಕ್ಷ ರು. ಮೌಲ್ಯದ ಬೆನ್ಜ್‌ ಕಾರು, 60.64 ರು. ಮೌಲ್ಯದ ಬೆನ್ಜ್‌ ಕಾರು, 1.04 ಕೋಟಿ ರು. ಮೌಲ್ಯದ ಬೆನ್‌್ಜ ಕಾರು, 52.33 ಲಕ್ಷ ರು. ಮೌಲ್ಯದ ಆಡಿ ಕ್ಯೂ7 ಕಾರು, 12.79 ಲಕ್ಷ ರು. ಮೌಲ್ಯದ ಟೊಯೋಟಾ ಗ್ಲೆನ್‌್ಜ ಕಾರು, 31.50 ಲಕ್ಷ ರು. ಮೌಲ್ಯದ ಇನೋವಾ ಕಾರು ಇದೆ. 2.56 ಕೋಟಿ ರು. ಮೌಲ್ಯದ 8 ಕೆ.ಜಿ.ಚಿನ್ನ, 64.30 ಲಕ್ಷ ರು. ಮೌಲ್ಯದ 54 ಕೆ.ಜಿ.ಬೆಳ್ಳಿ, 47.92 ಲಕ್ಷ ರು. ಮೌಲ್ಯದ ವಜ್ರ ಹಾಗೂ 86.86 ಲಕ್ಷ ರು. ಮೌಲ್ಯದ ಐಷಾರಾಮಿ ವಾಚುಗಳನ್ನು ಹೊಂದಿದ್ದಾರೆ. 

ಸುಮಾರು 10 ಎಕರೆ ಕೃಷಿಭೂಮಿ, ಸುಮಾರು 6 ಎಕರೆ ಕೃಷಿಯೇತರ ಭೂಮಿ, ನಿವೇಶನಗಳು ಸೇರಿದಂತೆ ಸುಮಾರು 58.94 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಒಟ್ಟು 23.18 ಕೋಟಿ ರು. ಸಾಲವಿದೆ. ಪತ್ನಿ ಪದ್ಮಾವತಿ ಅವರ ಬಳಿ ಎರಡು ಐಷಾರಾಮಿ ಕಾರು ಸೇರಿದಂತೆ 56.57 ಲಕ್ಷ ರು. ಮೌಲ್ಯದ ಚರಾಸ್ತಿ ಹಾಗೂ ಮನೆ, ನಿವೇಶನಗಳು ಸೇರಿದಂತೆ 21.57 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios