ಶೆಟ್ಟರ್ ಇಷ್ಟು ವರ್ಷ ಗೆದ್ದಿದ್ದು ಬಿಜೆಪಿ ವರ್ಚಸ್ಸಿನಿಂದ, ವೈಯಕ್ತಿಕವಾಗಲ್ಲ: ಅರುಣ್ ಸಿಂಗ್
ಬಿಜೆಪಿಗೆ ದ್ರೋಹ ಬಗೆದಿರುವ ಜಗದೀಶ್ ಶೆಟ್ಟರ್ ಅವರಿಗೆ ಮುಂಬರುವ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕರ್ನಾಟಕ ಬಿಜೆಪಿಯ ಉಸ್ತುವಾರಿ ಅರುಣ್‌ಸಿಂಗ್ ಹೇಳಿದ್ದಾರೆ.
ನವದೆಹಲಿ (ಏ.19): ಬಿಜೆಪಿಗೆ ದ್ರೋಹ ಬಗೆದಿರುವ ಜಗದೀಶ್ ಶೆಟ್ಟರ್ ಅವರಿಗೆ ಮುಂಬರುವ ಚುನಾವಣೆಯಲ್ಲಿ ಸೋಲಿಸುವ ಮೂಲಕ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕರ್ನಾಟಕ ಬಿಜೆಪಿಯ ಉಸ್ತುವಾರಿ ಅರುಣ್‌ಸಿಂಗ್ ಹೇಳಿದ್ದಾರೆ. ಜೊತೆಗೆ ಇಷ್ಟುವರ್ಷ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಶೆಟ್ಟರ್ ಗೆಲ್ಲುತ್ತಾ ಬಂದಿದ್ದು ಅಲ್ಲಿನ ಬಿಜೆಪಿ ಮತದಾರರ ದೊಡ್ಡ ನೆಲೆಯಿಂದಾಗಿಯೇ ಹೊರತೂ ಸ್ವಂತ ಪ್ರಭಾವದಿಂದಲ್ಲ ಎಂದು ಪ್ರತಿಪಾದಿಸಿದ್ದಾರೆ.
ಬಿಜೆಪಿ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಶೆಟ್ಟರ್ ಸೋಮವಾರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಪಿಟಿಐ ಸುದ್ದಿಸಂಸ್ಥೆಗೆ ಮಾತನಾಡಿದ ಅರುಣ್‌ಸಿಂಗ್ ‘ಲಿಂಗಾಯತರಿಗೆ ಬಿಜೆಪಿ ಮೋಸ ಮಾಡಿದೆ ಎಂಬುದು ವಿಪಕ್ಷಗಳ ಆರೋಪವಷ್ಟೇ. ಶೆಟ್ಟರ್‌ಗೆ ಏನೇನು ಸ್ಥಾನಮಾನ ನೀಡಲು ಸಾಧ್ಯವಿತ್ತೋ ಅದನ್ನೆಲ್ಲಾ ನಾವು ನೀಡಿದ್ದೆವು. ಆದರೂ ಅವರು ವೈಯಕ್ತಿಕ ಹಿತಾಸಕ್ತಿಗಾಗಿ ಪಕ್ಷಕ್ಕೆ ದ್ರೋಹ ಬಗೆಯುವ ಕೆಲಸ ಮಾಡಿದರು. ಶೆಟ್ಟರ್ ಅವರ ದ್ರೋಹದಿಂದ ಸ್ಥಳೀಯ ಮತದಾರರು ಆಕ್ರೋಶಗೊಂಡಿದ್ದಾರೆ.
ರೋಣ, ಹುಬ್ಬಳ್ಳಿಯಲ್ಲಿ ಆಪ್ ಪರ ಪಂಜಾಬ್ ಸಿಎಂ ಭಗವಂತಸಿಂಗ್ ಮಾನ್ ಪ್ರಚಾರ
ಅವರಿಗೆ ಬಿಜೆಪಿ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ. ಶೆಟ್ಟರ್ ಸೋಲಿಸಲು ನಾವು ಎಲ್ಲಾ ಪ್ರಯತ್ನ ಮಾಡಲಿದ್ದೇವೆ. ಶೆಟ್ಟರ್‌ಗೆ ಸ್ಥಾನ ನಿರಾಕರಿಸಿದ ಕ್ಷೇತ್ರದಲ್ಲಿ ಅವರದ್ದೇ ಸಮುದಾಯದ ಮಹೇಶ್ ಟೆಂಗಿನಕಾಯಿ ಅವರಿಗೆ ಸ್ಥಾನ ನೀಡಲಾಗಿದೆ’ ಎಂದು ಹೇಳಿದರು. ಇದೇ ವೇಳೆ ಲಿಂಗಾಯತ ಸಮುದಾಯ ಬಿಜೆಪಿ ಕೈಬಿಟ್ಟಿಲ್ಲ. ಬಿ.ಎಸ್.ಯಡಿಯೂರಪ್ಪ, ಸೋಮಣ್ಣ, ಬಸನಗೌಡ ಪಾಟೀಲ್ ಯತ್ನಾಳ್ ಅವರಂಥ ದೊಡ್ಡ ನಾಯಕರು ನಮ್ಮ ಜೊತೆ ಇದ್ದಾರೆ ಎಂದು ಹೇಳಿದರು.
ಸವದಿಗೆ ಟಾಂಗ್: ಇದೇ ವೇಳೆ ಸ್ವಂತ ತಮ್ಮ ಕ್ಷೇತ್ರದಲ್ಲಿ ಗೆಲ್ಲಲಾಗದ ಲಕ್ಷ್ಮಣ್ ಸವದಿ ಅವರನ್ನು ನಾವು ಉಪಮುಖ್ಯಮಂತ್ರಿ ಮಾಡಿದೆವು ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಇಂದು ಸಿಎಂ ಬೊಮ್ಮಾಯಿ ನಾಮಪತ್ರ: ನಡ್ಡಾ, ಸುದೀಪ್ ರೋಡ್ ಶೋ
ಬಿಜೆಪಿ ಗೆಲ್ಲುವ ವಿಶ್ವಾಸ: ಬಿಜೆಪಿಯ ಸೋಶಿಯಲ್ ಎಂಜಿನಿಯರಿಂಗ್ ಪರಿಕಲ್ಪನೆಯನ್ನು ರಾಜ್ಯದಲ್ಲೂ ಜಾರಿ ಮಾಡಲಾಗಿದೆ. ವಿವಿಧ ಸಮುದಾಯಗಳ ನಾಯಕರಿಗೆ ಪಕ್ಷದಲ್ಲಿ ಅವಕಾಶ ನೀಡಲಾಗಿದೆ. ಈ ಬಾರಿ 72 ಮಂದಿ ಹೊಸ ಮುಖಗಳಿಗೆ ನಾವು ಅವಕಾಶ ಮಾಡಿಕೊಟ್ಡಿದ್ದೇವೆ. ಅಲ್ಲದೇ ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಹಿರಿಯ ನಾಯಕರಿಗೆ ಟಿಕೆಟ್ ನೀಡದಿರುವುದಕ್ಕೆ ಸ್ಪಷ್ಟನೆ ನೀಡಿದ ಅವರು, ದೇಶದಲ್ಲಿ ಹೊಸ ತಲೆಮಾರಿಗೆ ಅವಕಾಶವನ್ನು ಒದಗಿಸಲು ಈ ನಿರ್ಧಾರವನ್ನು ಕೈಗೊಳ್ಳಾಗಿದೆ. ಈ ನಿರ್ಧಾರಗಳು ಬಿಜೆಪಿಯನ್ನು ರಾಜ್ಯದಲ್ಲಿ ಗೆಲ್ಲಿಸಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.