Asianet Suvarna News Asianet Suvarna News

ರೋಣ, ಹುಬ್ಬಳ್ಳಿಯಲ್ಲಿ ಆಪ್‌ ಪರ ಪಂಜಾಬ್‌ ಸಿಎಂ ಭಗವಂತಸಿಂಗ್‌ ಮಾನ್‌ ಪ್ರಚಾರ

ಪಂಜಾಬ್‌ ಮುಖ್ಯಮಂತ್ರಿ ಭಗವಂತಸಿಂಗ್‌ ಮಾನ್‌ ಅವರು ಮಂಗಳವಾರ ರೋಣ ಮತ್ತು ಹುಬ್ಬಳ್ಳಿಯಲ್ಲಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಮಂಗಳವಾರ ರೋಣ ಕ್ಷೇತ್ರದ ಆಪ್‌ ಅಭ್ಯರ್ಥಿ ಆನೆಕಲ್‌ ದೊಡ್ಡಯ್ಯ ಪರ ಪ್ರಚಾರ ನಡೆಸಿ ಮಾತನಾಡಿದರು.

Punjab CM Bhagwant Singh Mann campaigning for AAP in Rona Hubli gvd
Author
First Published Apr 19, 2023, 9:01 AM IST

ರೋಣ (ಏ.19): ಪಂಜಾಬ್‌ ಮುಖ್ಯಮಂತ್ರಿ ಭಗವಂತಸಿಂಗ್‌ ಮಾನ್‌ ಅವರು ಮಂಗಳವಾರ ರೋಣ ಮತ್ತು ಹುಬ್ಬಳ್ಳಿಯಲ್ಲಿ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಮಂಗಳವಾರ ರೋಣ ಕ್ಷೇತ್ರದ ಆಪ್‌ ಅಭ್ಯರ್ಥಿ ಆನೆಕಲ್‌ ದೊಡ್ಡಯ್ಯ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ದೆಹಲಿ, ಪಂಜಾಬ್‌ನಲ್ಲೂ ಸರ್ಕಾರ ಬೀಳಿಸಲು ಬಿಜೆಪಿಯವರು ಪ್ರಯತ್ನ ನಡೆಸಿದ್ದರು. ಆದರೆ, ಅಲ್ಲಿ ‘ಆಪರೇಷನ್‌ ಕಮಲ’ ಸಾಧ್ಯವಾಗಲಿಲ್ಲ ಎಂದು ಆರೋಪಿಸಿದರು. ಬಿಜೆಪಿ ಮತ್ತು ಕಾಂಗ್ರೆಸ್‌ನವರು ಎಕ್ಸಚೇಂಜ್‌ ರಾಜಕಾರಣ ಮಾಡಿಕೊಳ್ಳುತ್ತಲೇ ಬಂದಿದ್ದಾರೆ. ಇದಕ್ಕೆ ಕರ್ನಾಟಕವೂ ಹೊರತಾಗಿಲ್ಲ. 

ಪಕ್ಷದ ತತ್ವ ಸಿದ್ಧಾಂತ, ರಾಜನೀತಿ ಮರೆತವರು ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹೋಗುತ್ತಾರೆ. ಅದರಂತೆ ಜಗದೀಶ ಶೆಟ್ಟರ್‌, ಲಕ್ಷ್ಮಣ ಸವದಿಯವರು ಪಕ್ಷಾಂತರ ಮಾಡಿದ್ದಾರೆ. ಇವರಿಂದ ರಾಜನೀತಿ ಪಾಲನೆಯಾಗಿಲ್ಲ ಎಂದರು. ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ಮಾಡಲು ಸಾಧ್ಯವಾಗದಿದ್ದಲ್ಲಿ ಉಪ ಚುನಾವಣೆಯಿಂದ ಸರ್ಕಾರ ರಚಿಸಲು ಬಿಜೆಪಿಯವರು ಮುಂದಾಗುತ್ತಾರೆ. ಅದರಂತೆ ದೆಹಲಿ, ಪಂಜಾಬ್‌ನಲ್ಲೂ ಸರ್ಕಾರ ಬೀಳಿಸಲು ಬಿಜೆಪಿಯವರು ಪ್ರಯತ್ನ ನಡೆಸಿದ್ದರು. ಆದರೆ ಅಲ್ಲಿ ‘ಆಪರೇಷನ್‌ ಕಮಲ’ ಸಾಧ್ಯವಾಗಲಿಲ್ಲ ಎಂದರು.

ಇಂದು ಸಿಎಂ ಬೊಮ್ಮಾಯಿ ನಾಮಪತ್ರ: ನಡ್ಡಾ, ಸುದೀಪ್‌ ರೋಡ್‌ ಶೋ

ಬಹುಶಃ ಲೋಕಾಯುಕ್ತದವರು ಬೇರೆಯವರ ಮನೆ ಮೇಲೆ ದಾಳಿ ನಡೆಸಲು ಹೋಗಿ ದಾರಿ ತಪ್ಪಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಮನೆ ಮೇಲೆ ದಾಳಿ ನಡೆಸಿರಬೇಕು. ಆದರೆ, ರಾಜ್ಯದಲ್ಲಿ ಎಷ್ಟೊಂದು ಭ್ರಷ್ಟಾಚಾರ ಇದೆ ಎಂಬುದು ಮಾಡಾಳ್‌ ವಿರೂಪಾಕ್ಷಪ್ಪನವರ ಮನೆಯಲ್ಲಿ ಸಿಕ್ಕಿರುವ ಹಣದಿಂದಲೇ ತಿಳಿಯುತ್ತದೆ ಎಂದು ಟೀಕಿಸಿದರು. ಆಮ್‌ ಆದ್ಮಿ, ದೊಡ್ಡ ನಾಯಕರ ಪಾರ್ಟಿ ಅಲ್ಲ. ಈ ಪಕ್ಷ ಸಾಮಾನ್ಯರನ್ನೂ ನಾಯಕರನ್ನಾಗಿ ಮಾಡುತ್ತದೆ. ಪಂಜಾಬ್‌ನಲ್ಲಿ 92 ಶಾಸಕರ ಪೈಕಿ 82 ಶಾಸಕರು ಮೊದಲ ಬಾರಿಗೆ ಗೆದ್ದವರು. ನಾನೂ ಮೊದಲು ಎಂಪಿ ಇದ್ದೆ. ಈಗ ಮೊದಲ ಬಾರಿಗೆ ಶಾಸಕನಾಗಿ, ಸಿಎಂ ಆಗಿದ್ದೇನೆ ಎಂದರು.

ಆಪ್‌ ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಪಂಜಾಬ್‌ ಸಿಎಂ: ರೋಣ ಮತಕ್ಷೇತ್ರದ ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿ ಆನೆಕಲ್ಲ ದೊಡ್ಡಯ್ಯ ಮಂಗಳವಾರ ಬೆಂಬಲಿಗರು ಹಾಗೂ ಪಂಜಾಬ ಮುಖ್ಯಮಂತ್ರಿ ಭಗವಂತಸಿಂಗ್‌ ಮಾನ್‌ ಅವರೊಂದಿಗೆ ಮೆರವಣಿಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಸಿದರು. ಪಟ್ಟಣದ ಶಿವಾನಂದ ಮಠದಿಂದ ಪ್ರಾರಂಭವಾದ ಮೆರವಣಿಗೆ ಸೂಡಿ ವೃತ್ತ, ಮುಲ್ಲನಬಾವಿ ವೃತ್ತ, ಪೋತದಾರ ರಾಜನ ಕಟ್ಟೆಮೂಲಕ ತಹಸೀಲ್ದಾರ್‌ ಕಚೇರಿಗೆ ತೆರಳಿತು. ಸೂಡಿ ವೃತ್ತದಲ್ಲಿ ತೆರೆದ ವಾಹನದಲ್ಲಿ ಪಂಜಾಬ ಮುಖ್ಯಮಂತ್ರಿ ಭಗವಂತಸಿಂಗ್‌ ಮಾನ್‌ ರಸ್ತೆಯೂದ್ದಕ್ಕೂ ಅಭ್ಯರ್ಥಿ ಆನೆಕಲ್‌ ದೊಡ್ಡಯ್ಯ ಅವರ ಪರ ಜನತೆಯತ್ತ ಕೈ ಬಿಸಿ ಎಎಪಿಗೆ ಆಶೀರ್ವದಿಸುವಂತೆ ವಿನಂತಿಸಿದರು.

ಬದಲಾವಣೆಗಾಗಿ ಎಎಪಿ ಬೆಂಬಲಸಿ: ತೆರೆದ ವಾಹನದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪಂಜಾಬ ಮುಖ್ಯಮಂತ್ರಿ ಭಗವಂತಸಿಂಗ್‌ ಮಾನ್‌ ಮಾತನಾಡಿ, ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಆಡಳಿತ ವೈಖರಿಯಿಂದ ಜನರು ಬೇಸತ್ತು ಹೋಗಿದ್ದಾರೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಆ ಬದಲಾವಣೆ ಆಮ್‌ ಆದ್ಮಿ ಪಕ್ಷವಾಗಿದೆ. ನರೇಂದ್ರ ಮೋದಿಯವರು ಜನರ ಖಾತೆಗೆ ಹದಿನೈದು ಲಕ್ಷ ಹಣ ಹಾಕುತ್ತೆನೆ ಎಂದಿದ್ದರು, ಆ ರೀತಿಯ ಹಣ ಹಾಕಿದ್ದಾರೆಯೇ? ಬಿಜೆಪಿ, ಕಾಂಗ್ರೆಸ್‌ ಎರಡು ಪಕ್ಷಗಳು ಕೇವಲ ಭರವಸೆ ನೀಡುವ ಪಕ್ಷಗಳಾಗಿವೆ. ಜನ ಸರಿಯಾದ ಪಾಠ ಕಲಿಸೇ ಕಲಿಸುತ್ತಾರೆ ಎಂದರು.

ಪಂಜಾಬ್‌ನಲ್ಲಿ ಭ್ರಷ್ಟಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸಲಾಗಿದೆ. ಅಕ್ರಮ ಆಸ್ತಿ ಗಳಿಕೆ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿಯೂ ಆಮ್‌ ಆದ್ಮಿ ಅಧಿಕಾರಕ್ಕೆ ಬಂದರೆ ಇದೆ ಮಾದರಿ ಮಾಡುತ್ತೇವೆ ಎಂದರು. ಅಭ್ಯರ್ಥಿ ಆನೆಕಲ್‌ ದೊಡ್ಡಯ್ಯ ಮಾತನಾಡಿ, ರೋಣ ಮತಕ್ಷೇತ್ರದಲ್ಲಿ ಆಮ್‌ ಆದ್ಮಿ ಪಾರ್ಟಿಯತ್ತ ಜನ ಒಲವು ತೋರುತ್ತಿದ್ದಾರೆ. ಇಲ್ಲಿ ಬಿಜೆಪಿ, ಕಾಂಗ್ರೆಸ್‌ ಆಡಳಿತ ಜನರಿಗೆ ತೀವ್ರ ಬೇಸರ ತಂದಿದ್ದು, ಬದಲಾವಣೆಗಾಗಿ ಕಾಯುತ್ತಿದ್ದಾರೆ. 

ಜೆಡಿಎಸ್‌ಗೆ ಪೂರ್ಣ ಬಹುಮತಕ್ಕೆ ಪ್ರಾರ್ಥಿಸಿ ನಿಖಿಲ್‌ ಕುಮಾರಸ್ವಾಮಿ ಟೆಂಪಲ್‌ ರನ್‌

ಜನರ ನಿರೀಕ್ಷೆಯಂತೆ ಕ್ಷೇತ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯುತ್ತೇನೆ. ಈ ಬಾರಿ ರೋಣ ಕ್ಷೇತ್ರದ ಜನತೆ ನನಗೊಂದು ಅವಕಾಶ ಕೊಟ್ಟೆಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು. ಈ ವೇಳೆ ಎಎಪಿ ಕಾರ್ಯಕರ್ತರು, ಅಭಿಮಾನಿಗಳು, ಅಪಾರ ಬೆಂಬಲಿಗರು ಹಾಜರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Follow Us:
Download App:
  • android
  • ios