ಕ್ಷೇತ್ರದಲ್ಲಿ 10 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಿಂತ ತನ್ನ ವೈಯಕ್ತಿಕ ಅಭಿವೃದ್ಧಿ ಮಾಡಿಕೊಂಡಿರುವ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಯವರನ್ನು 2023ರ ಚುನಾವಣೆಯಲ್ಲಿ ಸೋಲಿಸಿದರೆ ಚುನಾವಣೆ ಬಳಿಕ ಎಸ್‌ಎನ್‌ ಸಿಟಿ ಲೇಔಟ್‌ಗೆ ದಾರಿ ಬಂದ್‌ ಮಾಡಲಾಗುವುದೆಂದು ಸಂಸದ ಎಸ್‌.ಮುನಿಸ್ವಾಮಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು. 

ಬಂಗಾರಪೇಟೆ (ಏ.14): ಕ್ಷೇತ್ರದಲ್ಲಿ 10 ವರ್ಷಗಳಿಂದ ಕ್ಷೇತ್ರದ ಅಭಿವೃದ್ಧಿಗಿಂತ ತನ್ನ ವೈಯಕ್ತಿಕ ಅಭಿವೃದ್ಧಿ ಮಾಡಿಕೊಂಡಿರುವ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿಯವರನ್ನು 2023ರ ಚುನಾವಣೆಯಲ್ಲಿ ಸೋಲಿಸಿದರೆ ಚುನಾವಣೆ ಬಳಿಕ ಎಸ್‌ಎನ್‌ ಸಿಟಿ ಲೇಔಟ್‌ಗೆ ದಾರಿ ಬಂದ್‌ ಮಾಡಲಾಗುವುದೆಂದು ಸಂಸದ ಎಸ್‌.ಮುನಿಸ್ವಾಮಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದರು.

ಎಪಿಎಂಸಿ ಯಾರ್ಡ್‌ನಲ್ಲಿ ಬಿಜೆಪಿ ಕಚೇರಿಯಲ್ಲಿ ಚುನಾವಣಾ ರೂಪುರೇಷೆಯ ಕುರಿತು ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ತೀರಾ ಹಿಂದುಳಿದಿರುವ ಬಂಗಾರಪೇಟೆ ಮೀಸಲು ಕ್ಷೇತ್ರದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದ್ದು, ಈ ಕ್ಷೇತ್ರದಲ್ಲಿ ಗೆದ್ದಂತಹ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಸರ್ಕಾರಿ ಗೋಮಾಳ, ಗುಂಡುತೋಪು, ಕೆರೆಗಳು, ಕುಂಟೆಗಳನ್ನು ಬೇನಾಮಿಯಾಗಿ ನುಂಗಿರುವುದೇ ಸಾಹಸದ ಕೆಲಸವಾಗಿರುವುದರಿಂದ ಮುಂಬರುವ ಚುನಾವಣೆಯಲ್ಲಿ ತಪ್ಪದೇ ಮನೆಗೆ ಕಳುಹಿಸಬೇಕೆಂದು ಕರೆ ನೀಡಿದರು.

ತಾಕತ್ತಿದ್ದರೆ ಒಳ ಮೀಸಲಾತಿ ತೆಗೆಯಲಿ: ಕಾಂಗ್ರೆಸ್‌ಗೆ ಬಿಜೆಪಿ ಸಂಸದ ಎಸ್‌.ಮುನಿಸ್ವಾಮಿ ಸವಾಲು

ಇಂದಿನ ಸಮಾಜದಲ್ಲಿ ಮತದಾರರು ಭಾರೀ ಪ್ರಜ್ಞಾವಂತರಾಗಿರುವುದರಿಂದ ಕ್ಷೇತ್ರದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಮುಕ್ತವಾಗಿ ತಿಳಿದುಕೊಳ್ಳುಬಹುದಾಗಿರುವುದರಿಂದ ರಾಜಕಾರಣಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಜನರಿಂದ ಜನರಿಗಾಗಿ ಶಕ್ತಿಮೀರಿ ದುಡಿಯುವ ನಾಯಕನನ್ನು ಗೆಲ್ಲಿಸುವಲ್ಲಿ ಮತದಾರರೇ ಅಂತಿಮವಾಗಿದ್ದಾರೆ. ಕ್ಷೇತ್ರದಲ್ಲಿ ಸರ್ಕಾರದಿಂದ ಬರುವ ಯೋಜನೆಗಳನ್ನು ಐದು ವರ್ಷದ ಹಿಂದೆ ಇದ್ದ ಸಿದ್ದರಾಮಯ್ಯ ಸರ್ಕಾರ ಮಂಜೂರು ಮಾಡಿದೆ ಎಂದು ತಪ್ಪು ಮಾಹಿತಿ ನೀಡಿ ಜನರಿಗೆ ಮೋಸ ಮಾಡಿ ಗೆಲುವು ಸಾಧಿಸಲು ಕಾಂಗ್ರೆಸ್‌ ಅಭ್ಯರ್ಥಿ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.

ಹಾಲಿ ಕಾಂಗ್ರೆಸ್‌ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ವಿರುದ್ಧವಾಗಿ ಕಾಂಗ್ರೆಸ್‌ನ ಸಾಕಷ್ಟುಮುಖಂಡರು ಹಾಗೂ ಕಾರ‍್ಯಕರ್ತರು ಮುನಿಸಿಕೊಂಡಿದ್ದಾರೆ. ಸ್ವಪಕ್ಷೀಯರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸುತ್ತಿರುವುದರಿಂದ ಬೇಸತ್ತಿರುವ ಜನರು ಈ ಬಾರಿ ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂದು ನಿರ್ಧಾರ ಕೈಗೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಜೊತೆಗೆ ಎಲ್ಲಾ ಬಿಜೆಪಿಯ ಹಿರಿಯ ಮುಖಂಡರು ಸಾಥ್‌ ನೀಡಿ ಶತಾಯಗತಾಯ ಗೆಲುವು ಸಾಧಿಸಲು ಶ್ರಮಿಸಬೇಕು. ಕ್ಷೇತ್ರದ ಪ್ರತಿಯೊಂದು ಬೂತ್‌ ಮಟ್ಟದಲ್ಲಿ ಕನಿಷ್ಠ 50 ಕಾರ‍್ಯಕರ್ತರು ಪ್ರತಿದಿನ ಡಬಲ್‌ ಎಂಜಿನ್‌ ಸರ್ಕಾರದ ಯೋಜನೆಗಳನ್ನು ತಿಳಿಸುತ್ತಾ ಬಿಜೆಪಿ ಅತ್ಯಧಿಕ ಮತಗಳನ್ನು ಪಡೆಯಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಬಿಜೆಪಿ ಮುಖಂಡರಾದ ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್‌, ವಿ.ಶೇಷು, ಮಲ್ಲಿಕಾರ್ಜುನ್‌, ತಾಲೂಕು ಬಿಜೆಪಿ ಅಧ್ಯಕ್ಷ ಎಂ.ನಾಗೇಶ್‌, ಬೂದಿಕೋಟೆ ಮಾರ್ಕಂಡೇಯಗೌಡ, ಎ.ಹನುಮಪ್ಪ, ಎಂ.ಪಿ.ಶ್ರೀನಿವಾಸಗೌಡ, ಕಪಾಲಿ ಶಂಕರ್‌, ಬಿ.ಸಿ.ಮೂರ್ತಿ, ಕೆಂಬೋಡಿ ನಾರಾಯಣಗೌಡ, ಬೂದಿಕೋಟೆ ಎ.ಬಾಬು, ಬೆಳಗಾನಹಳ್ಳಿ ವೆಂಕಟಮುನಿಯಪ್ಪ, ಪಾರ್ಥಸಾರಥಿ, ಹುಣಸನಹಳ್ಳಿ ಶ್ರೀನಿವಾಸ್‌, ಬಿ.ಪಿ.ಮಹೇಶ್‌, ಶಶಿಕುಮಾರ್‌, ಬಿಂದುಮಾಧವ್‌, ಪ್ರಭಾಕರರಾವ್‌ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಸೋನಿಯಾ, ರಾಹುಲ್‌ ಬಿಟ್ಟ ಮುರುಕಲು ಕುರ್ಚಿಗೆ ಖರ್ಗೆ ಅಧ್ಯಕ್ಷ: ಸಂಸದ ಶ್ರೀನಿವಾಸ್ ಪ್ರಸಾದ್ ವ್ಯಂಗ್ಯ

ಕಳಪೆ ಕಾಮಗಾರಿ ಮಾಡಿದ್ದಾರೆ: ರಾಜ್ಯ ಬಿಜೆಪಿ ಸರ್ಕಾರದಿಂದ ನೂರಾರು ಕೋಟಿ ರು.ಗಳ ಅನುದಾನ ಬಂದಿದೆ. ಈ ಎಲ್ಲಾ ಕಾಮಗಾರಿಗಳನ್ನು ತಮ್ಮ ಹಿಂಬಾಲಕರಿಂದ ಟೆಂಡರ್‌ಗೆ ಪಡೆದು ಹಾಗೂ ಕ್ರೀಡಲ್‌ ಸಂಸ್ಥೆಗಳ ಮೂಲಕ ಟೆಂಡರ್‌ ಪಡೆದು ಹಾಗೂ ಶಾಸಕರು ತಾನೇ ಗುತ್ತಿಗೆದಾರನಾಗಿ ತಾಲೂಕಿನಲ್ಲಿ ಮಾಡಿರುವ ಕಾಮಗಾರಿಗಳು ಕೇವಲ ಹದಿನೈದು ದಿನಗಳಲ್ಲಿಯೇ ಕಿತ್ತುಹೋಗಿವೆ. ಸರ್ಕಾರದಿಂದ ಅನುದಾನ ಪಡೆದು ಸರ್ಕಾರದ ವಿರುದ್ಧವೇ ಆರೋಪಗಳನ್ನು ಮಾಡಿ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನ ಮಾಡುತ್ತಿರುವುದಕ್ಕೆ ಮತದಾರರು ತಕ್ಕಪಾಠ ಕಲಿಸಬೇಕೆಂದು ಮುನಿಸ್ವಾಮಿ ಮನವಿ ಮಾಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.