ಕಾಂಗ್ರೆಸಿಗರ ಮನೆ ಮೇಲೆ ರಾತ್ರೋರಾತ್ರಿ ಐಟಿ ದಾಳಿ: ಭಾರಿ ಅಕ್ರಮ ಹಣ ಪತ್ತೆ
ರಾಜ್ಯ ವಿಧಾನಸಭಾ ಚುನಾವಣೆಗೆ ಮೂರು ದಿನ ಬಾಕಿ ಇರುವಾಗಲೂ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ತಮ್ಮ ಬೇಟೆ ಮುಂದುವರಿಸಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರಿ ಸೇರಿ ರಾಜ್ಯದ ವಿವಿಧೆಡೆ ಏಳು ಮಂದಿ ಮೇಲೆ ದಾಳಿ ನಡೆಸಿದೆ.
ಬೆಂಗಳೂರು (ಮೇ.08): ರಾಜ್ಯ ವಿಧಾನಸಭಾ ಚುನಾವಣೆಗೆ ಮೂರು ದಿನ ಬಾಕಿ ಇರುವಾಗಲೂ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ತಮ್ಮ ಬೇಟೆ ಮುಂದುವರಿಸಿದ್ದು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರಿ ಸೇರಿ ರಾಜ್ಯದ ವಿವಿಧೆಡೆ ಏಳು ಮಂದಿ ಮೇಲೆ ದಾಳಿ ನಡೆಸಿದೆ. ಬ್ಯಾಡಗಿಯ ಕಾಂಗ್ರೆಸ್ ಅಭ್ಯರ್ಥಿಯ ಆಪ್ತನ ಮನೆಯಲ್ಲಿ 2.85 ಕೋಟಿ ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಹೋದರಿ ಎಸ್.ಎಂ.ಸುನೀತಾ, ರಿಯಲ್ ಎಸ್ಟೇಟ್ ಉದ್ಯಮಿ ಹರಿರೆಡ್ಡಿ, ಕಮ್ಮವಾರಿ ಸಂಘದ ಅಧ್ಯಕ್ಷ ರಾಜಗೋಪಾಲ ನಾಯ್ಡು, ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಚೆನ್ನಬಸಪ್ಪ ಹುಲ್ಲತ್ತಿ, ಕಲಬುರಗಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ್, ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಉದ್ಯಮಿಗಳೂ ಆಗಿರುವ ವೆಂಕಟೇಶ್ ಸಾಕಾ ಹಾಗೂ ರಾಜು ಬೋರಾ ಅವರ ಮನೆ, ಕಚೇರಿಗಳ ಮೇಲೆ ದಾಳಿ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷವೊಡ್ಡಲು ಹಣ ಸಂಗ್ರಹಿಸಿರುವ ಅನುಮಾನದ ಮೇಲೆ ಐಟಿ ಅಧಿಕಾರಿಗಳು ಶನಿವಾರ ರಾತ್ರಿಯೇ ಎಲ್ಲಾ ಏಳು ಮಂದಿ ಮನೆಗಳಿಗೆ ದಾಳಿ ನಡೆಸಿದ್ದು, ಭಾನುವಾರವೂ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
2ನೇ ದಿನವೂ ಮೋದಿ ರೋಡ್ ಶೋ ಕಮಾಲ್: 8 ಕಿ.ಮೀ. ಸಂಚಾರ ವೇಳೆ ಹೂ ಮಳೆ
ಬಿಜೆಪಿ ಮುಖಂಡನ ಆಪ್ತನ ಮೇಲೂ ದಾಳಿ: ಎಸ್.ಎಂ.ಕೃಷ್ಣ ಅವರ ಸೋದರಿ ಸುನಿತಾ ಅವರ ಕೋರಮಂಗಲದ ಮನೆ, ಬಾಗ್ಮನೆ ಹೆಸರಿನಲ್ಲಿರುವ ನಿವಾಸ ಹಾಗೂ ಬಾಗ್ಮನೆ ಬಿಲ್ಡರ್ ಕಚೇರಿಗಳು, ಟ್ರಾನ್ ಇನ್ಸೈನಿಯಾ ಅಪಾರ್ಚ್‌ಮೆಂಟ್ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು, ಎರಡು ದಿನಗಳಿಂದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬೆಂಗಳೂರಿನ ಕಾಂಗ್ರೆಸ್ ಅಭ್ಯರ್ಥಿಯೊಬ್ಬರ ಆಪ್ತ ಬಿಲ್ಡರ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಹರಿರೆಡ್ಡಿ ಅವರ ಬನಶಂಕರಿ ನಿವಾಸ, ಕಮ್ಮವಾರಿ ಸಂಘದ ಅಧ್ಯಕ್ಷ ರಾಜಗೋಪಾಲ ನಾಯ್ಡು ಮನೆಯಲ್ಲೂ ಐಟಿ ಅಧಿಕಾರಿಗಳಿಂದ ತೀವ್ರ ತಪಾಸಣೆ ನಡೆಸಲಾಗಿದೆ. ರಾಜಗೋಪಾಲ ನಾಯ್ಡು ಅವರು ಬಸವನಗುಡಿ ಕ್ಷೇತ್ರದ ಬಿಜೆಪಿ ಮುಖಂಡರೊಬ್ಬರ ಆಪ್ತ ಎನ್ನಲಾಗಿದೆ.
2.85 ಕೋಟಿ ವಶ: ಹಾವೇರಿ ಜಿಲ್ಲೆಯ ಬ್ಯಾಡಗಿಯ ವಿದ್ಯಾನಗರದಲ್ಲಿನ ಕಾಂಗ್ರೆಸ್ ಮುಖಂಡ ಚೆನ್ನಬಸಪ್ಪ ಹುಲ್ಲತ್ತಿ ಮನೆ ಮೇಲಿನ ದಾಳಿ ವೇಳೆ ಸೂಕ್ತ ದಾಖಲೆ ಇಲ್ಲದ .2.85 ಕೋಟಿ ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಹುಲ್ಲತ್ತಿ ಅವರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಶಿವಣ್ಣನವರ ಆಪ್ತ ಎಂದು ಹೇಳಲಾಗಿದೆ. ಕಲಬುರಗಿಯಲ್ಲಿ ಜಿ.ಪಂ. ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಅರವಿಂದ ಚವ್ಹಾಣ್ ಅವರ ಮನೆ, ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಸ್ಟೋನ್ ಕ್ರಷರ್ ಫ್ಯಾಕ್ಟರಿ ಮೇಲೆ, ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಉದ್ಯಮಿಗಳೂ ಆಗಿರುವ ವೆಂಕಟೇಶ್ ಸಾಕಾ ಹಾಗೂ ರಾಜು ಬೋರಾ ಅವರ ಮನೆ ಮೇಲೆ ದಾಳಿ ನಡೆದಿದ್ದು, ಮಹತ್ವದ ದಾಖಲೆ ಪತ್ರಗಳ ಪರಿಶೀಲನೆ ನಡೆಸಲಾಗಿದೆ.
ಜೆಡಿಎಸ್ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು
ಚುನಾವಣಾ ಅಧಿಕಾರಿಗಳ ತಂಡ ದಾಳಿ, 2.35 ಕೋಟಿ ವಶಕ್ಕೆ: ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ.ಉದಯ್ ಅವರ ಐವರು ಬೆಂಬಲಿಗರ ಮನೆ ಮೇಲೆ ಭಾನುವಾರ ಮುಂಜಾನೆ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿದ್ದು, ದಾಖಲೆ ಇಲ್ಲದ .2.35 ಕೋಟಿ ವಶಕ್ಕೆ ಪಡೆದಿದ್ದಾರೆ. ಪಟ್ಟಣದ ಚನ್ನೇಗೌಡನದೊಡ್ಡಿಯ ದಿನೇಶ್, ಮಾರಸಿಂಗನಹಳ್ಳಿಯ ಹರೀಶ್, ಮನ್ಮುಲ್ ಆನಂದ್, ಸುರೇಶ್ ಬಾಬು ಮತ್ತು ಮಹೇಶ್ ಎಂಬವರ ಮನೆ ಮೇಲೆ ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ ದಾಳಿ ನಡೆಸಿ ಪರಿಶೀಲನೆ ನಡೆಸಿದೆ. ಈ ವೇಳೆ ಸುರೇಶ್ ಬಾಬು ಅವರ ಮನೆಯಲ್ಲಿ .2 ಕೋಟಿ ಹಾಗೂ ಮಹೇಶ್ ಮನೆಯಲ್ಲಿದ್ದ .3.50 ಲಕ್ಷ ವಶಕ್ಕೆ ಪಡೆಯಲಾಗಿದೆ. ಫ್ಲೈಯಿಂಗ್ ಸ್ಕ್ವಾಡ್ ದೂರಿನನ್ವಯ ಸುರೇಶ್ ಬಾಬು ಅವರನ್ನು ಬಂಧಿಸಿರುವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.