ಜೆಡಿಎಸ್ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು
ಕಳೆದ 6 ದಿನಗಳ ಅವಧಿಯಲ್ಲಿ ಚನ್ನಪಟ್ಟಣದಲ್ಲಿ ಮೂರನೇ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರ ನಡೆಸಿದರು. ಭಾನುವಾರ ಪ್ರಧಾನಿ ನರೇಂದ್ರ ಸಮಾವೇಶದ ದಿನವೇ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್ ಸಭೆ ನಡೆಸಿದರು.
ರಾಮನಗರ/ಚನ್ನಪಟ್ಟಣ (ಮೇ.06): ಪುತ್ರ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮೊಮ್ಮಗನ ಗೆಲುವಿಗೆ ಪಣತೊಟ್ಟಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಶುಕ್ರವಾರ ಪ್ರಚಾರ ನಡೆಸಿದರು. ಚನ್ನಪಟ್ಟಣದಲ್ಲಿ ತಮ್ಮ ಪುತ್ರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರ ತಾಲೂಕಿನ ಹೊಂಗನೂರು ಹಾಗೂ ಕೊಡಂಬಳ್ಳಿ ಗ್ರಾಮದಲ್ಲಿ ಬಹಿರಂಗ ಸಭೆಯಲ್ಲಿ ಪ್ರಚಾರ ನಡೆಸಿದರು. ಇದೇ ವೇಳೆ ರಾಮನಗರದಲ್ಲಿ ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ತಾಲೂಕಿನ ಸುಗ್ಗೇನಹಳ್ಳಿ ಹಾಗೂ ಕೈಲಾಂಚ ಗ್ರಾಮದಲ್ಲಿ ಬಹಿರಂಗ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಕಳೆದ 6 ದಿನಗಳ ಅವಧಿಯಲ್ಲಿ ಚನ್ನಪಟ್ಟಣದಲ್ಲಿ ಮೂರನೇ ಬಾರಿಗೆ ಮಾಜಿ ಪ್ರಧಾನಿ ದೇವೇಗೌಡರು ಪ್ರಚಾರ ನಡೆಸಿದರು. ಭಾನುವಾರ ಪ್ರಧಾನಿ ನರೇಂದ್ರ ಸಮಾವೇಶದ ದಿನವೇ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಜೆಡಿಎಸ್ ಸಭೆ ನಡೆಸಿದ್ದ ದೇವೇಗೌಡರು, ಬುಧವಾರ ನಗರದ ಶೇರ್ವಾ ಹೋಟೆಲ್ ಹಾಗೂ ಮಂಗಳವಾರಪೇಟೆಯ ಬಸವೇಶ್ವರ ದೇವಸ್ಥಾನದ ಬಳಿ ಬಹಿರಂಗ ಸಮಾವೇಶದಲ್ಲಿ ಪುತ್ರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪರ ಮತಯಾಚಿಸಿದ್ದರು. ಶುಕ್ರವಾರ ಹೊಂಗನೂರು ಹಾಗೂ ಕೋಡಂಬಳ್ಳಿ ಗ್ರಾಮದಲ್ಲಿ ಪ್ರಚಾರ ನಡೆಸಿದರು.
ಯಾದಗಿರಿಯಲ್ಲಿ ಬಿಜೆಪಿ ಬಹಿರಂಗ ಸಮಾವೇಶ: ಶಾಸಕ ವೆಂಕಟರೆಡ್ಡಿ ಪರವಾಗಿ ಮತಯಾಚನೆ ಮಾಡಿದ ಸ್ಮೃತಿ
ಇದೇ ಮೊದಲ ಬಾರಿಗೆ ಅವರು ತಮ್ಮ ಮೊಮ್ಮಗ ನಿಖಿಲ್ ಕುಮಾರಸ್ವಾಮಿ ಪರ ರಾಮನಗರದಲ್ಲಿ ಮತಯಾಚನೆ ಮಾಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದೇವೇಗೌಡರು, ಇಡೀ ಹಿಂದೂಸ್ತಾನದಲ್ಲಿ ರೈತರ ಸಾಲಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಯಾರಾದರೂ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಇದೀಗ ಪಂಚರತ್ನ ಯಾತ್ರೆ ನಡೆಸಿದ್ದು, ಮತ್ತೊಮ್ಮೆ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದು ರೈತಪರ ಸರ್ಕಾರ ಆಡಳಿತಕ್ಕೆ ಬರಲು ನೆರವಾಗಿ ಎಂದು ಮನವಿ ಮಾಡಿದರು.
ಇದೀಗ ಬಿಸಿಲ ಬೇಗೆಯಲ್ಲಿ ಕೆಲಸ ಮಾಡೋ ರೈತರಿಗೆ 5 ಸಾವಿರ ಮಾಸಾಶನ ಕೊಡಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಪ್ರತಿ ಹಳ್ಳಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಸಾಕಷ್ಟುಅಭಿವೃದ್ಧಿ ಮಾಡಿದ್ದಾರೆ. ಕುಮಾರಸ್ವಾಮಿ ಇಷ್ಟುಕೆಲಸ ಮಾಡಿದರೂ ಕೂಡಾ ನಾನು ಬಂದು ಮತ ಕೇಳುವಂತಹ ಪರಿಸ್ಥಿತಿ ಇದೆ. 90 ವರ್ಷದ ವಯಸ್ಸಿನಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನ ಅಧಿಕಾರಕ್ಕೆ ತಂದು ಕಣ್ಣು ಮುಚ್ಚಬೇಕೆಂಬುದು ನನ್ನ ಆಸೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಕಾಶ್ಮೀರಕ್ಕೆ ಹೋಗಿದ್ದು ನಾನು: 10 ವರ್ಷ ಯಾವ ಪ್ರಧಾನಿಯೂ ಕಾಶ್ಮೀರಕ್ಕೆ ಹೋಗಿರಲಿಲ್ಲ. ಹಳ್ಳಿಯಲ್ಲಿ ಹುಟ್ಟಿಬೆಳೆದ ನಾನು, ಪ್ರಧಾನಿಯಾಗಿದ್ದಾಗ ಕಾಶ್ಮೀರಕ್ಕೆ ಹೋಗಿದ್ದೆ. ಹೋದರೆ ಹೊಡೆದು ಹಾಕುತ್ತಾರೆ ಅನ್ನೊ ಭಯ ಇತ್ತು. ನಾನು ಸತ್ತರೆ ಹೊಳೆನರಸೀಪುರದಲ್ಲಿ ಮಣ್ಣು ಮಾಡುವಂತೆ ಹೇಳಿ ನಾನು ಹೋಗಿದ್ದೆ. ನಾಲ್ಕು ಬಾರಿ ಕಾಶ್ಮೀರಕ್ಕೆ ಹೋಗಿ ಅಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದೆ. ಇದಲ್ಲದೇ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಿದ್ದು ನಾನು, ಇದನ್ನು ಮುಸ್ಲಿಂ ಬಾಂಧವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ತಮಿಳುನಾಡಿನಲ್ಲಿ ಪ್ರಾದೇಶಿಕ ಪಕ್ಷಕ್ಕೆ ಒತ್ತು ನೀಡಿದ್ದಾರೆ. ದಕ್ಷಿಣದ ಕೆಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷದ ಅಧಿಕಾರವಿದೆ. ತಮಿಳುನಾಡಿನವರು ನಮ್ಮದೇ ಮೇಕೆದಾಟು ಯೋಜನೆಯಿಂದ ಒಂದು ಲೋಟ ನೀರು ತೆಗೆದುಕೊಳ್ಳಲು ಬಿಡುತ್ತಿಲ್ಲ. ಆದರೆ, ಕರ್ನಾಟಕದಲ್ಲಿ ಏನು ಆಗಿದೆಯೋ ಗೊತ್ತಿಲ್ಲ. ಈ ಬಾರಿ ಕರ್ನಾಟಕದ ಜನತೆ ತೀರ್ಮಾನ ಮಾಡಬೇಕು. ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಾದೇಶಿಕ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಮುಗಿಸ್ತೇನೆ ಎನ್ನುವವರ ಕಂಡ್ರೆ ರಕ್ತ ಕುದಿಯುತ್ತೆ: ಎಚ್.ಡಿ.ದೇವೇಗೌಡ
ಬಿಜೆಪಿ ಮಾತಿಗೆ ಮರುಳಾಗಬೇಡಿ: ಬಿಜೆಪಿಯ ಬಣ್ಣದ ಮಾತಿಗೆ ಮರಳಾಗಬೇಡಿ. ಕಾಂಗ್ರೆಸ್ ಕೂಡಾ ನಿಮಗೆ ರಿಜರ್ವೇಷನ್ ಕೊಟ್ಟಿಲ್ಲ. ನಿಮ್ಮ ಹಳ್ಳಿಯ ರೈತನ ಮಗ ನಾನು ಬಂದು ನಿಮ್ಮ ಕಷ್ಟಆಲಿಸಿದ್ದೇನೆ. ಈ ಬಾರಿ ಜೆಡಿಎಸ್‌ಗೆ ಬೆಂಬಲ ನೀಡಿ ಎಂದು ವಿನಂತಿಸಿದರು. ಕುಮಾರಸ್ವಾಮಿಗೆ ಮಂಡ್ಯದಿಂದ ಸ್ಪರ್ಧಿಸುಂತೆ ಒತ್ತಡ ತಂದರು. ಆದರೆ, ಅವರು ಅಲ್ಲಿ ನಿಲ್ಲಲಿಲ್ಲ. ಇದು ಅವರ ಕರ್ಮಭೂಮಿ. ಹಾಗಾಗಿ ಇಲ್ಲಿಂದಲೇ ಅವರು ಸ್ಪರ್ಧೆ ಮಾಡಿದ್ದಾರೆ. ಇದೇ 10ನೇ ತಾರೀಖು ನೀವು ಕುಮಾರಣ್ಣನ ಮರೆಯಬಾರದು. ಯಾರು ಎಷ್ಟೇ ದುಡ್ಡು ಕೊಟ್ಟು ಅಪಪ್ರಚಾರ ಮಾಡಬಹುದು. ಯಾರೂ ತಲೆಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಅವರನ್ನ ಗೆಲ್ಲಿಸಲು ನೀವೆಲ್ಲ ಪಣತೊಡಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.