ಮೀಸಲಾತಿ ಪ್ರಮಾಣ ಶೇ.50ಕ್ಕೆ ಏರಿಕೆಯಾಗುತ್ತಿದೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ವ್ಯಕ್ತಿಗಳು ಕಾನೂನಾತ್ಮಕ ಹೋರಾಟ ನಡೆಸಲು ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡಿದೆ.

ವಿಜಯಪುರ (ಮಾ.05): ಮೀಸಲಾತಿ ಪ್ರಮಾಣ ಶೇ.50ಕ್ಕೆ ಏರಿಕೆಯಾಗುತ್ತಿದೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ವ್ಯಕ್ತಿಗಳು ಕಾನೂನಾತ್ಮಕ ಹೋರಾಟ ನಡೆಸಲು ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡಿದೆ. ಆ ಮೂಲಕ ದಲಿತರಿಗೆ ಕಾಂಗ್ರೆಸ್ ಸರ್ಕಾರ ವಿಶ್ವಾಸದ್ರೋಹ ಮಾಡಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಗಂಭೀರವಾಗಿ ಆರೋಪಿಸಿದರು.

Add Asianetnews Kannada as a Preferred SourcegooglePreferred

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ್ಯಾ.ನಾಗಮೋಹನ್ ದಾಸ್ ವರದಿ ಆಧರಿಸಿ ಈ ಹಿಂದೆಯೇ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದೆ. ಆದರೆ ಇದರಿಂದ ಸಂವಿಧಾನದ ಶೇ.50 ರಷ್ಟು ಮೀಸಲಾತಿ ಮೀರಬಾರದು ಎಂಬ ಇಂದಿರಾ ಸಹಾನಿ ಪ್ರಕರಣದ ತೀರ್ಪು ಉಲ್ಲೇಖಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ವ್ಯಕ್ತಿಗಳು ಕೋರ್ಟ್‌ಗೆ ಹೋಗಲು ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡಿದೆ ಎಂದರು.

ಅಲ್ಲಿ ಅಡ್ವೋಕೇಟ್ ಜನರಲ್ ಸಹ ಸರ್ಕಾರ ಮೀಸಲಾತಿ ಪ್ರಮಾಣ ಏರಿಕೆಯ ಬಗ್ಗೆ ಸರ್ಕಾರ ಬದ್ಧತೆ ಬಗ್ಗೆ ಹೇಳಿಕೆ ನೀಡಿಲ್ಲ. ಬದಲಾಗಿ ಶೇ.50 ರಷ್ಟು ಮೀಸಲಾತಿ ಮೀರುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಇದು ಮೋಸವಲ್ಲದೇ ಮತ್ತೇನು? ಡಾ.ಬಿ.ಆರ್.ಅಂಬೇಡ್ಕರ ಅವರೇ ಜನಸಂಖ್ಯೆ ಅಧಿಕವಾಗಿದ್ದರೆ ಮೀಸಲಾತಿ ಪ್ರಮಾಣ ಏರಿಕೆ ಮಾಡಲು ಡಾ.ಬಿ.ಅರ್.ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಅವಕಾಶ ನೀಡಿದ್ದಾರೆ. ಪೂನಾ ಒಪ್ಪಂದದ ಆಧರಿಸಿ ಮೀಸಲಾತಿ ಪ್ರಮಾಣ ಏರಿಕೆ ಮಾಡುವ ಅವಕಾಶವಿದೆ. ಆದರೆ ಇದನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನೇ ಮಾಡಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಒಳ ಮೀಸಲಾತಿ ಸಮರ್ಪಕ ಜಾರಿಯಾಗಿಲ್ಲ. ಡಾ.ಎಚ್.ಸಿ.ಮಹಾದೇವಪ್ಪ, ತಿಮ್ಮಾಪೂರ, ಕೆ.ಎಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಮೊದಲಾದವರು ಕುಳಿತುಕೊಂಡು ಖಾಜಿ ನ್ಯಾಯ ಮಾದರಿಯಲ್ಲಿ ತಾವೇ ತಾವೇ ಹಂಚಿಕೊಂಡಂತೆ ಒಂದು ರೀತಿ ಮೀಸಲಾತಿ ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ಈ ಸಚಿವರು ತಿಳಿದುಕೊಂಡಿದ್ದಾರೆ. ದಲಿತ ವರ್ಗಕ್ಕೆ ದೊಡ್ಡ ಅನ್ಯಾಯ ಮಾಡಿದ್ದು, ಇವರ‍್ಯಾರು ಸಚಿವ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಚಿವರ ದಲಿತ ವಿರೋಧಿ ನೀತಿಯ ಆಟ ಏನಾದರೂ ಡಾ.ಬಿ.ಆರ್. ಅಂಬೇಡ್ಕರ ಅವರು ನೋಡಿದ್ದರೆ ನೋವಿನಿಂಧ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಕಾರಜೋಳ ಹೇಳಿದರು. ಒಂದೇ ವರ್ಗದ ಕಲ್ಯಾಣಕ್ಕಾಗಿ ಡಾ.ಅಂಬೇಡ್ಕರ ಅವರು ಮೀಸಲಾತಿ ಜಾರಿಗೊಳಿಸಿಲ್ಲ, ಎಲ್ಲ ದಲಿತ ಸಮುದಾಯಗಳಿಗೆ ಅನುಕೂಲವಾಗಲು ಈ ಮೀಸಲಾತಿ ವ್ಯವಸ್ಥೆಯನ್ನು ರೂಪಿಸಿದ್ದಾರೆ ಎಂದರು.

ಸರ್ವಪಕ್ಷ ಸಭೆ ಕರೆಯಿರಿ

ಈಗ ಕೇವಲ ಒಳ ಮೀಸಲಾತಿ ಕೋರ್ಟ್‌ನಲ್ಲಿದೆ ಎಂಬ ಸಬೂಬು ಹೇಳುತ್ತಾ ರಾಜ್ಯ ಸರ್ಕಾರ ಮುಂದೆ ಸಾಗಿದೆ. ಕಾಂಗ್ರೆಸ್‌ನ ಈ ನಡೆ ದಲಿತ ಬಾಂಧವರು ಸಹಿಸುವುದಿಲ್ಲ. ಕೂಡಲೇ ಸಿದ್ಧರಾಮಯ್ಯ ಅವರು ಸರ್ವಪಕ್ಷಗಳ ಸಭೆ ಕರೆದು ಈ ಸಮಸ್ಯೆಯನ್ನು ಬಗೆಹರಿಸಿದರೆ ಒಳ್ಳೆಯದು. ಇಲ್ಲವಾದರೆ ಜನರು ನಿಮ್ಮನ್ನು ಹೊರಗೆ ಓಡಾಡಲು ಸಹ ಬಿಡುವುದಿಲ್ಲ ಎಂದು ಗುಡುಗಿದರು. ಈ ಅನ್ಯಾಯವನ್ನು ಸರ್ಕಾರ ಸರಿಪಡಿಸದೇ ಹೋದರೆ ಹೋರಾಟ ಅನಿವಾರ್ಯ. ರಾಜಸ್ತಾನದಲ್ಲಿ ಮಾದರಿ ಹೋರಾಟ ರೂಪಿಸಿ 29 ಸಾವಿರ ಹಳ್ಳಿಗಳಿಂದಲೂ ಹೋರಾಟಗಾರರನ್ನು ಕಯಿಸಿ ಸರ್ಕಾರದ ಧೋರಣೆಯನ್ನು ಖಂಡಿಸಲಾಗುವುದು ಎಂದರು.