2ನೇ ದಿನವೂ ಮೋದಿ ರೋಡ್‌ ಶೋ ಕಮಾಲ್‌: 8 ಕಿ.ಮೀ. ಸಂಚಾರ ವೇಳೆ ಹೂ ಮಳೆ

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಸತತ 2ನೇ ದಿನವಾದ ಭಾನುವಾರವೂ ರಾಜಧಾನಿಯಲ್ಲಿ ಭರ್ಜರಿ ಹಾಗೂ ಅದ್ದೂರಿ ರೋಡ್‌ ಶೋ ನಡೆಸಿ ಕಮಾಲ್‌ ಮಾಡಿದರು. 

Karnataka Election 2023 2nd day PM Narendra Modi Road Show Kamal At Bengaluru gvd

ಬೆಂಗಳೂರು (ಮೇ.08): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಧಾನಿ ನರೇಂದ್ರ ಮೋದಿ ಸತತ 2ನೇ ದಿನವಾದ ಭಾನುವಾರವೂ ರಾಜಧಾನಿಯಲ್ಲಿ ಭರ್ಜರಿ ಹಾಗೂ ಅದ್ದೂರಿ ರೋಡ್‌ ಶೋ ನಡೆಸಿ ಕಮಾಲ್‌ ಮಾಡಿದರು. ಮುಂಜಾನೆ ಸುರಿದ ಜಿಟಿಜಿಟಿ ಮಳೆಯ ನಡುವೆಯೂ ಮಕ್ಕಳಾದಿಯಾಗಿ ವಯೋ ವೃದ್ಧರು, ಮಹಿಳೆಯರು, ಯುವಕ-ಯುವತಿಯರು, ಬಿಜೆಪಿ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಸೇರಿದಂತೆ ಸುಮಾರು 10 ಲಕ್ಷ ಜನರು ಮೋದಿ ಅವರ ರೋಡ್‌ ಶೋ ವೀಕ್ಷಿಸಲು ರಸ್ತೆಯ ಇಕ್ಕೆಲಗಳಲ್ಲಿ ಕಿಕ್ಕಿರಿದು ತುಂಬಿದ್ದರು. 

ನ್ಯೂ ತಿಪ್ಪಸಂದ್ರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯಿಂದ ಶುರುವಾದ ಪ್ರಧಾನ ಮಂತ್ರಿಗಳ ರೋಡ್‌ ಶೋ, ಸರ್‌.ಸಿ.ವಿ.ರಾಮನ್‌ನಗರ ವಿಧಾನಸಭಾ ಕ್ಷೇತ್ರ, ಮಹದೇವಪುರ, ಕೆ.ಆರ್‌.ಪುರ., ಸರ್ವಜ್ಞನಗರ, ಶಿವಾಜಿನಗರ, ಶಾಂತಿನಗರ ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 8 ಕಿ.ಮೀ. ಕ್ರಮಿಸಿ ಟ್ರಿನಿಟಿ ಜಂಕ್ಷನ್‌ನಲ್ಲಿ ಅಂತ್ಯಗೊಂಡಿತು. ಶನಿವಾರ ನಗರದ 12 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 26 ಕಿ.ಮೀ. ಐತಿಹಾಸಿಕ ರೋಡ್‌ ಶೋ ನಡೆಸಿದ್ದ ಪ್ರಧಾನಿ ಮೋದಿ ಭಾನುವಾರ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 8 ಕಿ.ಮೀ.ನಷ್ಟುಸಂಚರಿಸಿದರು. 34 ಕಿ.ಮೀ. ಸಂಚರಿಸಿದ ಎರಡೂ ದಿನಗಳ ರೋಡ್‌ ಶೋ ರಾಜ್ಯದ ರಾಜಕೀಯ ಇತಿಹಾಸದ ದಾಖಲೆಯ ಪುಟ ಸೇರಿತು.

ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಚಾರ ಮಂತ್ರಿ: ಅಖಿಲೇಶ್‌ ಯಾದವ್‌

ಬೆಳಗ್ಗೆ 10ಕ್ಕೆ ಶುರು, 11.40ಕ್ಕೆ ಅಂತ್ಯ: ಮೋದಿ ಬೆಳಗ್ಗೆ 10 ಗಂಟೆಗೆ ರಾಜಭವನದಿಂದ ರಸ್ತೆ ಮಾರ್ಗದಲ್ಲಿ ನ್ಯೂ ತಿಪ್ಪಸಂದ್ರದ ಕೆಂಪೇಗೌಡರ ಪ್ರತಿಮೆ ಬಳಿಗೆ ಬಂದರು. ಬೆಳಗ್ಗೆ 10.20ಕ್ಕೆ ಕೆಂಪೇಗೌಡರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ತೆರೆದ ವಾಹನ ಏರಿದರು. ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ಮತ್ತು ಸಂಸದ ಪಿ.ಸಿ.ಮೋಹನ್‌ ಸಾಥ್‌ ನೀಡಿದರು. ರೋಡ್‌ ಶೋ, ಬೆಮಲ್‌ ಗೇಟ್‌, ಇಂದಿರಾನಗರದ 80 ಅಡಿ ರಸ್ತೆ, 12ನೇ ಮುಖ್ಯರಸ್ತೆ, ಇಎಸ್‌ಐ ಆಸ್ಪತ್ರೆ ಜಂಕ್ಷನ್‌, ದೊಮ್ಮಲೂರು 12ನೇ ಮುಖ್ಯರಸ್ತೆ, ಜೋಗುಪಾಳ್ಯ, ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆ, ಲಕ್ಷ್ಮೇಪುರ, ಹಲಸೂರಿನಲ್ಲಿ ಸಾಗಿ ಬೆಳಗ್ಗೆ 11.40ಕ್ಕೆ ಟ್ರಿನಿಟಿ ಜಂಕ್ಷನ್‌ ತಲುಪಿ ಸಂಪನ್ನಗೊಂಡಿತು. ಪ್ರಧಾನಿ ಮೋದಿ ಅವರು ರೋಡ್‌ ಶೋ ಅಂತ್ಯದ ವೇಳೆ ನಾಲ್ಕು ದಿಕ್ಕುಗಳಿಗೂ ತಿರುಗಿ ಶಿರಬಾಗಿ ನಮಿಸಿದರು.

ಪ್ರಧಾನಿ ಮೇಲೆ ಹೂಮಳೆ: ಆರಂಭದಲ್ಲಿ ಮೋದಿ ತೆರೆದ ವಾಹನ ಏರುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಜೈ ಬಜರಂಗಿ, ಜೈ ಮೋದಿ, ಜೈ ಶ್ರೀರಾಂ ಘೋಷಣೆ ಕೂಗಿದರು. ಕಾರ್ಯಕರ್ತರ ಜೋಶ್‌ ಕಂಡು ಖುಷಿಗೊಂಡ ಮೋದಿ ಅವರು ತೆರೆದ ವಾಹನದಲ್ಲಿ ಸುತ್ತಲು ಕೈ ಬೀಸಿ ನಗು ಚೆಲ್ಲಿದರು. ರೋಡ್‌ ಶೋ ಸಾಗಿದಂತೆ ಮೋದಿ ಅವರ ಮೇಲೆ ಸಾರ್ವಜನಿಕರು ಹೂವು ಎಸೆದು ಜಯಘೋಷ ಮೊಳಗಿಸಿದರು. ಮೋದಿ ಅವರನ್ನು ಹತ್ತಿರದಲ್ಲಿ ಕಣ್ತುಂಬಿಕೊಳ್ಳಲು ನಗರದ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬಂದಿದ್ದರು. ತಾಸುಗಟ್ಟಲೇ ಕಾದು ಕುಳಿತ್ತಿದ್ದರು. ಇಂದಿರಾನಗರದಲ್ಲಿ ಸುಮಾರು 50ಕ್ಕೂ ಅಧಿಕ ಪುರೋಹಿತರು ಹನುಮಾನ್‌ ಚಾಲೀಸಾ ಪಠಿಸಿದರು.

ಕಾಂಗ್ರೆಸ್‌ ಗ್ಯಾರಂಟಿ ಬರೀ ಸುಳ್ಳು, ಇಂಥ ಪಕ್ಷ ನಂಬಬೇಡಿ: ಮೋದಿ ವಾಗ್ದಾಳಿ

ಮಾರ್ಗದುದ್ದಕ್ಕೂ ಕೇಸರಿ ವಾತಾವರಣ: ಶೋ ಸಾಗುವ ಮಾರ್ಗವು ಸಂಪೂರ್ಣ ಕೇಸರಿ ಮಯವಾಗಿತ್ತು. ಬ್ಯಾರಿಕೇಡ್‌ಗಳಿಗೆ ಕೇಸರಿ ಬಟ್ಟೆಸುತ್ತಲಾಗಿತ್ತು. ರಸ್ತೆಗಳಲ್ಲಿ ಕೇಸರಿ ಬಣ್ಣದಲ್ಲಿ ರಂಗೋಲಿ ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಪೂಜಾ ಕುಣಿತ, ಪಟ್ಟದ ಕುಣಿತ, ಡೊಳ್ಳು, ನಗಾರಿ ಸೇರಿದಂತೆ ವಿವಿಧ ಕಲಾ ತಂಡಗಳು ಪ್ರದರ್ಶನ ನೀಡುವ ಮುಖಾಂತರ ರೋಡ್‌ ಶೋಗೆ ಮೆರಗು ತಂದವು. ಬಿಜೆಪಿ ಬಾವುಟ, ಕೇಸರಿ ಬಾವುಟ ಹಾರಾಟ ಜೋರಾಗಿತ್ತು. ಕೆಲವು ಅಭಿಮಾನಿಗಳು ಭಜರಂಗಿ ಹಾಗೂ ಮೋದಿ ಅವರ ಮಾಸ್ಕ್‌ ಧರಿಸಿ ಅಭಿಮಾನ ಮೇರೆದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios