ಬೊಮ್ಮಾಯಿ ಮತ್ತೆ ಸಿಎಂ ಆದರೆ ಅಭ್ಯಂತರ ಇಲ್ಲ: ಬಿ.ಎಸ್.ಯಡಿಯೂರಪ್ಪ
ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ತೆರೆದವರು ಬಿ.ಎಸ್.ಯಡಿಯೂರಪ್ಪ. 40 ವರ್ಷಗಳ ಚುನಾವಣಾ ರಾಜಕಾರಣ, ಸುಮಾರು 50 ವರ್ಷಗಳ ಪಕ್ಷ ಮತ್ತು ಸಂಘಟನೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ರಾಜ್ಯದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟಿ‘ಮಾಸ್ ಲೀಡರ್’ ಎಂಬ ಪಟ್ಟದೊಂದಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾದವರು ಯಡಿಯೂರಪ್ಪ.
ಗೋಪಾಲ್ ಯಡಗೆರೆ
ಶಿವಮೊಗ್ಗ (ಮೇ.08): ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಬಾಗಿಲು ತೆರೆದವರು ಬಿ.ಎಸ್. ಯಡಿಯೂರಪ್ಪ. 40 ವರ್ಷಗಳ ಚುನಾವಣಾ ರಾಜಕಾರಣ, ಸುಮಾರು 50 ವರ್ಷಗಳ ಪಕ್ಷ ಮತ್ತು ಸಂಘಟನೆಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಾ, ರಾಜ್ಯದಲ್ಲಿ ಬಿಜೆಪಿಯನ್ನು ಬಲಿಷ್ಠವಾಗಿ ಕಟ್ಟಿ‘ಮಾಸ್ ಲೀಡರ್’ ಎಂಬ ಪಟ್ಟದೊಂದಿಗೆ ನಾಲ್ಕು ಬಾರಿ ಮುಖ್ಯಮಂತ್ರಿಯಾದವರು ಯಡಿಯೂರಪ್ಪ. ಇದೀಗ ಚುನಾವಣಾ ರಾಜಕೀಯದಿಂದ ನಿವೃತ್ತಿಗೊಂಡು ಜೀವನ ಸಂಜೆಯ ಹಾದಿಯಲ್ಲಿ ಕೊನೆಯಲ್ಲಿ ನಿಂತುಕೊಂಡಿದ್ದರೂ ಮತ್ತದೇ ಉತ್ಸಾಹದಿಂದ ಇಡೀ ರಾಜ್ಯವನ್ನು ಸುತ್ತುತ್ತಿರುವ ಯಡಿಯೂರಪ್ಪ ಅವರ ಹಾದಿಯೇ ರೋಚಕ. ಈ ಹೊತ್ತಿನಲ್ಲಿ ‘ಕನ್ನಡಪ್ರಭ’ಕ್ಕೆ ‘ಮುಖಾಮುಖಿ’ಯಾಗಿದ್ದು ಹೀಗೆ..
*ಇದುವರೆಗೆ ಬಿಜೆಪಿಯನ್ನು ಸಮರ್ಥವಾಗಿ ಕಟ್ಟಿಬೆಳೆಸಿದ್ದೀರಿ. ಚುನಾವಣಾ ನಿವೃತ್ತಿ ಘೋಷಿಸಿದ ಈ ಹೊತ್ತಿನಲ್ಲಿ ಭವಿಷ್ಯದಲ್ಲಿ ರಾಜ್ಯದಲ್ಲಿ ಬಿಜೆಪಿ ಬೆಳೆಸಲು ನಿಮ್ಮ ಉತ್ತರಾಧಿಕಾರಿಯಾಗಿ ಯಾರಾದರೂ ಸಮರ್ಥರನ್ನು ನೀವು ಗುರುತಿಸುವಿರಾ?
ರಾಜ್ಯ ಬಿಜೆಪಿಯಲ್ಲಿ ಮುಖಂಡರಿಗೇನೂ ಕೊರತೆ ಇಲ್ಲ. ನಾಲ್ಕಾರು ಜನ ಇದ್ದಾರೆ. ರಾಷ್ಟ್ರೀಯ ನಾಯಕರು ಸೆಲೆಕ್ಟ್ ಮಾಡುತ್ತಾರೆ. ಈಗಾಗಲೇ ಬಸವರಾಜ ಬೊಮ್ಮಾಯಿ ಇದ್ದಾರೆ. ಉತ್ತಮ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ನಾನು ಚುನಾವಣಾ ನಿವೃತ್ತಿ ಮಾತ್ರ ಘೋಷಿಸಿದ್ದೇನೆಯೇ ಹೊರತು, ಸಕ್ರಿಯ ರಾಜಕಾರಣದಿಂದಲ್ಲ. ಮುಂದೆಯೂ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರುತ್ತೇನೆ. ಪಕ್ಷ ಕಟ್ಟುವ ಕೆಲಸ ಮುಂದುವರೆಸುತ್ತೇನೆ. ಈ ಚುನಾವಣೆ ಮುಗಿದ ಬಳಿಕ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲಿಸುವ ರೀತಿಯಲ್ಲಿ ಪ್ರವಾಸ ಮಾಡುತ್ತೇನೆ.
ಮೋದಿ ಮ್ಯಾಜಿಕ್ ರಾಜ್ಯದಲ್ಲಿ ನಡೆಯಲ್ಲ, ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ: ಸಲೀಂ ಅಹಮದ್
* ಲಿಂಗಾಯತರ ಕಡೆಗಣನೆ, ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಯತ್ನ ಎಂಬಿತ್ಯಾದಿ ಮಾತುಗಳು ಕೇಳಿಬರುತ್ತಲೇ ಇವೆಯಲ್ಲ?
ತಪ್ಪು ಮಾತುಗಳು. ಇನ್ನೊಮ್ಮೆ ಸ್ಪಷ್ಟವಾಗಿ ಹೇಳುತ್ತೇನೆ, ಯಾರನ್ನೂ ಇಲ್ಲಿ ಕಡೆಗಣಿಸುತ್ತಿಲ್ಲ. ನನ್ನನ್ನು ಕೂಡ. ನಾನು ಸ್ವಂತ ನಿರ್ಧಾರದಿಂದ ಚುನಾವಣೆಗೆ ನಿಲ್ಲೋದಿಲ್ಲ ಎಂದಿದ್ದೇನೆ. ಇಲ್ಲಿ ಯಾರದೂ ಒತ್ತಡವಿಲ್ಲ. ಇಷ್ಟುವರ್ಷದಲ್ಲಿ ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. ಸಂಸದೀಯ ಮಂಡಳಿ ಸದಸ್ಯನನ್ನಾಗಿ ಕೂಡ ಮಾಡಿದೆ. ಇನ್ನೇನು ಬೇಕು ಹೇಳಿ.
* ರಾಜ್ಯದ ಚುನಾವಣೆಗೆ ಪ್ರಧಾನಿ ಆದವರು ಇಷ್ಟುಬಾರಿ ಭೇಟಿ ನೀಡಿ ಮತ ಯಾಚಿಸಬೇಕೇ? ಇಲ್ಲಿನವರು ಸಮರ್ಥರಿಲ್ಲವೇ?
ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕನಾಗಿ ಬೆಳೆದವರು. ಅವರಿಗೆ ಅವರದೇ ಆದ ವಿಶೇಷವಾದ ವರ್ಚಸ್ಸಿದೆ. ರಾಜ್ಯದಲ್ಲಿಯೂ ಸಮರ್ಥ ನಾಯಕರೂ ಇದ್ದಾರೆ. ಎಲ್ಲರ ವರ್ಚಸ್ಸು ಮಾಡುತ್ತದೆ. ಸರ್ಕಾರ ಮತ್ತು ಶಾಸಕರು ಕೆಲಸ ಮಾಡಿದ ರೀತಿಯಿಂದ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಕೆಲವೊಮ್ಮೆ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಇದರಲ್ಲಿ ಬೇರೆ ರೀತಿಯಲ್ಲಿ ಯೋಚಿಸಬೇಕಾಗಿಲ್ಲ.
* ಎಲ್ಲ ಪಕ್ಷಗಳ ನಾಯಕರ ಮೇಲ್ಮಟ್ಟದಲ್ಲಿ ಚುನಾವಣಾ ಹೊಂದಾಣಿಕೆ ಆಗುತ್ತದೆ ಎಂಬ ಮಾತುಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ವಿಜಯೇಂದ್ರ ವರುಣದಲ್ಲಿ ಸ್ಪರ್ಧಿಸಲಿಲ್ಲ ಎಂಬ ಮಾತೂ ಇದೆ?
ಇಲ್ಲ. ಯಾವುದೇ ರೀತಿಯ ಹೊಂದಾಣಿಕೆ ಇಲ್ಲ. ಆ ರೀತಿಯ ಹೊಂದಾಣಿಕೆ ನನ್ನ ಜಾಯಮಾನದಲ್ಲಿಯೇ ಇಲ್ಲ. ಶಿಕಾರಿಪುರದಲ್ಲಿ 50 ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ನನ್ನ ಕರ್ಮಭೂಮಿ. ಹೀಗಾಗಿಯೇ ಹಿಂದೆಯೇ ವಿಜಯೇಂದ್ರ ಶಿಕಾರಿಪುರದಲ್ಲಿ ನಿಲ್ಲಬೇಕು ಎಂದು ಹೇಳಿದ್ದೆ. ವಿಜಯೇಂದ್ರ ವರುಣಾದಲ್ಲಿ ನಿಂತರೂ ಗೆಲ್ಲುತ್ತಿದ್ದ ಎನ್ನುವುದು ಬೇರೆ ಮಾತು. ಈಗ ಶಿಕಾರಿಪುರದಲ್ಲಿ ಸ್ಪರ್ಧಿಸುತ್ತಿದ್ದಾನೆ. ಜೊತೆಗೆ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುತ್ತಿದ್ದಾನೆ. ವರುಣದಲ್ಲಿಯೂ ವಿಜಯೇಂದ್ರ ಕೆಲಸ ಮಾಡುತ್ತಿದ್ದು, ವರುಣದಲ್ಲಿ ನಮ್ಮ ಅಭ್ಯರ್ಥಿ ಸೋಮಣ್ಣ ಗೆಲ್ಲುತ್ತಾರೆ.
*ಪುತ್ರ ವಿಜಯೇಂದ್ರ ಎಂದಾದರೂ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ನಿಮ್ಮ ಮನಸ್ಸಿನಲ್ಲಿ ಮೂಡಿದೆಯೇ?
ಇಲ್ಲ. ನಾನು ಕನಸು ಮನಸ್ಸಿನಲ್ಲಿಯೂ ಅದನ್ನು ಯೋಚಿಸಿಲ್ಲ. ಇಂತಹ ವಿಚಾರದಲ್ಲಿ ಅಂತಿಮವಾಗಿ ಪಕ್ಷ, ಹೈಕಮಾಂಡ್ ತೀರ್ಮಾನಿಸುತ್ತದೆ. ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಅದರಂತೆ ಎಲ್ಲವೂ ನಡೆಯುತ್ತದೆ.
* ಬಿಜೆಪಿ ಅಧಿಕಾರಕ್ಕೆ ಬಂದರೆ ಯಾರು ಮುಖ್ಯಮಂತ್ರಿ ಆಗಬೇಕೆಂಬುದನ್ನು ಪಕ್ಷದ ಶಾಸಕರು ತೆಗೆದುಕೊಳ್ಳುತ್ತಾರೋ ಅಥವಾ ಹೈಕಮಾಂಡ್ ತೆಗೆದುಕೊಳ್ಳುತ್ತದೆಯೋ?
ಪಕ್ಷದ ಹೈಕಮಾಂಡ್ ಮತ್ತು ಶಾಸಕರು ಒಟ್ಟಾಗಿ ನಿರ್ಧಾರ ಕೈಗೊಳ್ಳುತ್ತಾರೆ.
* ಆದರೆ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಕರ್ನಾಟಕ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು ಬಸವರಾಜ ಬೊಮ್ಮಾಯಿಯವರು ಮುಂದಿನ ಮುಖ್ಯಮಂತ್ರಿ ಎಂದಿದ್ದಾರಲ್ಲ?
ಬೊಮ್ಮಾಯಿ ಆದರೆ ನನ್ನದೇನೂ ಅಭ್ಯಂತರವಿಲ್ಲ. ಒಳ್ಳೆಯ ಕೆಲಸ ಮಾಡಿದ್ದಾರೆ. ಮತ್ತೆ ಸಿಎಂ ಆದರೆ ಅಭ್ಯಂತರವಿಲ್ಲ.
* ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೊಸಮುಖಗಳಿಗೆ ಅವಕಾಶ ನೀಡುವ ಹೈಕಮಾಂಡ್ ತೀರ್ಮಾನ ಯಶಸ್ವಿ ಆಗುತ್ತದೆಯೋ ಅಥವಾ ಹಿನ್ನೆಡೆ ಆಗುತ್ತದೆಯೋ?
ಯುವಕರಿಗೆ, ಹೊಸಬರಿಗೆ ಅವಕಾಶ ಕೊಡಬೇಕೆಂಬ ಯೋಜನೆ ಖಂಡಿತಾ ಯಶಸ್ವಿಯಾಗುತ್ತದೆ. ಬೇರೆ ಬೇರೆ ರಾಜ್ಯದಲ್ಲಿ ಇಂತಹ ಪ್ರಯೋಗ ಯಶಸ್ಸು ತಂದಿದೆ. ಇಲ್ಲಿಯೂ ಅದೇ ರೀತಿ ಆಗುತ್ತದೆ. ಇದನ್ನು ನಾನು ಸ್ವಾಗತಿಸುತ್ತೇನೆ.
* ಅಧಿಕಾರದಲ್ಲಿ ಇದ್ದಾಗ ಇನ್ನಷ್ಟುಕೆಲಸ ಮಾಡಬಹುದಿತ್ತು ಎನಿಸಿದೆಯೇ?
ಇನ್ನಷ್ಟು ಮಾಡಬೇಕು ಎಂಬುದು ನಿಜ. ಆದರೆ ನನ್ನ ಕೆಲಸ ನನಗೆ ತೃಪ್ತಿ ಇದೆ. ಮೊದಲ ಬಾರಿಗೆ ರೈತರ ಬಜೆಟ್ ಮಂಡಿಸಿದೆ. ಕೇಂದ್ರ ಸರ್ಕಾರದ ಕೃಷಿ ಸಮ್ಮಾನ್‌ಗೆ ಪೂರಕವಾಗಿ ರಾಜ್ಯ ಸರ್ಕಾರವೂ 4 ಸಾವಿರ ರು.ಗಳನ್ನು ರೈತರಿಗೆ ನೀಡಿತು. ಭಾಗ್ಯಲಕ್ಷ್ಮೇ ಸೇರಿದಂತೆ ಹತ್ತು ಹಲವು ಕೆಲಸಗಳು ತೃಪ್ತಿ ತಂದಿದೆ.
* ಇಷ್ಟು ವರ್ಷದ ರಾಜಕೀಯ ಜೀವನದ ಕೊನೆಯ ಅಂಚಿನಲ್ಲಿ ನಿಂತು ಯೋಚಿಸುವಾಗ ನಿಮ್ಮಲ್ಲಿನ ಧನಾತ್ಮಕ ಮತ್ತು ಋುಣಾತ್ಮಕ ಅಂಶಗಳ ಕುರಿತು ಮನಸ್ಸಿಗೆ ಬರುತ್ತದೆಯೇ?
ಇಲ್ಲ, ಯಾವುದೂ ಋುಣಾತ್ಮಕ ಅಂಶವಿಲ್ಲ. ಧನಾತ್ಮಕ ಅಂಶಗಳತ್ತ ವಾಲಿ ಕೆಲಸ ಮಾಡಿದ್ದೇನೆ.
ಸೈಕ್ಲೋನ್‌ಗೆ ತಲೆ ತಗ್ಗಿಸುವ ಉಷ್ಟ್ರಪಕ್ಷಿ ಅಲ್ಲ ಬಿಜೆಪಿ: ಕೇಂದ್ರ ಸಚಿವ ಅಮಿತ್ ಶಾ
* ನಿಮ್ಮ ರಾಜಕೀಯ ಜೀವನದುದ್ದಕ್ಕೂ ತಂತ್ರ, ಕುತಂತ್ರಗಳ ಮೂಲಕ ನಿಮ್ಮನ್ನು ಮಣಿಸುವ ಯತ್ನ ನಡೆಯಿತು. ನಿವೃತ್ತಿಯ ಈ ಹೊತ್ತಿನಲ್ಲಿ ಹೀಗೆ ಮಾಡಿದ ಯಾರ ಮೇಲಾದರೂ ಅಸಹನೆ, ಅಸಮಾಧಾನ ಇದೆಯೇ?
ಖಂಡಿತಾ ಯಾವ ಅಸಮಾಧಾನ ಇಲ್ಲ. ಯಾವ ಅಸಹನೆ ಕೂಡ ಇಲ್ಲ. ರಾಜಕೀಯ ಜೀವನದಲ್ಲಿ ಇದೆಲ್ಲ ಇದ್ದದ್ದೆ. ನನ್ನನ್ನು ನೇರ ಮತ್ತು ಪರೋಕ್ಷವಾಗಿ ವಿರೋಧಿಸಿದವರಿಗೆ ಈಗ ಸರಿಯಾಗಿ ಅರ್ಥವಾಗಿದೆ. ರಿಯಲೈಸ್ ಆಗಿದೆ. ಹೀಗಾಗಿ ಮುಂದೆ ನಾವು ಒಟ್ಟಾಗಿ ಹೋಗುತ್ತೇವೆ.
* ನಿವೃತ್ತಿಯ ಅಂಚಿನಲ್ಲಿ ನಿಂತು ಸುದೀರ್ಘ 55 ವರ್ಷಗಳ ರಾಜಕೀಯ ಜೀವನ ಅನುಭವಿಸಿದ ಬಳಿಕ ಯಾರ ಬಳಿಯಾದರೂ ಕ್ಷಮೆ ಕೋರಬೇಕು, ಯಾರಿಗಾದರೂ ಕೃತಜ್ಞತೆ ಸಲ್ಲಿಸಬೇಕು ಎಂದೆನಿಸುತ್ತದೆಯೇ?
ನಾನು ಯಾರ ಕ್ಷಮೆ ಕೇಳುವ ಪ್ರಶ್ನೆ ಇಲ್ಲ. ಆದರೆ ನಾಡಿನ ರೈತ ಸಮುದಾಯ ಸದಾ ನನ್ನ ಬೆಂಬಲಿಕ್ಕೆ ನಿಂತಿದೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದು ನನ್ನ ಕರ್ತವ್ಯ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.