ಮೋದಿ ಮ್ಯಾಜಿಕ್‌ ರಾಜ್ಯದಲ್ಲಿ ನಡೆಯಲ್ಲ, ಬೊಮ್ಮಾಯಿ ರಿಮೋಟ್‌ ಕಂಟ್ರೋಲ್‌ ಸಿಎಂ: ಸಲೀಂ ಅಹಮದ್‌

ಮೃದು ಭಾಷಿ, ವಿವಾದಗಳಿಂದ ಮಾರು ದೂರ ಉಳಿಯುವ ಹಾಗೂ ಎಲೆ ಮರೆಯ ಕಾಯಿಯಂತೆ ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಕೊಂಡ ಕಾಂಗ್ರೆಸ್‌ನ ಪ್ರಮುಖ ನಾಯಕರು ಯಾರು ಎಂದರೆ ತಕ್ಷಣ ಹೊಳೆವ ಹೆಸರು ಸಲೀಂ ಅಹಮದ್‌.

Karnataka Election 2023 KPCC Working President Saleem Ahmed Exclusive Interview gvd

ಶ್ರೀಕಾಂತ್‌ ಎನ್‌. ಗೌಡಸಂದ್ರ

ಬೆಂಗಳೂರು (ಮೇ.08): ಮೃದು ಭಾಷಿ, ವಿವಾದಗಳಿಂದ ಮಾರು ದೂರ ಉಳಿಯುವ ಹಾಗೂ ಎಲೆ ಮರೆಯ ಕಾಯಿಯಂತೆ ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಕೊಂಡ ಕಾಂಗ್ರೆಸ್‌ನ ಪ್ರಮುಖ ನಾಯಕರು ಯಾರು ಎಂದರೆ ತಕ್ಷಣ ಹೊಳೆವ ಹೆಸರು ಸಲೀಂ ಅಹಮದ್‌. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ಅಹರ್ನಿಶಿ ತೊಡಗಿಕೊಂಡರೂ ಅದನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡಿದವರಲ್ಲ. ವಿಶೇಷವಾಗಿ ಪಕ್ಷ ನೀಡಿದ ಅಲ್ಪಸಂಖ್ಯಾತ ಮತಗಳ ಕ್ರೂಢೀಕರಣದ ಟಾಸ್ಕ್‌ ನಿಭಾಯಿಸಲು ಶ್ರಮ ಪಟ್ಟವರು ಸಲೀಂ ಅಹಮದ್‌. 

ಪಕ್ಷದ ಸಂಘಟನೆ, ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಪ್ರಮುಖ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಅವರು ಪಕ್ಷವನ್ನು ಗೆಲ್ಲಿಸುವ ಉಮೇದಿನಲ್ಲಿ ರಾಜ್ಯ ಸುತ್ತುತ್ತಿದ್ದಾರೆ. ಚುನಾವಣಾ ಪ್ರಚಾರದ ಒತ್ತಡದ ನಡುವೆಯೇ ಚುನಾವಣಾ ಕಣದ ವಸ್ತುಸ್ಥಿತಿ, ಫಲಿತಾಂಶ, ಮುಂದಿನ ಮುಖ್ಯಮಂತ್ರಿ, ಬಜರಂಗದಳ ನಿಷೇಧ ಪ್ರಸ್ತಾಪದ ಪರಿಣಾಮವೇನಾಗಬಹುದು ಎಂಬ ಬಗ್ಗೆ ತಮ್ಮ ವಿಚಾರ ಹಂಚಿಕೊಳ್ಳಲು ‘ಕನ್ನಡಪ್ರಭ’ ಜತೆ ಮುಖಾಮುಖಿಯಾಗಿದ್ದಾರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಮಾತನಾಡಿದ್ದಾರೆ.

ಪ್ರಚಾರಕ್ಕೆ ಮೋದಿ ಬಂದಿದ್ದರಿಂದ 100ರ ಗಡಿ ದಾಟ್ತೇವೆ: ಸಚಿವ ಬಿ.ಶ್ರೀರಾಮುಲು

* ಮತದಾನಕ್ಕೆ 2 ದಿನಗಳಷ್ಟೇ ಬಾಕಿ. ಹೇಗಿದೆ ವಾತಾವರಣ ?
ಕಾಂಗ್ರೆಸ್‌ಗೆ ಅತ್ಯಂತ ಪೂರಕವಾಗಿದೆ. ಬಿಜೆಪಿಯ ಭ್ರಷ್ಟಾಚಾರ, ಅನಾಚಾರ, ಬೆಲೆ ಏರಿಕೆಯಿಂದಾಗಿ ಜನರ ಆಕ್ರೋಶ ಕಟ್ಟೆಯೊಡೆದಿದೆ. ಬಿಜೆಪಿಯವರು ಯಾವ ಕಾರಣಕ್ಕೆ ತಮಗೆ ಮತ ನೀಡಬೇಕು ಎಂಬುದನ್ನು ಹೇಳುವ ನೈತಿಕತೆಯನ್ನೇ ಕಳೆದುಕೊಂಡಿದ್ದಾರೆ. 40 ಪರ್ಸೆಂಟ್‌ ಕಮಿಷನ್‌, ರೈತರ ಸಮಸ್ಯೆಗಳು, ಬೆಲೆ ಏರಿಕೆ, ಕೊಟ್ಟಭರವಸೆ ಈಡೇರಿಸದ ವಚನಭ್ರಷ್ಟತೆಯಿಂದಾಗಿ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ. 400 ರು. ಇದ್ದ ಅಡುಗೆ ಅನಿಲ ದರ 1200 ರು. ಮುಟ್ಟಿದೆ. ಪ್ರತಿಯೊಂದರ ಬೆಲೆಯೂ ಏರಿಕೆಯಾಗಿ ಜನರು ತತ್ತರಿಸಿದ್ದಾರೆ. 1.5 ಲಕ್ಷ ಕೋಟಿ ರು. ನೀರಾವರಿಗೆ ಖರ್ಚು ಮಾಡುತ್ತೇವೆ ಎಂದವರು ಮಹದಾಯಿ, ಮೇಕೆದಾಟು ಯೋಜನೆಗಳನ್ನು ಮಾಡದೆ ವಂಚಿಸಿರುವುದನ್ನು ಜನರ ಮನಸ್ಸಲ್ಲಿಟ್ಟುಕೊಂಡಿದ್ದಾರೆ. ಹೀಗಾಗಿ ಸೂರ್ಯೋದಯ ಎಷ್ಟುಸತ್ಯವೋ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ?

* ನರೇಂದ್ರ ಮೋದಿ ರೋಡ್‌ ಶೋ ಬಳಿಕ ಟ್ರೆಂಡ್‌ ಬದಲಾಗಿದೆಯಂತೆ?
ವಾಸ್ತವವಾಗಿ ಜನರು ಮೋದಿ ಅವರ ಬಗ್ಗೆಯೂ ಆಕ್ರೋಶಗೊಂಡಿದ್ದಾರೆ. ಪ್ರವಾಹ ಬಂದಾಗ ಬರಲಿಲ್ಲ, ಕೊರೋನಾದಿಂದ ಜನ ಸಾಯುವಾಗ ಬಂದಿಲ್ಲ. ಈಗ 15-20 ದಿನಗಳಿಂದ ನಿತ್ಯ ಬರುತ್ತಿದ್ದಾರೆ. ಕೇಂದ್ರದ ವೈಫಲ್ಯಗಳನ್ನೂ ಜನ ಮರೆತಿಲ್ಲ. ಇಷ್ಟೆಲ್ಲಾ ಆದರೂ ರಾಜ್ಯದಲ್ಲಿ ಭ್ರಷ್ಟ, ದಲ್ಲಾಳಿಗಳ ಸರ್ಕಾರವನ್ನು ಪುನಃ ಅಧಿಕಾರಕ್ಕೆ ರೋಡ್‌ ಶೋ ಮಾಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಬಿಜೆಪಿ ಭ್ರಷ್ಟಾಚಾರದ ಪಕ್ಷ ಎಂಬುದು ತಳವೂರಿ ಬಿಟ್ಟಿದೆ. ಹೀಗಾಗಿ ಮೋದಿ ಮ್ಯಾಜಿಕ್‌ ನಡಯಲ್ಲ.

* ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಗಲಭೆ ಸೃಷ್ಟಿಯಾಗುತ್ತೆ ಅಂತಾರೆ ಬಿಜೆಪಿಯವರು?
ಬಿಜೆಪಿಯವರಿಗೆ ಗಲಭೆ ಹೊರತುಪಡಿಸಿ ಬೇರೇನೂ ಗೊತ್ತಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ಮಣಿಪುರದಲ್ಲಿ ಗಲಭೆಗಳು ಆಗುತ್ತಿದ್ದರೂ ನೆಮ್ಮದಿಯಿಂದ ಇರುವ ಬಿಜೆಪಿ ನಾಯಕರನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ. ಇನ್ನು ರಾಜ್ಯದಲ್ಲಿ ಕಳೆದ 4 ವರ್ಷದಲ್ಲಿ 23 ಸಾವಿರ ರೌಡಿ ಶೀಟರ್‌ಗಳಿಗೆ ಕ್ಲೀನ್‌ಚಿಟ್‌ ಕೊಟ್ಟು ರೌಡಿಶೀಟರ್‌ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಕಳೆದ 1 ವರ್ಷದಲ್ಲಿ 17 ಸಾವಿರ ಮಂದಿಯನ್ನು ರೌಡಿಶೀಟ್‌ನಿಂದ ತೆಗೆದಿದ್ದಾರೆ. ರೌಡಿಗಳನ್ನು ಇಟ್ಟುಕೊಂಡೇ ಚುನಾವಣೆ ಗೆಲ್ಲಬೇಕು ಎಂದುಕೊಂಡಿದ್ದಾರೆ. ರೌಡಿ ಎಲಿಮೆಂಟ್‌ ಆಗಿರುವ ಫೈಟರ್‌ ರವಿ ಪ್ರಧಾನಮಂತ್ರಿ ಜತೆ ವೇದಿಕೆ ಹಂಚಿಕೊಳ್ಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಬೊಮ್ಮಾಯಿ ಅವರು ಮತ್ತೆ ರಿಮೋಟ್‌ ಕಂಟ್ರೋಲ್‌ ಸಿಎಂ ಆಗಲಿದ್ದಾರೆ. ಸ್ಯಾಂಟ್ರೋ ರವಿಯಂತಹ ದಲ್ಲಾಳಿಗಳು, ಫೈಟರ್‌ ರವಿ ಅಂತಹ ರೌಡಿಗಳು ಸರ್ಕಾರ ನಡೆಸುತ್ತಾರೆ.

* ಆದರೆ, ಕಾಂಗ್ರೆಸ್‌ ನೀಡಿರುವ ಗ್ಯಾರಂಟಿಗಳಿಗೆ ಮೌಲ್ಯವಿಲ್ಲ. ಅವರು ಸತ್ಯವಾಗುವುದಿಲ್ಲ ಅಂತಾರೆ?
ನಮ್ಮ ಗ್ಯಾರಂಟಿ ಜನ ಮನ ಮುಟ್ಟಿವೆ. ಈಗಾಗಲೇ ಮನೆ-ಮನೆಗೂ ತಲುಪಿಬಿಟ್ಟಿದ್ದೇವೆ. ನಾ ಖಾವೂಂಗಾ, ನಾ ಖಾನೇದೂಂಗ ಎನ್ನುವ ಪ್ರಧಾನಿಗಳು 40 ಪರ್ಸೆಂಟ್‌ ಆರೋಪದ ಬಗ್ಗೆ ಒಂದು ತನಿಖೆಯೂ ಮಾಡಿಲ್ಲ. ಕೆ.ಎಸ್‌. ಈಶ್ವರಪ್ಪ ಮೇಲೆ ಆರೋಪ ಮಾಡಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರೂ ತರಾತುರಿಯಲ್ಲಿ ಬಿ-ರಿಪೋರ್ಚ್‌ ಹಾಕಿ ನರೇಂದ್ರ ಮೋದಿಯವರು ಜತೆಯಲ್ಲಿ ನಿಲ್ಲಿಸಿಕೊಂಡು ರೋಡ್‌ ಶೋ ಮಾಡುಾ್ತರೆ. ಇವರದ್ದೇ ಶಾಸಕರ ಮನೆಯಲ್ಲಿ 8 ಕೋಟಿ ರು. ನಗದು ಸಿಗುತ್ತದೆ ಎಂದರೆ ಎಷ್ಟರ ಮಟ್ಟಿಗೆ ಲೂಟಿ ಮಾಡಿದ್ದಾರೆ ಎಂಬುದು ಜನರಿಗೆ ಅರಿವಾಗಿದೆ. ಇನ್ನು ನಾವು ಐದು ಗ್ಯಾರಂಟಿ ಯೋಜನೆಗಳನ್ನು ಮನೆ-ಮನೆಗೂ ತಲುಪಿಸಿದ್ದೇವೆ.

* ಕಾಂಗ್ರೆಸ್‌ ಹಿಂದೂ ವಿರೋಧಿ. ಹೀಗಾಗಿಯೇ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಪ್ರಸ್ತಾಪಿಸಿದೆ ಅಂತಾರಲ್ಲ?
ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವುದು ನಮ್ಮ ಗುರಿ. ಹೀಗಾಗಿ ಯಾವುದೇ ಶಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡಿದರೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದೇವೆ. ಅಲ್ಪಸಂಖ್ಯಾತ, ಬಹುಸಂಖ್ಯಾತ ಯಾರ ಪರವಾದ ಯಾವುದೇ ಸಂಘಟನೆಯಾದರೂ ಶಾಂತಿ ಕದಡುವ ಪ್ರಯತ್ನಗಳಿಗೆ ಕೈ ಹಾಕಿದರೆ ಕ್ರಮ ಕೈಗೊಳ್ಳುತ್ತೇವೆ ಎಂಬುದು ನಮ್ಮ ಭರವಸೆ. ಕಾಂಗ್ರೆಸ್‌ ಸಹಬಾಳ್ವೆ ಮಂತ್ರ ಜಪಿಸುವ ಪಕ್ಷ. ಹಿಂದು, ಮುಸ್ಲಿಂ ಸೇರಿದಂತೆ ಯಾರ ವಿರೋಧಿಯೂ ಅಲ್ಲ.

* ನಿಮ್ಮ ಬಜರಂಗ ದಳ ನಿಷೇಧ ಚುನಾವಣೆಯಲ್ಲಿ ಬಿಜೆಪಿ ಕೈಗೆ ದೊರೆತ ಅಸ್ತ್ರವಾಗಿ ಬಿಟ್ಟಿದೆ?
ಭಾವನೆಗಳ ಮೇಲೆ ಮತ ಕೇಳುವುದು ಅವರ ವಾಡಿಕೆ. ಜನರಿಗೆ ಇವೆಲ್ಲವೂ ಅರ್ಥವಾಗುತ್ತದೆ. ನಾವು ಅಭಿವೃದ್ಧಿ ಹಾಗೂ ಭ್ರಷ್ಟರಹಿತ ಆಡಳಿತದ ಉದ್ದೇಶದಿಂದ ಪಕ್ಷವನ್ನು ಅಧಿಕಾರಕ್ಕೆ ತರಲು ಕೋರುತ್ತಿದ್ದೇವೆ. ಬಿಜೆಪಿಗೆ ಯಾಕೆ ಮತ ಹಾಕಬಾರದು ಎಂಬುದನ್ನೂ ಹೇಳುತ್ತಿದ್ದೇವೆ. ಸ್ವರ್ಗ ತೋರಿಸುತ್ತೇವೆ ಎಂದು ಆಸೆ ಹುಟ್ಟಿಸಿ ನರಕ ತೋರಿಸಿದ ಮೋದಿಯನ್ನು ತಿರಸ್ಕರಿಸಲಿದ್ದಾರೆ. ಹಳಿ ತಪ್ಪಿದ ಡಬ್ಬಾ ಎಂಜಿನ್‌ ಸರ್ಕಾರ ಈ ಬಾರಿ ಮೂಲೆಗುಂಪಾಗಲಿದೆ.

* ಹೋಗಲಿ, ಕಾಂಗ್ರೆಸ್‌ ಮುಸ್ಲಿಮರಿಗೆ ನ್ಯಾಯ ನೀಡುತ್ತಿದೆಯ. ಬಯಸಿದಷ್ಟುಟಿಕೆಟ್‌ ಮುಸ್ಲಿಮರಿಗೆ ಸಿಕ್ತ?
ಸಿಕ್ಕಿದೆ, ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ನಾವು ಕೇಳಿದಷ್ಟೂಸೀಟುಗಳನ್ನು ಪಕ್ಷ ನೀಡಿದೆ.

* ಕಳೆದ ಬಾರಿಗಿಂತ ಅಲ್ಪಸಂಖ್ಯಾತರ ಪ್ರಾತಿನಿಧ್ಯತೆ ಕಡಿಮೆಯಾಗಿದೆ?
ಹಾಗೇನೂ ಇಲ್ಲ. ಕಳೆದ ಬಾರಿ 17 ಸೀಟುಗಳನ್ನು ನೀಡಿದ್ದರು. ಈ ಬಾರಿ ಪಕ್ಷ 20 ಸೀಟು ನೀಡಲೂ ಸಿದ್ಧವಿತ್ತು. ಆದರೆ ಗೆಲ್ಲುವ ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್‌ ಪಡೆಯಬೇಕು ಎಂಬ ಕಾರಣಕ್ಕೆ ನಾವು 15 ಸೀಟು ಮಾತ್ರ ಪಡೆದಿದ್ದೇವೆ. ನಾವು ಪಟ್ಟಿಕೊಟ್ಟಿದ್ದ ಅಷ್ಟೂಮಂದಿಗೆ ಟಿಕೆಟ್‌ ನೀಡಲಾಗಿದೆ. ಟಿಕೆಟ್‌ ವಿಚಾರದಲ್ಲಿ ಎಲ್ಲೂ ಅಸಮಾಧಾನ ವ್ಯಕ್ತವಾಗಿಲ್ಲ.

* ಅಲ್ಪ ಸಂಖ್ಯಾತರನ್ನು ಕಣಕ್ಕಿಳಿಸುವ ನೀತಿಯಿಂದಾಗಿ ಸರಳವಾಗಿ ಗೆಲ್ಲಬಲ್ಲ ಕ್ಷೇತ್ರಗಳಲ್ಲೂ ಗೆಲುವು ಕಷ್ಟವಾಗುತ್ತಿದೆ ಎಂಬ ಆರೋಪವಿದೆ?
ಅಂತಹ ಉದಾಹರಣೆ ಯಾವುದೂ ಇಲ್ಲವಲ್ಲ.

* ಶಿಗ್ಗಾಂವಿ ಕ್ಷೇತ್ರದಲ್ಲಿ ವಿನಯ್‌ಕುಲಕರ್ಣಿ ಅವರಿಗೆ ಟಿಕೆಟ್‌ ನೀಡಿದ್ದರೆ ಗೆಲುವು ಖಚಿತ ಎಂಬ ವರದಿಯಿತ್ತು ಎನ್ನುತ್ತಾರಲ್ಲ?
ವಿನಯ ಕುಲಕರ್ಣಿ ಅವರು ತಮ್ಮ ಕ್ಷೇತ್ರದಲ್ಲೇ ನಿಲ್ಲುತ್ತೇನೆ ಶಿಗ್ಗಾಂವಿಯಿಂದ ಸ್ಪರ್ಧಿಸಲ್ಲ ಎಂದರು. ಹೀಗಾಗಿ ಎಲ್ಲರೊಂದಿಗೂ ಚರ್ಚಿಸಿ ಪಠಾಣ್‌ ಯಾಸಿರ್‌ ಅಹಮದ್‌ ಖಾನ್‌ ಅಂತಹ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಇನ್ನು ತುಮಕೂರಿನ 11 ಕ್ಷೇತ್ರಗಳಲ್ಲಿ ತುಮಕೂರು ಮಾತ್ರ (ಮುಸ್ಲಿಂ ಅಭ್ಯರ್ಥಿ) ಕೇಳಿದ್ದೆವು, ಪಡೆದುಕೊಂಡಿದ್ದೇವೆ.

* ಅಲ್ಪಸಂಖ್ಯಾತ ಮತಗಳು ಎಸ್‌ಡಿಪಿಐ ಮತ್ತಿತರ ಪಕ್ಷಗಳತ್ತ ವಾಲುತ್ತಿವೆ ಎಂಬ ಮಾತಿದೆ?
ಬಿಜೆಪಿಯ ದುರಾಡಳಿತದಿಂದ ಬೇಸತ್ತಿರುವ ಅಲ್ಪಸಂಖ್ಯಾತರು ಈ ಬಾರಿ ಕಾಂಗ್ರೆಸ್‌ ಒಂದೇ ಪರ್ಯಾಯ ಎಂಬುದನ್ನು ಅರಿತಿದ್ದಾರೆ. ಬೇರೆ ಯಾವ ಪಕ್ಷಗಳಿಗೂ ಈ ಬಾರಿ ಮತ ನೀಡಲ್ಲ. ಹೀಗಾಗಿ ನೇರ ಹಣಾಹಣಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಇರಲಿದೆ.

* ಹಾಗಾದರೆ ಟಿಕೆಟ್‌ ಪಡೆದಿರುವ 15 ಮಂದಿ ಅಲ್ಪಸಂಖ್ಯಾತರಲ್ಲಿ ಎಷ್ಟುಸೀಟು ಗೆಲ್ಲುತ್ತೀರಿ?
ಗೆಲ್ಲುವ ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್‌ ಪಡೆದಿದ್ದೇವೆ. ಹೀಗಾಗಿ 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ.

ಪ್ರಧಾನಿ ಮೋದಿ ಮುಖದಲ್ಲಿ 2018ರ ಉತ್ಸಾಹ ಇಲ್ಲ: ಜೈರಾಂ ರಮೇಶ್‌

* ಲಿಂಗಾಯತ, ಒಕ್ಕಲಿಗ, ದಲಿತ ಮುಖ್ಯಮಂತ್ರಿ ಕೂಗಿನಂತೆ ಮುಸ್ಲಿಂ ಮುಖ್ಯಮಂತ್ರಿ ಕೂಗು ಯಾಕಿಲ್ಲ?
ನಮ್ಮ ಆದ್ಯತೆ ಮುಖ್ಯಮಂತ್ರಿ ಆಗುವುದಲ್ಲ. ಮೊದಲು ಭ್ರಷ್ಟಬಿಜೆಪಿಯನ್ನು ತೊಲಗಿಸಬೇಕು. ಹೀಗಾಗಿ ಎಲ್ಲರೂ ಸಾಮೂಹಿಕ ನಾಯಕತ್ವದಡಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಮೊದಲ ಆದ್ಯತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದೇ ಹೊರತು ಬೇರೇನೂ ಅಲ್ಲ.

* ಒಂದು ವೇಳೆ ಅತಂತ್ರ ಫಲಿತಾಂಶ ಬಂದರೆ ಯಾವ ಪಕ್ಷದೊಂದಿಗೆ ಸರ್ಕಾರ ರಚಿಸುತ್ತೀರಿ?
ಅತಂತ್ರ ಫಲಿತಾಂಶ ಬರಲು ಸಾಧ್ಯವೇ ಇಲ್ಲ. ನಾವು 140 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿದ್ದೇವೆ. ಹೀಗಾಗಿ ಈ ಪ್ರಶ್ನೆಯೇ ಈಗ ಅಪ್ರಸ್ತುತ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

Latest Videos
Follow Us:
Download App:
  • android
  • ios