ಬೆಂಗ್ಳೂರಲ್ಲಿ 26 ಕಿಮೀ ರೋಡ್ ಶೋ: ರಾಜ್ಯದಲ್ಲೇ ಮೊದಲು ಮೋದಿ ದಾಖಲೆ ಶೋ!
ಸಿಲಿಕಾನ್ ಸಿಟಿಯ ಇಡೀ ದಕ್ಷಿಣ ಭಾಗವು ಕೇಸರಿಮಯ... ಕಣ್ಣು ಹಾಯಿಸಿದಷ್ಟೂಕೇಸರಿ ಬಣ್ಣ ರಾರಾಜಿಸುತ್ತಿತ್ತು... ಸಮುದ್ರದ ಅಲೆಗಳಂತೆ ರಸ್ತೆಗಳಲ್ಲಿ ಕಂಡ ಹೂವುಗಳ ಅಲೆ... 13 ಕ್ಷೇತ್ರಗಳ, 26 ಕಿ.ಮೀ. ಉದ್ದವೂ ಕೇಸರೀಕರಣ...
ಬೆಂಗಳೂರು (ಮೇ.07): ಸಿಲಿಕಾನ್ ಸಿಟಿಯ ಇಡೀ ದಕ್ಷಿಣ ಭಾಗವು ಕೇಸರಿಮಯ... ಕಣ್ಣು ಹಾಯಿಸಿದಷ್ಟೂಕೇಸರಿ ಬಣ್ಣ ರಾರಾಜಿಸುತ್ತಿತ್ತು... ಸಮುದ್ರದ ಅಲೆಗಳಂತೆ ರಸ್ತೆಗಳಲ್ಲಿ ಕಂಡ ಹೂವುಗಳ ಅಲೆ... 13 ಕ್ಷೇತ್ರಗಳ, 26 ಕಿ.ಮೀ. ಉದ್ದವೂ ಕೇಸರೀಕರಣ... ಪ್ರಧಾನಿ ನರೇಂದ್ರ ಮೋದಿಗೆ ಜೈಕಾರದ ಜತೆಗೆ ಬಜರಂಗಿಗೂ ಜೈಕಾರ... ಮುಗಿಲೆತ್ತರಕ್ಕೆ ಮೊಳಗಿದ ಘೋಷಣೆಗಳು... ರಸ್ತೆಯಲ್ಲೆಲ್ಲಾ ಹಳದಿ, ಕೇಸರಿ ಬಣ್ಣದ ಹೂಗಳ ರಾಶಿ...! ಶನಿವಾರ ‘ನಮ್ಮ ಬೆಂಗಳೂರು, ನಮ್ಮ ಹೆಮ್ಮೆ’ ಹೆಸರಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರೋಡ್ ಶೋನಲ್ಲಿ ಕಂಡ ದೃಶ್ಯಗಳಿವು...
ದೇಶದ ದೊರೆಯನ್ನು ಕಣ್ತುಂಬಿಕೊಳ್ಳಲು ಬೆಳಗ್ಗಿನಿಂದಲೇ ಜನರು ರಸ್ತೆಯ ಇಕ್ಕೆಲಗಳಲ್ಲಿ ಕಾದು ಕುಳಿತಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಂಡ ಜನಸಾಗರ ಪುಳಕಿತಗೊಳಗಾಯಿತು. ಮೋದಿಯ ವೀಕ್ಷಣೆಗಾಗಿ ಮನೆಯ ಮಹಡಿ, ಕಂಬಗಳ ಮೇಲೆಲ್ಲಾ ಕುಳಿತಿದ್ದ ದೃಶ್ಯಗಮನ ಸೆಳೆಯಿತು. ಮಹಿಳೆಯರು, ಮಕ್ಕಳು ಸೇರಿದಂತೆ ಹಲವು ಮಂದಿ ಮೋದಿ ಮುಖವಾಡ ಹಾಕಿಕೊಳ್ಳುವ ಮೂಲಕ ಸಂಭ್ರಮ ಮನೆ ಮಾಡಿತು. ಈವರೆಗಿನ ರೋಡ್ ಶೋಗಳಲ್ಲಿ ಬಿಜೆಪಿ ಮತ್ತು ಭಗವಾಧ್ವಜ ರಾರಾಜಿಸುತ್ತಿದ್ದವು. ಆದರೆ, ಶನಿವಾರ ನಡೆದ ರೋಡ್‌ಶೋನಲ್ಲಿ ಇವುಗಳ ಜತೆಗೆ ಬಜರಂಗಿ ಧ್ವಜಗಳೂ ಸೇರ್ಪಡೆಯಾಗಿದ್ದವು.
ಗ್ಯಾರಂಟಿ ಈಡೇರಿಸಿದ್ದೇವೆ: ಮೋದಿ ವಿರುದ್ಧ ಸೋನಿಯಾ ಗಾಂಧಿ ಕಿಡಿ
ರಾಜ್ಯ ವಿಧಾನಸಭಾ ಚುನಾವಣೆ ಕಾವು ಜೋರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡರು. ಶನಿವಾರ ಹೆಲಿಕಾಪ್ಟರ್ ಮೂಲಕ ಬನ್ನೇರುಘಟ್ಟರಸ್ತೆಯಲ್ಲಿನ ಲೊಯೋಲ ಶಾಲೆ ಹೆಲಿಪ್ಯಾಡ್‌ಗೆ ಆಗಮಿಸಿದರು. ಅಲ್ಲಿಂದ ತೆರೆದ ವಾಹನದಲ್ಲಿ ರೋಡ್ ಶೋ ಸ್ಥಳಕ್ಕೆ ಆಗಮಿಸಿದರು. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬ್ರಿಗೇಡ್ ಮಿಲೆನಿಯಂ ಬಳಿಯ ಸೋಮೇಶ್ವರ ಸಭಾಭವನದಿಂದ ರೋಡ್‌ಶೋ ಆರಂಭಗೊಂಡಿತು. ಮೋದಿಗೆ ಮೈಸೂರು ಪೇಟ ತೊಡಿಸಿ ಸ್ವಾಗತ ಕೋರಲಾಯಿತು. ಮೋದಿ ಜತೆಗೆ ತೆರೆದ ವಾಹನದಲ್ಲಿ ಸಂಸದರಾದ ತೇಜಸ್ವಿ ಸೂರ್ಯ ಮತ್ತು ಪಿ.ಸಿ.ಮೋಹನ್ ಸಾಥ್ ನೀಡಿದರು. ಸುಮಾರು ಮೂರು ತಾಸುಗಳಿಗಿಂತ ಹೆಚ್ಚು ಕಾಲ ರೋಡ್‌ಶೋ ನಡೆಯಿತು. ಬೆಳಗ್ಗೆ 10 ಗಂಟೆಯಿಂದ ಸುಮಾರು ಮಧ್ಯಾಹ್ನ 1.15ರವರೆಗೆ ರಾರಯಲಿ ಜರುಗಿತು.
ಪ್ರಧಾನಿ ರೋಡ್ ಶೋ 13 ವಿಧಾನಸಭಾ ಕ್ಷೇತ್ರಗಳಲ್ಲಿ 26 ಕಿ.ಮೀ. ಸಂಚರಿಸಿತು. ಈ ವೇಳೆ ಸಂಬಂಧಪಟ್ಟಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು ಉಪಸ್ಥಿತರಿದ್ದು, ಮೋದಿ ಅವರನ್ನು ಸ್ವಾಗತಿಸಿದರು. ‘ಮೋದಿ ಮೋದಿ’ ಎನ್ನುವ ಜಯಕಾರಗಳನ್ನು ಮೊಳಗಿಸಿ ಮೋದಿಗೆ ಜನರು ನಮನ ಸಲ್ಲಿಸಿದರು. ಈ ಬಾರಿ ಮತ್ತೊಮ್ಮೆ ಬಿಜೆಪಿ ಎನ್ನುವ ಘೋಷಣೆಗಳು ಕೇಳಿಬಂದವು. ಮನೆಬಾಗಿಲಿಗೆ ಬಂದ ನರೇಂದ್ರ ಮೋದಿ ಅವರನ್ನು ಕಂಡ ಅಭಿಮಾನಿಗಳು ಪುಳಕಿತಗೊಂಡರು. ಮೋದಿ ಅವರನ್ನು ವೀಕ್ಷಿಸಲು ಜನಸಾಗರವೇ ಹರಿದು ಬಂದಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಜನರು ಹೂ ಮಳೆ ಸುರಿಸಿದರು. ಇಳಿ ವಯಸ್ಸಿನಲ್ಲಿಯೂ ಮೋದಿಯ ಉತ್ಸಾಹ ಕಂಡ ಜನರು ನಿಬ್ಬೇರಗಾಗಿ ಜೈಕಾರ ಕೂಗಿದ ಪ್ರಸಂಗಗಳು ನಡೆದವು. ಜನರ ಪ್ರೀತಿಯ ಮಳೆಯನ್ನು ಕಂಡ ಮೋದಿ ಸಹ ಪುಳಕಿತಗೊಂಡರು.
ಇನ್ನು, ಜಯನಗರದ ಬಳಿ ಮಂತ್ರಾಲಯ ಸ್ವಾಮೀಜಿ ಸಹ ಮೋದಿ ಆಗಮನಕ್ಕಾಗಿ ಹೊರಗಡೆ ಕಾದು ಕುಳಿತಿದ್ದರು. ಸ್ವಾಮೀಜಿಯನ್ನು ಕಂಡ ಮೋದಿ ನಮಸ್ಕರಿಸಿದರು. ರಸ್ತೆಯ ಉದ್ದಕ್ಕೂ ಹಲವು ವಿಶೇಷತೆಗಳಿದ್ದವು. ಮೋದಿಯ ಸ್ವಾಗತಕ್ಕಾಗಿ ಸಾಂಸ್ಕೃತಿಕ ಕಲಾತಂಡಗಳನ್ನು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವು. ಡೊಳ್ಳು ಕುಣಿತ, ವೀರಗಾಸೆ ನೃತ್ಯಗಳ ಪ್ರದರ್ಶನ ಮಾಡಲಾಯಿತು. ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಕಾಡು ಮಲ್ಲೇಶ್ವರ ದೇವಾಲಯದ ಬಳಿಕ ರೋಡ್ ಶೋ ಮುಕ್ತಾಯವಾಯಿತು. ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಲು ತಯಾರಿ ನಡೆಸಲಾಗಿತ್ತು. ಆದರೆ, ಸಮಯದ ಅಭಾವದಿಂದಾಗಿ ಮೋದಿ ಅವರು ನೇರವಾಗಿ ಕಾರು ಹತ್ತಿ ಬೆಂಗಳೂರಿನಿಂದ ಬಾದಾಮಿಗೆ ತೆರಳಿದರು.
ಪ್ರಧಾನಿಯವರ ರೋಡ್‌ಶೋ ಬ್ರಿಗೇಡ್ ಮಿಲೇನಿಯಂ ಬಳಿ ಆರಂಭಗೊಂಡು, ಜೆ.ಪಿ.ನಗರ 24ನೇ ಮುಖ್ಯರಸ್ತೆ, ರಾಘವೇಂದ್ರ ಸ್ವಾಮಿ ಮಠ, ಆರ್.ವಿ.ಆಸ್ಟರ್ ಆಸ್ಪತ್ರೆ, ಸಾರಕ್ಕಿ ಜಂಕ್ಷನ್, ಜಯನಗರ, ಸೌತ್‌ಎಂಡ್ ಸರ್ಕಲ್, ಕೃಷ್ಣರಾವ್ ಸರ್ಕಲ್, ಗುಣಶೀಲ ಆಸ್ಪತ್ರೆ, ಎನ್.ಆರ್.ಕಾಲೋನಿ, ದೊಡ್ಡಗಣಪತಿ ದೇವಾಲಯ, ರಾಮಕೃಷ್ಣ ಆಶ್ರಮ, ಮಕ್ಕಳಕೂಟ, ಸಿರ್ಸಿ ಸರ್ಕಲ್, ಮಾಗಡಿ ರಸ್ತೆ, ಹೌಸಿಂಗ್ ಬೋರ್ಡ್, ಬಸವೇಶ್ವರನಗರ, ವಿಜಯನಗರ, ಗೋವಿಂದರಾಜ ನಗರ, ಶಂಕರ ಮಠ ಸರ್ಕಲ್, ಮೋದಿ ಆಸ್ಪತ್ರೆ ರಸ್ತೆ, ಮಲ್ಲೇಶ್ವರ ಸರ್ಕಲ್, ಸಂಪಿಗೆ ರಸ್ತೆ, ಸರ್ಕಲ್ ಮಾರಮ್ಮ ದೇವಸ್ಥಾನದ ಬಳಿ ರೋಡ್‌ಶೋ ಮುಕ್ತಾಯವಾಯಿತು.
ಬಜರಂಗಿ ಧ್ವಜ ಹಾರಾಟ, ಕಾಂಗ್ರೆಸ್ ಲಕ್ಷಕ್ಕೆ ಟಕ್ಕರ್: ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದರೆ ಬಜರಂಗದಳ ನಿಷೇಧಿಸುವಂತೆ ಪ್ರಸ್ತಾಪಿಸಿರುವುದಕ್ಕೆ ಹಿಂದುತ್ವ ಸಂಘಟನೆಗಳು ಟಕ್ಕರ್ ಕೊಟ್ಟಪ್ರಸಂಗ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋನಲ್ಲಿ ಜರುಗಿದೆ. ಬಜರಂಗಿ ಧ್ವಜಗಳ ಹಾರಾಟ, ಬಜರಂಗಿ ವೇಷದ ಜತೆಗೆ ಹನುಮಾನ್ ಮುಖವಾಡಗಳು ಕಂಡು ಬಂದವು. ಹನುಮಂತನ ಮುಖವಾಡಗಳನ್ನು ಧರಿಸಿದ ಹಲವಾರು ಜನರು ಭಾಗವಹಿಸಿದ್ದರು. ಬಜರಂಗ ದಳದ ಕಾರ್ಯಕರ್ತರು ಸಿರ್ಸಿ ಸರ್ಕಲ… ನಲ್ಲಿ ಅಂಜನೇಯನ ಬೃಹತ… ಕಟೌಟ್ ಜತೆ ಸಾಗುತ್ತಾ ಕುಣಿದರು. ಪ್ರಧಾನಿ ಮೋದಿಗೆ ಜೈಕಾರ ಕೂಗುವುದರ ಜತೆಗೆ ಬಜರಂಗ ಬಲಿಗೂ ಜೈಕಾರ ಕೂಗಿದರು.
ಪುರೋಹಿತರಿಂದ ಮಂತ್ರ ಪಠಣ: ಬೆಂಗಳೂರು ದಕ್ಷಿಣ ಭಾಗದಲ್ಲಿ ಕೇಸರಿಮಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿಗಾಗಿ ಪುರೋಹಿತರಿಂದ ಮಂತ್ರ ಪಠಣೆ ಮಾಡಲಾಯಿತು. ಜಯನಗರ ಬಳಿ ಪ್ರಧಾನಿಗಾಗಿ 10ಕ್ಕೂ ಹೆಚ್ಚು ಪುರೋಹಿತರು ಮಂತ್ರ ಪಠಣೆ ಮಾಡಿದರು. ಸುಮಾರು ನಾಲ್ಕು ನಿಮಿಷಕ್ಕಿಮತ ಹೆಚ್ಚು ಸಮಯ ಮಂತ್ರವನ್ನು ಪಠಣೆ ಮಾಡಲಾಯಿತು.
ಮಂತ್ರಾಲಯ ಸ್ವಾಮೀಜಿಗೆ ಪ್ರಧಾನಿ ಮೋದಿ ನಮಸ್ಕಾರ: ನಗರದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ರೋಡ್ ಶೋ ವೀಕ್ಷಣೆ ಮಾಡಲು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಶ್ರೀಗಳು ಆಗಮಿಸಿದ್ದರು. ಜಯನಗರಲ್ಲಿನ ಮಠದ ಮುಂದೆ ಕುಳಿತು ನರೇಂದ್ರ ಮೋದಿಯನ್ನು ವೀಕ್ಷಿಸಿದರು. ಜನರಿಗಿದ್ದ ಕುತೂಹಲದಂತೆ ಸ್ವಾಮೀಜಿಯೂ ಸಹ ಕುತೂಹಲದಿಂದ ರಾರಯಲಿಯನ್ನು ನೋಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ದೂರದಿಂದಲೇ ತಲೆಬಾಗಿ ಸ್ವಾಮೀಜಿಗೆ ನಮಸ್ಕರಿಸಿ ಗೌರವ ಸಲ್ಲಿಸಿದರು.
ನೃತ್ಯ ಪ್ರದರ್ಶನ: ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕಾಗಿ ಸಾಂಸ್ಕೃತಿಕ ಕಲಾತಂಡಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದವರು. ಡೊಳ್ಳು ಕುಣಿತ, ವೀರಗಾಸೆ ನೃತ್ಯಗಳನ್ನು ಪ್ರದರ್ಶಿಸಿದವು. ಜನಗರದ ಸೌತ್‌ಎಂಡ್ ಸರ್ಕಲ್‌ನಲ್ಲಿ ನೃತ್ಯದ ಮೂಲಕ ಸ್ವಾಗತಿಸಲು ಸೃಷ್ಟಿಕಲಾ ವಿದ್ಯಾಲಯದ ಕಲಾತಂಡವು ನೃತ್ಯ ಪ್ರದರ್ಶನ ತೋರಿತು. ಈ ವೇಳೆ ಪ್ರಧಾನಿಗಾಗಿ ನೃತ್ಯ ಸಂಯೋಜಿಸಿರುವುದು ಸಂತೋಷವನ್ನುಂಟು ಮಾಡಿದೆ ಎಂದು ಕಲಾವಿದರು ಹರ್ಷ ವ್ಯಕ್ತಪಡಿಸಿದರು.
ಮದುವೆಗೆ ಆಹ್ವಾನ!: ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಲವು ರೀತಿಯಲ್ಲಿ ಸ್ವಾಗತಿಸಲಾಗಿತ್ತು. ಆದರೆ, ತೀವ್ರ ಕುತೂಹಲ ಮೂಡಿಸಿದ್ದು ಮೋದಿ ಅವರನ್ನು ಮದುವೆಗೆ ಆಹ್ವಾನಿಸಿದ್ದು. ಬಾವಿ ದಂಪತಿ ಬ್ಯಾನರ್‌ನಲ್ಲಿ ‘ಮೋದಿಜೀ ನೀವೂ ನಮ್ಮ ಮದುವೆಗೆ ಬರಬೇಕು’ ಎಂದು ಬರೆದಿದ್ದು ಗಮನ ಸೆಳೆಯಿತು. ಮೋದಿಯನ್ನು ವೀಕ್ಷಿಸಲು ಸೌತ್‌ಎಂಡ್ ಸರ್ಕಲ್ ಬಳಿಕ ಬಂದಿದ್ದ ಬಾವಿ ದಂಪತಿ, ಜೂ.12ರಂದು ತಮ್ಮ ಮದುವೆ ಇದ್ದು, ಬರಬೇಕು ಎಂದು ಮೋದಿ ಅವರಿಗೆ ಆಹ್ವಾನ ಮಾಡಲಾಯಿತು.
ಜೆಡಿಎಸ್ ಅಧಿಕಾರಕ್ಕೆ ತಂದು ಕಣ್ಮುಚ್ಚುವ ಆಸೆ: ದೇವೇಗೌಡರ ಭಾವನಾತ್ಮಕ ಮಾತು
ಪ್ರಧಾನಿ ಮೋದಿ ವಾಹನ ಹಿಂದೆ ಓಡಿದ ಯುವಕ: ಪ್ರಧಾನಿ ನರೇಂದ್ರ ಮೋದಿ ಅವರು ರೋಡ್ ಶೋ ಆರಂಭಿಸಿದ ಬ್ರಿಗೇಡ್ ಮಿಲೇನಿಯಂ ಬಳಿ ಮೋದಿ ವಾಹನದ ಹಿಂದೆ ಯುವಕನೊಬ್ಬ ಓಡಿದ ಘಟನೆ ನಡೆದಿದೆ. ಈ ವೇಳೆ ಪೊಲೀಸರು ಯುವಕನನ್ನು ತಡೆದು ಬಾರಿಸಿದ್ದಾರೆ. ನಂತರ ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಐತಿಹಾಸಿಕ ರೋಡ್ ಶೋ: ಬೆಂಗಳೂರಿನಲ್ಲಿ ಶನಿವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ 26 ಕಿ.ಮೀ ಐತಿಹಾಸಿಕ ರೋಡ್ ಶೋ ಯಶಸ್ವಿಯಾಗಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಸುಮಾರು 12 ಲಕ್ಷ ರು. ರೋಡ್ ಶೋನಲ್ಲಿ ಭಾಗವಹಿಸಿದ್ದರು. ಚಿಕ್ಕ ಮಕ್ಕಳಾದಿಯಾಗಿ ವೃದ್ಧರ ವರೆಗೆ ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ಕಣ್ತುಂಬಿಕೊಂಡಿದ್ದಾರೆ. ಪುಷ್ಪಾರ್ಚನೆ ಮಾಡಿ ಆಶೀರ್ವಾದ ಮಾಡಿದ್ದಾರೆ. ಕೇವಲ 24 ತಾಸಿನಲ್ಲಿ ಈ ಐತಿಹಾಸಿಕ ರೋಡ್ ಶೋ ಆಯೋಜಿಸಲಾಗಿದೆ. ಯಾವುದೇ ಒಂದು ಸಣ್ಣ ಅಹಿತಕರ ಘಟನೆಗೂ ಆಸ್ಪದ ಇಲ್ಲದೆ ಭಾರೀ ಯಶಸ್ವಿಯಾಗಿದೆ. ಇದಕ್ಕೆ ಸಹಕರಿಸಿದ ನಗರದ ಜನತೆ, ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಕಾರ್ಯಕರ್ತರಿಗೆ ಧನ್ಯವಾದ ಹೇಳುತ್ತೇವೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.